Vishweshwar Bhat Column: ಹರ್ಮುಜ್ ಜಲಸಂಧಿಗೆ ಮಹತ್ವವೇಕೆ ?
ಹರ್ಮುಜ್ ಜಲಸಂಧಿಗಿರುವ ಮಹತ್ವವೆಂದರೆ ಅದು ಜಾಗತಿಕ ತೈಲ ಪೂರೈಕೆಯ ಮಹಾ ದ್ವಾರ. ವಿಶ್ವದಲ್ಲಿ ಪ್ರತಿದಿನ ಬಳಕೆಯಾಗುವ ಒಟ್ಟು ತೈಲದ ಸುಮಾರು ಶೇ.20ರಿಂದ ಶೇ.30ರಷ್ಟು ಈ ಜಲಸಂಧಿಯ ಮೂಲಕವೇ ಸಾಗುತ್ತದೆ. ಸೌದಿ ಅರೇಬಿಯಾ, ಇರಾನ್, ಯುಎಇ, ಕುವೈತ್ ಮತ್ತು ಇರಾಕ್‌ನಂಥ ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳು ತಮ್ಮ ಕಚ್ಚಾತೈಲವನ್ನು ಜಗತ್ತಿಗೆ ತಲುಪಿಸಲು ಈ ಮಾರ್ಗವನ್ನೇ ಅವಲಂಬಿಸಿವೆ.
-
ಸಂಪಾದಕರ ಸದ್ಯಶೋಧನೆ
ಕಳೆದ ಒಂದು ವಾರದಿಂದ ಹರ್ಮುಜ್ ಜಲಸಂಧಿ (Strait of Hormuz)ಸುದ್ದಿಯಲ್ಲಿದೆ. ಮಧ್ಯಪ್ರಾಚ್ಯ ದೇಶಗಳ ನಡುವೆ ಸಂಘರ್ಷವುಂಟಾದಾಗಲೆಲ್ಲ ಹರ್ಮುಜ್ ಮುನ್ನೆಲೆಗೆ ಬರುವುದನ್ನು ಗಮನಿಸಿರಬಹುದು. ಇದಕ್ಕೆ ಕಾರಣಗಳೇನು ಎಂಬುದನ್ನು ಗಮನಿಸೋಣ.
ಇದು ಕೇವಲ ಒಂದು ಜಲಮಾರ್ಗವಲ್ಲ, ಜತೆಗೆ ಜಾಗತಿಕ ಆರ್ಥಿಕತೆಯ ‘ನಾಡಿಮಿಡಿತ’. ಪರ್ಷಿಯನ್ ಕೊಲ್ಲಿ ಮತ್ತು ಓಮಾನ್ ಕೊಲ್ಲಿಯನ್ನು ಸಂಪರ್ಕಿಸುವ ಈ ಕಿರಿದಾದ ಸಮುದ್ರ ಮಾರ್ಗವು ವಿಶ್ವದ ಅತ್ಯಂತ ಆಯಕಟ್ಟಿನ ಜಲಮಾರ್ಗಗಳಲ್ಲಿ ಒಂದು.
ಹರ್ಮುಜ್ ಜಲಸಂಧಿಗಿರುವ ಮಹತ್ವವೆಂದರೆ ಅದು ಜಾಗತಿಕ ತೈಲ ಪೂರೈಕೆಯ ಮಹಾ ದ್ವಾರ. ವಿಶ್ವದಲ್ಲಿ ಪ್ರತಿದಿನ ಬಳಕೆಯಾಗುವ ಒಟ್ಟು ತೈಲದ ಸುಮಾರು ಶೇ.20ರಿಂದ ಶೇ.30ರಷ್ಟು ಈ ಜಲಸಂಧಿಯ ಮೂಲಕವೇ ಸಾಗುತ್ತದೆ. ಸೌದಿ ಅರೇಬಿಯಾ, ಇರಾನ್, ಯುಎಇ, ಕುವೈತ್ ಮತ್ತು ಇರಾಕ್‌ನಂಥ ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳು ತಮ್ಮ ಕಚ್ಚಾತೈಲವನ್ನು ಜಗತ್ತಿಗೆ ತಲುಪಿಸಲು ಈ ಮಾರ್ಗವನ್ನೇ ಅವಲಂಬಿಸಿವೆ.
ಇದನ್ನೂ ಓದಿ: Vishweshwar Bhat Column: ಯಾವುದು ಆಫ್ರಿಕಾದ ತುತ್ತ ತುದಿ ?
