ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DK Shivakumar: ನ್ಯಾಯ ನೀಡುವ ಸ್ಥಳದಲ್ಲಿ ಅಧರ್ಮ ತೋರಿಸುವುದನ್ನು ಖಂಡಿಸಬೇಕು: ಡಿ.ಕೆ.ಶಿವಕುಮಾರ್

Shoe throwing case in Supreme Court: ಸುಪ್ರೀಂಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆತ ಘಟನೆ ತಪ್ಪು. ನ್ಯಾಯ ನೀಡುವ ಸ್ಥಳದಲ್ಲಿ ಅಧರ್ಮ ತೋರಿಸುವುದನ್ನು ನಾವೆಲ್ಲರೂ ಖಂಡಿಸಬೇಕು. ತಪ್ಪಿತಸ್ಥನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

CJI ಮೇಲೆ ಶೂ ಎಸೆತ ಘಟನೆ ತಪ್ಪು: ಡಿಕೆಶಿ

ಡಿಸಿಎಂ ಡಿ.ಕೆ. ಶಿವಕುಮಾರ್. -

Profile Siddalinga Swamy Oct 8, 2025 4:58 PM

ಬೆಂಗಳೂರು: ಸುಪ್ರೀಂಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆತ ಘಟನೆ ತಪ್ಪು. ನ್ಯಾಯ ನೀಡುವ ಸ್ಥಳದಲ್ಲಿ ಅಧರ್ಮ ತೋರಿಸುವುದನ್ನು ನಾವೆಲ್ಲರೂ ಖಂಡಿಸಬೇಕು. ತಪ್ಪಿತಸ್ಥನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಆಗ್ರಹಿಸಿದರು. ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಬುಧವಾರ ಅವರು ಪ್ರತಿಕ್ರಿಯೆ ನೀಡಿದರು. ಸುಪ್ರೀಂಕೋರ್ಟ್‌ನಲ್ಲಿ ಶೂ ಎಸೆತ ಪ್ರಕರಣದ ಬಗ್ಗೆ ಕೇಳಿದಾಗ, ʼಮುಖ್ಯ ನ್ಯಾಯಮೂರ್ತಿಯವರು ತಪ್ಪಿತಸ್ಥನ ವಿರುದ್ಧ ಕ್ರಮ ತೆಗೆದುಕೊಳ್ಳಬೇಡಿ ಎಂದಿದ್ದಾರೆ. ಆದರೂ ಸುಮೋಟೋ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕುʼ ಎಂದು ಹೇಳಿದರು.

ಬಿಗ್ ಬಾಸ್ ಬಂದ್; ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸೂಚನೆ

ಬಿಗ್ ಬಾಸ್ ಕಾರ್ಯಕ್ರಮ ನಡೆಯುವ ಜಾಲಿವುಡ್ ಸ್ಟುಡಿಯೋವನ್ನು ಉದ್ಘಾಟನೆ ಮಾಡಿದ್ದೇ ನಾನು. ಅಲ್ಲಿ ಏನಾಗಿದೆ ಎಂಬ ಬಗ್ಗೆ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದಿದ್ದೇನೆ. ಜತೆಗೆ ಉದ್ಯೋಗ ಮುಖ್ಯ ಎಂದೂ ಹೇಳಿದ್ದೇನೆ. ಖಾಸಗಿಯವರು ಹೂಡಿಕೆ ಮಾಡಿರುತ್ತಾರೆ. ಇದಕ್ಕೆ ಏನು ಪರಿಹಾರ ಕಂಡುಕೊಳ್ಳಬಹುದೋ ಅದಕ್ಕೆ ಅವಕಾಶ ನೀಡಿ ಎಂದೂ ತಿಳಿಸಿದ್ದೇನೆ. ಬಿಗ್ ಬಾಸ್ ಒಂದೇ ಅಲ್ಲ. ಎಲ್ಲಾ ಮನರಂಜನಾ ಕಾರ್ಯಕ್ರಮಗಳು ನಡೆಯಬೇಕು ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Sadguru Sri Madhusudan Sai: ಸತ್ಯ ಸಾಯಿ ವೈದ್ಯಕೀಯ ಕಾಲೇಜು ಕೇವಲ ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಕೊಡುಗೆ: ಶ್ರೀ ಮಧುಸೂದನ ಸಾಯಿ

ಜಾಲಿವುಡ್ ಸ್ಟುಡಿಯೋದವರು ಮಾಲಿನ್ಯ ನಿಯಮಗಳನ್ನು ಪಾಲಿಸಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ನೀಡಲಾಗಿತ್ತು. ಅದರ ಆದೇಶದಂತೆ ಈಗ ಕ್ರಮ ತೆಗೆದುಕೊಳ್ಳಲಾಗಿದೆ. ಅಧಿಕಾರಿಗಳು ಕಾನೂನಾತ್ಮಕವಾಗಿ ಕೆಲಸ ಮಾಡಿದ್ದಾರೆ. ಈ ವಿಚಾರಗಳನ್ನು ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡೆ ಎಂದು ಅವರು ತಿಳಿಸಿದರು.

