Pranitha Subhash: ಮುಖ್ಯಮಂತ್ರಿಯನ್ನು ಭೇಟಿಯಾದ ನಟಿ ಪ್ರಣಿತಾ ಸುಭಾಷ್
Pranitha Meets Siddaramaiah: ದರ್ಶನ್ ಅಭಿನಯದ 'ಪೊರ್ಕಿ' ಚಿತ್ರದ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿ ಸದ್ಯ ಪಂಚಭಾಷಾ ತಾರೆ ಎನಿಸಿಕೊಂಡಿರುವ ಪ್ರಣಿತಾ ಸುಭಾಷ್ ತಾಯ್ತನದ ಖುಷಿಯಲ್ಲಿದ್ದಾರೆ. ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ ಅವರು ಸದ್ಯ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುವ ಸಿದ್ಧತೆಯಲ್ಲಿದ್ದಾರೆ. ಈ ಮಧ್ಯೆ ತಮ್ಮ ಮಗನ ನಾಮಕರಣ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ಪತ್ರಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರಣಿತಾ ಸುಭಾಷ್.


ಮುಖ್ಯಮಂತ್ರಿಯನ್ನೂ ಭೇಟಿಯಾದ ಪ್ರಣಿತಾ
ಬೆಂಗಳೂರು: ಬಹುಭಾಷಾ ಕಲಾವಿದೆ, ಸ್ಯಾಂಡಲ್ವುಡ್ ನಟಿ ಪ್ರಣಿತಾ ಸುಭಾಷ್ ಸದ್ಯ ನಟನೆಗೆ ಬ್ರೇಕ್ ಕೊಟ್ಟು ಇಬ್ಬರು ಮಕ್ಕಳ ಲಾಲನೆ-ಪಾಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ನಟಿಸದಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.

ಕಾರಣವೇನು?
ಸಿದ್ದರಾಮಯ್ಯ ಅವರನ್ನು ಭೇಟಿಯಾದ ಪ್ರಣಿತಾ ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಅವರು ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದೇಕೆ? ಅವರು ರಾಜಕೀಯಕ್ಕೆ ಬರುತ್ತಾರ? ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ. ರಾಜಕೀಯ ಕಾರಣಕ್ಕಾಗಿ ಅವರ ಈ ಭೇಟಿ ನಡೆದಿಲ್ಲ.

ನಾಮಕರಣ ಸಮಾರಂಭಕ್ಕೆ ಆಹ್ವಾನ
ಪ್ರಣಿತಾ ಅವರ ಮಗನ ನಾಮಕರಣ ಸಭಾರಂಭ ಏ. 20ರಂದು ನಡೆದಿದೆ. ಈ ಹಿನ್ನೆಲೆಯಲ್ಲಿ ಅವರು ಖುದ್ದಾಗಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆಹ್ವಾನ ಪತ್ರಿಕೆ ನೀಡಿದ್ದಾರೆ. ಈ ವೇಳೆ ಮಂಡಿ ನೋವಿನಿಂದ ಬಳಲುತ್ತಿರುವ ಮುಖ್ಯಮಂತ್ರಿ ಅವರ ಆರೋಗ್ಯವನ್ನೂ ನಟಿ ವಿಚಾರಿಸಿದ್ದಾರೆ.

ಇಬ್ಬರು ಮಕ್ಕಳು
ಚಿತ್ರರಂಗದ ಉತ್ತುಂಗದಲ್ಲಿರುವಾಗಲೇ ಪ್ರಣಿತಾ 2021ರಲ್ಲಿ ಹಸೆಮಣೆಗೇರಿದರು. ನಿತಿನ್ ರಾಜು ಎಂಬವರನ್ನು ವರಿಸಿದ ಪ್ರಣಿತಾ ಅವರಿಗೆ ಈಗ ಇಬ್ಬರು ಮಕ್ಕಳಿದ್ದಾರೆ. 2022ರ ಜೂನ್ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಪ್ರಣಿತಾ-ನಿತಿನ್ ದಂಪತಿಗೆ ಗಂಡು ಮಗು ಜನಿಸಿತ್ತು.

ಪ್ಯಾರಿಸ್ ಫ್ಯಾಷನ್ ವೀಕ್ನಲ್ಲಿ ಮಿಂಚು
ಪ್ರಣಿತಾ 2 ಮಕ್ಕಳ ತಾಯಿಯಾದರೂ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಇದೇ ಕಾರಣಕ್ಕೆ ಅವರನ್ನು ಸಂತೂರ್ ಮಮ್ಮಿ ಎಂದೇ ಕರೆಯಲಾಗುತ್ತದೆ. ಇತ್ತೀಚೆಗೆ ಅವರು ಫ್ರಾನ್ಸ್ನಲ್ಲಿ ನಡೆದ ಜಗತ್ತಿನ ಪ್ರತಿಷ್ಠಿತ ಪ್ಯಾರಿಸ್ ಫ್ಯಾಷನ್ ವೀಕ್ನಲ್ಲಿ ಭಾಗಿಯಾಗಿದ್ದರು. ಈ ಪ್ರತಿಷ್ಠಿತ ಫ್ಯಾಷನ್ ವೀಕ್ನಲ್ಲಿ ಭಾಗವಹಿಸಿದ ಕನ್ನಡದ ಮೊದಲ ನಟಿ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದ್ದ ಅವರು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು.