Cabinet Meeting: ನೇಮಕಾತಿಗೆ 3 ವರ್ಷ ವಯೋಮಿತಿ ಸಡಿಲಿಕೆ, ಋತು ಚಕ್ರ ರಜೆ ನೀತಿ ಜಾರಿಗೆ ಸಚಿವ ಸಂಪುಟ ಒಪ್ಪಿಗೆ
Age limit relaxation: ನೇರ ನೇಮಕಾತಿಯಲ್ಲಿ ಗರಿಷ್ಠ ವಯೋಮಿತಿಯಲ್ಲಿ 3 ವರ್ಷ ಸಡಿಲಿಕೆ, ಮಹಿಳೆಯರಿಗೆ ಋತು ಚಕ್ರ ರಜೆ ಹಾಗೂ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ 2025ಕ್ಕೆ ಅನುಮೋದನೆ ಸೇರಿ ಪ್ರಮುಖ ನಿರ್ಣಯಗಳನ್ನು ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.

-

ಬೆಂಗಳೂರು, ಅ.09: ರಾಜ್ಯ ಸಿವಿಲ್ ಸೇವೆ ಹುದ್ದೆಗಳ ನೇರ ನೇಮಕಾತಿಯಲ್ಲಿ ಎಲ್ಲಾ ಪ್ರವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷ ಸಡಿಲಿಕೆ, ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆ ನೀಡುವ ʼಋತು ಚಕ್ರ ರಜೆ ನೀತಿ 2025ʼ (Menstrual Leave Policy, 2025) ಜಾರಿ ಸೇರಿ ಪ್ರಮುಖ ನಿರ್ಣಯಗಳಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಒಪ್ಪಿಗೆ ನೀಡಲಾಗಿದೆ.
2027ರ ಡಿ. 31ರವರೆಗೆ ಸರ್ಕಾರಿ ಹುದ್ದೆಗಳ ನೇರ ನೇಮಕಾತಿ ಆಯ್ಕೆ ಪ್ರಕ್ರಿಯೆಗಳಲ್ಲಿ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ 3 ವರ್ಷಗಳ ಸಡಿಲಿಕೆ (Government job age limit) ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಆದೇಶಕ್ಕೆ ಘಟನೋತ್ತರ ಅನುಮೋದನೆ ನೀಡಲು ಒಪ್ಪಿಗೆ ನೀಡಲಾಗಿದೆ. ಹಲವು ವರ್ಷಗಳಿಂದ ಅನೇಕ ಇಲಾಖೆಗಳ ನೇಮಕಾತಿ ನಡೆಯದ ಕಾರಣ ವಯೋಮಿತಿ ಸಡಿಲಿಕೆ ಮಾಡಲು ಉದ್ಯೋಗಾಕಾಂಕ್ಷಿಗಳು ಸರ್ಕಾರಕ್ಕೆ ಒತ್ತಾಯಿಸಿದ್ದರು. ಹೀಗಾಗಿ ಸರ್ಕಾರ 3 ವರ್ಷಗಳ ಸಡಿಲಿಕೆ ಮಾಡಿದೆ.
