Fighter Jets: ಫೈಟರ್ ಜೆಟ್ಗಳಲ್ಲಿ ಹಾರಾಟ ನಡೆಸಿದ ಭಾರತೀಯ ನಾಯಕರು
Indian leaders who flew in fighter jets: ರಾಷ್ಟಪತಿಗಳಾದ ಎಪಿಜೆ ಅಬ್ದುಲ್ ಕಲಾಂ, ಪ್ರತಿಭಾ ಪಾಟೀಲ್, ದ್ರೌಪದಿ ಮುರ್ಮು ಅವರು ಮೂವರು ಮಾತ್ರವಲ್ಲ ಇನ್ನು ಹಲವು ರಾಷ್ಟ್ರೀಯ ನಾಯಕರು ಫೈಟರ್ ಜೆಟ್ಗಳಲ್ಲಿ ಹಾರಾಟ ನಡೆಸಿದ್ದಾರೆ. ಅದರಲ್ಲೂ 74 ವರ್ಷದಲ್ಲಿ ಫೈಟರ್ ಜೆಟ್ ಏರಿದ್ದ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಮೊದಲ ಭಾರತೀಯ ರಾಷ್ಟ್ರದ ಮುಖ್ಯಸ್ಥರು ಎಂದೆನಿಸಿಕೊಂಡಿದ್ದಾರೆ.
-
ವಿದ್ಯಾ ಇರ್ವತ್ತೂರು
Oct 29, 2025 5:21 PM
ಹರಿಯಾಣದ ಅಂಬಾಲಾ ವಾಯುಪಡೆ ನೆಲೆಯಲ್ಲಿ ಬುಧವಾರ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾರತೀಯ ವಾಯುಪಡೆಯ ಅತ್ಯಾಧುನಿಕ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಭಾರತದ ಮೊದಲ ರಾಷ್ಟ್ರಪತಿ ಎಂದೆನಿಸಿಕೊಂಡರು. ಇವರೊಬ್ಬರೇ ಅಲ್ಲ ಇನ್ನು ಹಲವು ರಾಷ್ಟ್ರ ನಾಯಕರು ಯುದ್ಧ ವಿಮಾನಗಳಲ್ಲಿ ಹಾರಾಟ ನಡೆಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಯುದ್ಧ ವಿಮಾನದಲ್ಲಿ ಹಾರಾಟ ನಡೆಸುತ್ತಿರುವುದು ಇದು ಮೊದಲೇನಲ್ಲ. 2023ರ ಏಪ್ರಿಲ್ ತಿಂಗಳಲ್ಲಿ ಅವರು ಅಸ್ಸಾಂನ ತೇಜ್ಪುರದಿಂದ ಸುಖೋಯ್-30ಎಂಕೆಐ ವಿಮಾನದಲ್ಲಿ ಹಾರಾಟ ನಡೆಸಿದರು. ಈ ವಿಮಾನ ಹಾರಾಟ ನಡೆಸಿದ ರಾಷ್ಟ್ರದ ಎರಡನೇ ಮಹಿಳಾ ರಾಷ್ಟ್ರಪತಿಯಾಗಿ ಅವರು ಗುರುತಿಸಿಕೊಂಡರು. ಅದಾದ ಬಳಿಕ ಇದೀಗ ಅವರು ಹರಿಯಾಣದ ಅಂಬಾಲಾ ವಾಯುಪಡೆ ನೆಲೆಯಲ್ಲಿ ಬುಧವಾರ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ.
ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು 2009ರಲ್ಲಿ ಪುಣೆಯ ಲೋಹೆಗಾಂವ್ ಭಾರತೀಯ ವಾಯುಪಡೆಯ ನೆಲೆಯಿಂದ ಸು-30ಎಂಕೆಐ ವಿಮಾನದಲ್ಲಿ ಹಾರಾಟ ನಡೆಸಿದರು. 74ನೇ ವಯಸ್ಸಿನಲ್ಲಿ ಅವರು ಸುಮಾರು 30 ನಿಮಿಷಗಳ ಕಾಲ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಎಂದೆನಿಸಿಕೊಂಡಿದ್ದಾರೆ.
ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು 2006ರಲ್ಲಿ ಸು-30ಎಂಕೆಐ ವಿಮಾನದಲ್ಲಿ ಹಾರಾಟ ನಡೆಸಿದರು. ಯುದ್ಧ ವಿಮಾನ ಹಾರಾಟ ನಡೆಸಿದ ಮೊದಲ ರಾಷ್ಟ್ರಪತಿ ಎಂದು ಗುರುತಿಸಿಕೊಂಡಿರುವ ಅವರಿಗೆ ಆಗ 74 ವರ್ಷ. ಕಾಕ್ಪಿಟ್ನಲ್ಲಿ ಸುಮಾರು 40 ನಿಮಿಷಗಳನ್ನು ಕಳೆದ ಅವರು ತಾವು ಪೈಲಟ್ ಆಗುವುದು ಸಾಧ್ಯವಿಲ್ಲ ಎಂದು ತಿಳಿದು ವಿಜ್ಞಾನಿಯಾಗಿದ್ದಾಗಿ ಹೇಳಿಕೊಂಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು 2023ರಲ್ಲಿ ಬೆಂಗಳೂರಿನಲ್ಲಿ ದೇಶೀಯವಾಗಿ ನಿರ್ಮಿಸಲಾದ ತೇಜಸ್ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು. ಈ ಹಾರಾಟವು ನಮ್ಮ ರಾಷ್ಟ್ರೀಯ ಸಾಮರ್ಥ್ಯದ ಬಗ್ಗೆ ಹೊಸ ಹೆಮ್ಮೆ ಮತ್ತು ಆಶಾವಾದ ಎಂದು ಅವರು ಬಳಿಕ ಹೇಳಿಕೊಂಡಿದ್ದರು.
ರಾಷ್ಟ್ರಪತಿಗಳು, ಪ್ರಧಾನಿಗಳು ಮಾತ್ರವಲ್ಲ ಹಲವು ಸಚಿವರು ಕೂಡ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ. ಇದರಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದ್ದಾರೆ. ಇವರು 2019 ರಲ್ಲಿ ಸ್ಥಳೀಯ ತೇಜಸ್ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಮೊದಲ ರಕ್ಷಣಾ ಸಚಿವ ಎಂದು ಗುರುತಿಸಿಕೊಂಡಿದ್ದಾರೆ.
2018 ರಲ್ಲಿ ರಕ್ಷಣಾ ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್ ಅವರು ಕೂಡ ಜೋಧ್ಪುರ ವಾಯುನೆಲೆಯಿಂದ ಸು-30ಎಂಕೆಐ ಫೈಟರ್ ಜೆಟ್ನಲ್ಲಿ 30 ನಿಮಿಷಗಳ ಕಾಲ ಹಾರಾಟ ನಡೆಸಿದ್ದರು. ಜಿ-ಸೂಟ್ ಧರಿಸಿ ಪೈಲಟ್ನ ಹಿಂದಿನ ಸೀಟಿನಲ್ಲಿ ಕುಳಿತು ಅವರು ಇದೊಂದು ಕಣ್ಣು ತೆರೆಸುವ ಅನುಭವ ಎಂದು ಹೇಳಿಕೊಂಡಿದ್ದರು.
2016ರಲ್ಲಿ ಗೃಹ ವ್ಯವಹಾರಗಳ ರಾಜ್ಯ ಸಚಿವರಾಗಿದ್ದ ಕಿರಣ್ ರಿಜಿಜು ಅವರು ಪಂಜಾಬ್ನ ಹಲ್ವಾರಾ ವಾಯುಪಡೆ ಕೇಂದ್ರದಿಂದ ಸು-30ಎಂಕೆಐ ನಲ್ಲಿ ಹಾರಾಟ ನಡೆಸಿದರು. ಅವರು ಸೂಪರ್ಸಾನಿಕ್ ಜೆಟ್ನಲ್ಲಿ ಸುಮಾರು 30 ನಿಮಿಷಗಳ ಕಾಲ ಹಾರಾಟ ನಡೆಸಿದ್ದಾರೆ.
ಸು-30ಎಂಕೆಐ ಯುದ್ಧ ವಿಮಾನವನ್ನು ರಕ್ಷಣಾ ಖಾತೆ ರಾಜ್ಯ ಸಚಿವರಾಗಿ ರಾವ್ ಇಂದರ್ಜಿತ್ ಸಿಂಗ್ 2015ರಲ್ಲಿ ದೆಹಲಿ ಬಳಿಯ ಹಿಂಡನ್ ವಾಯುನೆಲೆಯಿಂದ, ತರಬೇತಿ ಪಡೆದ ಪೈಲೆಟ್ ಆಗಿರುವ ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೂಡಿ ಅವರು ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ ಪ್ರದರ್ಶನದ ಸಮಯದಲ್ಲಿ ಹಾಗೂ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರು 2003 ರಲ್ಲಿ ತಮ್ಮ 73 ನೇ ವಯಸ್ಸಿನಲ್ಲಿ ಪುಣೆ ಬಳಿಯ ಲೋಹೆಗಾಂವ್ ವಾಯುಪಡೆ ನಿಲ್ದಾಣದಿಂದ ಹಾರಿಸಿದ್ದರು.