ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs AFG: ಅಭಿಷೇಕ್‌ ಶರ್ಮಾ ಅಬ್ಬರ, ಆಫ್ಘನ್‌ ಎದುರು ಭಾರತಕ್ಕೆ 7 ವಿಕೆಟ್‌ ಜಯ!

IND vs AFG 1st T20I Highlighs: ಅರ್ಷದೀಪ್‌ ಸಿಂಗ್‌ ಮಾರಕ ಬೌಲಿಂಗ್‌ ಹಾಗೂ ಅಭಿಷೇಕ್‌ ಶರ್ಮಾ ಅರ್ಧಶತಕದ ಬಲದಿಂದ ಭಾರತ ತಂಡ, ಮೊದಲನೇ ಟಿ20ಐ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 7 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಭಾರತ 1-0 ಮುನ್ನಡೆ ಪಡೆದಿದೆ.

IND vs AFG: ಅಫ್ಘಾನಿಸ್ತಾನ ಎದುರು ಭಾರತಕ್ಕೆ 7 ವಿಕೆಟ್‌ ಜಯ!

ಅಫ್ಘಾನಿಸ್ತಾನ ಎದುರು ಅರ್ಧಶಕತಕ ಬಾರಿಸಿದ ಅಭಿಷೇಕ್‌ ಶರ್ಮಾ. -

Profile
Ramesh Kote Sep 13, 2026 10:46 PM

ನವದೆಹಲಿ: ಅರ್ಷದೀಪ್‌ ಸಿಂಗ್‌ (Arshdeep Singh) ಮಾರಕ ಬೌಲಿಂಗ್‌ ಹಾಗೂ ಅಭಿಷೇಕ್‌ ಶರ್ಮಾ (Abhishek Sharma) ಅವರ ಅರ್ಧಶತಕದ ಬಲದಿಂದ ಭಾರತ ತಂಡ, ಮೊದಲನೇ ಟಿ20ಐ ಪಂದ್ಯದಲ್ಲಿ (IND vs AFG) 7 ವಿಕೆಟ್‌ಗಳಿಂದ ಅಫ್ಘಾನಿಸ್ತಾನ ವಿರುದ್ಧ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಟೀಮ್‌ ಇಂಡಿಯಾ, ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.

ಭಾನುವಾರ ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಟಿ20ಐ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಅಫ್ಘಾನಿಸ್ತಾನ ತಂಡ, ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಕೇವಲ 43 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಅಫ್ಘಾನಿಸ್ತಾನ ಬಳಿಕ ಚೇತರಿಸಿಕೊಂಡು 156 ರನ್‌ಗಳ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಯಿತು.

ಈ ಗುರಿಯನ್ನು ಬೆನ್ನತ್ತಿದ ಭಾರತಕ್ಕೆ ಅಭಿಷೇಕ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ಭರ್ಜರಿ ಗೆಲುವಿನ ದಾರಿ ತೋರಿಸಿತು. ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ ಅಭಿಷೇಕ್, ಭಾರತದ ರನ್‌ಚೇಸ್‌ಗೆ ವೇಗ ನೀಡಿದರು. ಭಾರತ ತಂಡ ಕೇವಲ 13.4 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ T20I ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.

IND vs AFG: ಜಸ್‌ಪ್ರೀತ್‌ ಬುಮ್ರಾ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಶ್ರೇಯಸ್‌ ಅಯ್ಯರ್‌!

ಅಭಿಷೇಕ್‌ ಶರ್ಮಾ ಸ್ಪೋಟಕ ಬ್ಯಾಟಿಂಗ್‌

ಅಭಿಷೇಕ್ ಶರ್ಮಾ ಭಾರತ ತಂಡದ ಪರ ಕೇವಲ 27 ಎಸೆತಗಳಲ್ಲಿ 82 ರನ್‌ಗಳ ಸ್ಫೋಟಕ ಇನಿಂಗ್ಸ್‌ ಆಡಿದರು. ಈ ವೇಳೆ ಅವರು 7 ಬೌಂಡರಿ ಹಾಗೂ 7 ಸಿಕ್ಸರ್‌ಗಳನ್ನು ಸಿಡಿಸಿದರು. ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದ ಅಭಿಷೇಕ್, ಅಫ್ಘಾನಿಸ್ತಾನದ ಬೌಲರ್‌ಗಳ ವಿರುದ್ಧ ಅಬ್ಬರಿಸಿದರು. ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ 8 ಎಸೆತಗಳಲ್ಲಿ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಎರಡನೇ ವಿಕೆಟ್‌ಗೆ ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್ 121 ರನ್‌ಗಳ ಜೊತೆಯಾಟ ನಡೆಸಿದರು. ಈ ಜೋಡಿ ಕೇವಲ 53 ಎಸೆತಗಳನ್ನು ಎದುರಿಸಿ 121 ರನ್ ಸೇರಿಸಿತು. ಈ ಜೊತೆಯಾಟದಲ್ಲಿ ಅಭಿಷೇಕ್ ಅವರ ಕೊಡುಗೆ 27 ಎಸೆತಗಳಲ್ಲಿ 76 ರನ್ ಆಗಿತ್ತು. ಇನ್ನು ಇಶಾನ್ ಕಿಶನ್ 33 ಎಸೆತಗಳಲ್ಲಿ 42 ರನ್ ಸಿಡಿಸಿದರು.

