ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೊಹ್ಸಿನ್‌ ನಖ್ವಿಯಿಂದ ಮಹಿಳಾ ಏಷ್ಯಾ ಕಪ್‌ ಸ್ವೀಕರಿಸದೇ ಇರಲು ಕಾರಣ ತಿಳಿಸಿದ ಕೋಚ್‌ ಅಮೋಲ್‌ ಮಝುಮ್ದಾರ್‌!

2026ರ ಮಹಿಳಾ ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ ತಂಡ ಮತ್ತೊಮ್ಮೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದೆ. ಬಿಸಿಸಿಐ ನೀಡಿದ ನಿರ್ದೇಶನದ ಮೇರೆಗೆ ಭಾರತ ತಂಡವು ನಖ್ವಿ ಅವರಿಂದ ಮಹಿಳಾ ಏಷ್ಯಾಕಪ್ ಟ್ರೋಫಿ ಸ್ವೀಕರಿಸಿಲ್ಲ ಎಂದು ತಂಡದ ಮುಖ್ಯ ಕೋಚ್ ಅಮೋಲ್ ಮುಝುಮ್ದಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮೊಹ್ಸಿನ್‌ ನಖ್ವಿಯಿಂದ ಭಾರತ ಮಹಿಳಾ ತಂಡ ಟ್ರೋಫಿ ಸ್ವೀಕರಿಸಿಲ್ಲ ಏಕೆ?

ಮೊಹ್ಸಿನ್‌ ನಖ್ವಿಯಿಂದ ಟ್ರೋಫಿ ಸ್ವೀಕರಿಸದೇ ಇರಲು ಕಾರಣ ತಿಳಿಸಿದ ಅಮೋಲ್‌ ಮಝುಮ್ದಾರ್‌. -

Profile
Ramesh Kote Sep 14, 2026 9:34 AM

ನವದೆಹಲಿ: ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಂದ ಮಹಿಳಾ ಏಷ್ಯಾಕಪ್ ಟ್ರೋಫಿ ಸ್ವೀಕರಿಸದ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಂಡಿತ್ತು ಎಂದು ಭಾರತ ಮಹಿಳಾ ತಂಡದ ಮುಖ್ಯ ಕೋಚ್ ಅಮೋಲ್ ಮುಜುಮ್ದಾರ್ ಸ್ಪಷ್ಟಪಡಿಸಿದ್ದಾರೆ.

ಭಾನುವಾರ (ಸೆಪ್ಟೆಂಬರ್ 13) ಶ್ರೀಲಂಕಾ ವಿರುದ್ಧ 72 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಮಹಿಳಾ ಏಷ್ಯಾಕಪ್ ಪ್ರಶಸ್ತಿ ಗೆದ್ದ ಬಳಿಕ ನಡೆದ ಟ್ರೋಫಿ ಪ್ರದಾನ ಸಮಾರಂಭದಲ್ಲಿ ಭಾರತ ತಂಡ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಿರಲಿಲ್ಲ. ಈ ನಿರ್ಧಾರಕ್ಕೆ ತಂಡವು ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಮುಜುಮ್ದಾರ್ ಹೇಳಿದ್ದಾರೆ.

ಟ್ರೋಫಿ ಪ್ರದಾನದ ಸುತ್ತ ನಡೆದ ಬೆಳವಣಿಗೆಗಳು ಭಾರತ ತಂಡದ ಸಾಧನೆಯ ಮಹತ್ವವನ್ನು ಯಾವುದೇ ರೀತಿಯಲ್ಲೂ ಕಡಿಮೆ ಮಾಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ನಿರ್ಧಾರದ ಬಗ್ಗೆ ತಂಡಕ್ಕೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದೂ ಮುಜುಮ್ದಾರ್ ಸ್ಪಷ್ಟಪಡಿಸಿದ್ದಾರೆ.

Women's Asia Cup 2026: ಶ್ರೀಲಂಕಾ ವಿರುದ್ಧ 72 ರನ್‌ಗಳ ಭರ್ಜರಿ ಗೆಲುವು; 8ನೇ ಬಾರಿ ಚಾಂಪಿಯನ್ ಆದ ಭಾರತ!

ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ನಿಲುವನ್ನು ಬಿಸಿಸಿಐ ತೆಗೆದುಕೊಂಡಿದೆ ಮತ್ತು ನಾವು ಅದಕ್ಕೆ ಬದ್ಧರಾಗಿದ್ದೇವೆ. ನಮಗೆ ಈ ಟೂರ್ನಿ ಮುಗಿದಿದೆ. ನಾವು ಚಾಂಪಿಯನ್ಸ್. ಅದು ನಮಗೆ ಸಾಕು. ದೊಡ್ಡ ಪರದೆಯ ಮೇಲೂ ಭಾರತ 2026ರ ಏಷ್ಯಾಕಪ್ ಚಾಂಪಿಯನ್ಸ್ ಎಂದು ಪ್ರದರ್ಶಿಸಲಾಗಿತ್ತು. ನಮ್ಮ ಪಾಲಿಗೆ ಈ ಟೂರ್ನಿ ಅಧಿಕೃತವಾಗಿ ಮುಗಿದಿದೆ. ನಾವು ಚಾಂಪಿಯನ್ಸ್ ಆಗಿರುವುದಕ್ಕೆ ಸಂತಸವಾಗಿದೆ. ಈಗ ಏಷ್ಯನ್ ಗೇಮ್ಸ್‌ನತ್ತ ಗಮನ ಹರಿಸುತ್ತೇವೆ,” ಎಂದು ಹೇಳಿದರು.



“ನಾವು ಚಾಂಪಿಯನ್ಸ್ ಆಗಿರುವುದಕ್ಕೆ ನಿಜಕ್ಕೂ ಸಂತಸವಾಗಿದೆ. ಈ ತಂಡದ ಪ್ರತಿಯೊಬ್ಬರ ಬಗ್ಗೆಯೂ ನನಗೆ ಹೆಮ್ಮೆ ಇದೆ. ಆಟಗಾರರು ಮಾತ್ರವಲ್ಲದೆ, ತಂಡದ ಸಹಾಯಕ ಸಿಬ್ಬಂದಿಯ ಕೊಡುಗೆಯೂ ಅಪಾರವಾಗಿದೆ,” ಎಂದು ಮುಜುಮ್ದಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀಲಂಕಾ ವಿರುದ್ಧದ ಫೈನಲ್‌ನಲ್ಲಿ 72 ರನ್‌ಗಳ ಜಯ ಸಾಧಿಸಿದ ಭಾರತ ಮಹಿಳಾ ತಂಡ ಏಷ್ಯಾಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದು, ಇದೀಗ ತಂಡದ ಮುಂದಿನ ಗುರಿ ಏಷ್ಯನ್ ಗೇಮ್ಸ್ ಆಗಿದೆ.

Women's Asia cup: ಮತ್ತೊಮ್ಮೆ ಪಾಕಿಸ್ತಾನದ ಮೊಹ್ಸಿನ್‌ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಭಾರತ!

ಮೊಹ್ಸಿನ್‌ ನಖ್ವಿಗೆ ಮತ್ತೊಮ್ಮೆ ಮುಖಭಂಗ

ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವು ಪಡೆದ ಬಳಿಕ ಭಾರತ ಮಹಿಳಾ ತಂಡ, ಮಹಿಳಾ ಏಷ್ಯಾಕಪ್ ಪ್ರಶಸ್ತಿಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮುಖ್ಯಸ್ಥ ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲಿಲ್ಲ. ಭಾರತ ಪ್ರಶಸ್ತಿ ಗೆದ್ದ ಸಂದರ್ಭದಲ್ಲಿ ನಖ್ವಿ ಅವರು ಮೈದಾನದಲ್ಲಿದ್ದ ಗಣ್ಯರಲ್ಲಿ ಒಬ್ಬರಾಗಿದ್ದರು. ಅವರು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹಾಗೂ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರ ಪಕ್ಕದಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸಿದ್ದರು.

ಪಂದ್ಯ ಮುಕ್ತಾಯಗೊಂಡ ಬಳಿಕ ಭಾರತ ತಂಡದ ಆಟಗಾರರು ಮುಖ್ಯ ಕೋಚ್ ಅಮೋಲ್ ಮುಝುಮ್ದಾರ್ ಅವರ ಸುತ್ತ ಸೇರಿ ಸಂಭ್ರಮಿಸಿದರು. ಈ ವೇಳೆ ರಾಜೀವ್ ಶುಕ್ಲಾ ಮತ್ತು ದೇವಜಿತ್ ಸೈಕಿಯಾ ಕೂಡ ತಂಡದ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಮತ್ತೊಂದೆಡೆ, ನಖ್ವಿ ಅವರು ಮೈದಾನದಲ್ಲಿದ್ದ ಇತರ ಗಣ್ಯರೊಂದಿಗೆ ಮಾತುಕತೆ ನಡೆಸುತ್ತಿರುವುದು ಕಂಡುಬಂದಿತು.

ಅಧಿಕೃತ ಪ್ರಶಸ್ತಿ ಪ್ರದಾನ ಸಮಾರಂಭ ಆರಂಭವಾದಾಗ ನಖ್ವಿ ಅವರು ಶ್ರೀಲಂಕಾ ನಾಯಕಿ ಚಾಮರಿ ಅಟಪಟ್ಟು ಅವರಿಗೆ ರನ್ನರ್‌ಅಪ್‌ ತಂಡದ ಚೆಕ್‌ ಅನ್ನು ಹಸ್ತಾಂತರಿಸಿದರು. ಬಳಿಕ ಅಟಪಟ್ಟು ಅವರು ಪ್ರಸ್ತುತ ನಿರೂಪಕ ಹಾಗೂ ಮಾಜಿ ಶ್ರೀಲಂಕಾ ಕ್ರಿಕೆಟಿಗ ಫರ್ವೇಜ್ ಮಹರೂಫ್ ಅವರೊಂದಿಗೆ ಮಾತನಾಡಿದ ನಂತರ ಸಮಾರಂಭ ಅಂತ್ಯಗೊಂಡಿತು. ಇದಾದ ಬಳಿಕ ನಖ್ವಿ ಅವರು ಇತರ ಎಸಿಸಿ ಅಧಿಕಾರಿಗಳೊಂದಿಗೆ ಮೈದಾನದಿಂದ ನಿರ್ಗಮಿಸಿದರು. ಈ ವೇಳೆ ಭಾರತ ತಂಡದ ಬಳಿ ಏಷ್ಯಾಕಪ್ ಟ್ರೋಫಿ ಹಾಗೂ ವಿಜೇತರ ಪದಕಗಳು ಕಾಣಿಸಲಿಲ್ಲ.