ʻಭಾರತ ಟೆಸ್ಟ್ ತಂಡದಲ್ಲಿ ನನಗೆ ಬೆಂಬಲ ಸಿಗಲಿಲ್ಲʼ: ನೋವು ತೋಡಿಕೊಂಡ ಸರ್ಫರಾಜ್ ಖಾನ್!
ಭಾರತ ಟೆಸ್ಟ್ ತಂಡದಲ್ಲಿ ನಿರಂತರ ಅವಕಾಶ ಸಿಗದಿರುವ ಬಗ್ಗೆ ಸರ್ಫರಾಝ್ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ. ತಂದೆಯ ಹೊರತಾಗಿ ಯಾರೂ ಬೆಂಬಲ ನೀಡಿಲ್ಲ ಎಂದಿರುವ ಅವರು, ಫಿಟ್ನೆಸ್ ಸುಧಾರಿಸಲು ತೂಕ ಇಳಿಸಿ ಕಠಿಣ ಪರಿಶ್ರಮ ಮುಂದುವರಿಸಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ಭಾರತ, ಭಾರತ ಎ ಅಥವಾ ಮುಂಬೈ ಪರ ಆಡಲು ಸಿದ್ಧ ಎಂದಿದ್ದಾರೆ.
ತಮ್ಮ ನೋವು ತೋಡಿಕೊಂಡ ಸರ್ಫರಾಝ್ ಖಾನ್. -
ನವದೆಹಲಿ: ಭಾರತೀಯ ಕ್ರಿಕೆಟ್ನ ಪ್ರತಿಭಾವಂತ ಮಧ್ಯಮ ಕ್ರಮಾಂಕದ ಬ್ಯಾಟರ್ ಸರ್ಫರಾಝ್ ಖಾನ್ (Sarfaraz Khan), ಟೆಸ್ಟ್ ತಂಡದಲ್ಲಿ ನಿರಂತರವಾಗಿ ಅವಕಾಶ ಸಿಗದಿರುವ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ದೇಶಿ ಕ್ರಿಕೆಟ್ನಲ್ಲಿ ನಿರಂತರವಾಗಿ ರನ್ ಗಳಿಸುತ್ತಿದ್ದರೂ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ನೋವನ್ನು ಅವರು ಹಂಚಿಕೊಂಡಿದ್ದಾರೆ.
ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ರೈಲ್ವೇಸ್ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದ ವೇಳೆ ಮಾತನಾಡಿದ ಸರ್ಫರಾಝ್, ತಮ್ಮ ಕ್ರಿಕೆಟ್ ಜೀವನದಲ್ಲಿ ತಂದೆಯ ಹೊರತಾಗಿ ಬೇರೆ ಯಾರೂ ಬೆಂಬಲ ನೀಡಿಲ್ಲ ಎಂದು ಭಾವುಕರಾಗಿ ಹೇಳಿದ್ದಾರೆ. ಭಾರತ ತಂಡಕ್ಕೆ ಮರಳುವ ನಿರೀಕ್ಷೆಯೊಂದಿಗೆ ತಾವು ನಿರಂತರ ಪರಿಶ್ರಮ ಪಡುತ್ತಿರುವುದಾಗಿಯೂ ತಿಳಿಸಿದ್ದಾರೆ.
ಶಿವಂ ದುಬೆ ಏನು ತಪ್ಪು ಮಾಡಿದ್ರು? ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಆಕಾಶ್ ಚೋಪ್ರಾ ಆಕ್ರೋಶ!
ತಂದೆಯೇ ನನ್ನ ಏಕೈಕ ಬೆಂಬಲ
"ನನ್ನ ಜೀವನದಲ್ಲಿ ನನಗೆ ಯಾರೂ ಬೆಂಬಲ ನೀಡಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ನನಗೆ ಬೆಂಬಲ ನೀಡಿರುವುದು ನನ್ನ ತಂದೆ ಮಾತ್ರ. ಬೇರೆ ಯಾರೂ ನನ್ನ ಬೆನ್ನಿಗೆ ನಿಂತಿಲ್ಲ. ನಾನು ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ನನ್ನ ತಂದೆಯ ಕನಸನ್ನು ನನಸು ಮಾಡಿದ್ದೇನೆ. ಇಂದಿನ ಕಾಲದಲ್ಲಿ ಭಾರತ ತಂಡದಲ್ಲಿ ಆಡುವುದು ಸುಲಭದ ಮಾತಲ್ಲ," ಎಂದು ಸರ್ಫರಾಝ್ ಹೇಳಿದ್ದಾರೆ.
