Year Ender 2025: ಈ ವರ್ಷ ವೈರಲ್ ಆದ ಭಾರತದ ಟಾಪ್ 5 ಪ್ರವಾಸಿ ತಾಣಗಳು
2025ಕ್ಕೆ ವಿದಾಯ ಹೇಳುವ ಸಮಯ ಸಮೀಪಿಸುತ್ತಿರುವಂತೆ, ವರ್ಷವಿಡೀ ನಡೆದ ಪ್ರಮುಖ ಘಟನೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಷಯಗಳನ್ನು ನೆನಪಿಸಿಕೊಳ್ಳುವ ಹವ್ಯಾಸ ಇತ್ತೀಚೆಗೆ ಟ್ರೆಂಡ್ ಆಗಿದೆ. ಅದರ ಭಾಗವಾಗಿ 2025ರಲ್ಲಿ ಪ್ರವಾಸಿಗರ ಮನಸೆಳೆದ ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳ ಕುರಿತು ಮಾಹಿತಿ ಇಲ್ಲಿದೆ.
ಸಾಂಧರ್ಬಿಕ ಚಿತ್ರ -
ರಾಜಸ್ಥಾನ
2025ರಲ್ಲಿ ಅತೀ ಹೆಚ್ಚು ಪ್ರವಾಸಿಗರು ಭೇಟಿ ಕೊಟ್ಟ ಪ್ರವಾಸಿ ತಾಣಗಳ ಪೈಕಿ ರಾಜಸ್ಥಾನವೂ ಒಂದು. ವಿಶೇಷವೆಂದರೆ ಈ ಬಾರಿ ಪ್ರವಾಸಿಗರು ರಾಜಸ್ಥಾನದ ಗ್ರಾಮೀಣ ಭಾಗಗಳಲ್ಲಿರುವ ಪ್ರವಾಸಿ ತಾಣಗಳನ್ನು ತಮ್ಮ ನೆಚ್ಚಿನ ವಿಸಿಟಿಂಗ್ ಸ್ಪಾಟ್ ಆಗಿ ಮಾಡಿಕೊಂಡರು. ಖಮ್ಸರ್, ಓಶಿಯಾನ್, ಬಾರ್ಮೆರ್ ಮತ್ತು ಜೈಸಲ್ಮೇರ್ ಸುತ್ತಲಿರುವ ಗ್ರಾಮೀಣ ಸಂಸ್ಕೃತಿ ಈ ಬಾರಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಫೊಟೋಗ್ರಾಫರ್ಗಳು ಮತ್ತು ಪ್ರವಾಸಿಗರು ಮಣ್ಣಿನ ಗೋಡೆಯ ಮನೆಗಳಿರುವ ಗ್ರಾಮಗಳಲ್ಲಿ ಒಂಟೆ ಸವಾರಿ ನಡೆಸುವ ಮೂಲಕ ಈ ಭಾಗಗಳನ್ನು ಲೋಕಕ್ಕೆ ಪರಿಚಯಿಸಿದ್ದಾರೆ. ಮರಳುಗಾಡಿನುದ್ದಕ್ಕೂ ಆ ನೆಲದ ಜಾನಪದ ಸಂಗೀತವನ್ನು ಆಸ್ವಾದಿಸುತ್ತಾ, ಮರ್ವಾರಿ ತಿನಿಸುಗಳನ್ನು ಸವಿಯುತ್ತಾ, ಪಾರಂಪರಿಕ ಮನೆಗಳಲ್ಲಿ ಉಳಿದುಕೊಳ್ಳುವುದನ್ನು ಪ್ರವಾಸಿಗರು ಈ ಬಾರಿ ಇಷ್ಟಪಟ್ಟಿದ್ದಾರೆ.
ಪ್ರಯಾಗ್ ರಾಜ್ ಮತ್ತು ವಾರಣಾಸಿ
ಈ ವರ್ಷ ಅತ್ಯಂತ ವೈಭವದಿಂದ ನಡೆದ ಮಹಾಕುಂಭ ಮೇಳ ದೇಶ ವಿದೇಶಗಳ ಕೋಟ್ಯಂತರ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುವಂತೆ ಮಾಡುವಲ್ಲಿ ಪ್ರಯಾಗ್ ರಾಜ್ ಯಶಸ್ವಿಯಾಗಿದೆ. ವಿಶ್ವದ ಅತೀ ದೊಡ್ಡ ಧಾರ್ಮಿಕ ಉತ್ಸವಗಳಲ್ಲಿ ಒಂದಾಗಿರುವ ಮಹಾಕುಂಭ ಮೇಳದಲ್ಲಿ ಈ ಬಾರಿ ಫೊಟೋಗ್ರಾಫರ್ಗಳು, ತೀರ್ಥಯಾತ್ರಿಗಳು ಮತ್ತು ಪ್ರವಾಸಿಗರು ಈ ವೈಭವನ್ನು ಕಣ್ತುಂಬಿಕೊಂಡು ತಮ್ಮ ಪ್ರವಾಸವನ್ನು ಸಾರ್ಥಕಗೊಳಿಸಿದರು. ಗಂಗಾ-ಯಮುನಾ ಮತ್ತು ಅಂತರ್ಗಾಮಿ ಸರಸ್ವತಿ ನದಿಗಳ ಸಂಗಮ ಸ್ಥಾನದಲ್ಲಿ ಕೋಟ್ಯಂತರ ಜನರು ಪುಣ್ಯ ಸ್ನಾವನ್ನು ಮಾಡಿದರು. ಇದರೊಂದಿಗೆ ವಾರಣಾಸಿಯೂ ಸಹ ಈ ಬಾರಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುವಲ್ಲಿ ಯಶಸ್ಸಿಯಾಯಿತು.
