Vishwavani Editorial: ಅಭಿವ್ಯಕ್ತಿಯಲ್ಲಿ ಅಶ್ಲೀಲತೆ ಸಲ್ಲ
ಯಾರಾದರೊಬ್ಬರು ಗಣ್ಯರೋ, ಸಿನಿಮಾ ಸೆಲೆಬ್ರಿಟಿಯೋ ಆಡಿದ ಮಾತಿಗೆ, ನೀಡಿದ ಹೇಳಿಕೆಗೆ ಟೀಕೆ-ಟಿಪ್ಪಣಿ ವ್ಯಕ್ತಪಡಿಸುವ ಭರದಲ್ಲಿ ಅಂಥ ಪ್ರತಿಕ್ರಿಯೆಗೆ ಅಸಹಿಷ್ಣುತೆ ಮತ್ತು ಅಶ್ಲೀಲತೆಯ ಲೇಪ ವಾಗುತ್ತಿರುವುದು ನೋವಿನ ಸಂಗತಿ. ಅದರಲ್ಲೂ ನಿರ್ದಿಷ್ಟವಾಗಿ, ‘ವಸ್ತುನಿಷ್ಠ’ವಾಗಿ ಚರ್ಚಿಸುವ ಬದಲು, ಅಂಥ ಹೇಳಿಕೆ ನೀಡಿದ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಅವರ ವೈಯಕ್ತಿಕ ಚಾರಿತ್ರ್ಯ ವಧೆಗೆ ಮುಂದಾಗುವುದು ಕೆಲವರ ದೈನಂದಿನ ಚಾಳಿಯಾಗಿ ಬಿಟ್ಟಿದೆ.

ಯಾವುದಾದರೊಂದು ಚರ್ಚಾ ವಿಷಯದ ಕುರಿತಾಗಿ ‘ಪರ’ ಮತ್ತು ‘ವಿರೋಧ’ ಎಂಬ ಬಣಗಳು ರೂಪುಗೊಳ್ಳುವುದು, ಅವು ತಮ್ಮದೇ ನೆಲೆಯಲ್ಲಿ ವಾದ-ಪ್ರತಿವಾದಗಳನ್ನು ಮಂಡಿಸುವುದು ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಹೊಸ ಪರಿಪಾಠವೇನಲ್ಲ. ‘ಅಭಿಪ್ರಾಯ’ ಎಂಬುದು ಇದ್ದಲ್ಲಿ ‘ಭಿನ್ನ-ಅಭಿಪ್ರಾಯ’ವೂ ನಿರೀಕ್ಷಿತವೇ, ಸಹಜವೇ. ಆದರೆ ಅದು ಹೇಗೆ ವ್ಯಕ್ತವಾಗುತ್ತದೆ, ಅದರ ಧಾಟಿ-ಧೋರಣೆ ಹೇಗಿರುತ್ತದೆ, ದನಿಯು ಸೌಮ್ಯವಾಗಿದೆಯೋ ಕರ್ಕಶವಾಗಿದೆಯೋ ಎಂಬುದು ಕೂಡ ಇಲ್ಲಿ ಪರಿಗಣನೆಗೆ ಬರುತ್ತದೆ.
ಇದು ಸಾರ್ವಜನಿಕ ವೇದಿಕೆ ಅಥವಾ ಸಾಮಾಜಿಕ ಜಾಲತಾಣಗಳೆಂಬ ಡಿಜಿಟಲ್ ವೇದಿಕೆಗಳಲ್ಲಿ ತೊಡಗಿಸಿಕೊಳ್ಳುವವರಿಗೂ ಅನ್ವಯವಾಗುವ ಮಾತು. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣ ಗಳು ‘ಅಸಹಿಷ್ಣುತೆಯ ಆಡುಂಬೊಲ’ ಆಗುತ್ತಿರುವುದರ ಜತೆಗೆ, ‘ಅಶ್ಲೀಲತೆಯ ತಿಪ್ಪೆಗುಂಡಿ’ಯೂ ಆಗುತ್ತಿರುವುದು ವಿಷಾಧನೀಯ ಸಂಗತಿ.
ಇದನ್ನೂ ಓದಿ: Vishwavani Editorial: ಮಾಲ್ಡೀವ್ಸ್ ಗೆ ಬುದ್ದಿ ಬಂತಾ?
ಯಾರಾದರೊಬ್ಬರು ಗಣ್ಯರೋ, ಸಿನಿಮಾ ಸೆಲೆಬ್ರಿಟಿಯೋ ಆಡಿದ ಮಾತಿಗೆ, ನೀಡಿದ ಹೇಳಿಕೆಗೆ ಟೀಕೆ-ಟಿಪ್ಪಣಿ ವ್ಯಕ್ತಪಡಿಸುವ ಭರದಲ್ಲಿ ಅಂಥ ಪ್ರತಿಕ್ರಿಯೆಗೆ ಅಸಹಿಷ್ಣುತೆ ಮತ್ತು ಅಶ್ಲೀಲತೆಯ ಲೇಪ ವಾಗುತ್ತಿರುವುದು ನೋವಿನ ಸಂಗತಿ. ಅದರಲ್ಲೂ ನಿರ್ದಿಷ್ಟವಾಗಿ, ‘ವಸ್ತುನಿಷ್ಠ’ವಾಗಿ ಚರ್ಚಿಸುವ ಬದಲು, ಅಂಥ ಹೇಳಿಕೆ ನೀಡಿದ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಅವರ ವೈಯಕ್ತಿಕ ಚಾರಿತ್ರ್ಯ ವಧೆಗೆ ಮುಂದಾಗುವುದು ಕೆಲವರ ದೈನಂದಿನ ಚಾಳಿಯಾಗಿ ಬಿಟ್ಟಿದೆ.
ಹೀಗೆ ಕೂರಂಬುಗಳನ್ನು ಬಿಡುವಾಗ ನಮ್ಮ ಭೌತಿಕ ಅಸ್ತಿತ್ವ ಮಿಕ್ಕವರ ಕಣ್ಣಿಗೆ ಬೀಳುವುದಿಲ್ಲ ಎಂಬ ಭಂಡಧೈರ್ಯವೇ ಇದಕ್ಕೆ ಕಾರಣವಿದ್ದಿರಬಹುದು; ಆದರೆ ಹೀಗೆ ಅಶ್ಲೀಲವಾಗಿ ಟೀಕಿಸಿದವರು ಒಂದೊಮ್ಮೆ ಸಿಕ್ಕಿ ಬಿದ್ದರೆ, ‘ಸೈಬರ್ ಅಪರಾಧ’ ಹಾಗೂ ಇತರ ಹಣೆಪಟ್ಟಿಗಳ ಅಡಿಯಲ್ಲಿ ಏನೆಲ್ಲಾ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂಬುದರ ಅರಿವು ಪ್ರಾಯಶಃ ಅವರಿಗೆ ಇರುವುದಿಲ್ಲ.
ಅಭಿವ್ಯಕ್ತಿ ಸ್ವಾತಂತ್ರ್ಯ ಇದ್ದ ಕಡೆ ಅಭಿಪ್ರಾಯಭೇದವೂ ಇರುವುದು ಸಹಜವೇ. ಆದರೆ ಅದನ್ನು ವ್ಯಕ್ತಪಡಿಸುವಾಗ ಸ್ವ-ನಿಯಂತ್ರಣವನ್ನೂ ಹಾಕಿಕೊಳ್ಳಬೇಕಾಗುತ್ತದೆ, ಅಲ್ಲವೇ?