ಅಶೋಕ ವಿಶ್ವವಿದ್ಯಾಲಯದ ಮೂಲಕ ‘ಸಿವಿಂಕ್’ ಪೋರ್ಟಲ್ ಜಾರಿ, ನಾಗರಿಕ ದತ್ತಾಂಶ ಡಿಜಿಟಲೀಕರಣಗೊಳಿಸಿದ ಭಾರತದ ಮೊದಲ ನಗರಸಭೆ ನಂಜನಗೂಡು
ನೈರ್ಮಲ್ಯ ಮತ್ತು ಕಸ ಸಂಗ್ರಹಣೆಯಿಂದ ಹಿಡಿದು ರಸ್ತೆ ನಿರ್ವಹಣೆ, ಆಸ್ತಿ ತೆರಿಗೆ ಮತ್ತು ಕಟ್ಟಡ ಪರವಾನಗಿಗಳವರೆಗೆ ಹಲವಾರು ಕಾರ್ಯಗಳನ್ನು ಒಳಗೊಂಡಿರುವ ಸಿವಿಂಕ್, ಅಸ್ಪಷ್ಟ ದೂರು ಪೋರ್ಟಲ್‌ಗಳ ಬದಲಿಗೆ ನಾಗರಿಕರು ಮತ್ತು ಸರ್ಕಾರಿ ಕಾರ್ಯಕರ್ತರ ನಡುವೆ ನೇರ, ಪಾರದರ್ಶಕ ಸಂಪರ್ಕಗಳನ್ನು ಒದಗಿಸುತ್ತದೆ.
-
Ashok Nayak
Oct 28, 2025 7:27 PM
ಮಹಾನಗರಗಳಲ್ಲಿ ಸಮಸ್ಯೆಯನ್ನು ಗುರುತಿಸಿ, ಪರಿಹಾರ ಪಡೆಯಲು ಹಲವು ಅಪ್ಲಿಕೇಷನ್‌ಗಳು ಹಾಗೂ ಡಿಜಿಟಲ್ ಪೋರ್ಟಲ್‌ಗಳು ಲಭ್ಯವಿದೆ. ಆದರೆ, ನಗರಸಭೆ ಹಾಗೂ ಪುರಸಭೆಗಳಂತಹ ಗ್ರಾಮೀಣ ಭಾಗದಲ್ಲಿ ಯಾವುದಾದರು ಸಾಮಾಜಿಕ ಕಳಕಳಿಯ ಬಗ್ಗೆ ಧ್ವನಿ ಎತ್ತಲೂ ಯಾವುದೇ ಪೋರ್ಟಲ್ ಇಲ್ಲ.
ಅಲ್ಲಿನ ಸಮಸ್ಯೆಗೆ ಯಾರನ್ನು ಸಂಪರ್ಕಿಸಬೇಕು ಹಾಗೂ ಅಲ್ಲಿ ಸಂಬಂಧಿಸಿ ಜನಪ್ರತಿನಿಧಿಗಳಾಗಲಿ ಅಥವಾ ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳ ದೂರವಾಣಿ ಸಂಖ್ಯೆಯ ಮಾಹಿತಿಯೇ ಅಲ್ಲಿನ ಜನರಿಗೆ ಗೊತ್ತಿರುವುದಿಲ್ಲ. ಅದಕ್ಕಾಗಿಯೇ, ಅಶೋಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮೊಟ್ಟ ಮೊದಲ ಬಾರಿಗೆ ”ಸಿವಿಂಕ್” ಎಂಬ ಪೋರ್ಟಲ್ ಚಾಲ್ತಿಗೆ ತರುವ ಮೂಲಕ ಸ್ಥಳೀಯ ಸಮಸ್ಯೆಗಳಿಗೆ ಮಾಧ್ಯಮವಾಗಿ ಕೆಲಸ ಮಾಡಲು ಮುಂದಾಗಿದೆ.
ಕರ್ನಾಟಕದ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಮೊದಲ ಬಾರಿಗೆ ಸಿವಿಂಕ್ ಪೋರ್ಟಲ್ ನನ್ನು ಶಾಸಕರ ಸಮ್ಮುಖದಲ್ಲಿ ಚಾಲನೆ ನೀಡಲಾಗಿದೆ. ಈ ಪೋರ್ಟಲ್ ನಿರ್ಮಾಣದ ಕುರಿತ ಸಂಪೂರ್ಣ ಮಾಹಿತಿ ಹಾಗೂ ತಮ್ಮ ಶ್ರಮದ ಕುರಿತು ಅಶೋಕ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದ ಹಾಗೂ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಒಳಬರುವ ವಿದ್ವಾಂಸರಾದ ಐಶ್ವರ್ಯಾ ಸುನಾದ್ ಅವರು ತಮ್ಮ ಸಂದರ್ಶನದ ಮೂಲಕ ಈ ನೂನತ ಸಿವಿಂಕ್ ಪೋರ್ಟಲ್ ಬಗ್ಗೆ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
೧. ಸಿವಿಂಕ್ ಎಂದರೇನು? ಇದರ ಪ್ರಯೋಜನಗಳೇನು?
