ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shravana Masa: ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ನಿಷಿದ್ಧ ಏಕೆ?

ಹಿಂದೂ ಸಂಪ್ರದಾಯವನ್ನು ಅನುಸರಿಸುವ ಬಹುತೇಕ ಮನೆಗಳಲ್ಲಿ ಶ್ರಾವಣ ಮಾಸದಲ್ಲಿ (Shravana Masa) ಮಾಂಸಾಹಾರವನ್ನು ಸೇವಿಸಲಾಗುವುದಿಲ್ಲ. ಕೇವಲ ತರಕಾರಿ, ಹಣ್ಣು ಹಂಪಲುಗಳನ್ನೇ ಸೇವಿಸುತ್ತಾರೆ. ಇದು ಒಂದು ಧಾರ್ಮಿಕ ನಂಬಿಕೆ ಎನ್ನುವುದು ಹಲವರ ಅಭಿಪ್ರಾಯವಾದರೂ ಇದರ ಹಿಂದೆ ಒಂದು ವಿಶಿಷ್ಟ ಕಾರಣವೂ ಇದೆ. ಅದು ಏನು ಎನ್ನುವ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ  ನಿಷಿದ್ಧ ಏಕೆ?

ಹಿಂದೂಗಳಿಗೆ ಶ್ರಾವಣ ಮಾಸವೆಂದರೆ (Shravana Masa) ತುಂಬಾ ಪವಿತ್ರವಾದ ತಿಂಗಳು (holy month). ಹೀಗಾಗಿ ಶ್ರಾವಣ ಮಾಸ ಬಂತೆಂದರೆ ಮಾಂಸಾಹಾರ (non-vegetarian) ಪ್ರಿಯರಿಗೆ ಬೇಸರವಾಗುತ್ತದೆ. ಇದಕ್ಕೆ ಕಾರಣ ಸಾಮಾನ್ಯವಾಗಿ ಹಿಂದೂ ಸಂಪ್ರದಾಯವನ್ನು (Hindu tradition) ಅನುಸರಿಸುವ ಬಹುತೇಕ ಮನೆಗಳಲ್ಲಿ ಈ ತಿಂಗಳಲ್ಲಿ ಕೇವಲ ತರಕಾರಿ, ಹಣ್ಣು ಹಂಪಲುಗಳನ್ನೇ (vegetarian food) ಅಡುಗೆಗೆ ಬಳಸಲಾಗುತ್ತದೆ. ಶ್ರಾವಣ ಮಾಸದಲ್ಲಿ ಬಹುತೇಕ ಮನೆಗಳಲ್ಲಿ ಮಾಂಸಾಹಾರ ಸೇವನೆ ನಿಷಿದ್ಧ ಎಂದು ಪರಿಗಣಿಸಲಾಗುತ್ತದೆ. ಇದು ಒಂದು ಧಾರ್ಮಿಕ ನಂಬಿಕೆಯಾದರೂ ಇದರ ಹಿಂದೆ ವೈಜ್ಞಾನಿಕವಾದ ಹಲವಾರು ಕಾರಣಗಳೂ ಇವೆ.

ಸಾಮಾನ್ಯವಾಗಿ ಬಹುತೇಕ ಮನೆಗಳಲ್ಲಿ ಶ್ರಾವಣ ಮಾಸದಲ್ಲಿ ಕಟ್ಟು ನಿಟ್ಟಿನ ಉಪವಾಸ, ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಲಾಗುತ್ತದೆ. ಈ ತಿಂಗಳು ಪೂರ್ತಿ ಶಿವನನ್ನು ಆರಾಧಿಸಲಾಗುತ್ತದೆ. ಶ್ರಾವಣ ಮಾಸದೊಂದಿಗೆ ನಗರ ಪಂಚಮಿ, ಕೃಷ್ಣ ಜನ್ಮಾಷ್ಟಮಿ, ರಕ್ಷಾ ಬಂಧನ, ಭೀಮನ ಅಮವಾಸೆ, ಗಣೇಶ ಚತುರ್ಥಿ.. ಹೀಗೆ ಸಾಲು ಸಾಲು ಹಬ್ಬಗಳು ಪ್ರಾರಂಭವಾಗುತ್ತದೆ. ಈ ತಿಂಗಳ ವಿಶೇಷವೆಂದರೆ ಬಹುತೇಕ ಮಂದಿ ಉಪವಾಸ ವ್ರತವನ್ನು ಆಚರಿಸುವುದು ಮಾತ್ರವಲ್ಲ ಮಾಂಸಾಹಾರವನ್ನೂ ತ್ಯಜಿಸುತ್ತಾರೆ. ಕೇವಲ ಆಹಾರದಲ್ಲಿ ಹಣ್ಣು ತರಕಾರಿಗಳಿಗೆ ಪ್ರಾಧಾನ್ಯತೆ ನೀಡುತ್ತಾರೆ.

ಧರ್ಮ ಏನು ಹೇಳುತ್ತದೆ?

