Vastu Tips: ಅದೃಷ್ಟ ಹೊತ್ತು ತರುತ್ತಾನೆ ನಗುವ ಬುದ್ಧ
ಹೆಚ್ಚಿನವರು ಮನೆ, ಕಚೇರಿಯಲ್ಲಿ ನಗುವ ಬುದ್ಧನ ಪ್ರತಿಮೆ ಅಥವಾ ಚಿತ್ರವನ್ನು ಇಟ್ಟುಕೊಳ್ಳುತ್ತಾರೆ. ಇದು ಯಾಕೆ ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ? ನಗುವ ಬುದ್ಧನ ಪ್ರತಿಮೆ ಅಥವಾ ಚಿತ್ರವನ್ನು ಇಟ್ಟುಕೊಳ್ಳುವುದು ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ ಎನ್ನುವ ನಂಬಿಕೆ ಇದೆ. ಆದರೆ ಇದು ಸರಿಯೇ, ಬುದ್ಧನ ಪ್ರತಿಮೆ ಅಥವಾ ಚಿತ್ರವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದೇ, ಯಾವ ರೀತಿಯ ಬುದ್ಧನ ಪ್ರತಿಮೆ ಇಟ್ಟುಕೊಳ್ಳಬೇಕು ? ಈ ಬಗ್ಗೆ ವಾಸ್ತು ಶಾಸ್ತ್ರ (Vastushastra) ಏನು ಹೇಳಿದೆ ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.


ಸದಾ ನಗುತ್ತಿರುವ ಬುದ್ಧನ (Laughing Buddha) ಚಿತ್ರ ಅಥವಾ ಪ್ರತಿಮೆ ಮನೆಯಲ್ಲಿ (vastu for home) ಇದ್ದರೆ ಸದಾ ನೋಡುತ್ತಿರಬೇಕು ಎಂದೆನಿಸುತ್ತದೆ. ಒಂದು ರೀತಿಯಲ್ಲಿ ಇದು ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತದೆ. ನಗುವ ಬುದ್ಧನ ಪ್ರತಿಮೆ ಇದ್ದರೆ ಅದು ಮನೆಗೆ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ ಎನ್ನುವ ನಂಬಿಕೆಯೂ ಇದೆ. ಮನೆಯಲ್ಲಿ ಬುದ್ಧನ ಪ್ರತಿಮೆ ಇರಿಸುವುದರಿಂದ ಏನು ಲಾಭವಿದೆ, ಯಾವ ರೀತಿಯ ಬುದ್ಧನ ಪ್ರತಿಮೆ ಇರಿಸಬೇಕು ಈ ಬಗ್ಗೆ ವಾಸ್ತು (Vastu Tips) ನಿಯಮ ಏನು ಹೇಳುತ್ತದೆ ಗೊತ್ತೇ?
ನಗುತ್ತಿರುವ ಬುದ್ಧನ ಮುಖದಿಂದ ಸಕಾರಾತ್ಮಕ ಶಕ್ತಿ ಹೊರಸೂಸುತ್ತದೆ. ಹೀಗಾಗಿ ಬುದ್ಧನ ಸಂತೋಷದ ಭಂಗಿಯು ಮನೆ ಮತ್ತು ಕೆಲಸದ ಸ್ಥಳದಲ್ಲಿ ಶುಭ ಉಂಟು ಮಾಡುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ. ಬುದ್ಧನ ನಗು ಕೇವಲ ಅಭಿವ್ಯಕ್ತಿಯಲ್ಲ. ಅದರಲ್ಲಿ ಆಳವಾದ ಆಧ್ಯಾತ್ಮಿಕ ಮತ್ತು ತಾತ್ವಿಕ ಸಂಕೇತವು ಇದೆ. ನಗುವ ಬುದ್ಧನ ಮೂರ್ತಿ ತೃಪ್ತಿ ಮತ್ತು ಆಂತರಿಕ ಶಾಂತಿಯ ಸಂಕೇತವಾಗಿದೆ. ಇದು ಭೌತಿಕ ಸುಖಗಳನ್ನು ಅವಲಂಬಿಸಿಲ್ಲ ಎಂಬುದನ್ನು ಸಾರುತ್ತದೆ. ಬುದ್ಧನ ಹರ್ಷಚಿತ್ತದಿಂದ ಕೂಡಿದ ಮುಖವು ನಕಾರಾತ್ಮಕ ಶಕ್ತಿಯನ್ನು ದೂರಮಾಡಿ ಸಕಾರಾತ್ಮಕತೆಯನ್ನು ಆಕರ್ಷಿಸುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.
