Vishwavani Editorial: ಮೆಟ್ರೋ ಜನರ ಬಳಿ ಬರಲಿ
ಜೆಪಿ ನಗರ 4ನೇ ಹಂತದಿಂದ ಹೆಬ್ಬಾಳ ತಲುಪಲಿರುವ ಕಿತ್ತಳೆ ಮಾರ್ಗದ ಗುದ್ದಲಿ ಪೂಜೆಗೆ ಸಮಯ ನಿಗದಿ ಆಗಬೇಕಿದೆ. ಬ್ಲೂ ಲೈನ್ ಕೂಡ ಪ್ರಸ್ತಾವನೆಯಲ್ಲಿದ್ದು, ಕೇಂದ್ರದ ಅನುಮೋದನೆ ಪಡೆಯಬೇಕಿದೆ. ಈ ಎಲ್ಲಾ ಮೆಟ್ರೋ ಮಾರ್ಗಗಳು ಶೀಘ್ರವೇ ಕೆಲಸ ಮುಗಿಸಿ ಸಂಪೂರ್ಣ ಕಾರ್ಯಾಚರಣೆಗೆ ತೊಡಗು ವುದು ಬೆಂಗಳೂರಿನ ಟ್ರಾಫಿಕ್ ನಿರ್ವಹಣೆಯ ದೃಷ್ಟಿಯಿಂದ ತುಂಬ ಮುಖ್ಯ
-
ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ನಮ್ಮ ಮೆಟ್ರೋ ಪಿಂಕ್ ಲೈನ್ ಎತ್ತರಿಸಿದ ವಿಭಾಗವನ್ನು ಉದ್ಘಾಟಿಸಿದ್ದಾರೆ. ಇದು ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿಲೋ ಮೀಟರ್ ದೂರವನ್ನು ಸಂಪರ್ಕಿಸುತ್ತದೆ. 6 ನಿಲ್ದಾಣಗಳಿರುವ ಈ ಮಾರ್ಗ ನ.14ರಿಂದ ಪ್ರಯಾಣಕ್ಕೆ ಮುಕ್ತವಾಗಲಿದೆ. ಈ ಮಾರ್ಗದೊಂದಿಗೆ ಬೆಂಗಳೂರಿನಲ್ಲಿರುವ ಒಟ್ಟು ಕಾರ್ಯಾಚರಣೆ ಮೆಟ್ರೋ ಜಾಲವು 100 ಕಿ.ಮೀ ಗಡಿ ದಾಟಿದೆ. ಈಗ ನೇರಳೆ, ಹಳದಿ, ಹಸಿರು, ಗುಲಾಬಿ ಹೀಗೆ ನಾಲ್ಕು ಮಾರ್ಗಗಳು ಕಾರ್ಯಾಚರಿಸುತ್ತಿವೆ.
ಜೆಪಿ ನಗರ 4ನೇ ಹಂತದಿಂದ ಹೆಬ್ಬಾಳ ತಲುಪಲಿರುವ ಕಿತ್ತಳೆ ಮಾರ್ಗದ ಗುದ್ದಲಿ ಪೂಜೆಗೆ ಸಮಯ ನಿಗದಿ ಆಗಬೇಕಿದೆ. ಬ್ಲೂ ಲೈನ್ ಕೂಡ ಪ್ರಸ್ತಾವನೆಯಲ್ಲಿದ್ದು, ಕೇಂದ್ರದ ಅನುಮೋದನೆ ಪಡೆಯ ಬೇಕಿದೆ. ಈ ಎಲ್ಲಾ ಮೆಟ್ರೋ ಮಾರ್ಗಗಳು ಶೀಘ್ರವೇ ಕೆಲಸ ಮುಗಿಸಿ ಸಂಪೂರ್ಣ ಕಾರ್ಯಾಚರಣೆಗೆ ತೊಡಗುವುದು ಬೆಂಗಳೂರಿನ ಟ್ರಾಫಿಕ್ ನಿರ್ವಹಣೆಯ ದೃಷ್ಟಿಯಿಂದ ತುಂಬ ಮುಖ್ಯ. ಸಮಯ ಮಿತಿಯಲ್ಲಿ ಇವು ಅನುಷ್ಠಾನ ಆಗಬೇಕು. ಯಾಕೆಂದರೆ ಬೆಂಗಳೂರಿನ ಜನಸಂಖ್ಯೆ ಈಗಾಗಲೇ 1.5 ಕೋಟಿ ದಾಟಿದ್ದು, ಇನ್ನು ಐದು ವರ್ಷಗಳಲ್ಲಿ ಅದು 2 ಕೋಟಿ ತಲುಪಲಿದೆ.