ನಟ್ಟು ಬೋಲ್ಟ್ ಟೈಟ್ ಎಂದು ಜೆಡಿಎಸ್ ಹಾಗೂ ಕುಮಾರಸ್ವಾಮಿ ಅವರು ಎಕ್ಸ್ (ಟ್ವೀಟ್) ಮಾಡಿರುವ ಬಗ್ಗೆ ಕೇಳಿದಾಗ, ʼಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಕುಮಾರಸ್ವಾಮಿ ಅವರಾದರೂ ಮಾಡಿಕೊಳ್ಳಲಿ, ಮೇಲಿನಿಂದ ಯಾರನ್ನಾದರೂ ಕರೆದುಕೊಂಡಾದರೂ ಬಂದು ಮಾಡಿಕೊಳ್ಳಲಿʼ ಎಂದು ವ್ಯಂಗ್ಯವಾಡಿದರು.

ʼಈ ವಿಚಾರದಲ್ಲಿ ಜೆಡಿಎಸ್ ಹಾಗೂ ಕುಮಾರಸ್ವಾಮಿ ಅವರು ರಾಜಕೀಯ ಮಾಡುತ್ತಿದ್ದಾರೆ. ಪ್ರತಿದಿನ ನನ್ನನ್ನು, ನನ್ನ ಹೆಸರನ್ನು ನೆನಪಿಸಿಕೊಳ್ಳದಿದ್ದರೆ ಅವರಿಗೆ (ಕುಮಾರಸ್ವಾಮಿ) ನೆಮ್ಮದಿ, ನಿದ್ದೆ ಹಾಗೂ ಯಾವುದಕ್ಕೂ ಶಕ್ತಿ ಬರುವುದಿಲ್ಲʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಲೇವಡಿ ಮಾಡಿದರು.

ಲಾಲ್ ಬಾಗ್ ವಿರೂಪಗೊಳ್ಳುವುದಿಲ್ಲ

ಟನಲ್ ರಸ್ತೆಯಿಂದ ಲಾಲ್ ಬಾಗ್ ವಿರೂಪಗೊಳ್ಳಲಿದೆ ಎನ್ನುವ ಬಗ್ಗೆ ಕೇಳಿದಾಗ, ʼಬೆಂಗಳೂರಿನ ಪ್ರಗತಿಗೆ ಟನಲ್ ರಸ್ತೆ ಮಾಡಲಾಗುತ್ತಿದೆ. ನಾವು ಯಾವುದೇ ರೀತಿಯಲ್ಲೂ ಲಾಲ್ ಬಾಗ್ ಅನ್ನು ವಿರೂಪಗೊಳಿಸಲು ಹೋಗುವುದಿಲ್ಲ. ಲಾಲ್ ಬಾಗ್‌ಗೆ ಐತಿಹಾಸಿಕ ಮಹತ್ವವಿದೆ, ಅದು ಎಷ್ಟು ಪವಿತ್ರವಾದುದು ಎಂಬುದು ನಮಗೆ ತಿಳಿದಿದೆ. ಮುಂದಿನ ಸೋಮವಾರ ಲಾಲ್ ಬಾಗ್ ಅನ್ನು ಅಧಿಕಾರಿಗಳ ಜತೆ ವೀಕ್ಷಣೆ ಮಾಡುತ್ತೇನೆ. ಈ ಕುರಿತು ಯಾರಿಗೂ ಆತಂಕ ಬೇಡʼ ಎಂದು ತಿಳಿಸಿದರು‌.‌ ಸಚಿವ ಸಂಪುಟ ಪುನರ್ ವಿಸ್ತರಣೆ ಬಗ್ಗೆ ಕೇಳಿದಾಗ, ʼನನಗೆ ಇದರ ಬಗ್ಗೆ ಗೊತ್ತಿಲ್ಲʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.