ಕತಾರ್ ವಿಶ್ವದ ಅತಿದೊಡ್ಡ ಎಲ್ಎನ್‌ಜಿ ರಫ್ತುದಾರರಲ್ಲಿ ಒಂದಾಗಿದ್ದು, ಅದರ ಬಹುತೇಕ ರಫ್ತು ಈ ಮಾರ್ಗದ ನಡೆಯುತ್ತದೆ. ಈ ಜಲಸಂಧಿಯು ಕಿರಿದಾದ ಪ್ರದೇಶವಾಗಿದ್ದು, ಇದರ ಅತ್ಯಂತ ಕಿರಿದಾದ ಭಾಗವು ಕೇವಲ 33 ಕಿಲೋಮೀಟರ್ ಅಗಲವಿದೆ. ಇಲ್ಲಿ ಹಡಗುಗಳು ಸಂಚರಿಸಲು ಇರುವ ಲೇನ್‌ಗಳು ಕೇವಲ 3 ಕಿಲೋಮೀಟರ್ ಅಗಲವಾಗಿವೆ. ಇದರ ಉತ್ತರ ಭಾಗದಲ್ಲಿ ಇರಾನ್ ಮತ್ತು ದಕ್ಷಿಣ ಭಾಗದಲ್ಲಿ ಓಮಾನ್ ಹಾಗೂ ಯುಎಇ ದೇಶಗಳಿವೆ.
ಇಷ್ಟು ಕಿರಿದಾದ ಮಾರ್ಗವಾಗಿರುವುದರಿಂದ, ಯಾವುದೇ ಸಣ್ಣ ಸಂಘರ್ಷ ಉಂಟಾದರೂ ಇಡೀ ಸಂಚಾರ ವ್ಯವಸ್ಥೆ ಸ್ಥಗಿತಗೊಳ್ಳುವ ಅಪಾಯವಿರುತ್ತದೆ. ಹರ್ಮುಜ್ ಜಲಸಂಧಿ ಯಲ್ಲಿ ಸಂಚಾರ ವ್ಯತ್ಯಯವಾದರೆ ಅದರ ನೇರ ಪರಿಣಾಮ ಪ್ರತಿಯೊಬ್ಬ ಸಾಮಾನ್ಯ ನಾಗರಿಕನ ಮೇಲೂ ಆಗುತ್ತದೆ ಎಂಬುದು ಗಮನಾರ್ಹ.
ಈ ಮಾರ್ಗದಲ್ಲಿ ಅಡಚಣೆಯುಂಟಾದರೆ ಕಚ್ಚಾ ತೈಲದ ಬೆಲೆಗಳು ಗಗನಕ್ಕೇರುತ್ತವೆ. ಇದು ಸಾರಿಗೆ ವೆಚ್ಚವನ್ನು ಹೆಚ್ಚಿಸಿ, ಆಹಾರ ಪದಾರ್ಥಗಳಿಂದ ಹಿಡಿದು ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಏಷ್ಯಾದ ರಾಷ್ಟ್ರಗಳಾದ ಚೀನಾ, ಜಪಾನ್, ಭಾರತ ಮತ್ತು ದಕ್ಷಿಣ ಕೊರಿಯಾಗಳು ತಮ್ಮ ಇಂಧನ ಅಗತ್ಯತೆಗಾಗಿ ಈ ಮಾರ್ಗದ ಮೇಲೆ ಅತಿಯಾಗಿ ಅವಲಂಬಿತವಾಗಿವೆ.
ಭಾರತಕ್ಕೆ ಹರ್ಮುಜ್ ಜಲಸಂಧಿಯು ಅತಿ ಮುಖ್ಯವಾದ ‘ಜೀವನಾಡಿ’ ಆಗಿದೆ. ಭಾರತವು ತನ್ನ ಕಚ್ಚಾ ತೈಲದ ಸುಮಾರು ಶೇ.60ರಿಂದ ಶೇ.70ರಷ್ಟು ಭಾಗವನ್ನು ಪಶ್ಚಿಮ ಏಷ್ಯಾದ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಈ ಪೈಕಿ ಬಹುಪಾಲು ಹರ್ಮುಜ್ ಜಲಸಂಧಿಯ ಮೂಲಕವೇ ಬರುತ್ತದೆ. ಅಡುಗೆ ಅನಿಲ ಮತ್ತು ಕೈಗಾರಿಕಾ ಅನಿಲದ ಪೂರೈಕೆಯೂ ಇದೇ ಮಾರ್ಗವನ್ನು ಅವಲಂಬಿಸಿದೆ. ಇಲ್ಲಿನ ಯಾವುದೇ ಅಸ್ಥಿರತೆಯು ಭಾರತದ ಇಂಧನ ಭದ್ರತೆಗೆ ದೊಡ್ಡ ಸವಾಲಾಗುತ್ತದೆ.
