ʻಆಸ್ಟ್ರೇಲಿಯಾದಲ್ಲಿ ಆಡುವುದು ದೊಡ್ಡ ಸವಾಲುʼ: ಇಂಗ್ಲೆಂಡ್‌ಗೆ ಸ್ಟೀವನ್ ಸ್ಮಿತ್ ಎಚ್ಚರಿಕೆ!
ಮುಂಬರುವ ಆಷಸ್ ಟ್ರೋಫಿ ಟೆಸ್ಟ್ ಸರಣಿಯ ನಿಮಿತ್ತ ಎದುರಾಳಿ ಇಂಗ್ಲೆಂಡ್ ತಂಡಕ್ಕೆ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವನ್ ಸ್ಮಿತ್ ಎಚ್ಚರಿಕೆಯನ್ನು ನೀಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಕ್ರಿಕೆಟ್ ಆಡುವುದು ಸವಾಲುದಾಯಕವಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಆಷಸ್ ಟೆಸ್ಟ್ ಸರಣಿ ಆರಂಭವಾಗಲಿದೆ.

ಇಂಗ್ಲೆಂಡ್ ತಂಡಕ್ಕೆ ಸ್ಟೀವನ್ ಸ್ಮಿತ್ ಎಚ್ಚರಿಕೆ ನೀಡಿದ್ದಾರೆ.

ನವದೆಹಲಿ: ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ (AUS vs ENG) ನಡುವಣ ಆಷಸ್ ಟ್ರೋಫಿ (Ashes 2025-26) ಟೆಸ್ಟ್ ಸರಣಿ ನವೆಂಬರ್ 21 ರಂದು ಆರಂಭವಾಗಲಿದೆ. ಈ ಎರಡೂ ತಂಡಗಳಿಗೆ ಈ ಸರಣಿ ಅತ್ಯಂತ ಪ್ರತಿಷ್ಠೆಯಾಗಿದೆ. ಈ ಹಿನ್ನೆಲೆಯಲ್ಲಿ ಉಭಯ ತಂಡಗಳು ಇಂದಿನಿಂದಲೇ ತಯಾರಿ ನಡೆಸುತ್ತಿವೆ. ಅಂದ ಹಾಗೆ ಆಷಸ್ ಟೆಸ್ಟ್ ಸರಣಿಯ ನಿಮಿತ್ತ ಇಂಗ್ಲೆಂಡ್ ತಂಡದ ಆಸ್ಟ್ರೇಲಿಯಾ ಮಾಜಿ ನಾಯಕ ಹಾಗೂ ಹಿರಿಯ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್ (steve Smith) ಎಚ್ಚರಿಕೆಯನ್ನು ನೀಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಕ್ರಿಕೆಟ್ ಆಡುವುದು ಯಾವಾಗಲೂ ಸವಾಲುದಾಯಕವಾಗಿರುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ ತಂಡ ಕೊನೆಯ ಬಾರಿ ಆಸ್ಟ್ರೇಲಿಯಾದಲ್ಲಿ ಆಷಸ್ ಟೆಸ್ಟ್ ಸರಣಿ ಗೆದ್ದಿದ್ದು 2010-11ರ ಸಾಲಿನಲ್ಲಿ. ಈ ವೇಳೆ ಇಂಗ್ಲೆಂಡ್ ತಂಡ 3-1 ಅಂತರದಲ್ಲಿ ಗೆಲುವು ಪಡೆದಿತ್ತು. ಈ ಸರಣಿಯಲ್ಲಿ ಆಲ್‌ಸ್ಟೈರ್ ಕುಕ್ 766 ರನ್‌ಗಳನ್ನು ಕಲೆ ಹಾಕಿದ್ದರು ಹಾಗೂ ಜೇಮ್ಸ್ ಆಂಡರ್ಸನ್ 24 ವಿಕೆಟ್‌ಗಳನ್ನು ಕಬಳಿಸಿದ್ದರು. ಅಂದಿನಿಂದ ಇಲ್ಲಿಯವರೆಗೂ ಆಸ್ಟ್ರೇಲಿಯಾದಲ್ಲಿ ಇಂಗ್ಲೆಂಡ್ ತಂಡ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಆಸ್ಟ್ರೇಲಿಯಾದಲ್ಲಿನ ಕಂಡೀಷನ್ಸ್ ಬೌಲಿಂಗ್ ಸ್ನೇಹಿಯಾಗಿದ್ದು, ಬ್ಯಾಟಿಂಗ್‌ಗೆ ಕಠಿಣವಾಗಿರುತ್ತದೆ.