ಸರಳವಾಗಿ ಬದುಕಲು ಮತ್ತು ಹೆಚ್ಚು ಸಂತೋಷದಿಂದ ಜೀವನ ನಡೆಸಲು ಇದು ನಮಗೆ ಸ್ಫೂರ್ತಿ ನೀಡುತ್ತದೆ. ಆದ್ದರಿಂದ ನಗುವ ಬುದ್ಧನನ್ನು ಮನೆಯ ಸರಿಯಾದ ದಿಕ್ಕಿನಲ್ಲಿ ಇಡುವುದು ಬಹುಮುಖ್ಯ. ಜೀವನದಲ್ಲಿ ಸಮೃದ್ಧಿಯನ್ನು ಕಾಪಾಡಿಕೊಳ್ಳಲು ನಗುವ ಬುದ್ಧನನ್ನು ಮನೆಯಲ್ಲಿ ಯಾವ ರೀತಿ ಇರಿಸಬೇಕು ಎನ್ನುವುದರ ಕುರಿತು ವಾಸ್ತು ತಜ್ಞರಾದ ಪಂಡಿತ್ ರಮೇಶ್ ಭೋಜರಾಜ್ ದ್ವಿವೇದಿ ಹೇಳುವುದು ಹೀಗೆ..
10ನೇ ಶತಮಾನದ ಲಿಯಾಂಗ್ ರಾಜವಂಶದ ಅವಧಿಯಲ್ಲಿ ಚೀನೀ ಬೌದ್ಧ ಸನ್ಯಾಸಿ ಬುಡೈ ಅವರು ಹೆಚ್ಚು ಪ್ರಸಿದ್ಧರಾಗಿದ್ದರು. ಅವರ ವಿಶಿಷ್ಟ ಜೀವನಶೈಲಿ, ದಯೆ ಮತ್ತು ಸದಾ ನಗುತ್ತಿರುವ ಸ್ವಭಾವದಿಂದ ಅವರು ಜನರ ಪ್ರೀತಿ, ಗೌರವವನ್ನು ಗಳಿಸಿದ್ದರು. ಬುಡೈ ಅವರು ದೊಡ್ಡ ಬಟ್ಟೆಯ ಚೀಲವನ್ನು ಸದಾ ತಮ್ಮೊಂದಿಗೆ ಇಟ್ಟುಕೊಳ್ಳುತ್ತಿದ್ದರು. ಇದರಲ್ಲಿ ಅವರು ಆಹಾರ ಮತ್ತು ಉಡುಗೊರೆಗಳನ್ನು ಇಡುತ್ತಿದ್ದರು ಮತ್ತು ಅದನ್ನು ನಿರ್ಗತಿಕರಿಗೆ ವಿತರಿಸುತ್ತಿದ್ದರು. ಅವರ ಈ ನಡವಳಿಕೆಯು ಆಧ್ಯಾತ್ಮಿಕ ತೃಪ್ತಿ ಮತ್ತು ತ್ಯಾಗದ ಸಂದೇಶವನ್ನು ಸಾರಿತ್ತು. ಅವರ ಬದುಕು ಸಂತೋಷ, ಸಮೃದ್ಧಿ ಮತ್ತು ಬುದ್ಧಿವಂತಿಕೆಯ ಸಂಕೇತವಾಗಿ ಜನರು ಪರಿಗಣಿಸಲು ಪ್ರಾರಂಭಿಸಿದರು. ಹೀಗಾಗಿ ನಗುವ ಬುದ್ಧನ ಪ್ರತಿಮೆಗಳನ್ನು ಸಕಾರಾತ್ಮಕ ಶಕ್ತಿ, ಯೋಗಕ್ಷೇಮ ಮತ್ತು ಅದೃಷ್ಟದ ಸಂಕೇತವಾಗಿ ಇಂದು ಕೂಡ ಪೂಜಿಸಲಾಗುತ್ತದೆ.
ಫೆಂಗ್ ಶೂಯಿ ತತ್ತ್ವಗಳ ಪ್ರಕಾರ ನಗುವ ಬುದ್ಧನ ಪ್ರತಿಮೆಯನ್ನು ಇರಿಸಿಕೊಳ್ಳುವುದರಿಂದ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಬಹುದು ಮತ್ತು ಮನೆ, ಕೆಲಸದ ಸ್ಥಳಗಳಲ್ಲಿ ಸಕಾರಾತ್ಮಕತೆಯನ್ನು ತುಂಬಬಹುದು.

ಮನೆಯಲ್ಲಿ ಹೇಗೆ ಇಡಬೇಕು?