ಹರ್ಮುಜ್ ಜಲಸಂಧಿಯು ಯಾವಾಗಲೂ ಭೌಗೋಳಿಕ ರಾಜಕೀಯದ (Geopolitics) ಕೇಂದ್ರವಾಗಿದೆ. ಇರಾನ್ ಮತ್ತು ಅಮೆರಿಕದ ನಡುವಿನ ಉದ್ವಿಗ್ನತೆಯ ಸಮಯದಲ್ಲಿ, ಇರಾನ್ ಈ ಜಲಸಂಧಿಯನ್ನು ಮುಚ್ಚುವ ಬೆದರಿಕೆಯನ್ನು ಹಲವು ಬಾರಿ ಹಾಕಿದೆ. ಇದು ಅಂತಾರಾಷ್ಟ್ರೀಯ ಸಮುದಾಯಕ್ಕೆ ದೊಡ್ಡ ಆತಂಕದ ವಿಷಯ. ಈ ಜಲಮಾರ್ಗವನ್ನು ಸುರಕ್ಷಿತವಾಗಿಡಲು ಅಮೆರಿಕ ಸೇರಿದಂತೆ ಹಲವು ದೇಶಗಳ ನೌಕಾಪಡೆಗಳು ಇಲ್ಲಿ ನಿರಂತರ ಗಸ್ತು ತಿರುಗುತ್ತವೆ.
ಇದನ್ನು ಮುಕ್ತವಾಗಿರಿಸುವುದು ಜಾಗತಿಕ ಹಿತಾಸಕ್ತಿಯಾಗಿದೆ. ಹರ್ಮುಜ್ ಜಲಸಂಧಿಗೆ ಸಮನಾದ ಸುಲಭವಾದ ಪರ್ಯಾಯ ಮಾರ್ಗಗಳು ಸದ್ಯಕ್ಕೆ ಲಭ್ಯವಿಲ್ಲ. ಸೌದಿ ಅರೇಬಿಯಾ ಮತ್ತು ಯುಎಇ ಕೆಲವು ಪೈಪ್‌ಲೈನ್ʼಗಳನ್ನು ನಿರ್ಮಿಸಿದ್ದರೂ, ಅವು ಹರ್ಮುಜ್ ಮೂಲಕ ಸಾಗುವ ಬೃಹತ್ ಪ್ರಮಾಣದ ತೈಲವನ್ನು ಸಾಗಿಸುವ ಸಾಮರ್ಥ್ಯ ಹೊಂದಿಲ್ಲ.
ಆದ್ದರಿಂದ, ಸಮುದ್ರಮಾರ್ಗವೇ ಅನಿವಾರ್ಯವಾಗಿದೆ. ಹರ್ಮುಜ್ ಜಲಸಂಧಿಯು ಜಗತ್ತಿನ ಇಂಧನ ಹಸಿವನ್ನು ನೀಗಿಸುವ ಅತ್ಯಂತ ನಿರ್ಣಾಯಕ ಕೊಂಡಿಯಾಗಿದೆ. ಇಲ್ಲಿನ ಶಾಂತಿ ಮತ್ತು ಮುಕ್ತ ಸಂಚಾರವು ಗಲ್ಫ್ ರಾಷ್ಟ್ರಗಳಿಗೆ ಮಾತ್ರವಲ್ಲದೇ, ಇಡೀ ಜಗತ್ತಿನ ಆರ್ಥಿಕ ಸ್ಥಿರತೆಗೆ ಅತ್ಯಗತ್ಯ. ಇದು ವಿಶ್ವದ ಅತ್ಯಂತ ಪ್ರಭಾವಶಾಲಿ ‘ಚೋಕ್ ಪಾಯಿಂಟ್’ ಎನ್ನುವು ದರಲ್ಲಿ ಯಾವುದೇ ಸಂಶಯವಿಲ್ಲ.