ನಾನಾ ಪಾಟೇಕರ್ ನಿಧನಕ್ಕೆ ಭಾವನಾತ್ಮಕ ಶ್ರದ್ಧಾಂಜಲಿ ಸಲ್ಲಿಸಿದ ವಿರಾಟ್ ಕೊಹ್ಲಿ!
ಹಿರಿಯ ನಟ ನಾನಾ ಪಾಟೇಕರ್ ಅವರ ನಿಧನಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಭಾವನಾತ್ಮಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಕೊಹ್ಲಿ ಮೇಲಿನ ಪಾಟೇಕರ್ ಅಭಿಮಾನವನ್ನು ನೆನಪಿಸುವ ಹಳೆಯ ವಿಡಿಯೊ ಮತ್ತೆ ವೈರಲ್ ಆಗಿದೆ. ಈ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.
ನಾನಾ ಪಾಟೇಕರ್‌ಗೆ ಶ್ರದ್ಧಾಂಜಲಿ ಸಲ್ಲಿಸಿದ ವಿರಾಟ್ ಕೊಹ್ಲಿ. -
ನವದೆಹಲಿ: ಹಿರಿಯ ನಟ ನಾನಾ ಪಾಟೇಕರ್ (Nana Patekar) ಅವರ ನಿಧನಕ್ಕೆ ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಭಾವನಾತ್ಮಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಗುರುವಾರ (ಅಕ್ಟೋಬರ್ 8) ನಾನಾ ಪಾಟೇಕರ್ ನಿಧನದ ಸುದ್ದಿ ಹೊರಬಂದ ಬಳಿಕ, ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ನಟನನ್ನು ನೆನಪಿಸಿಕೊಂಡಿದ್ದಾರೆ. 75ರ ವಯಸ್ಸಿನ ನಾನಾ ಪಾಟೇಕರ್ ಅವರು ಗೋವಾದಲ್ಲಿರುವ ತಮ್ಮ ನಿವಾಸದಲ್ಲಿ ಅಸ್ವಸ್ಥರಾದ ಬಳಿಕ ನಿಧನರಾದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಚಿಕಿತ್ಸೆ ನೀಡಿದರೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಹೃದಯಾಘಾತವೇ ಸಾವಿಗೆ ಕಾರಣ ಎಂದು ವರದಿಯಾಗಿದೆ.
“ಭಾರತೀಯ ಚಿತ್ರರಂಗದ ನಿಜವಾದ ದಂತಕಥೆ. ಅವರ ಕೆಲಸ ಮತ್ತು ಪರಂಪರೆ ಹಲವು ತಲೆಮಾರುಗಳವರೆಗೆ ಜೀವಂತವಾಗಿರುತ್ತದೆ. ನಾನಾ ಪಾಟೇಕರ್ ಜೀ, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ,” ಎಂದು ವಿರಾಟ್ ಕೊಹ್ಲಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕೊಹ್ಲಿಯ ಈ ಶ್ರದ್ಧಾಂಜಲಿಯ ಬೆನ್ನಲ್ಲೇ ನಾನಾ ಪಾಟೇಕರ್ ಅವರು ವಿರಾಟ್ ಕೊಹ್ಲಿ ಬಗ್ಗೆ ಹಿಂದೆ ನೀಡಿದ್ದ ಹೇಳಿಕೆಯ ಹಳೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದೆ. ಆ ಸಂದರ್ಶನದಲ್ಲಿ ನಾನಾ ಪಾಟೇಕರ್ ಅವರು ಕೊಹ್ಲಿ ತಮ್ಮ ನೆಚ್ಚಿನ ಕ್ರಿಕೆಟಿಗ ಎಂದು ಹೇಳಿಕೊಂಡಿದ್ದರು.
Nana Patekar: ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ
“ವಿರಾಟ್ ಎಂದರೆ ನನಗೆ ತುಂಬಾ ಇಷ್ಟ. ಅವರ ಮೇಲೆ ನನಗೆ ವಿಶೇಷ ಅಭಿಮಾನವಿದೆ. ವಿರಾಟ್ ಬೇಗ ಔಟಾದರೆ ನನಗೆ ಊಟ ಮಾಡುವ ಮನಸ್ಸೇ ಆಗುವುದಿಲ್ಲ,” ಎಂದು ನಾನಾ ಪಾಟೇಕರ್ ಹೇಳಿದ್ದ ವಿಡಿಯೊ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ನಾನಾ ಪಾಟೇಕರ್ ಅವರಿಗೆ ಕ್ರಿಕೆಟ್ ಮೇಲೆ ಇದ್ದ ಆಸಕ್ತಿ ಕೇವಲ ಕೊಹ್ಲಿಯ ಮೇಲಿನ ಅಭಿಮಾನಕ್ಕೆ ಸೀಮಿತವಾಗಿರಲಿಲ್ಲ. ಬಾಲ್ಯದಲ್ಲಿ ಅವರು ಕ್ರಿಕೆಟ್ ಆಡುತ್ತಿದ್ದರು ಮತ್ತು ಆಫ್-ಸ್ಪಿನ್ ಬೌಲ್ ಮಾಡುತ್ತಿದ್ದರು. ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದ ಬ್ಯಾಟರ್‌ಗಳಿಗೆ ಬೌಲ್ ಮಾಡುವ ಮೂಲಕ ಕ್ರಿಕೆಟ್‌ನೊಂದಿಗೆ ತಮ್ಮ ಒಡನಾಟ ಮುಂದುವರಿಸಿದ್ದರು.