ಆಷಸ್ ಟೆಸ್ಟ್ ಸರಣಿಯ ನಿಮಿತ್ತ ಇಂಗ್ಲೆಂಡ್ ತಂಡ, ಇತ್ತೀಚೆಗೆ ಭಾರತ ತಂಡದ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿತ್ತು. ಈ ಸರಣಿಯಲ್ಲಿ ಉಭಯ ತಂಡಗಳು 2-2 ಸಮಬಲ ಸಾಧಿಸಿದ್ದವು. ಇದೀಗ ಇಂಗ್ಲೆಂಡ್ ತಂಡಕ್ಕೆ ಆಸ್ಟ್ರೇಲಿಯಾದಲ್ಲಿ ಕಠಿಣ ಸವಾಲು ಎದುರಾಗಲಿದೆ. ಈ ಬಗ್ಗೆ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವನ್ ಸ್ಮಿತ್ ಎಚ್ಚರಿಕೆ ನೀಡಿದ್ದಾರೆ.
AUS vs SA: ದಕ್ಷಿಣ ಆಫ್ರಿಕಾ ಏಕದಿನ ಸರಣಿಗೂ ಮುನ್ನ ಆಸ್ಟ್ರೇಲಿಯಾಗೆ ಆಘಾತ! ಮೂವರು ಆಟಗಾರರಿಗೆ ಗಾಯ!
"ಭಾರತದ ವಿರುದ್ಧದ ಅವರ ಸರಣಿಯು ಕಳೆದ ಕೆಲ ವರ್ಷಗಳಲ್ಲಿ ನಾನು ನೋಡಿದ ಅತ್ಯುತ್ತಮ ಸರಣಿಗಳಲ್ಲಿ ಒಂದಾಗಿದೆ. ಅವರು (ಇಂಗ್ಲೆಂಡ್) ಆಕ್ರಮಣಕಾರಿ ಕ್ರಿಕೆಟ್ ಆಡುತ್ತಾರೆ, ಆದರೆ ಆಸ್ಟ್ರೇಲಿಯಾದಲ್ಲಿ ಬ್ಯಾಟಿಂಗ್ ನಡೆಸುವುದು ದೊಡ್ಡ ಸವಾಲಾಗಿರುತ್ತದೆ. ನಮ್ಮ ಪಿಚ್‌ಗಳು ಟ್ರಿಕ್ಕಿಯಾಗಿವೆ ಮತ್ತು ನಾವು ಅನುಭವಿ, ಯಶಸ್ವಿ ಬೌಲಿಂಗ್ ದಾಳಿಯನ್ನು ಹೊಂದಿದ್ದೇವೆ," ಎಂದು ಸ್ಮಿತ್ ಸ್ಕೈ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಅದ್ಭುತ ಫಾರ್ಮ್‌ನಲ್ಲಿರುವ ಜೋ ರೂಟ್
ಪ್ರಸ್ತುತ ಹಂಡ್ರೆಡ್‌ನಲ್ಲಿ ವೆಲ್ಷ್ ಫೈರ್ ಪರ ಆಡುತ್ತಿರುವ ಸ್ಮಿತ್, ಆಷಸ್‌ಗೆ ಮುಂಚಿತವಾಗಿ ಜೋ ರೂಟ್ ಅವರನ್ನು ಶ್ಲಾಘಿಸಿದ್ದಾರೆ. ವಿಶೇಷವಾಗಿ ಕಳೆದ ಎರಡು ವರ್ಷಗಳಲ್ಲಿ ಇಂಗ್ಲಿಷ್ ಬ್ಯಾಟ್ಸ್‌ಮನ್‌ಗಳು ಸಮರ್ಥವಾಗಿ ಆರಂಭವನ್ನು ಪಡೆದಿದ್ದಾರೆಂದು ಸ್ಮಿತ್ ಗುಣಗಾನ ಮಾಡಿದ್ದಾರೆ.
ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಜೋ ರೂಟ್ ಒಂಬತ್ತು ಇನಿಂಗ್ಸ್‌ಗಳಲ್ಲಿ 67.12 ರ ಸರಾಸರಿಯಲ್ಲಿ 537 ರನ್ ಗಳಿಸಿದ್ದಾರೆ. ಇದರಲ್ಲಿ ಅವರ ಖಾತೆಗೆ ಮೂರು ಶತಕಗಳು ಮತ್ತು ಒಂದು ಅರ್ಧಶತಕವೂ ಸೇರಿದೆ. ಆದಾಗ್ಯೂ, ಆಸ್ಟ್ರೇಲಿಯಾದಲ್ಲಿ 27 ಇನಿಂಗ್ಸ್‌ಗಳಲ್ಲಿ ಅವರು ಕೇವಲ 35.68ರ ಸರಾಸರಿಯನ್ನು ಹೊಂದಿದ್ದಾರೆ ಮತ್ತು ಅಲ್ಲಿ ಅವರು ಟೆಸ್ಟ್ ಶತಕವನ್ನು ಸಿಡಿಸಿಲ್ಲ.
SA vs AUS: ದಕ್ಷಿಣ ಆಫ್ರಿಕಾ ಆಲ್‌ರೌಂಡರ್ ಕಾರ್ಬಿನ್ ಬಾಷ್‌ಗೆ ದಂಡ ವಿಧಿಸಿದ ಐಸಿಸಿ!
"ಕಳೆದ ಎರಡು ವರ್ಷಗಳಿಂದ ಅವರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ, 50 ರನ್‌ಗಳನ್ನು ದೊಡ್ಡ ಶತಕಗಳನ್ನಾಗಿ ಪರಿವರ್ತಿಸುತ್ತಿದ್ದಾರೆ. ಅವರು ಆಸ್ಟ್ರೇಲಿಯಾದಲ್ಲಿ ಇನ್ನೂ ಟೆಸ್ಟ್ ಶತಕ ಗಳಿಸಿಲ್ಲ ಹಾಗೂ ಅವರು ಅದನ್ನು ಗುರಿಯಾಗಿರಿಸಿಕೊಳ್ಳುತ್ತಾರೆ ಎಂದು ನನಗೆ ಖಚಿತವಾಗಿದೆ, ಆದರೆ ಈ ಬೇಸಿಗೆಯಲ್ಲಿ ಅವರು ಅದನ್ನು ಪಡೆಯುವುದಿಲ್ಲ ಎಂದು ಆಶಿಸುತ್ತೇನೆ," ಎಂದು ಹೇಳಿದ ಸ್ಮಿತ್ "ನಮ್ಮ ಕೌಶಲಗಳು ಮಾತನಾಡಲು ನಾವು ಬಿಡುತ್ತೇವೆ. ನಮಗೆ ನಮ್ಮ ಪರಿಸ್ಥಿತಿಗಳು ಚೆನ್ನಾಗಿ ತಿಳಿದಿವೆ ಮತ್ತು ನಮ್ಮ ಆಟವನ್ನು ನಂಬುತ್ತೇವೆ," ಎಂದು ತಿಳಿಸಿದ್ದಾರೆ.