ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala case: ಎಫ್‌ಎಸ್‌ಎಲ್‌ ವರದಿ ಬರುವವರೆಗೆ ಧರ್ಮಸ್ಥಳದಲ್ಲಿ ಎಸ್‌ಐಟಿ ಶೋಧ ಕಾರ್ಯ ಸ್ಥಗಿತ: ಗೃಹ ಸಚಿವ ಪರಮೇಶ್ವರ್‌

Home Minister G. Parameshwar: ಧರ್ಮಸ್ಥಳ ಪ್ರಕರಣದ ಬಗ್ಗೆ ತನಿಖೆ ಬಹಳ ಗಂಭೀರವಾಗಿ, ಪಾರದರ್ಶಕವಾಗಿ ನಡೆಯುತ್ತಿದೆ. ದೂರುದಾರ ಇಡೀ ಧರ್ಮಸ್ಥಳ ಪೂರ್ತಿ ತೋರಿಸಿದರೆ ಅಗೆಯುವುದಿಲ್ಲ. ಎಷ್ಟು ಕಡೆ ಅಗೆಯುತ್ತೀರಿ ಎಂಬ ಪ್ರಶ್ನೆಗಳು ಬರುತ್ತಿವೆ. ಆತ ಹೇಳಿರುವ ಸ್ಥಳಗಳಲ್ಲಿ ಅಗೆಯಲಾಗಿದೆ. ಶೋಧಕಾರ್ಯ ಮುಂದಕ್ಕೆ ಹೋಗಬೇಕಾ ಬೇಡವೇ ಎಂಬ ನಿರ್ಧಾರವನ್ನು ಎಸ್‌ಐಟಿ ಮಾಡಲಿದೆ ಎಂದು ಗೃಹ ಸಚಿವ ಪರಮೇಶ್ವರ್‌ ತಿಳಿಸಿದ್ದಾರೆ.

ಎಫ್‌ಎಸ್‌ಎಲ್‌ ವರದಿ ಬರುವವರೆಗೆ ಎಸ್‌ಐಟಿ ಶೋಧ ಕಾರ್ಯ ಸ್ಥಗಿತ: ಪರಮೇಶ್ವರ್‌

Prabhakara R Prabhakara R Aug 18, 2025 4:56 PM

ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ (Dharmasthala case) ಸಂಬಂಧಿಸಿ ಎಸ್‌ಐಟಿ ತನಿಖೆಯ ಕುರಿತ ಮಧ್ಯಂತರ ವರದಿ ಬಿಡುಗಡೆ ಮಾಡಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ ಹಿನ್ನೆಲೆಯಲ್ಲಿ ಸದನದಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಪ್ರಕರಣದ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ. ಧರ್ಮಸ್ಥಳದಲ್ಲಿ ಶೋಧ ಕಾರ್ಯ ನಡೆದಿರುವ ಕಡೆ ಸಿಕ್ಕಿರುವ ಅಸ್ಥಿಪಂಜರ, ಮೂಳೆಗಳು ಸೇರಿ ಇತರ ವಸ್ತುಗಳನ್ನು ಎಫ್​ಎಸ್​ಎಲ್‌ ಪರೀಕ್ಷೆಗೆ ಕಳುಹಿಸಲಾಗಿದೆ. ಹೀಗಾಗಿ ಎಫ್​ಎಸ್​ಎಲ್‌ನಿಂದ ವರದಿ ಬರವರೆಗೆ ತಾತ್ಕಾಲಿಕವಾಗಿ ಶೋಧಕಾರ್ಯ ಸ್ಥಗಿತ ಮಾಡಲು ಎಸ್​ಐಟಿ ನಿರ್ಧಾರ ಮಾಡಿದೆ. ವರದಿ ಬಂದ ಬಳಿಕ ತನಿಖೆ ಮುಂದುವರಿಯುತ್ತದೆ ಎಂದು ಗೃಹ ಸಚಿವ ಪರಮೇಶ್ವರ್‌ ತಿಳಿಸಿದ್ದಾರೆ.

