ಆಷಾಢ ಬುಧವಾರ 2026: ಗಣೇಶನ ಕೃಪೆ ಪಡೆಯಲು ಈ ಪೂಜೆಗಳು ಮತ್ತು ಪರಿಹಾರಗಳನ್ನು ತಪ್ಪದೆ ಮಾಡಿ
ಆಷಾಢ ಮಾಸದ ಬುಧವಾರದಂದು ಗಣೇಶ ಹಾಗೂ ಶಿವನ ಆರಾಧನೆಗೆ ವಿಶೇಷ ಮಹತ್ವವಿದೆ. ಈ ದಿನ ಗಣೇಶ ಪೂಜೆ, ಮಂತ್ರಜಪ ಹಾಗೂ ಶಿವಲಿಂಗಕ್ಕೆ ಅಭಿಷೇಕ ಮಾಡುವುದರಿಂದ ವಿಘ್ನಗಳು ದೂರವಾಗಿ ಶುಭ ಫಲಗಳು ದೊರೆಯುತ್ತವೆ ಎಂಬ ಧಾರ್ಮಿಕ ನಂಬಿಕೆಯ ಕುರಿತು ಇಲ್ಲಿದೆ ಮಾಹಿತಿ.
ಆಷಾಢ ಮಾಸ ಪೂಜೆ -
ಬೆಂಗಳೂರು: ವಾರದ ಪ್ರತೀ ಬುಧವಾರವನ್ನು ಶಿವ ಮತ್ತು ಪಾರ್ವತಿ ಸುತನಾದ ಗಣೇಶನಿಗೆ ಸಮರ್ಪಿಸಲಾಗಿದೆ. ಪ್ರಸ್ತುತ ಆಷಾಢ ಮಾಸ(Ashada Masa) ನಡೆಯುತ್ತಿದ್ದು, ಈ ಮಾಸದಲ್ಲಿ ಶಿವ ಪೂಜೆಗೆ ಹೆಚ್ಚಿನ ಪ್ರಾಶಸ್ಥ್ಯವನ್ನು ನೀಡಲಾಗಿದೆ. ಆಷಾಢ ಮಾಸದ ಬುಧವಾರದಂದು ನಾವು ಕೆಲವೊಂದು ಕೆಲಸಗಳನ್ನು ಮಾಡುವುದರಿಂದ ನಮ್ಮ ಜೀವನದ ಅನೇಕ ಸಮಸ್ಯೆಗಳಿಂದ ಮುಕ್ತಿ ದೊರೆಯುವುದು.
ಹಾಗಾದ್ರೆ ಜ್ಯೋತಿಷ್ಯ ಶಾಸ್ತ್ರದ ಸಲಹೆಯಂತೆ (Astro Tips) ಆಷಾಢ ಬುಧವಾರದಂದು ನಾವು ಗಣಪತಿಯನ್ನು ಒಲಿಸಿಕೊಳ್ಳಲು ಏನು ಮಾಡಬೇಕು ಗೊತ್ತೇ? ಆಷಾಢ ಬುಧವಾರ ಈ ಕೆಲಸ ಮಾಡಿದರೆ ಖಂಡಿತ ಗಣೇಶನು ನಿಮಗೆ ಒಲಿಯುತ್ತಾನೆ.
ಬುಧ ದೋಷ ನಿವಾರಣೆಗೆ ಗಣೇಶ ಪೂಜೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಗ್ರಹವು ಬುದ್ಧಿವಂತಿಕೆ, ವಿದ್ಯಾಭ್ಯಾಸ, ವ್ಯವಹಾರ, ಮಾತಿನ ಕೌಶಲ್ಯ ಮತ್ತು ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತದೆ. ಬುಧ ದೋಷದಿಂದ ಬಳಲುತ್ತಿರುವವರು ಬುಧವಾರದಂದು ಗಣೇಶನಿಗೆ ಲಡ್ಡು ಅಥವಾ ಮೋದಕವನ್ನು ನೈವೇದ್ಯವಾಗಿ ಅರ್ಪಿಸಿ ಭಕ್ತಿಯಿಂದ ಪೂಜೆ ಮಾಡುವುದು ಶುಭಕರವೆಂದು ನಂಬಲಾಗಿದೆ. ಸತತ ಏಳು ಬುಧವಾರ ಈ ಪರಿಹಾರವನ್ನು ಮಾಡಿದರೆ ಬುಧ ಗ್ರಹದ ಅಶುಭ ಪರಿಣಾಮಗಳು ಕಡಿಮೆಯಾಗುತ್ತವೆ ಎಂದು ಹೇಳಲಾಗುತ್ತದೆ.