ಪ್ರತಿದಿನ ಬೆಳಗ್ಗೆ ಬೇಗ ಎದ್ದು ಅಭ್ಯಾಸಕ್ಕೆ ತೆರಳಲು ಕೆಲವೊಮ್ಮೆ ಪ್ರೇರಣೆ ಕಡಿಮೆಯಾಗುತ್ತದೆ. ಆದರೆ ತಂದೆ ತಮಗಾಗಿ ಕಷ್ಟಪಟ್ಟು ದುಡಿಯುತ್ತಿರುವುದನ್ನು ನೋಡಿದಾಗ ಮತ್ತೆ ಪರಿಶ್ರಮ ಮುಂದುವರಿಸಲು ಪ್ರೇರಣೆ ಸಿಗುತ್ತದೆ ಎಂದು ಅವರು ತಿಳಿಸಿದ್ದಾರೆ.
ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಟೂರ್ನಿಗೆ ಭಾರತ ಎ ತಂಡ ಪ್ರಕಟ, ತಿಲಕ್ ವರ್ಮಾಗೆ ನಾಯಕತ್ವ!
ಪ್ರತಿದಿನ ಬೆಳಗ್ಗೆ 5 ಗಂಟೆಗೆ ಅಭ್ಯಾಸಕ್ಕೆ ತೆರಳುವುದು ಸವಾಲಾಗಿದೆ
ಪ್ರತಿ ಹೊಸ ಋತುವಿನಲ್ಲೂ ಮತ್ತೆ ಶೂನ್ಯದಿಂದ ಆರಂಭಿಸಿ ತಮ್ಮ ಸಾಮರ್ಥ್ಯ ಸಾಬೀತುಪಡಿಸುವುದು ಕಷ್ಟವಾಗುತ್ತಿದೆ ಎಂದು ಸರ್ಫರಾಝ್ ಹೇಳಿದ್ದಾರೆ. ಸುಮಾರು 97 ಕೆ.ಜಿ. ತೂಕವಿದ್ದ ಅವರು ಫಿಟ್ನೆಸ್ ಸುಧಾರಿಸಿಕೊಳ್ಳಲು 77 ಕೆ.ಜಿ.ಗೆ ಇಳಿದಿದ್ದಾರೆ. ತಮ್ಮಿಂದ ಸಾಧ್ಯವಾದ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
"ಪ್ರತಿದಿನ ಬೆಳಗ್ಗೆ ಎದ್ದಾಗ ಮತ್ತೆ ಅದೇ ಪ್ರಶ್ನೆ ನನ್ನನ್ನು ಕಾಡುತ್ತದೆ. ಬೆಳಗ್ಗೆ 5 ಗಂಟೆಗೆ ಎದ್ದು ಅಭ್ಯಾಸಕ್ಕೆ ಹೋಗಿ ಮತ್ತೆ ಮತ್ತೆ ಕಷ್ಟಪಡಬೇಕೇ ಎಂದು ಯೋಚಿಸುತ್ತೇನೆ. ನಾನು ಈಗಾಗಲೇ ಭಾರತ ತಂಡಕ್ಕಾಗಿ ಆಡಿದ್ದೇನೆ. ಮುಂಬೈ ಪರ ಮಾತ್ರ ಆಡಬೇಕೆಂದಿದ್ದರೆ ಸಾಮಾನ್ಯ ಪರಿಶ್ರಮದಿಂದಲೂ ಆಡಬಹುದು. ಆದರೆ ನನ್ನ ತಂದೆ ನನಗಾಗಿ ಕಷ್ಟಪಡುವುದನ್ನು ನೋಡಿದಾಗ ಅವರಿಗಾಗಿ ಇನ್ನಷ್ಟು ರನ್ ಗಳಿಸಬೇಕು ಎನಿಸುತ್ತದೆ," ಎಂದು ಅವರು ಹೇಳಿದ್ದಾರೆ.
ನಾನು ಭುವನೇಶ್ವರ್ ಕುಮಾರ್ಗೆ ಟಿ20ಐ ತಂಡದಲ್ಲಿ ಸ್ಥಾನ ನೀಡುವುದಿಲ್ಲ: ಕೆ ಶ್ರೀಕಾಂತ್ ಅಚ್ಚರಿ ಹೇಳಿಕೆ!