ಇದನ್ನೂ ಓದಿ: Bengaluru Metro Pink Line: ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ನಾಳೆಯಿಂದ ವಾಣಿಜ್ಯ ಸಂಚಾರ ಆರಂಭ; ವೇಳಾಪಟ್ಟಿ ಇಲ್ಲಿದೆ
ಉದ್ಯಮಗಳು ಬೆಂಗಳೂರಿನ ನಾಲ್ಕೂ ಕಡೆ ವಿಸ್ತರಿಸಿಕೊಳ್ಳುತ್ತಿವೆ. ಅತ್ತ ಹೊಸೂರಿನ ವರೆಗೂ ಬೆಂಗಳೂರು ವಿಸ್ತರಿಸಿದ್ದು, ಎರಡನೇ ವಿಮಾನ ನಿಲ್ದಾಣದ ಯೋಜನೆ ಕೂಡ ಇದೆ. ಬೃಹತ್ ಮೆಟ್ರೋ ನಗರ ಎನಿಸಿಕೊಳ್ಳಲಿರುವ ಬೆಂಗಳೂರಿಗೆ ಅದೇ ಮಟ್ಟಿದ ಪ್ಲಾನಿಂಗ್ ಕೂಡ ಅಗತ್ಯ. ಆದರೆ ಈಗ ಇರುವಂತೆ ನಮ್ಮ ಮೆಟ್ರೋ, ದುಬಾರಿ ಟಿಕೆಟ್ ದರದ ಪರಿಣಾಮ ಟೆಕ್ಕಿಗಳು, ಕಾರ್ಪೊರೇಟ್ ಉದ್ಯಮಿಗಳ ಸಂಚಾರ ಮಾಧ್ಯಮ ಮಾತ್ರ ಆಗಿದೆ. ಮಧ್ಯಮ, ಕೆಳಮಧ್ಯಮ ವರ್ಗದ ಜನಸಾಮಾ ನ್ಯರು ಇನ್ನೂ ಅದರಿಂದ ದೂರವೇ ಉಳಿದಿದ್ದಾರೆ. ಭಾರತದ ಅತಿ ದುಬಾರಿ ಮೆಟ್ರೋಗಳಲ್ಲಿ ಒಂದಾಗಿದೆ ನಮ್ಮ ಮೆಟ್ರೋ. ಈ ಅಪಖ್ಯಾತಿ ಹೋಗಲಾಡಿಸಿ, ನಮ್ಮ ಮೆಟ್ರೋವನ್ನು ಜನರ ಹತ್ತಿರ ತರುವುದು ಅಗತ್ಯ.
ಇದೀಗ ಮೆಟ್ರೋದ ವೆಚ್ಚ ಕೇಂದ್ರ ಹಾಗೂ ರಾಜ್ಯಗಳ ನಡುವೆ 50:50 ಎಂದಿದ್ದರೂ ಅದು ಸರಿಯಾಗಿ ಪಾಲನೆ ಆಗುತ್ತಿಲ್ಲ. ಅನುಪಾತ ತಾರತಮ್ಯ ನಿವಾರಣೆ ಆಗಬೇಕು. ಆದಾಯ, ವೆಚ್ಚಗಳ ಸಮಪಾಲು ನಿರ್ವಹಣೆ ಅಗತ್ಯ. ಹಾಗೆಯೇ, ಮೆಟ್ರೋ ನಿಲ್ದಾಣಗಳು ಆದಾಯದಲ್ಲಿ ಸ್ವಾವಲಂಬಿಯಾಗುವಂತೆ ವಾಣಿಜ್ಯ ಕಟ್ಟಡಗಳಾಗಿಯೂ ವಿಸ್ತರಣೆಗೊಂಡರೆ, ಇನ್ನಷ್ಟು ಉತ್ಪಾದಕತೆ ನಿರೀಕ್ಷಿಸಬಹುದು ಹಾಗೂ ನಷ್ಟವನ್ನು ಹೋಗಲಾಡಿಸಬಹುದು.