ಕ್ಯಾಬಿನೆಟ್ ಸಭೆಯ ಬಳಿಕ ಮಾತನಾಡಿದ ಸಚಿವ ಸಂತೋಷ ಲಾಡ್, ಹೆಣ್ಣು ಮಕ್ಕಳಿಗೆ ಋತು ಚಕ್ರ ರಜೆ ನೀಡಲು ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ ಆಗಿದೆ. ವರ್ಷದಲ್ಲಿ 12 ದಿನ ರಜೆ ಸಂಬಳ ಸಹಿತ ಕೊಡಲಾಗುತ್ತದೆ. ತಿಂಗಳಲ್ಲಿ ಋತುಚಕ್ರವಾದಾಗ ಯಾವ ದಿನ ಬೇಕಾದರೂ ಒಂದು ದಿನ ರಜೆ ತೆಗೆದುಕೊಳ್ಳಬಹುದು. ಕಾನೂನು ಇಲಾಖೆ ಜತೆ ಚರ್ಚೆ ಸೇರಿ ಅನೇಕ ಚರ್ಚೆಗಳು ಆಗಿದೆ. ಯಾವತ್ತು ರಜೆ ಬೇಕು ಅಂತ ಹೆಣ್ಣುಮಕ್ಕಳು ತೀರ್ಮಾನ ಮಾಡಿಕೊಳ್ಳಬೇಕು. ಹೆಣ್ಣು ಮಕ್ಕಳ ಪರ ಸರ್ಕಾರ ಈ ಮಹತ್ವದ ನಿರ್ಧಾರ ಮಾಡಿದೆ. ಕ್ಯಾಬಿನೆಟ್‌ನಲ್ಲಿ ಒಪ್ಪಿಗೆಯಾಗಿದ್ದು, ಆದಷ್ಟೂ ಬೇಗ ಬಿಲ್ ತಂದು ದೊಡ್ಡ ಕಾರ್ಯಕ್ರಮ ಮಾಡಿ ಅನುಷ್ಠಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | CM Siddaramaiah: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 13,000 ಕೋಟಿ ಅನುದಾನ: ಸಿಎಂ ಸಿದ್ದರಾಮಯ್ಯ
ಸಚಿವ ಸಂಪುಟದ ಪ್ರಮುಖ ನಿರ್ಣಯಗಳು
- 2025-26ನೇ ಸಾಲಿನ ರಸಗೊಬ್ಬರ ಕಾಪು ದಾಸ್ತಾನು ಮಾಡಲು ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿರವರು ಪಡೆಯುವ ತಲಾ 200 ಕೋಟಿಗಳ ಬಂಡವಾಳ ಸಾಲಕ್ಕೆ ಸರ್ಕಾರ ಖಾತ್ರಿ ನೀಡಲು ಒಪ್ಪಿಗೆ ನೀಡಲಾಗಿದೆ.
- “ಜಲಾನಯನ ಅಭಿವೃದ್ಧಿ ಘಟಕ-ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆ 2.0 (PMKSY-WDC 2.0) ಯೋಜನೆಯಡಿ ಹೆಚ್ಚುವರಿ 15 ಯೋಜನೆಗಳನ್ನು ರಾಜ್ಯದ 15 ತಾಲ್ಲೂಕುಗಳಲ್ಲಿ 39413 ಹೆಕ್ಟೇರ್ ಪ್ರದೇಶದಲ್ಲಿ ಯೋಜನಾ ಮೊತ್ತ ರೂ.90.07 ಕೋಟಿಗಳಲ್ಲಿ (ಕೇಂದ್ರ ಮತ್ತು ರಾಜ್ಯ ಸರ್ಕಾರ -ಶೇ.60:40) ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಒಪ್ಪಿಗೆ ಸೂಚಿಸಿದೆ.
- ರಾಜ್ಯ ಸಿವಿಲ್ ಸೇವೆ ಹುದ್ದೆಗಳ ನೇರ ನೇಮಕಾತಿಯಲ್ಲಿ ಎಲ್ಲಾ ಪ್ರವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳನ್ನು ಸಡಿಲಿಸಿ ದಿನಾಂಕ: 29.09.2025 ರಂದು ಹೊರಡಿಸಿರುವ ಆದೇಶಕ್ಕೆ ಘಟನೋತ್ತರ ಅನುಮೋದನೆ ನೀಡಲು ಒಪ್ಪಿಗೆ ನೀಡಲಾಗಿದೆ.
- ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದಲ್ಲಿನ ಭದ್ರತಾ ಕಾರ್ಯಾಚರಣೆ ಕೇಂದ್ರವನ್ನು ನವೀಕರಿಸಲು ಮತ್ತು ಸೈಬರ್ ಭದ್ರತೆಯನ್ನು ಮತ್ತಷ್ಟು ಬಲಪಡಿಸು ವುದಕ್ಕಾಗಿ 38.33 ಕೋಟಿಗಳ ಅಂದಾಜು ಮೊತ್ತದಲ್ಲಿ ಹೊಸ ತಂತ್ರಾಂಶಗಳನ್ನು ಅಳವಡಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ.
- ಬೆಂಗಳೂರು ಉತ್ತರ ತಾಲ್ಲೂಕಿನ ಮಾಚೋಹಳ್ಳಿ ಗ್ರಾಮದ ಕಾಯ್ದಿಟ್ಟ ಅರಣ್ಯ ಪ್ರದೇಶದ ಸರ್ವೆ ನಂ.81ರಲ್ಲಿ ಒಟ್ಟು 78 ಎಕರೆ ಅರಣ್ಯ ಪ್ರದೇಶವನ್ನು ದಿನಾಂಕ 06.01.1964ರಲ್ಲಿ ಕಂದಾಯ ಇಲಾಖೆಗೆ ಬಿಡುಗಡೆಗೊಳಿಸಲಾಗಿದ್ದು, ಕಂದಾಯ ಇಲಾಖೆಯು ದಿನಾಂಕ: 18.12.20170 ಆದೇಶದಲ್ಲಿ ಸದರಿ ಜಮೀನನ್ನು ವಿವಿಧ ಸಂಸ್ಥೆಗಳಿಗೆ ಮಂಜೂರು ಮಾಡಿದ್ದು, ಸದರಿ ಆದೇಶಗಳನ್ನು ಹಿಂಪಡೆಯಲು ( ಮುಂದೂಡಿಕೆ) ಮಾಡಲಾಗಿದೆ.
- ಕೇಂದ್ರ ಪುರಸ್ಕೃತ ICJS-2.0 (Inter-Operable Criminal Justice System 2.0) ಯೋಜನೆಯಡಿ ಕೇಂದ್ರ ಗೃಹ ಮಂತ್ರಾಲಯವು ಮಂಜೂರು ಮಾಡಿರುವ 89.22 ಕೋಟಿಗಳ ಮೊತ್ತದಲ್ಲಿ ಉಪಕರಣಗಳನ್ನು ಪೊಲೀಸ್ ಗಣಕ ವಿಭಾಗದ ವತಿಯಿಂದ ಖರೀದಿಸಲು ಹಾಗೂ ತರಬೇತಿ ಹಾಗೂ ಇತರೆ ಕಾರ್ಯಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು ಒಪ್ಪಿಗೆ ನೀಡಿದೆ.
- ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಎರಡನೇ ಹಂತದಲ್ಲಿ 11 ಶ್ರಮಿಕ ವಸತಿ ಶಾಲೆಗಳನ್ನು ರೂ.405.55 ಕೋಟಿಗಳ ಮೊತ್ತದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದಿಸಿದೆ.
- ರಾಜ್ಯದಾದ್ಯಂತ ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್ MNCಗಳು, IT ಮತ್ತು ಇತರೆ ಖಾಸಗಿ ಕೈಗಾರಿಕೆಗಳು ಸೇರಿದಂತೆ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ರಜೆ ನೀಡುವ “ಋತು ಚಕ್ರ ರಜೆ ನೀತಿ 2025” (Menstrual Leave Policy, 2025)ನ್ನು ಜಾರಿಗೆ ತರಲು ಅಸ್ತು ಎಂದಿದೆ.
- ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ, 2025 ಕೆ ಅನುಮೋದನೆ ನೀಡಲು ಅನುಮೋದನೆ ನೀಡಲಾಗಿದೆ.