ವೃಂದಾವನ
ವಿಶೇಷವೆಂದರೆ ಪ್ರವಾಸಿಗರ ನೆಚ್ಚಿನ ಪ್ರವಾಸಿ ತಾಣಗಳ ಆಯ್ಕೆಯಲ್ಲಿ ಈ ಬಾರಿ ಉತ್ತರ ಪ್ರದೇಶದ ವೃಂದಾವನ ಮತ್ತು ಗೋವರ್ಧನ ಸಹ ಸ್ಥಾನ ಪಡೆದುಕೊಂಡಿದೆ. ಇಲ್ಲಿರುವ ದೇವಾಲಯಗಳು, ಆಶ್ರಮಗಳು ಒಂದು ವರ್ಗದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಇಲ್ಲಿನ ಅಂತರ್ಗತ ಧಾರ್ಮಿಕ ಮತ್ತು ದೈವಿಕ ವಾತಾವರಣ ಮನಃಶಾಂತಿಯನ್ನು ಬಯಸುವವರ ನೆಚ್ಚಿನ ಆಯ್ಕೆಯಾಗಿ ಮೂಡಿ ಬಂದಿದೆ.
ಮೇಘಾಲಯ
ಈಶಾನ್ಯ ರಾಜ್ಯದ ಫೈವ್ ಸಿಸ್ಟರ್ಸ್ ಲ್ಯಾಂಡ್ಗಳಲ್ಲಿ ಒಂದಾಗಿರುವ, ಪ್ರಕೃತಿ ರಮಣೀಯ ಮೇಘಾಲಯವೂ ಸಹ ಈ ವರ್ಷ ಅತೀ ಹೆಚ್ಚು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸಿದೆ. ಮಂಜು ಮುಸುಕಿದ ಪರ್ವತಗಳು, ಅಸಂಖ್ಯಾತ ಜಲಪಾತಗಳು, ಪಾರಂಪರಿಕ ತೂಗು ಸೇತುವೆಗಳು, ಸ್ಪಟಿಕ ಸದೃಶ ನದಿಗಳು, ನಿಗೂಢ ದಟ್ಟ ಕಾನನಗಳು ಪ್ರಕೃತಿ ಪ್ರಿಯರನ್ನು ತಮ್ಮತ್ತ ಸೆಳೆಯುವಲ್ಲಿ ಎಂದೂ ಸೋತಿಲ್ಲ. ಚಿರಾಪುಂಜಿ, ಡೌಕಿ, ಮೌಲ್ಯನ್ ಗಾಂಗ್, ಶಿಲ್ಲಾಂಗ್ ಮತ್ತು ಕ್ರಂಗ್ ಸುರಿ ಅತೀ ಹೆಚ್ಚು ಪ್ರವಾಸಿಗರನ್ನು ತಮ್ಮತ್ತ ಈ ವರ್ಷ ಸೆಳೆದುಕೊಂಡಿದೆ. ಇವುಗಳಲ್ಲಿ ಮೆಘಾಲಯಕ್ಕೆ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ.
ಕಾಶ್ಮೀರ
2025ರಲ್ಲಿ ಅತೀ ಹೆಚ್ಚು ಗಮನ ಸೆಳೆದ ಭಾರತದ ಪ್ರವಾಸಿ ತಾಣಗಳಲ್ಲಿ ಭೂಲೋಕದ ಸ್ವರ್ಗ ಕಾಶ್ಮೀರವೂ ಇದೆ. ಇಲ್ಲಿನ ತಾಣಗಳಾದ ಸೋನ್ ಮಾರ್ಗ್, ಅರು ಕಣಿವೆ, ಗುರೆಝ್, ಡಕ್ಸುಮ್ ಮತ್ತು ದೂಧ್ ಪಾತ್ರಿಗೆ ಈ ಬಾರಿ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದು ಇತ್ತೀಚಿನ ವರ್ಷಗಳವರೆಗೂ ನಿಗೂಢ ಪ್ರವಾಸಿ ತಾಣಗಳಾಗಿ ಉಳಿದುಕೊಂಡಿತ್ತು. ಹಿಮಚ್ಚಾದಿತ ಪರ್ವತಗಳು, ಹೂ ಆಚ್ಛಾದಿತ ಪ್ರದೇಶಗಳು ಮತ್ತು ಸಮ್ಮೋಹಕ ನದಿ ತೊರೆಗಳು ಪ್ರವಾಸಿಗರಿಗೆ ನಗರ ಜಂಜಾಟದಿಂದ ಕ್ಷಣಕಾಲ ಮುಕ್ತಿ ನೀಡುವ ತಾಣಗಳಾಗಿ ಮೂಡಿ ಬಂದಿವೆ. ಹಿಮಾಚ್ಛಾದಿತ ಪ್ರದೇಶಗಳು, ಟ್ಯುಲಿಪ್ ಗಾರ್ಡನ್, ಹೌಸ್ ಬೋಟ್ ಮತ್ತು ದಾಲ್ ಲೇಕ್ನ ಸೌಂದರ್ಯ ವರ್ಣನೆಯ ಇನ್ಸ್ಟಾಗ್ರಾಂ ರೀಲ್ಗಳು ಈ ಬಾರಿ ಅತೀ ಹೆಚ್ಚು ಪ್ರವಾಸಿಗರನ್ನು ಭೂಲೋಕದ ಸ್ವರ್ಗದ ಕಡೆಗೆ ಹೆಚ್ಚು ಆಕರ್ಷಿತವಾಗುವಂತೆ ಮಾಡಿದೆ.