ಧರ್ಮಸ್ಥಳದಲ್ಲಿ ಕೊಲೆಯಾದ ಅನೇಕ ಯುವತಿ, ಮಹಿಳೆ, ಪುರುಷರ ಶವಗಳನ್ನು ಹೂತು ಹಾಕಿದ್ದೇನೆ ಎಂದು ಅನಾಮಿಕ ದೂರುದಾರ ಹೇಳಿದ್ದ. ಇದಕ್ಕೆ ಸಂಬಂಧಿಸಿ ಜುಲೈ 4 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮ್ಯಾಜಿಸ್ಟ್ರೇಟ್ ಕೋರ್ಟ್ ಸೂಚನೆ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದರು.

ಈ ನಡುವೆ ರಾಜ್ಯದ ಮಹಿಳಾ ಆಯೋಗದ ಅಧ್ಯಕ್ಷರು ಸಿಎಂ ಸಿದ್ದರಾಮಯ್ಯರಿಗೆ ಪತ್ರ ಬರೆಯುತ್ತಾರೆ. ಹೀಗಾಗಿ ತನಿಖೆ ಮಾಡಲು ಪ್ರಣವ್ ಮೊಹಂತಿ ಅವರ ನೇತೃತ್ವದಲ್ಲಿ ಎಸ್​ಐಟಿ ರಚಿಸಲಾಯಿತು ಎಂದು ತಿಳಿಸಿದ್ದಾರೆ.



ಎಸ್​ಐಟಿ ಅಧಿಕಾರಿಗಳು ಸಾಕ್ಷಿದಾರನಿಂದ 161 ಸ್ಟೇಟ್​ಮೆಂಟ್ ಪಡೆದಿದ್ದರು. ಆ ವ್ಯಕ್ತಿ ಇಂತಿಂತಹ ಸ್ಥಳಗಳಲ್ಲಿ ಹೂತು ಹಾಕಿದ್ದೇನೆ ಎಂದು ಹೇಳಿದ್ದ. ಆ ಸ್ಥಳಗಳನ್ನು ಮ್ಯಾಪ್ ಮಾಡಿಕೊಂಡು, ಸಬ್​ಮ್ಯಾಜಿಸ್ಟ್ರೇಟ್​ ಅಡಿಯಲ್ಲಿ ಭೂ ಅಗೆತ ಆರಂಭವಾಯಿತು. ಭೂಮಿ ಅಗೆಯುವ ಸ್ಥಳ ಪ್ರಾರಂಭ ಮಾಡಿದಾಗ ಎರಡು ಸ್ಥಳಗಳಲ್ಲಿ ಅಸ್ಥಿ ಪಂಜರ, ಮೂಳೆಗಳು ಸಿಕ್ಕಿತ್ತು. ಅಲ್ಲಿ ಸಿಕ್ಕ ವಸ್ತುಗಳನ್ನು ಎಫ್​ಎಸ್​ಎಲ್​ಗೆ ಕಳುಹಿಸಲಾಗಿದೆ. ಮಣ್ಣಿನ ಪರೀಕ್ಷೆಗೂ​ ಸ್ಯಾಂಪಲ್‌ ಕಳುಹಿಸಲಾಗಿದೆ.

ಸಿಕ್ಕಿರುವ ಅಸ್ಥಿಪಂಜರದ ಅನಾಲಿಸಿಸ್​ ನಡೆಯಬೇಕು. ಇನ್ನು ಇನ್ವೆಸ್ಟಿಗೇಷನ್ ಆಗಬೇಕು. ದೂರುದಾರ ಬುರುಡೆಯೊಂದನ್ನು ತೆಗೆದುಕೊಂಡು ಬಂದಿದ್ದಾನೆ. ಅದನ್ನು ಪರೀಕ್ಷೆಗೆ ಎಫ್​ಎಸ್ಎಲ್​ಗೆ ಕಳುಹಿಸಲಾಗಿದೆ. ಇಲ್ಲಿಯವರೆಗೆ ಅಗೆಯುವ ಕೆಲಸ ಆಗಿದೆ, ತನಿಖೆ ನಡೆದಿಲ್ಲ. ತನಿಖೆ ಆರಂಭವಾಗುವುದು ಯಾವಾಗ ಎಂದರೆ, ಸ್ಯಾಂಪಲ್‌, ಡಿಎನ್‌ಎ, ಮಣ್ಣಿನ ಪರೀಕ್ಷೆ ಆದ ಮೇಲೆ ತನಿಖೆ ಆರಂಭವಾಗಲಿದೆ.

ಇನ್ನು ದೂರುದಾರ ದಿನನಿತ್ಯ ಯಾರ ಬಳಿಗೋ ಹೋಗಿ, ಅವರು ಹೇಳಿದಂತೆ ಮಾಡುತ್ತಿದ್ದಾನೆ ಎಂದು ವಿಪಕ್ಷದ ಶಾಸಕರು ಕೇಳಿದ್ದಾರೆ. ಆದರೆ, ಅದಕ್ಕೆ ಕೆಲವೊಂದು ನಿಯಮಗಳಿವೆ. ವಿಟ್‌ನೆಸ್‌ ಪ್ರೊಟೆಕ್ಷನ್‌ ಆ್ಯಕ್ಟ್‌ ಅನ್ವಯ ನಾವು ದೂರುದಾರರನ್ನು ಬಂಧಿಸಲು ಸಾಧ್ಯವಿಲ್ಲ.

ಸದ್ಯ ತನಿಖೆ ಬಹಳ ಗಂಭೀರವಾಗಿ, ಪಾರದರ್ಶಕವಾಗಿ ನಡೆಯುತ್ತಿದೆ. ದೂರುದಾರ ಇಡೀ ಧರ್ಮಸ್ಥಳ ಪೂರ್ತಿ ತೋರಿಸಿದರೆ ಅಗೆಯುವುದಿಲ್ಲ. ಇನ್ನು ಎಷ್ಟು ಕಡೆ ಅಗೆಯುತ್ತೀರಿ ಎಂಬ ಪ್ರಶ್ನೆಗಳು ಬರುತ್ತಿವೆ. ಆತ ಹೇಳಿರುವ ಸ್ಥಳಗಳಲ್ಲಿ ಅಗೆಯಲಾಗಿದೆ. ಶೋಧಕಾರ್ಯ ಮುಂದಕ್ಕೆ ಹೋಗಬೇಕಾ ಬೇಡವೇ ಎಂಬ ನಿರ್ಧಾರವನ್ನು ನಾವು (ಸರ್ಕಾರ) ಮಾಡಲ್ಲ. ಎಸ್‌ಐಟಿ ಮಾಡಲಿದೆ. ಇದಕ್ಕಾಗಿ ಎಸ್‌ಐಟಿಗೆ ಅಧಿಕಾರ ನೀಡಲಾಗಿದೆ.

ಈ ಸುದ್ದಿಯನ್ನೂ ಓದಿ | BY Vijayendra: ಧರ್ಮಸ್ಥಳ ವಿಚಾರದಲ್ಲಿ ಮಧ್ಯಂತರ ವರದಿಯಿಂದ ಗೊಂದಲಕ್ಕೆ ತೆರೆ : ವಿಜಯೇಂದ್ರ

ಕೆಮಿಕಲ್, ಡಿಎನ್​ಎ ಅನಾಲಿಸಿಸ್ ಮಾಡಬೇಕು. ಎಫ್​ಎಸ್​ಎಲ್‌ನಿಂದ ವರದಿ ಬರವರೆಗೂ ತಾತ್ಕಾಲಿಕವಾಗಿ ಶೋಧಕಾರ್ಯ ಸ್ಥಗಿತ ಮಾಡಲು ಎಸ್​ಐಟಿ ನಿರ್ಧಾರ ಮಾಡಿದೆ. ಎಫ್​ಎಸ್​ಎಲ್ ವರದಿ ಬಂದ ಬಳಿಕ ತನಿಖೆ ಮುಂದುವರಿಯುತ್ತದೆ ಎಂದು ಮಾಹಿತಿ ನೀಡಿದ್ದಾರೆ.