Vishwavani Editorial: ಖಾರವಾದ ಪ್ರತಿಕ್ರಿಯೆ ಬೇಕಿಲ್ಲ
ತೆರಿಗೆ ಪಾವತಿಸುವ ಯಾವುದೇ ನಾಗರಿಕನಿಗೆ ಇಲ್ಲಿನ ಮೂಲ ಸೌಕರ‍್ಯ ಮತ್ತು ಕುಂದುಕೊರತೆಗಳ ಬಗ್ಗೆ ಪ್ರಶ್ನಿಸುವ ಹಕ್ಕಿದೆ. ಹೀಗಿರುವಾಗ ಸಚಿವರು ಕಿರಣ್ ಶಾ ಅವರ ಟ್ವೀಟ್ ಬಗ್ಗೆ ಇಷ್ಟೊಂದು ಖಾರವಾಗಿ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಡಿಕೆಶಿ ಅವರ ರಾಜಕೀಯ ಗುರು ಎಸ್.ಎಂ. ಕೃಷ್ಣ ಅವರು ಉದ್ಯಮ ಸ್ನೇಹಿ ವಾತಾವರಣ ಸೃಷ್ಟಿಸಿದ ಕಾರಣದಿಂದಲೇ ಬೆಂಗಳೂರು ಇಂದು ಐಟಿ ನಗರವಾಗಿ ಬೆಳೆದು ನಿಂತಿರುವು ದನ್ನು ಮರೆಯಬಾರದು.

-

ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಮತ್ತೊಮ್ಮೆ ದೇಶವ್ಯಾಪಿ ಚರ್ಚೆ ಆರಂಭವಾಗಿದೆ. ಬಯೋ ಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಚೀನಾದ ಸಂದರ್ಶಕರೊಬ್ಬರ ಮಾತನ್ನು ಉಲ್ಲೇಖಿಸಿ ಮಾಡಿರುವ ಟ್ವೀಟ್ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಈ ಟ್ವೀಟ್‌ಗೆ ರಾಜ್ಯ ಸರಕಾರದ ಸಚಿವರು ಮಾತ್ರ ಪ್ರತಿಕ್ರಿಯಿಸಿಲ್ಲ.
ಆಂಧ್ರಪ್ರದೇಶದ ಐಟಿ ಸಚಿವ ನಾರಾ ಲೋಕೇಶ್, ಬೆಂಗಳೂರು ಬಿಟ್ಟು ಆಂಧ್ರಪ್ರದೇಶಕ್ಕೆ ಬರುವಂತೆ ಉದ್ಯಮಿಗಳಿಗೆ ಮತ್ತೆ ಆಹ್ವಾನ ನೀಡಿದ್ದಾರೆ. ಕಿರಣ್ ಮಜುಂದಾರ್ ಶಾ, ಮೋಹನದಾಸ ಪೈ ಮೊದಲಾದ ಉದ್ಯಮಿಗಳು ನಗರದ ಮೂಲಸೌಕರ‍್ಯ ಕೊರತೆಯ ಬಗ್ಗೆ ಈ ಹಿಂದೆಯೂ ಪ್ರಶ್ನೆ ಎತ್ತಿದ್ದರು. ಈ ಬಾರಿ ಬಯೋಕಾನ್ ಪಾರ್ಕ್‌ಗೆ ಬಂದಿದ್ದ ಚೀನಾದ ಸಂದರ್ಶಕರೊಬ್ಬರು. ‘ಬೆಂಗಳೂರಿನ ರಸ್ತೆಗಳು ಏಕೆ ಅಷ್ಟು ಕೆಟ್ಟದಾಗಿವೆ. ಎಲ್ಲೂ ಏಕೆ ಕಸ ಇದೆ.
ಸರಕಾರ ಹೂಡಿಕೆಗೆ ಬೆಂಬಲ ನೀಡಲು ಬಯಸುವುದಿಲ್ಲವೇ? " ಎಂದು ಪ್ರಶ್ನಿಸಿದ್ದಾಗಿ ಸಿಎಂ, ಡಿಸಿಎಂ, ಕೈಗಾರಿಕಾ ಸಚಿವರು ಮತ್ತು ಐಟಿಬಿಟಿ ಸಚಿವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು. ಸಿಎಂ ಸಿದ್ದರಾಮಯ್ಯ ಅವರು ಈ ಟ್ವೀಟ್‌ಗೆ ಪ್ರತಿಕ್ರಿಯಿಸಿಲ್ಲ. ಆದರೆ ಡಿಸಿಎಂ ಡಿಕೆಶಿ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಖಾರವಾಗಿ ಪ್ರತಿಕ್ರಿಯಿಸಿ ದ್ದಾರೆ.