ಶತ್ರುಬಾಧೆ ನಿವಾರಣೆಗೆ ಮಂತ್ರ ಜಪ
ಬುಧವಾರ ಬೆಳಿಗ್ಗೆ ಸ್ನಾನ ಮಾಡಿ ಶಿವಲಿಂಗಕ್ಕೆ ಗಂಗಾಜಲ ಹಾಗೂ ಶಮಿ ಎಲೆಗಳಿಂದ ಅಭಿಷೇಕ ಮಾಡಿದ ಬಳಿಕ ಈ ಮಂತ್ರವನ್ನು 21 ಬಾರಿ ಜಪಿಸುವುದು ಒಳಿತು ಎಂದು ನಂಬಲಾಗಿದೆ.
Astro Tips: ಗುರುವಾರ ಈ ಪರಿಹಾರಗಳನ್ನು ಮಾಡಿದರೆ ವಿಷ್ಣುವಿನ ಕೃಪೆಯೊಂದಿಗೆ ಆರ್ಥಿಕ ಪ್ರಗತಿ, ದಾಂಪತ್ಯ ಸುಖ ಹೆಚ್ಚಲಿದೆ.
ಮಂತ್ರ:"ಓಂ ಪೂರ್ವಕಪಿಮುಖಾಯ ಪಚ್ಚಮುಖ ಹನುಮತೇ ಟಂ ಟಂ ಟಂ ಟಂ ಟಂ ಸಕಲ ಶತ್ರು ಸಂಹಾರಣಾಯ ಸ್ವಾಹಾ॥"
ಧಾರ್ಮಿಕ ನಂಬಿಕೆಯ ಪ್ರಕಾರ, ಈ ಮಂತ್ರ ಜಪಿಸುವುದರಿಂದ ಶತ್ರುಗಳಿಂದಾಗುವ ತೊಂದರೆಗಳು ಕಡಿಮೆಯಾಗುತ್ತವೆ ಹಾಗೂ ಆತ್ಮವಿಶ್ವಾಸ ಹೆಚ್ಚುತ್ತದೆ.
ದಾಂಪತ್ಯ ಜೀವನ ಸುಖಮಯವಾಗಲು
ಪತಿ–ಪತ್ನಿ ಇಬ್ಬರೂ ಸೇರಿ ನೀರಿಗೆ ಜೇನುತುಪ್ಪ ಹಾಗೂ ಸುಗಂಧ ದ್ರವ್ಯವನ್ನು ಬೆರೆಸಿ ಶಿವಲಿಂಗಕ್ಕೆ ಅಭಿಷೇಕ ಮಾಡಿದರೆ ದಾಂಪತ್ಯ ಜೀವನದಲ್ಲಿ ಪ್ರೀತಿ, ವಿಶ್ವಾಸ ಮತ್ತು ಹೊಂದಾಣಿಕೆ ಹೆಚ್ಚುತ್ತದೆ ಎಂದು ನಂಬಲಾಗಿದೆ. ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳು ಕಡಿಮೆಯಾಗಿ ಸಂಬಂಧಗಳು ಗಟ್ಟಿಯಾಗುತ್ತವೆ ಎನ್ನಲಾಗುತ್ತದೆ.
ಗಣೇಶ ಚಾಲೀಸಾ ಹಾಗೂ ಸ್ತೋತ್ರ ಪಠಿಸಿ
ಬುಧವಾರದಂದು ಕನಿಷ್ಠ 11 ಬಾರಿ ಗಣೇಶ ಚಾಲೀಸಾ ಅಥವಾ ಗಣೇಶ ಸ್ತೋತ್ರವನ್ನು ಪಠಿಸುವುದು ಅತ್ಯಂತ ಫಲಪ್ರದ ಎಂದು ನಾರದ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಭಕ್ತಿಯಿಂದ ಈ ಪಾರಾಯಣ ಮಾಡಿದರೆ ವಿಘ್ನಗಳು ದೂರವಾಗಿ ಮನಸ್ಸಿಗೆ ಶಾಂತಿ ಹಾಗೂ ಕಾರ್ಯಸಿದ್ಧಿ ದೊರೆಯುತ್ತದೆ ಎಂದು ಹೇಳಲಾಗಿದೆ.
ಶಿವಲಿಂಗಕ್ಕೆ ವಿಶೇಷ ಅಭಿಷೇಕ
ಬುಧವಾರದಂದು ಹಾಲಿಗೆ ಸ್ವಲ್ಪ ಕುಂಕುಮ ಬೆರೆಸಿ ಶಿವಲಿಂಗಕ್ಕೆ ಅಭಿಷೇಕ ಮಾಡುವುದರಿಂದ ಇಷ್ಟಾರ್ಥಗಳು ಈಡೇರುತ್ತವೆ ಹಾಗೂ ಶಿವನ ಜೊತೆಗೆ ಗಣೇಶನ ಕೃಪೆಯೂ ದೊರೆಯುತ್ತದೆ ಎಂದು ಧಾರ್ಮಿಕ ನಂಬಿಕೆ ಇದೆ. ಗಣೇಶನ ಪೂಜೆಯೊಂದಿಗೆ ಶಿವಾರಾಧನೆಯನ್ನು ಮಾಡಿದರೆ ಅದರ ಫಲ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಪುರಾಣಗಳು ತಿಳಿಸುತ್ತವೆ.