ಸಿವಿಂಕ್ ಎನ್ನುವುದು ಒಂದು ಡಿಜಿಟಲ್ ಪೋರ್ಟಲ್ ಆಗಿದ್ದು, ಇದನ್ನು ಅಶೋಕ ವಿಶ್ವವಿದ್ಯಾ ಲಯ ವತಿಯಿಂದ ಆವಿಷ್ಕಾರ ಮಾಡಲಾಗಿದೆ. ಈ ಪೋರ್ಟಲ್ ಹಲವು ಆಯಾಮಗಳಲ್ಲಿ ಜನಸಾಮಾನ್ಯರು ಹಾಗೂ ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡಲಿದೆ. ಸಿವಿಕ್’ ಮತ್ತು ‘ಲಿಂಕ್’ ಪದಗಳ ಸಂಯೋಜನೆಯಿಂದ ‘ಸಿವಿಂಕ್’ ಅನ್ನು, ಚುನಾಯಿತ ಕಾರ್ಪೊರೇಟರ್‌ಗಳು/ಕೌನ್ಸಿಲರ್‌ಗಳು, ವಾರ್ಡ್ ಮಟ್ಟದ ಇಲಾಖಾ ಮುಖ್ಯಸ್ಥರು ಮತ್ತು ಅಗತ್ಯ ಸಾರ್ವಜನಿಕ ಸೇವೆಗಳಿಗೆ ಜವಾಬ್ದಾರರಾದ ನಗರಸಭೆ ಉದ್ಯೋಗಿಗಳ ಸಂಪರ್ಕಕ್ಕೆ ನಾಗರಿಕರಿಗೆ ನೇರ ಪ್ರವೇಶವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ.
ನೈರ್ಮಲ್ಯ ಮತ್ತು ಕಸ ಸಂಗ್ರಹಣೆಯಿಂದ ಹಿಡಿದು ರಸ್ತೆ ನಿರ್ವಹಣೆ, ಆಸ್ತಿ ತೆರಿಗೆ ಮತ್ತು ಕಟ್ಟಡ ಪರವಾನಗಿಗಳವರೆಗೆ ಹಲವಾರು ಕಾರ್ಯಗಳನ್ನು ಒಳಗೊಂಡಿರುವ ಸಿವಿಂಕ್, ಅಸ್ಪಷ್ಟ ದೂರು ಪೋರ್ಟಲ್‌ಗಳ ಬದಲಿಗೆ ನಾಗರಿಕರು ಮತ್ತು ಸರ್ಕಾರಿ ಕಾರ್ಯಕರ್ತರ ನಡುವೆ ನೇರ, ಪಾರದರ್ಶಕ ಸಂಪರ್ಕಗಳನ್ನು ಒದಗಿಸುತ್ತದೆ.
೨. ಸಿವಿಂಕ್ ಅನ್ವೇಷಿಸಲು ನಿಮಗೆ ಪ್ರೇರೇಪಿಸಿದ್ದು ಏನು?
ನಾನೂ ಸಹ ಇಂತಹ ಸಮಸ್ಯೆಯಿಂದ ನೊಂದಿದ್ದೆ. ಒಮ್ಮೆ ಹೀಗೆ ಕೋವಿಡ್ ಸಂದರ್ಭದಲ್ಲಿ ಕೆಲ ಸಮಸ್ಯೆಯಿಂದ ಸಂಬಂಧಪಟ್ಟ ವ್ಯಕ್ತಿಯನ್ನು ಸಂಪರ್ಕಿಸಲು ಸರ್ಕಾರಿ ಕಚೇರಿಗೆ ಕರೆ ಮಾಡಿದರೆ, ಅವರು ಸಹ ಯಾವುದೇ ಮಾಹಿತಿ ನೀಡಿದೇ, ಇದು ನಮಗೆ ಸಂಬಂಧಿಸಿದ್ದಲ್ಲ ಎನ್ನುವ ಹಾರೈಕೆ ಉತ್ತರ ನೀಡಿದ್ದರು. ತಿಳುವಳಿಕೆ ಇರುವ ನಮ್ಮಂಥವರಿಗೇ ಈ ರೀತಿಯ ಸಮಸ್ಯೆ ಆದರೆ, ಗ್ರಾಮೀಣ ಭಾಗದ ಜನರಿಗೆ ಎಷ್ಟು ಪಾರದರ್ಶಕ ಮಾಹಿತಿ ಸಿಗಲು ಸಾಧ್ಯ? ಹೀಗಾಗಿ, ನಗರ ಸಭೆಗಳಲ್ಲಿ ಒಂದು ಪೋರ್ಟಲ್ ಮೂಲಕ ತಮ್ಮ ಸಮಸ್ಯೆಯನ್ನು ನೇರವಾಗಿ ಸಂಬಂಧಪಟ್ಟ ವ್ಯಕ್ತಿಗೆ ತಲುಪಿಸಲು ಯೋಜಿಸಿ, ಇದನ್ನು ಜಾರಿಗೆ ತಂದಿದ್ದೇವೆ.