ಶ್ರಾವಣ ಮಾಸವನ್ನು ಅತ್ಯಂತ ಪವಿತ್ರ ತಿಂಗಳು ಎಂದು ಪರಿಗಣಿಸಿರುವುದರಿಂದ ಈ ಮಾಸದಲ್ಲಿ ಮಾಂಸಾಹಾರಿಗಳು ಸಂಪೂರ್ಣವಾಗಿ ಮಾಂಸಾಹಾರವನ್ನು ತ್ಯಜಿಸುತ್ತಾರೆ. ಇದಕ್ಕೆ ಕಾರಣ ನಂಬಿಕೆ ಮತ್ತು ಗೌರವ. ಪುರಾತನ ಧರ್ಮಗ್ರಂಥಗಳಲ್ಲಿ ಮಾಂಸಾಹಾರವನ್ನು ಖಂಡಿಸಲಾಗಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ತನಗೆ ಒಂದು ಎಲೆ, ಹೂವು, ಹಣ್ಣು ಅಥವಾ ನೀರನ್ನು ಪ್ರೀತಿ ಮತ್ತು ಭಕ್ತಿಯಿಂದ ಅರ್ಪಿಸಿದರೆ ಸಾಕು ನಾನು ಅದನ್ನು ಸ್ವೀಕರಿಸುತ್ತೇನೆ ಎಂದಿದ್ದಾನೆ. ಹೀಗಾಗಿ ಪವಿತ್ರವಾದ ತಿಂಗಳಲ್ಲಿ ದೇವರ ಕೃಪೆ ಪಡೆಯಲು ಬಹುತೇಕ ಎಲ್ಲರೂ ಮಾಂಸಾಹಾರವನ್ನು ತ್ಯಜಿಸುತ್ತಾರೆ.

ವೈಜ್ಞಾನಿಕ ಕಾರಣ

ಶ್ರಾವಣ ಮಾಸ ಮಳೆಗಾಲದಲ್ಲಿ ಬರುತ್ತದೆ. ಮಳೆಗಾಲದಲ್ಲಿ ಭೂಮಿ ಮೇಲೆ ಸೂರ್ಯನ ಬೆಳಕು ಕಡಿಮೆ ಬೀಳುತ್ತದೆ. ಹೀಗಾಗಿ ನಮ್ಮ ಜೀರ್ಣಾಂಗ ವ್ಯವಸ್ಥೆಯು ದುರ್ಬಲವಾಗುತ್ತದೆ. ಅದಕ್ಕೆ ಮಾಂಸಾಹಾರವನ್ನು ಅರಗಿಸಿಕೊಳ್ಳುವ ಸಾಮರ್ಥ್ಯ ಇರುವುದಿಲ್ಲ. ಹೀಗಾಗಿ ಶ್ರಾವಣ ಮಾಸದಲ್ಲಿ ಉಪವಾಸ ಮಾಡುವವರು ಜೀರ್ಣವಾಗಲು ಸುಲಭವಾಗುವ ಹಣ್ಣು, ತರಕಾರಿಗಳನ್ನು ತಮ್ಮ ಆಹಾರದಲ್ಲಿ ಆಯ್ದುಕೊಳ್ಳುತ್ತಾರೆ. ಮಳೆಗಾಲದಲ್ಲಿ ಹಲವು ರೋಗಗಳು ನೀರಿನಿಂದ ಹರಡುತ್ತದೆ. ಇದು ಬಹುಬೇಗನೆ ಪ್ರಾಣಿ, ಪಕ್ಷಿಗಳ ಮೇಲೆ ದಾಳಿ ಮಾಡುತ್ತವೆ. ಅವುಗಳಿಂದ ಸೋಂಕು ನಮಗೆ ಬಾರದಂತೆ ತಡೆಯಲು ಮಾಂಸಾಹಾರ ತಪ್ಪಿಸುವುದು ಒಳ್ಳೆಯದು.

ಇನ್ನು ಮಳೆಗಾಲದಲ್ಲಿ ಮೀನು ಮತ್ತು ಇತರ ಜಲಚರಗಳು ಸಂತಾನೋತ್ಪತ್ತಿ ಸಮಯವಾಗಿದೆ. ಈ ಸಮಯದಲ್ಲಿ ಜಲಚರ ಜೀವಿಗಳನ್ನು ತಿನ್ನುವುದರಿಂದ ಅವುಗಳ ಸಂತಾನೋತ್ಪತ್ತಿ ಕುಂಠಿತವಾಗುತ್ತದೆ. ಹೀಗಾಗಿ ಶ್ರಾವಣ ಮಾಸದಲ್ಲಿ ಮೀನು ಮತ್ತು ಇತರ ರೀತಿಯ ಸಮುದ್ರಾಹಾರಗಳನ್ನು ತಿನ್ನುವುದನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ: Fighter Jet Crash: ವಾಯುನೆಲೆಯ ಬಳಿಯೇ ಅಮೆರಿಕ ನೌಕಾಪಡೆಯ ಎಫ್-35 ಯುದ್ಧವಿಮಾನ ಪತನ

ಒಟ್ಟಿನಲ್ಲಿ ನಮ್ಮ ಹಿರಿಯರ ಪ್ರತಿಯೊಂದು ಆಚರಣೆಯ ಹಿಂದೆಯೂ ಒಂದೊಂದು ಕಾರಣವಿರುತ್ತದೆ. ಅದರ ವೈಜ್ಞಾನಿಕ ಕಾರಣ ತಿಳಿಯದೇ ಇದ್ದರೂ ಹಿರಿಯರ ನಂಬಿಕೆ ಎಂದು ಭಾವಿಸಿ ಗೌರವಿಸಿ ಅದನ್ನು ಪಾಲನೆ ಮಾಡುವುದರಿಂದ ನಾವು ನಮ್ಮ ಪರಿಸರ, ಆರೋಗ್ಯದ ಬಗ್ಗೆ ಕಾಳಜಿ ಮಾಡಿದಂತಾಗುತ್ತದೆ.