A true legend of Indian cinema. His work and legacy will live on for generations. Rest in peace, Nana Patekar ji. Om Shanti. 🙏
— Virat Kohli (@imVkohli) October 8, 2026
ಕ್ರಿಕೆಟ್ ಮೇಲಿನ ತಮ್ಮ ಪ್ರೀತಿಯ ಬಗ್ಗೆ ಮಾತನಾಡಿದ್ದ ನಾನಾ ಪಾಟೇಕರ್, ಭಾರತ-ಪಾಕಿಸ್ತಾನ ಪಂದ್ಯಗಳನ್ನು ಅತ್ಯಂತ ಆಸಕ್ತಿಯಿಂದ ವೀಕ್ಷಿಸುತ್ತಿದ್ದುದಾಗಿ ಕೂಡ ಹೇಳಿದ್ದರು. ಬಾಲ್ಯದಲ್ಲಿ ಆರ್ಥಿಕ ಸಮಸ್ಯೆಗಳ ಕಾರಣ ಕ್ರಿಕೆಟ್‌ನಲ್ಲಿ ಹೆಚ್ಚಿನ ಮಟ್ಟಕ್ಕೆ ಮುಂದುವರಿಯಲು ಸಾಧ್ಯವಾಗಲಿಲ್ಲ ಎಂಬುದನ್ನೂ ಅವರು ಹಿಂದಿನ ಸಂದರ್ಶನವೊಂದರಲ್ಲಿ ವಿವರಿಸಿದ್ದರು.
Today, Virat Kohli lost one of his biggest supporters. 🥲❤️ Nana Patekar was a truly passionate Virat Kohli fan, just like many of us. We’ll genuinely miss you, Nana Sir. 🙏 Om Shanti to the soul of Nana Patekar. 🕉️ #NanaPatekar #ViratKohli #OmShanti https://t.co/9wxrQAKtv2
— Vikash Patel (@LiveVikash44699) October 8, 2026
ಇದೀಗ ನಾನಾ ಪಾಟೇಕರ್ ಅವರ ನಿಧನದ ಬಳಿಕ ಕೊಹ್ಲಿ ಕುರಿತು ನೀಡಿದ್ದ ಅವರ ಈ ಹೇಳಿಕೆ ಮತ್ತೆ ವೈರಲ್ ಆಗಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಸಿನಿಮಾ ಲೋಕದಲ್ಲಿ ತಮ್ಮ ವಿಭಿನ್ನ ಅಭಿನಯ, ಗಂಭೀರ ಧ್ವನಿ ಮತ್ತು ಶಕ್ತಿಯುತ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದ ನಾನಾ ಪಾಟೇಕರ್, ಕ್ರಿಕೆಟ್‌ನ ಮೇಲಿನ ತಮ್ಮ ಪ್ರೀತಿ ಹಾಗೂ ವಿರಾಟ್ ಕೊಹ್ಲಿ ಮೇಲಿನ ಅಭಿಮಾನದಿಂದಲೂ ನೆನಪಾಗುತ್ತಿದ್ದಾರೆ.
ಸರಳತೆಯ ಮೇರುಶಿಖರ, ಅನ್ನದಾತರ ಕಣ್ಣೀರೊರೆಸಿದ ಸರಳ ಜೀವಿ ನಾನಾ ಪಾಟೇಕರ್ ಎಂಬ ʻರಿಯಲ್ ಹೀರೋʼ ಬದುಕಿದ್ದು ಹೀಗೆ!
ನಾನಾ ಪಾಟೇಕರ್‌ಗೆ ಸಂತಾಪ ಸೂಚಿಸಿದ ಸಚಿನ್, ಧವನ್
ವಿರಾಟ್ ಕೊಹ್ಲಿ ಮಾತ್ರವಲ್ಲದೆ ಸಚಿನ್ ತೆಂಡೂಲ್ಕರ್, ಶಿಖರ್ ಧವನ್ ಸೇರಿದಂತೆ ಕ್ರಿಕೆಟ್ ಲೋಕದ ಹಲವು ಗಣ್ಯರು ನಾನಾ ಪಾಟೇಕರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸಚಿನ್, ಪಾಟೇಕರ್ ಅವರನ್ನು ಸರಳ ಹಾಗೂ ನೆಲದ ವ್ಯಕ್ತಿ ಎಂದು ನೆನಪಿಸಿಕೊಂಡು, ಅವರ ಅಭಿನಯದಲ್ಲೂ ಅದೇ ಪ್ರಾಮಾಣಿಕತೆ ಕಾಣಿಸುತ್ತಿತ್ತು ಎಂದು ಹೇಳಿದ್ದಾರೆ.
ನಾನಾ ಪಾಟೇಕರ್ ಅವರ ನಿಧನದ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ಸಲ್ಲಿಸಿರುವ ಶ್ರದ್ಧಾಂಜಲಿ ಮತ್ತು ಕೊಹ್ಲಿಯ ಮೇಲಿನ ನಾನಾ ಅವರ ಹಳೆಯ ಅಭಿಮಾನ ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಒಬ್ಬ ದಿಗ್ಗಜ ನಟ ಮತ್ತು ಅವರ ನೆಚ್ಚಿನ ಕ್ರಿಕೆಟಿಗನ ನಡುವಿನ ಈ ಅಭಿಮಾನಭರಿತ ಸಂಪರ್ಕ ಅಭಿಮಾನಿಗಳ ಮನ ಗೆದ್ದಿದೆ.