ಫೆಂಗ್ ಶೂಯಿ ಪ್ರಕಾರ ನಗುವ ಬುದ್ಧನ ಪ್ರತಿಮೆಯನ್ನು ಮನೆಯಲ್ಲಿ ಸರಿಯಾದ ಸ್ಥಳದಲ್ಲಿ ಇರಿಸುವುದು ಬಹುಮುಖ್ಯ. ಯಾಕೆಂದರೆ ಇದು ಸಕಾರಾತ್ಮಕ ಶಕ್ತಿ ಮತ್ತು ಅದೃಷ್ಟವನ್ನು ಆಕರ್ಷಿಸುತ್ತದೆ. ಸರಿಯಾದ ದಿಕ್ಕಿನಲ್ಲಿ ನಗುವ ಬುದ್ಧನನ್ನು ಇರಿಸಿದರೆ ಮಾತ್ರ ಇದು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಆರ್ಥಿಕ ಸಮೃದ್ಧಿಯನ್ನು ಉತ್ತೇಜಿಸುವುದಲ್ಲದೆ ಮಾನಸಿಕ ಶಾಂತಿ ಮತ್ತು ಕುಟುಂಬ ಸಾಮರಸ್ಯವನ್ನು ಸಹ ಕಾಪಾಡಿಕೊಳ್ಳುತ್ತದೆ.
ನಗುವ ಬುದ್ಧನ ಪ್ರತಿಮೆಯನ್ನು ಮನೆಯ ಮುಖ್ಯ ದ್ವಾರದ ಬಳಿ ಇಡುವುದರಿಂದ ಸಕಾರಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ನಕಾರಾತ್ಮಕ ಶಕ್ತಿಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಮನೆಯ ಡ್ರಾಯಿಂಗ್ ರೂಮ್ ಅಥವಾ ಕೆಲಸದ ಸ್ಥಳದಲ್ಲಿ ಕೂಡ ಇದನ್ನು ಇರಿಸಬಹುದು. ಇದರಿಂದ ಯಶಸ್ಸು ದೊರೆಯುವುದು.
ಇದನ್ನೂ ಓದಿ: Vastu Tips: ಮಹಡಿ ಮೇಲಿನ ಶೌಚಾಲಯದಿಂದ ಎಷ್ಟೆಲ್ಲ ಸಮಸ್ಯೆ ಇದೆ ಗೊತ್ತೇ?
ಮನೆ ಅಥವಾ ಕಚೇರಿಯ ಆಗ್ನೇಯ ಭಾಗದಲ್ಲಿ ನಗುವ ಬುದ್ಧನ ಪ್ರತಿಮೆಯನ್ನು ಇಡುವುದರಿಂದ ಆರ್ಥಿಕ ವೃದ್ಧಿಯಾಗುತ್ತದೆ. ಮಲಗುವ ಕೋಣೆಯಲ್ಲಿ ಇರಿಸುವುದರಿಂದ ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ. ಕೆಲಸದ ಸ್ಥಳ ಅಥವಾ ಕಚೇರಿ ಮೇಜಿನ ಮೇಲೆ ಇಟ್ಟರೆ ವೃತ್ತಿಯಲ್ಲಿ ಪ್ರಗತಿ ಕಾಣಬಹುದು.

ವಿಭಿನ್ನ ಮೂರ್ತಿಗೆ ಬೇರೆ ಬೇರೆ ಪ್ರಾಮುಖ್ಯತೆ
ಬುದ್ಧನ ಮೂರ್ತಿ ವಿಭಿನ್ನ ಅಂಶಗಳಿಗೆ ಪ್ರಾಮುಖ್ಯತೆ ನೀಡುತ್ತದೆ. ನಗುವ ಬುದ್ಧ ಚೀಲ ಹಿಡಿದುಕೊಂಡರೆ ಅದು ಪ್ರಯಾಣ, ಸಂಪತ್ತಿನ ಸಂಗ್ರಹಣೆ ಮತ್ತು ಚಿಂತೆಗಳ ನಿವಾರಣೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಬಟ್ಟಲು ಹಿಡಿದು ನಗುವ ಬುದ್ಧ ಆಧ್ಯಾತ್ಮಿಕ ಸಂತೋಷಕ್ಕೆ ದಾರಿ ತೋರುತ್ತದೆ. ಚಿನ್ನದ ನಾಣ್ಯಗಳನ್ನು ಹೊಂದಿರುವ ನಗುವ ಬುದ್ಧ ಆರ್ಥಿಕ ಸಮೃದ್ಧಿ ಮತ್ತು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮಕ್ಕಳೊಂದಿಗೆ ನಗುವ ಬುದ್ಧ ಕುಟುಂಬ ಸಂತೋಷದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕೈಯಲ್ಲಿ ಬೀಸಣಿಗೆ ಹಿಡಿದಿರುವ ನಗುವ ಬುದ್ಧನು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಿ ಅದೃಷ್ಟವನ್ನು ತರುವ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆಮೆಯ ಮೇಲೆ ಕುಳಿತ ಬುದ್ಧನು ವೃತ್ತಿಜೀವನದಲ್ಲಿ ಯಶಸ್ಸು ಮತ್ತು ಸ್ಥಿರತೆ ತರುವ ಸಂಕೇತವಾಗಿ ಪರಿಗಣಿಸಲಾಗುತ್ತದೆ.