- ಸೇತುವೆಗಳು ಪುನರ್ ನಿರ್ಮಾಣ ಹಾಗೂ ಪುನಶ್ವೇತನ ಕಾಮಗಾರಿಗಳನ್ನು ರೂ. 2000 ಕೋಟಿಗಳ ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ತಾತ್ವಿಕ ಅನುಮೋದನೆ ಹಾಗೂ ಮೊದಲನೇ ಹಂತದಲ್ಲಿ PRAMC ಅಧ್ಯಯನದಲ್ಲಿ ಗುರುತಿಸಿರುವ 39 ಬೃಹತ್ ಸೇತುವೆಗಳ ಪುನರ್ ನಿರ್ಮಾಣ/ನಿರ್ಮಾಣ ಕಾಮಗಾರಿಗಳನ್ನು ರೂ.1000 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿದೆ.
- ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕರಿವೋಬನಹಳ್ಳಿಯಿಂದ ವತಿಯಿಂದ ನಾಗಸಂದ್ರ ಹೊಸ ಬಳಸಿದ ನೀರು ಸಂಸ್ಕರಣಾ ಘಟಕದವರೆಗೆ ಇರುವ ರೈಸಿಂಗ್ ಮೇನ್ ಸೇರಿ ನಾಗಸಂದ್ರದಲ್ಲಿ 20 MLD ಬಳಸಿದ ನೀರು ಸಂಸ್ಕರಣಾ ಘಟಕ (UWTP) ಮತ್ತು 5 MLD ಮಧ್ಯಂತರ ತ್ಯಾಜ್ಯ ನೀರಿನ ಯಂತ್ರಾಗಾರಗಳ 05 ವರ್ಷಗಳ ಸಮಗ್ರ ಕಾರ್ಯಾಚರಣೆ ಮತ್ತು ನಿರ್ವಹಣೆ (O&M) ಯನ್ನು ರೂ.26.02 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದಿಸಿದೆ.
- ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಬಹುಮಹಡಿ ಕಟ್ಟಡಗಳಲ್ಲಿ ಸಂಭವಿಸಬಹುದಾದ ಅಗ್ನಿ ಅನಾಹುತ ತಡೆಗಟ್ಟುವ ಸಲುವಾಗಿ 52-54 ಮೀಟರ್ ಎತ್ತರಕ್ಕೆ ತಲುಪುವ Aerial Ladder Platform Vehicleನ್ನು 16.00 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಅನುಮೋದನೆ ನೀಡಿದೆ.
- ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜನ್ನು ಸ್ವಾಯತ್ತ ಸ್ಥಾನಮಾನದೊಂದಿಗೆ 150 ಎಂಬಿಬಿಎಸ್ ಪ್ರವೇಶ ಮಿತಿಯೊಂದಿಗೆ ಪ್ರಾರಂಬಿಸಲು ಮತ್ತು ಅವ್ಯವಿರುವ ವೈದ್ಯಕೀಯ ಕಾಲೇಜು ಕಟ್ಟಡ, 300 ಹಾಸಿಗೆಗಳ ಬೋಧನಾ ಆಸ್ಪತ್ರೆ, ವಸತಿ ನಿಲಯಗಳು ಮತ್ತಿತರ ಕಾಮಗಾರಿಗಳನ್ನು ರೂ.550 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
- ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ರಾಜಕನಾಲ್ ಮತ್ತು ಹಂತ-11 ರಲ್ಲಿ 40 MLD ಬಳಸಿದ ನೀರು ಸಂಸ್ಕರಣಾ ಘಟಕ (UWTP), ಟರ್ಮಿನಲ್ ತ್ಯಾಜ್ಯ ನೀರಿನ ಯಂತ್ರಗಾರ (TSPS) ಮತ್ತು ಮಧ್ಯಂತರ ತ್ಯಾಜ್ಯ ನೀರಿನ ಯಂತ್ರಗಾರದೆ (ISPS) ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಸಮಗ್ರ (O&M)ಯನ್ನು ರೂ.29.70 ಕೋಟಿಗಳ ವೆಚ್ಚದಲ್ಲಿ ಕೈಗೊಳ್ಳುವ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದಿಸಿದೆ.
- ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪುರಸಭೆ 2 1668.80 2. Ơ ಜಿಲ್ಲೆಯ ಅಫಜಲ್‌ಪುರ ಪುರಸಭೆ ವ್ಯಾಪ್ತಿಯಲ್ಲಿ 1120.60 ಚ.ಮೀ, ಧಾರವಾಡ ಜಿಲ್ಲೆಯ ನಲವಗುಂದ ಪುರಸಭೆ ವ್ಯಾಪ್ತಿಯಲ್ಲಿ 1287.77 ಚ.ಮೀ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ಪುರಸಭೆ ವ್ಯಾಪ್ತಿಯಲ್ಲಿ 4200.00 ಚ.ಅಡಿ ನಾಗರೀಕ ಸೌಲಭ್ಯ ನಿವೇಶನಗಳನ್ನು ಕಾಂಗ್ರೆಸ್ ಭವನ ನಿರ್ಮಾಣ ಮಾಡಲು ಕಾಂಗ್ರೆಸ್ ಭವನ ಟ್ರಸ್ಟ್, ಬೆಂಗಳೂರು ಇವರಿಗೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲಾಗಿದೆ.
- ಮಂಗಳೂರಿನ ದೇರೆಬೈಲ್‌ನ ಬ್ಲೂಬೆರಿ ಹಿಲ್ಸ್ ರಸ್ತೆಯಲ್ಲಿರುವ 3.285 ಎಕರೆ ಭೂಮಿಯನ್ನು ವಾಣಿಜ್ಯ ಕಛೇರಿ ಟೆಕ್ ಪಾರ್ಕ್ ಉದ್ದೇಶಕ್ಕಾಗಿ PPP ಮಾದರಿಯಲ್ಲಿ DBFOT ಆಧಾರದ ಮೇಲೆ ನಗದೀಕರಿಸಲು ಮತ್ತು ಅಭಿವೃದ್ಧಿ ಪಡಿಸಲು ಅನುಮೋದನೆ. 30 ವರ್ಷಗಳವರೆಗೆ ವಿಸ್ತರಿಸುವ 135 ಕೋಟಿ ರೂ. ವೆಚ್ಚದ ಯೋಜಬೆ ಇದಾಗಿದೆ.
- ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಘೋಡಗೇರಿ ಗ್ರಾಮದ ಸ.ನಂ.666 ರಲ್ಲಿನ 9-00 ಎಕರೆ ಗಾಯರಾಣ ಜಮೀನನ್ನು ಶ್ರೀ ಶಿವಾನಂದ ಗ್ರಾಮೀಣ ವಿದ್ಯಾಪೀಠ (ಶಿಕ್ಷಣ ಸಂಸ್ಥೆ) ಘೋಡಗೇರಿ ರವರಿಗೆ ಮಂಜೂರು ಮಾಡಿದೆ.
- ಸಿಪಿಸಿ ಪಾಲಿಟೆಕ್ನಿಕ್, ಮೈಸೂರು ಸಂಸ್ಥೆಯ ಕಟ್ಟಡದ ನವೀಕರಣ & ಹೊಸ ಸಂಸ್ಥೆಯ ಕಟ್ಟಡದ ನವೀಕರಣ & ಆಡಿಟೋರಿಯಮ್ ಅನ್ನು ಒಳಗೊಂಡಂತೆ ಮೂಲಭೂತ ಸೌಕರ್ಯಗಳನ್ನು ತಲಾ ರೂ.70 ಕೋಟಿಗಳು ಹಾಗೂ ರೂ.50 ಕೋಟಿಗಳ ಮೊತ್ತದಲ್ಲಿ ಒದಗಿಸಿರುವ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ.