IND vs ENG: ಅರ್ಷದೀಪ್ ಸಿಂಗ್ ಬದಲು ಅನ್ಶುಲ್ ಕಾಂಬೋಜ್‌ಗೆ ಸ್ಥಾನ ನೀಡಿದ್ದೇಕೆ? ಅರುಣ್ ಲಾಲ್ ಪ್ರಶ್ನೆ!
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಪರ ಎಡಗೈ ವೇಗಿ ಅರ್ಷದೀಪ್ ಸಿಂಗ್‌ಗೆ ಏಕೆ ಅವಕಾಶ ನೀಡಲಿಲ್ಲ ಎಂದು ಮಾಜಿ ಕ್ರಿಕೆಟಿಗ ಅರುಣ್ ಲಾಲ್ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಹೊರಗಡೆಯಿಂದ ಅನ್ಶುಲ್ ಕಾಂಬೋಜ್ ಅವರನ್ನು ಕರೆಸಿಕೊಂಡಿದೇಕೆಂದು ಕೇಳಿದ್ದಾರೆ.

ಭಾರತ ತಂಡವನ್ನು ಟೀಕಿಸಿದ ಅರುಣ್ ಲಾಲ್.

ನವದೆಹಲಿ: ಇತ್ತೀಚೆಗೆ ಅಂತ್ಯವಾಗಿದ್ದ ಇಂಗ್ಲೆಂಡ್ ವಿರುದ್ಧದ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ (IND vs ENG) ಟೆಸ್ಟ್ ಸರಣಿಯಲ್ಲಿ ಎಡಗೈ ವೇಗಿ ಅರ್ಷದೀಪ್ ಸಿಂಗ್ (Arshdeep Singh) ಬದಲು ಅನ್ಶುಲ್ ಕಂಬೋಜ್‌ಗೆ ಅವಕಾಶ ನೀಡಿದ್ದೇಕೆಂದು ಭಾರತದ ಮಾಜಿ ಕ್ರಿಕೆಟಿಗ ಅರುಣ್ ಲಾಲ್ (Arun Lal), ಗೌತಮ್ ಗಂಭೀರ್ ಮಾರ್ಗದರ್ಶನದ ಟೀಮ್ ಮ್ಯಾನೇಜ್‌ಮೆಂಟ್‌ಗೆ ಪ್ರಶ್ನೆ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅರ್ಷದೀಪ್ ಸಿಂಗ್ ಒಂದೇ ಒಂದು ಪಂದ್ಯದಲ್ಲಿಯೂ ಆಡಿರಲಿಲ್ಲ. ತಂಡದಲ್ಲಿಯೇ ಇಲ್ಲದ ಅನ್ಶುಲ್ ಕಾಂಬೋಜ್‌ಗೆ ಅವಕಾಶವನ್ನು ನೀಡಲಾಗಿತ್ತು.
ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯ ಭಾರತ ತಂಡಕ್ಕೆ ಆರಂಭದಲ್ಲಿ ಅವಕಾಶವನ್ನು ನೀಡಿರಲಿಲ್ಲ. ಆದರೆ, ಸರಣಿಯ ಮಧ್ಯೆದಲ್ಲಿ ಅನ್ಶುಲ್ ಕಾಂಬೋಜ್‌ಗೂ ಬ್ಯಾಕ್ ಅಪ್ ವೇಗಿಯಾಗಿ ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಜಸ್‌ಪ್ರೀತ್ ಬುಮ್ರಾ, ಆಕಾಶ ದೀಪ್ ಹಾಗೂ ಅರ್ಷದೀಪ್ ಸಿಂಗ್ ಅವರ ಗಾಯದ ಭೀತಿಯಿಂದ ಅನ್ಶುಲ್ ಕಾಂಬೋಜ್‌ಗೆ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಅವಕಾಶವನ್ನು ನೀಡಲಾಗಿತ್ತು.
IND vs ENG ಸಂಯೋಜನೆಯ ಪ್ಲೇಯಿಂಗ್ XI ಪ್ರಕಟಿಸಿದ ಆಕಾಶ ಚೋಪ್ರಾ!
24ರ ವಯಸ್ಸಿನ ವೇಗಿ ಮ್ಯಾಂಚೆಸ್ಟರ್‌ನಲ್ಲಿ ಅನ್ಶುಲ್ ಕಾಂಬೋಜ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅವರು ಈ ಪಂದ್ಯದಲ್ಲಿ 18 ಓವರ್‌ಗಳಲ್ಲಿ 89 ರನ್ ನೀಡಿ ಒಂದು ವಿಕೆಟ್ ಕಿತ್ತಿದ್ದರು. ಅರ್ಷದೀಪ್ ಸಿಂಗ್ ಬದಲು ಅನ್ಶುಲ್ ಕಾಂಬೋಜ್‌ಗೆ ಪ್ಲೇಯಿಂಗ್ XIನಲ್ಲಿ ಏಕೆ ಅವಕಾಶ ನೀಡಲಾಯಿತು ಎಂದು ಅರುಣ್ ಲಾಲ್ ಪ್ರಶ್ನೆ ಮಾಡಿದ್ದಾರೆ.
ರೇವ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಅರುಣ್ ಲಾಲ್, "ಈ ಪ್ರವಾಸದಲ್ಲಿ ಅರ್ಷ್‌ದೀಪ್ ಸಿಂಗ್ ತಂಡದಲ್ಲಿದ್ದರು. ಆದರೆ 16 ಸದಸ್ಯರ ತಂಡದಿಂದ [ಅನ್ಶುಲ್ ಕಾಂಬೋಜ್] ಹೊರಗಿನ ಆಟಗಾರನನ್ನು ಕರೆತರಲಾಯಿತು ಮತ್ತು ಅವರಿಗಿಂತ ಮೊದಲು ಆಡಿಸಲಾಯಿತು. ಅದನ್ನು ಅರ್ಥಮಾಡಿಕೊಳ್ಳುವುದು ನನಗೆ ತುಂಬಾ ಕಷ್ಟಕರವಾಗಿದೆ. ಬಹುಶಃ ನೆಟ್ಸ್ ಮತ್ತು ಸೈಡ್ ಪಂದ್ಯಗಳಲ್ಲಿ ಅವರ (ಅರ್ಷ್‌ದೀಪ್) ಫಾರ್ಮ್ ಆರಂಭದಲ್ಲಿ ಅಷ್ಟೊಂದು ಉತ್ತಮವಾಗಿರಲಿಲ್ಲ. ನಾನು ಅಲ್ಲಿ ಇರಲಿಲ್ಲ, ಆದ್ದರಿಂದ ನಾನು ಪ್ರತಿಕ್ರಿಯಿಸಲು ಸಾಧ್ಯವಿಲ್ಲ," ಎಂದು ಹೇಳಿದ್ದಾರೆ.
IND vs ENG: ಜಸ್‌ಪ್ರೀತ್ ಬುಮ್ರಾ ಪ್ರದರ್ಶನದ ಬಗ್ಗೆ ಇರ್ಫಾನ್ ಪಠಾಣ್ ದೊಡ್ಡ ಹೇಳಿಕೆ!
ಅಭಿಮನ್ಯು ಈಶ್ವರನ್ ಪರ ಅರುಣ್ ಲಾಲ್ ಬ್ಯಾಟಿಂಗ್
ಬಂಗಾಳ ಆಟಗಾರ ಅಭಿಮನ್ಯು ಈಶ್ವರನ್‌ಗೆ ತಂಡದಲ್ಲಿ ಆಡಿಸದ ಬಗ್ಗೆ ಅರುಣ್ ಲಾಲ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. 2022ರಲ್ಲಿಯೇ ಈಶ್ವರನ್ ಭಾರತ ಟೆಸ್ಟ್ ತಂಡದಲ್ಲಿ ಮೊದಲ ಬಾರಿ ಅವಕಾಶವನ್ನು ಪಡೆದಿದ್ದರು. ಆದರೆ, ಅಂದಿನಿಂದ ಇಲ್ಲಿಯವರೆಗೂ ಅವರು ಒಂದೇ ಒಂದು ಪಂದ್ಯದಲ್ಲಿಯೂ ಆಡಿರಲಿಲ್ಲ. ಇದರ ನಡುವೆ ಹಲವು ಆಟಗಾರರು ಅವಕಾಶ ಪಡೆದು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ.
"ನೋಡಿ, ಇಲ್ಲಿ ಯಾರೂ ಕೂಡ ಶತೃವಿಲ್ಲ ಹಾಗೂ ಇಲ್ಲಿ ಯಾವುದೇ ಅಜೆಂಡಾ ಇಲ್ಲ. ಕೆಲವೊಮ್ಮೆ ನಿರ್ದಿಷ್ಟ ಆಟಗಾರನ ಮೇಲೆ ಅಭಿಪ್ರಾಯಗಳು ರೂಪಗೊಳ್ಳುತ್ತವೆ. ನಾನು ಸ್ವತಃ ತರಬೇತುದಾರನಾಗಿದ್ದೇನೆ ಮತ್ತು ನನ್ನ ಅಭಿಪ್ರಾಯದಲ್ಲಿ ಕೆಲವು ತಪ್ಪುಗಳನ್ನು ಮಾಡಿದ್ದೇನೆ. ಕೆಲ ಆಟಗಾರರನ್ನು ಕಡೆಗಣಿಸುವುದರಿಂದ ಇದು ಸಾಧ್ಯವಾಗುತ್ತದೆ. ಇದು ನಡೆಯುತ್ತದೆ. ನಾನು ಕೋಚ್ ಆಗಿದ್ದ ಸಂದರ್ಭದಲ್ಲಿಯೂ ನಡೆದಿದೆ. ಆದರೆ, ಅಭಿಮನ್ಯು ಈಶ್ವರನ್ ಅವಕಾಶ ಪಡೆಯಲು ಉತ್ತಮ ಅವಕಾಶವಾಗಿತ್ತು," ಎಂದು ಅರುಣ್ ಲಾಲ್ ತಿಳಿಸಿದ್ದಾರೆ.