ವಿದೇಶಿ ಪಿಚ್ಗಳಲ್ಲೂ ರನ್ ಗಳಿಸಿದ್ದೇನೆ
ವಿದೇಶಿ ಪಿಚ್ಗಳಲ್ಲಿ ಸರ್ಫರಾಝ್ ಪರಿಣಾಮಕಾರಿಯಾಗಿ ಬ್ಯಾಟ್ ಮಾಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯದ ಬಗ್ಗೆಯೂ ಅವರು ಪ್ರತಿಕ್ರಿಯಿಸಿದ್ದಾರೆ. ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಪ್ರವಾಸಗಳಲ್ಲಿ ಉತ್ತಮ ರನ್ ಗಳಿಸಿರುವುದನ್ನು ಉಲ್ಲೇಖಿಸಿ, ವಿದೇಶಿ ಪರಿಸ್ಥಿತಿಗಳಲ್ಲಿಯೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದೇನೆ ಎಂದಿದ್ದಾರೆ.
"ನಾನು ಭಾರತ ತಂಡಕ್ಕೆ ಸೇರಿದಾಗ, ಭಾರತೀಯ ಪರಿಸ್ಥಿತಿಗಳಲ್ಲಿ ಹೆಚ್ಚಿನ ಅವಕಾಶ ಸಿಗುತ್ತದೆ ಎಂದು ಹೇಳಲಾಗಿತ್ತು. ಆದರೆ ವಿದೇಶದಲ್ಲಿಯೂ ನಾನು ರನ್ ಗಳಿಸಿದ್ದೇನೆ. ದಕ್ಷಿಣ ಆಫ್ರಿಕಾದಲ್ಲಿ 60 ಎಸೆತಗಳಲ್ಲಿ 100 ರನ್ ಗಳಿಸಿದ್ದೇನೆ. ಇಂಗ್ಲೆಂಡ್ನಲ್ಲಿಯೂ 60 ಎಸೆತಗಳಲ್ಲಿ ಶತಕ ಬಾರಿಸಿದ್ದೇನೆ. ನಾನು ವಿದೇಶದಲ್ಲಿ ರನ್ ಗಳಿಸಿಲ್ಲ ಎಂದಲ್ಲ. ಅದು ಅವರ ದೃಷ್ಟಿಕೋನ. ನನ್ನ ಕೆಲಸ ಕ್ರಿಕೆಟ್ ಆಡುವುದು. ನಾನು ಅದನ್ನು ಮುಂದುವರಿಸುತ್ತೇನೆ," ಎಂದು ಸರ್ಫರಾಜ್ ತಿಳಿಸಿದ್ದಾರೆ.
Ranji Trophy: ಮಧ್ಯಪ್ರದೇಶ ವಿರುದ್ಧ 9 ವಿಕೆಟ್ ಪಡೆದು 59 ವರ್ಷಗಳ ಹಳೆಯ ದಾಖಲೆ ಮುರಿದ ಹರ್ಷ್ ದುಬೆ!
ಭಾರತ ತಂಡದಲ್ಲಿ ಸಿಕ್ಕ ಅವಕಾಶಗಳು
ಸರ್ಫರಾಜ್ ಖಾನ್ ಭಾರತ ಪರ ಇದುವರೆಗೆ ಆರು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಒಂದು ಶತಕ ಹಾಗೂ ಮೂರು ಅರ್ಧಶತಕಗಳ ಸಹಿತ 371 ರನ್ ಗಳಿಸಿದ್ದಾರೆ. 2024ರ ನವೆಂಬರ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯ ಬಾರಿಗೆ ಟೆಸ್ಟ್ ಪಂದ್ಯವನ್ನಾಡಿದ್ದರು. ನಂತರ ಆಸ್ಟ್ರೇಲಿಯಾ ಪ್ರವಾಸದಲ್ಲಿ ತಂಡದ ಭಾಗವಾಗಿದ್ದರೂ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ.
ಇತ್ತೀಚೆಗೆ ಸಾಯಿ ಸುದರ್ಶನ್ ಗಾಯದಿಂದಾಗಿ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಸರ್ಫರಾಝ್ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಆ ಸರಣಿಯಲ್ಲಿಯೂ ಅವರಿಗೆ ಆಡುವ ಅವಕಾಶ ಸಿಗಲಿಲ್ಲ. ಇದೀಗ ಮತ್ತೆ ಮುಂಬೈ ತಂಡದ ಪರ ದೇಶಿ ಕ್ರಿಕೆಟ್ನಲ್ಲಿ ಆಡುತ್ತಿದ್ದಾರೆ. ನ್ಯೂಜಿಲೆಂಡ್ ಪ್ರವಾಸಕ್ಕೆ ಭಾರತ ಎ ತಂಡದಲ್ಲಿಯೂ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದ ಸರ್ಫರಾಜ್ಗೆ ಅಲ್ಲಿಯೂ ನಿರಾಸೆಯಾಗಿದೆ.