೩. ನಾಗರಿಕರು ಹಾಗೂ ಸ್ಥಳೀಯ ಸರ್ಕಾರಗಳಿಗೆ ಸಿವಿಂಕ್ ಯಾವ ರೀತಿ ಪರಿಹಾರ ನೀಡಲು ಉದ್ದೇಶಿಸಿದೆ?
ಸಿವಿಂಕ್ ಎಲ್ಲಾ ರೀತಿಯ ಸಮಸ್ಯೆಗಳನ್ನೂ ಸ್ವೀಕರಿಸಬಹುದಾದ ಪೋರ್ಟಲ್. ದತ್ತಾಂಶ, ತಂತ್ರಜ್ಞಾನ ಮತ್ತು ಕಠಿಣ ಸಂಶೋಧನೆಯ ಶಕ್ತಿಯನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾದ ಸಿವಿಂಕ್, ನಗರದಾದ್ಯಂತ ಅಳವಡಿಸಲಾದ ವಾರ್ಡ್-ನಿರ್ದಿಷ್ಟ ಕ್ಯೂಆರ್ ಕೋಡ್ ಬೋರ್ಡ್ ಗಳನ್ನು ಬಳಸುತ್ತದೆ. ನಿರ್ದಿಷ್ಟ ನಾಗರಿಕ ಸಮಸ್ಯೆಗಳನ್ನು ನಿರ್ವಹಿಸುವ ಮುನ್ಸಿಪಲ್ ಉದ್ಯೋಗಿ ಗಳನ್ನು ಸಂಪರ್ಕಿಸಲು ನಾಗರಿಕರು ಈ ಕೋಡ್‌ಗಳನ್ನು ಸ್ಕ್ಯಾನ್ ಮಾಡಬಹುದು. ತಮ್ಮ ದೂರುಗಳನ್ನು ಸಲ್ಲಿಸಲು ಬಳಕೆದಾರರು ಪ್ರತ್ಯೇಕವಾಗಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ. ಈ ವೇದಿಕೆಯು ದತ್ತಾಂಶವನ್ನು ಕೊಡುಗೆ ನೀಡಲು ಅಥವಾ ಹಳೆಯ ಮಾಹಿತಿ ಯನ್ನು ಗುರುತಿಸಲು ಬಳಕೆದಾರರಿಗೆ ಅಧಿಕಾರ ನೀಡುತ್ತದೆ. ಜೊತೆಗೆ, ಮುನ್ಸಿಪಲ್ ಉದ್ಯೋಗಿಗಳಿಗೆ ಮೊಟ್ಟಮೊದಲ ಬಾರಿಗೆ ಕಾರ್ಯಕ್ಷಮತೆಯ ವಿಮರ್ಶೆ ಸೌಲಭ್ಯವನ್ನು ಇದು ಒಳಗೊಂಡಿದ್ದು, ಇದು ಹೆಚ್ಚಿನ ನಾಗರಿಕ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ಆಡಳಿತಾತ್ಮಕ ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ.
೪. ಸಿವಿಂಕ್ ಪೋರ್ಟಲ್ ರಚಿಸಲು ನಿಮ್ಮ ತಂಡದ ಪರಿಶ್ರಮ ಹೇಗಿತ್ತು?
ನಮ್ಮ ತಂಡ ಹೆಚ್ಚು ಪರಿಶ್ರಮದಿಂದ ಈ ಪೋರ್ಟಲ್‌ನಲ್ಲಿ ರಚಿಸಿದೆ.ಅಶೋಕ ವಿಶ್ವವಿದ್ಯಾಲಯದ ಐಸಾಕ್ ಸೆಂಟರ್ ಫಾರ್ ಪಬ್ಲಿಕ್ ಪಾಲಿಸಿ (ICPP) ಮತ್ತು ಮೊಜಿಲ್ಲಾ ರೆಸ್ಪಾನ್ಸಿಬಲ್ ಕಂಪ್ಯೂಟಿಂಗ್ ಚಾಲೆಂಜ್‌ನಿಂದ ಬೆಂಬಲಿಸಲ್ಪಟ್ಟ ಈ ಸಿವಿಂಕ್ ಪೋರ್ಟಲ್ ಅನ್ನು ಸಂಪೂರ್ಣವಾಗಿ ವಿದ್ಯಾರ್ಥಿ ಗಳಿಂದ ನಿರ್ಮಿಸಲಾಗಿದೆ. ಅದರ ಸಂಪೂರ್ಣ ತಂತ್ರಜ್ಞಾನವನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಜಮ್ಶೆಡ್‌ಪುರದ ಹರ್ಷ್ ರಾಜ್ ಮತ್ತು ಆದಿತ್ಯ ಸಿನ್ಹಾ ಅವರು ಡಾ. ದೇಬಾಯನ್ ಗುಪ್ತಾ (ಅಶೋಕ ವಿಶ್ವವಿದ್ಯಾಲಯ) ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಕಲ್ಪನೆಯ ಅಭಿವೃದ್ಧಿ, ಸಂಶೋಧನೆ ಮತ್ತು ಸರ್ಕಾರದ ಸಂಪರ್ಕವನ್ನು ಅಶೋಕ ವಿಶ್ವವಿದ್ಯಾ ಲಯದ ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಡಾ. ಮೇಖಲಾ ಕೃಷ್ಣಮೂರ್ತಿ ಅವರ ಸಹಕಾರದೊಂದಿಗೆ ನನ್ನ ನೇತೃತ್ವದಲ್ಲಿ ನಿರ್ಮಿಸಿದೆವು.
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ಸ್ನಾತಕೋತ್ತರ ವಿದ್ಯಾರ್ಥಿಗಳಾದ ಕಿಶನ್ ಕುಮಾರ್ ಮತ್ತು ನಿತೀಶ್ ಕುಮಾರ್ ಅವರು 2022 ಮತ್ತು 2025 ರ ನಡುವೆ ಮುನ್ಸಿಪಲ್ ಕಾರ್ಪೊ ರೇಷನ್‌ನ ಕಾರ್ಯವೈಖರಿ ಮತ್ತು ನೆಲದ ಮೇಲೆ ನಾಗರಿಕ ದತ್ತಾಂಶವನ್ನು ಪ್ರವೇಶಿಸುವ ಸ್ಥಿತಿಗತಿ ಮತ್ತು ಅಡೆತಡೆಗಳನ್ನು ಅರ್ಥಮಾಡಿಕೊಳ್ಳಲು ದೆಹಲಿಯಲ್ಲಿ ಕಠಿಣ ಕ್ಷೇತ್ರಕಾರ್ಯವನ್ನು ಕೈಗೊಂಡರು.
೫. ಸಿವಿಂಕ್‌ನ ಸಂಪನ್ಮೂಲ ಎಷ್ಟು ಅಗತ್ಯ?
ಸಹ-ಉತ್ಪಾದನೆಯ ಪ್ರಕ್ರಿಯೆಯ ಮೂಲಕ ನಿರ್ಮಿಸಲ್ಪಟ್ಟಿರುವ ಸಿವಿಂಕ್, ಸ್ಥಳೀಯ ಸರ್ಕಾರ ಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವ ಮೂಲಕ ಕಡಿಮೆ ಸಂಪನ್ಮೂಲಗಳ ತಾಂತ್ರಿಕ ಮೂಲಸೌಕರ್ಯ ಮತ್ತು ಸೀಮಿತ ಮಾನವಶಕ್ತಿಯನ್ನು ಹೊಂದಿರುವ ಮೆಟ್ರೋಯೇತರ ನಗರಗಳು ಎದುರಿಸುತ್ತಿರುವ ಸವಾಲುಗಳನ್ನು ಯಾವುದೇ ವೆಚ್ಚವಿಲ್ಲದೆ ನಾಗರಿಕ ದತ್ತಾಂಶವನ್ನು ಹೋಸ್ಟ್ ಮಾಡಲು, ಪರಿಶೀಲಿಸಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ. ಈ ವಿಸ್ತರಿಸಬಹುದಾದ ಮಾದರಿಯೊಂದಿಗೆ, ಸಿವಿಂಕ್ ಈಗ ದೇಶಾದ್ಯಂತ ವಿಸ್ತರಿಸಲು ಸಿದ್ಧವಾಗಿದೆ, ತಂತ್ರಜ್ಞಾನ-ಚಾಲಿತ ಪರಿಹಾರಗಳ ಮೂಲಕ ಹೆಚ್ಚು ಹೆಚ್ಚು ಪಟ್ಟಣಗಳು ಮತ್ತು ನಗರಗಳಿಗೆ ಆಡಳಿತ ಮತ್ತು ಸೇವೆಗಳ ವಿತರಣೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.