ಇದನ್ನೂ ಓದಿ: Vishwavani Editorial: ಬೇರುಗಳೇ ಭದ್ರವಾಗದಿದ್ದರೆ...
ಕಿರಣ್ ಮಜುಂದಾರ್ ಷಾ ಅವರು ಟ್ವೀಟ್ ಮಾಡುವ ಮೂಲಕ ಅವರಿಗೆ ನೆರವಾಗಿರುವ ದೇಶ ಹಾಗೂ ರಾಜ್ಯಕ್ಕೆ ಧಕ್ಕೆ ತರುತ್ತಿದ್ದಾರೆ. ಅವರ ಟೀಕೆ ತಮಗೆ ತಾವೇ ಹಾಗೂ ಈ ನಗರಕ್ಕೆ ದ್ರೋಹ ಬಗೆದುಕೊಂಡಂತೆ. ಕಳೆದ 25 ವರ್ಷಗಳಿಂದ ಅವರು ಎಲ್ಲಿದ್ದರು? ಅವರ ಬೆಳವಣಿಗೆಯಲ್ಲಿ ಬೆಂಗಳೂರು ಹೆಚ್ಚಿನ ಕೊಡುಗೆ ನೀಡಿದೆ. ಬೆಂಗಳೂರು ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿ, ಉದ್ಯಮಿಗಳನ್ನು ದೊಡ್ಡ ಮಟ್ಟಕ್ಕೆ ಬೆಳೆಸಿದೆ. ಟೀಕಿಸುವವರಿಗೆ ಸರಕಾರಗಳು ಎಷ್ಟು ಜಾಗ ಕೊಟ್ಟಿದೆ,
ಎಷ್ಟು ನೆರವು ನೀಡಿದೆ ಎಂಬುದನ್ನು ಸ್ಮರಿಸಬೇಕು ಎಂದು ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ 25 ಲಕ್ಷ ಐಟಿ ವೃತ್ತಿಪರರು, 2 ಲಕ್ಷ ವಿದೇಶಿಗರು ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೆ ಶೇ.40ರಷ್ಟು ಐಟಿ ಆದಾಯ ಇಲ್ಲಿಂದಲೇ ಹೋಗುತ್ತಿದೆ ಎಂದು ಡಿಕೆಶಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ವಾಸವಿರುವ ಉದ್ಯಮಿಗಳು ಈ ನಗರದ ನಾಗರಿಕರೂ ಹೌದು.
ತೆರಿಗೆ ಪಾವತಿಸುವ ಯಾವುದೇ ನಾಗರಿಕನಿಗೆ ಇಲ್ಲಿನ ಮೂಲ ಸೌಕರ‍್ಯ ಮತ್ತು ಕುಂದುಕೊರತೆಗಳ ಬಗ್ಗೆ ಪ್ರಶ್ನಿಸುವ ಹಕ್ಕಿದೆ. ಹೀಗಿರುವಾಗ ಸಚಿವರು ಕಿರಣ್ ಶಾ ಅವರ ಟ್ವೀಟ್ ಬಗ್ಗೆ ಇಷ್ಟೊಂದು ಖಾರವಾಗಿ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಡಿಕೆಶಿ ಅವರ ರಾಜಕೀಯ ಗುರು ಎಸ್.ಎಂ. ಕೃಷ್ಣ ಅವರು ಉದ್ಯಮ ಸ್ನೇಹಿ ವಾತಾವರಣ ಸೃಷ್ಟಿಸಿದ ಕಾರಣದಿಂದಲೇ ಬೆಂಗಳೂರು ಇಂದು ಐಟಿ ನಗರವಾಗಿ ಬೆಳೆದು ನಿಂತಿರುವುದನ್ನು ಮರೆಯಬಾರದು. ಸಚಿವರ ಈ ನಡೆ ಸರಿಯಲ್ಲ.