Pahalgam Terror Attack: ಪಹಲ್ಗಾಮ್ನಲ್ಲಿ ಉಗ್ರರ ದಾಳಿ: ಈವರೆಗಿನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ
ಕೆಲವರು ಅಲ್ಲಿ ಕುದುರೆ ಮೇಲೆ ತಿರುಗಾಡುತ್ತಿದ್ದರು, ಇನ್ನು ಕೆಲವರು ಸ್ಟ್ರೀಟ್ ಫುಡ್ ಏನಿದೆ ಸವಿಯಲು ಎಂದು ಹುಡುಕಾಡುತ್ತಿದ್ದರು, ಮತ್ತೆ ಕೆಲವರು ಹುಲ್ಲು ಹಾಸಿನ ಮೇಲೆ ಕುಳಿತು ಫೋಟೋ ಕ್ಲಿಕ್ಕಿಸುತ್ತಿದ್ದರು.. ಆಗ ಏಕಾಏಕಿ ಅಲ್ಲಿಗೆ ಬಂದ ಉಗ್ರರು ಸುಮಾರು 40 ಪ್ರವಾಸಿಗರ ಗುಂಪಿನ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ. ಇದೆಲ್ಲವೂ ನಡೆದಿರುವುದು ಧರೆಯ ಮೇಲಿನ ಸ್ವರ್ಗ ಎಂದೇ ಖ್ಯಾತಿ ಪಡೆದಿರುವ ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ (Pahalgam Terror Attack). ಈ ದಾಳಿಯಲ್ಲಿ ಸುಮಾರು 26 ಪ್ರವಾಸಿಗರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.



ದಕ್ಷಿಣ ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ದಾಳಿಯಲ್ಲಿ ಮಂಗಳವಾರ 26 ಪ್ರವಾಸಿಗರು ಸಾವನ್ನಪ್ಪಿದ್ದು ಇದು ಈ ವರ್ಷ ಪ್ರವಾಸಿಗರ ಮೇಲೆ ನಡೆದ ಅತಿ ದೊಡ್ಡ ದಾಳಿಯಾಗಿದೆ. ಲಷ್ಕರ್-ಎ-ತೈಬಾ ಗೆ ಸೇರಿದ ದಿ ರೆಸಿಸ್ಟೆನ್ಸ್ ಫ್ರಂಟ್ ಎಂಬ ಭಯೋತ್ಪಾದಕ ಗುಂಪು ಈ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ. ಪಹಲ್ಗಾಮ್ನ ರೆಸಾರ್ಟ್ ಪಟ್ಟಣದಿಂದ ಸುಮಾರು ಆರು ಕಿಲೋಮೀಟರ್ ದೂರದಲ್ಲಿರುವ ಬೈಸರನ್ನಲ್ಲಿರುವ ಜನಪ್ರಿಯ ಪ್ರವಾಸಿ ತಾಣದಲ್ಲಿ ಈ ಘಟನೆ ನಡೆದಿದೆ.

ಬೈಸರನ್ನಲ್ಲಿರುವ ಜನಪ್ರಿಯ ಪ್ರವಾಸಿ ತಾಣದಲ್ಲಿ ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ದಟ್ಟವಾದ ಪೈನ್ ಕಾಡಿನಿಂದ ಹೊರಬಂದ ಮಿಲಿಟರಿ ಸಮವಸ್ತ್ರದಲ್ಲಿದ್ದ ಬಂದೂಕುಧಾರಿಗಳು ಪ್ರವಾಸಿಗರ ಗುಂಪಿನ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಮೂವರು ಕನ್ನಡಿಗರು, ವಿದೇಶಿ ಪ್ರವಾಸಿಗರು ಸೇರಿದಂತೆ ಒಟ್ಟು ಸುಮಾರು 26 ಪ್ರವಾಸಿಗರು ಮೃತಪಟ್ಟಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಸಂಜೆಯೇ ಶ್ರೀನಗರಕ್ಕೆ ಆಗಮಿಸಿದ್ದು, ಉನ್ನತ ಮಟ್ಟದ ಭದ್ರತಾ ಸಭೆ ನಡೆಸಿದ್ದಾರೆ. ಪಹಲ್ಗಾಮ್ಗೆ ವೈದ್ಯಕೀಯ ತಂಡಗಳನ್ನು ನಿಯೋಜಿಸಿದ್ದು, ಸಿಆರ್ಪಿಎಫ್ ಮತ್ತು ಬಿಎಸ್ಎಫ್ 15 ಸ್ಥಳಗಳಲ್ಲಿ ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಸೂಚಿಸಿದ್ದರು.

ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಮೃತಪಟ್ಟಿರುವ ಮಾಹಿತಿ ತಿಳಿದ ತಕ್ಷಣ ಶ್ರೀನಗರಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಮೃತರ ಕುಟುಂಬಸ್ಥರಿಗೆ ಅಮಿತ್ ಶಾ ಅವರು ಸಾಂತ್ವನ ಹೇಳಿದರು. ಅಲ್ಲದೇ ಉಗ್ರರಿಗೆ ಇದಕ್ಕೆ ತಕ್ಕ ಪಾಠ ಕಲಿಸುವುದಾಗಿ ಭರವಸೆಯನ್ನು ನೀಡಿದರು.

ಪಹಲ್ಗಾಮ್ನಲ್ಲಿ ಮಂಗಳವಾರ ಭಯೋತ್ಪಾದಕ ದಾಳಿ ನಡೆದ ಬೆನ್ನಲ್ಲೇ ಎನ್ಐಎ ಇದರ ತನಿಖೆಯನ್ನು ಕೈಗೆತ್ತಿಕೊಂಡಿದೆ. ಮೂವರು ಶಂಕಿತ ಉಗ್ರರ ರೇಖಾಚಿತ್ರ ಮತ್ತು ಫೋಟೋವನ್ನು ಬಿಡುಗಡೆ ಮಾಡಲಾಗಿದೆ. ಮೂವರು ಭಯೋತ್ಪಾದಕರನ್ನು ಆಸಿಫ್ ಫುಜಿ, ಸುಲೇಮಾನ್ ಶಾ ಮತ್ತು ಅಬು ತಲ್ಹಾ ಎಂದು ಗುರುತಿಸಲಾಗಿದೆ. ಇವರು ನಿಷೇಧಿತ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ ದ ಒಂದು ಭಾಗವಾದ ದಿ ರೆಸಿಸ್ಟೆನ್ಸ್ ಫ್ರಂಟ್ನ ಸದಸ್ಯರಾಗಿದ್ದಾರೆ ಎನ್ನಲಾಗಿದೆ.

ಬೈಸರನ್ ಹುಲ್ಲುಗಾವಲಿನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಳಗ್ಗೆ ಸೌದಿ ಅರೇಬಿಯಾ ಪ್ರವಾಸವನ್ನು ಮೊಟಕುಗೊಳಿಸಿ ದೆಹಲಿಯೇ ಹಿಂದಿರುಗಿದ್ದು ಕೇಂದ್ರ ಸುರಕ್ಷತಾ ಸಮಿತಿ (CCS) ಜೊತೆ ಪ್ರಮುಖ ಸಭೆ ನಡೆಸಿದ್ದಾರೆ. ಇದಕ್ಕೂ ಮುನ್ನ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಸಭೆ ನಡೆಸಿದ್ದಾರೆ.

ಕಾಶ್ಮೀರದ ಪಹಲ್ಗಾಮ್ ಕಣಿವೆಯಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೀಡಾಗಿ ಮೃತಪಟ್ಟ ಕರ್ನಾಟಕದ ಪ್ರವಾಸಿಗರ ಕುಟುಂಬಗಳಿಗೆ ಸಹಾಯ ಒದಗಿಸಲು ಕರ್ನಾಟಕ ಸರ್ಕಾರ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ಕಳುಹಿಸಿದೆ. ಅವರು ಉಗ್ರರ ದಾಳಿಯಲ್ಲಿ ಮೃತರಾದ ಕನ್ನಡಿಗರ ಶವಗಳನ್ನು ತವರಿಗೆ ಕಳುಹಿಸುವ ವ್ಯವಸ್ಥೆ ಮಾಡಿದರು. ಮಾತ್ರವಲ್ಲದೆ ಅಲ್ಲಿ ಕರ್ನಾಟಕದವರಿಗಾಗಿ ಸಹಾಯವಾಣಿಯನ್ನು ತೆರೆದಿರುವುದಾಗಿ ತಿಳಿಸಿದ್ದಾರೆ.