ಅಫ್ಘಾನಿಸ್ತಾನದ ಯಾವುದೇ ಬೌಲರ್‌ಗೂ ಭಾರತದ ಬ್ಯಾಟರ್‌ಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಬಹುತೇಕ ಎಲ್ಲಾ ಬೌಲರ್‌ಗಳು ದುಬಾರಿಯಾದರು. ವಿಶೇಷವಾಗಿ ಫಜಲ್ಹಕ್ ಫಾರೂಕಿ ಕೇವಲ 2 ಓವರ್‌ಗಳಲ್ಲಿ 38 ರನ್‌ಗಳನ್ನು ಬಿಟ್ಟುಕೊಟ್ಟರು. ಅಭಿಷೇಕ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್‌ನ ನೆರವಿನಿಂದ ಭಾರತ ಸುಲಭವಾಗಿ ಗುರಿ ಬೆನ್ನತ್ತಿ ಪಂದ್ಯವನ್ನು ಗೆದ್ದುಕೊಂಡಿತು.



ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಅಫ್ಘಾನಿಸ್ತಾನ ತಂಡಕ್ಕೆ ಆರಂಭದಲ್ಲೇ ಭಾರೀ ಆಘಾತ ಎದುರಾಯಿತು. ಜಸ್ಪ್ರೀತ್ ಬುಮ್ರಾ ಪಂದ್ಯದ ಎರಡನೇ ಎಸೆತದಲ್ಲೇ ರಹಮಾನುಲ್ಲಾ ಗುರ್ಬಾಜ್ (0) ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಆ ಸಮಯದಲ್ಲಿ ಅಫ್ಘಾನಿಸ್ತಾನದ ಸ್ಕೋರ್ ಕೇವಲ 5 ರನ್ ಆಗಿತ್ತು. ಬಳಿಕ ಸೆದಿಕುಲ್ಲಾ ಅಟಲ್ ಅವರು ನಾಯಕ ಇಬ್ರಾಹಿಂ ಜದ್ರಾನ್ ಅವರೊಂದಿಗೆ ಇನ್ನಿಂಗ್ಸ್ ಕಟ್ಟುವ ಪ್ರಯತ್ನ ಮಾಡಿದರು. ಇಬ್ಬರೂ ಎರಡನೇ ವಿಕೆಟ್‌ಗೆ 22 ಎಸೆತಗಳಲ್ಲಿ 32 ರನ್‌ಗಳ ಜೊತೆಯಾಟ ನಡೆಸಿದರು.

ಆದರೆ ತಂಡದ ಮೊತ್ತ 38 ರನ್‌ಗಳಾಗಿದ್ದಾಗ ಇಬ್ರಾಹಿಂ ಜದ್ರಾನ್ ವಿಕೆಟ್ ಒಪ್ಪಿಸಿದರು. ಅವರು 10 ಎಸೆತಗಳಲ್ಲಿ 11 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಬುಮ್ರಾ ಆರಂಭದಲ್ಲೇ ವಿಕೆಟ್ ಕಬಳಿಸುವ ಮೂಲಕ ಅಫ್ಘಾನಿಸ್ತಾನದ ಬ್ಯಾಟಿಂಗ್ ಪಡೆಯ ಮೇಲೆ ಒತ್ತಡ ಹೇರಿದರು. ಅಫ್ಘಾನಿಸ್ತಾನದ ಮೊತ್ತ 43 ರನ್‌ಗಳಾಗುವಷ್ಟರಲ್ಲಿ ಸೆದಿಕುಲ್ಲಾ ಅಟಲ್ (13), ಗುಲ್ಬದಿನ್ ನೈಬ್ (2) ಮತ್ತು ದರ್ವೇಶ್ ರಸೂಲಿ (2) ವಿಕೆಟ್ ಒಪ್ಪಿಸಿದರು. ಇದರಿಂದ ಅಫ್ಘಾನಿಸ್ತಾನ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.



ಈ ಹಂತದಲ್ಲಿ ಮೊಹಮ್ಮದ್ ನಬಿ ಹಾಗೂ ಅಜ್ಮತುಲ್ಲಾ ಉಮರ್‌ಜೈ ತಂಡಕ್ಕೆ ಆಸರೆಯಾದರು. ಆರನೇ ವಿಕೆಟ್‌ಗೆ ಈ ಜೋಡಿ 56 ಎಸೆತಗಳಲ್ಲಿ 83 ರನ್‌ಗಳ ಭರ್ಜರಿ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿತು. ಮೊಹಮ್ಮದ್ ನಬಿ 27 ಎಸೆತಗಳಲ್ಲಿ 33 ರನ್ ಗಳಿಸಿ ಔಟಾದರು. ಮತ್ತೊಂದೆಡೆ, ಅಜ್ಮತುಲ್ಲಾ ಉಮರ್‌ಜೈ ಸ್ಫೋಟಕ ಬ್ಯಾಟಿಂಗ್ ನಡೆಸಿ 44 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 64 ರನ್‌ಗಳಿಸಿ ಅಜೇಯರಾಗಿ ಉಳಿದರು. ಕೊನೆಯ ಓವರ್‌ನಲ್ಲಿ ಶಿವಂ ದುಬೆ 21 ರನ್‌ಗಳನ್ನು ಬಿಟ್ಟುಕೊಟ್ಟರು. ಇದರ ಪರಿಣಾಮ ಅಫ್ಘಾನಿಸ್ತಾನದ ಸ್ಕೋರ್ 150ರ ಗಡಿ ದಾಟಿತು. ಭಾರತದ ಪರ ಅರ್ಶ್‌ದೀಪ್ ಸಿಂಗ್ 4 ಓವರ್‌ಗಳಲ್ಲಿ 19 ರನ್ ನೀಡಿ 3 ವಿಕೆಟ್ ಕಬಳಿಸಿದರು. ಜಸ್‌ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್ ಹಾಗೂ ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆದರು.