ಬ್ಯಾಟರ್‌ಗಳ ಯುಗದಲ್ಲೂ ಬೌಲಿಂಗ್ ರಾಜ – ಇದು ಭುವನೇಶ್ವರ್ ಕುಮಾರ್ ಕತೆ!
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬ್ಯಾಟಿಂಗ್ ಪರಾಕ್ರಮವೇ ಹೆಚ್ಚು. ವರ್ಷದಿಂದ ವರ್ಷಕ್ಕೆ ಹೊಸ ಬ್ಯಾಟರ್‌ಗಳು ಸದ್ದು ಮಾಡುತ್ತಲೇ ಇದ್ದಾರೆ. ಬ್ಯಾಟಿಂಗ್ ಪಿಚ್‌ಗಳಲ್ಲಿ ಬೌಲರ್‌ಗಳು ಬವಳಿ ಬೆಂಡಾಗಿದ್ದಾರೆ. ಹೀಗಿರುವಾಗ ಸದ್ದಿಲ್ಲದೇ ತಮ್ಮ ಶಿಸ್ತಿನ ಬೌಲಿಂಗ್ ಮೂಲಕ ಸದ್ದು ಮಾಡುತ್ತಿರುವ ವ್ಯಕ್ತಿ ಆರ್‌ಸಿಬಿ ತಂಡದ ಫಾಸ್ಟ್ ಬೌಲರ್ ಭುವನೇಶ್ವರ್ ಕುಮಾರ್. ಆದರೆ, ಬ್ಯಾಟರ್‌ಗಳಿಗೆ ಸಿಗುವಷ್ಟು ಪ್ರೀತಿ ಅಭಿಮಾನ ಬೌಲರ್‌ಗಳಿಗೆ ಇಂದು ಸಿಗುತ್ತಿಲ್ಲ ಎಂಬುದಷ್ಟೇ ಬೇಸರ.
ಆರ್‌ಸಿಬಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ -
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬ್ಯಾಟಿಂಗ್ ಪರಾಕ್ರಮವೇ ಹೆಚ್ಚು. ವರ್ಷದಿಂದ ವರ್ಷಕ್ಕೆ ಹೊಸ ಬ್ಯಾಟರ್‌ಗಳು ಸದ್ದು ಮಾಡುತ್ತಲೇ ಇದ್ದಾರೆ. ಬ್ಯಾಟಿಂಗ್ ಪಿಚ್‌ಗಳಲ್ಲಿ ಬೌಲರ್‌ಗಳು ಬವಳಿ ಬೆಂಡಾಗಿದ್ದಾರೆ. ಹೀಗಿರುವಾಗ ಸದ್ದಿಲ್ಲದೇ ತಮ್ಮ ಶಿಸ್ತಿನ ಬೌಲಿಂಗ್ ಮೂಲಕ ಸದ್ದು ಮಾಡುತ್ತಿರುವ ವ್ಯಕ್ತಿ ಆರ್‌ಸಿಬಿ ತಂಡದ ಫಾಸ್ಟ್ ಬೌಲರ್ ಭುವನೇಶ್ವರ್ ಕುಮಾರ್. ಆದರೆ, ಬ್ಯಾಟರ್‌ಗಳಿಗೆ ಸಿಗುವಷ್ಟು ಪ್ರೀತಿ ಅಭಿಮಾನ ಬೌಲರ್‌ಗಳಿಗೆ ಇಂದು ಸಿಗುತ್ತಿಲ್ಲ ಎಂಬುದಷ್ಟೇ ಬೇಸರ.
ಇಂಡಿಯನ್ ಪ್ರೀಮಿಯರ್ ಲೀಗ್ ಜನರಿಗೆ ಟಿ20 ಕ್ರಿಕೆಟ್‌ನ ಹುಚ್ಚು ಹಿಡಿಸಿದಂತಹ ಫಾರ್ಮ್ಯಾಟ್. ಟೆಸ್ಟ್ ಮತ್ತು ಒಡಿಐ ಕ್ರಿಕೆಟ್‌ನಲ್ಲಿ ಗಂಟೆಗಟ್ಟಲೆ ಸಮಯ ಕಳೆದು ಬೇಸರಗೊಂಡಿದ್ದ ಅಭಿಮಾನಿಗಳಿಗೆ ಕೇವಲ 4 ಗಂಟೆಗಳ ಅವಧಿಯಲ್ಲಿ ಭರಪೂರ ಮನೋರಂಜನೆಯೊಂದಿಗೆ ಕ್ರಿಕಟ್‌ನ ಅಮಲೇರುವಂತೆ ಮಾಡಿದೆ.
ಹೌದು ಟಿ20 ಕ್ರಿಕೆಟ್‌ನ ಆಕರ್ಷಣೆಯೇ ಹಾಗೆ. ಲಾಂಗೆಸ್ಟ್ ಫಾರ್ಮ್ಯಾಟ್‌ನಲ್ಲಿ ಫೋರ್-ಸಿಕ್ಸರ್‌ಗಳನ್ನು ಕಣ್ತುಂಬಿಕೊಳ್ಳಲು ಕಾಯಬೇಕಾಗಿದ್ದ ಸಂದರ್ಭದಲ್ಲಿ, ಬೌಂಡರಿಗಳ ಸುರಿಮಳೆಯನ್ನೇ ತಂದಿದ್ದು ಚುಟುಕು ಕ್ರಿಕೆಟ್. ಅದರಲ್ಲೂ ಐಪಿಎಲ್‌ನಲ್ಲಿ ವರ್ಷದಿಂದ ವರ್ಷಕ್ಕೆ ರನ್ ಹೊಳೆ ಹರಿದು ಉಕ್ಕುತ್ತಲೇ ಇದೆ. ಹಿಂದೆಲ್ಲಾ 200 ರನ್ ಗಳಿಸಿದರೆ ಅದೇ ದೊಡ್ಡ ಮೊತ್ತ. ಆದರೀಗ 250 ರನ್ ಗಳಿಸಿದರೂ ಗೆಲುವು ಖಾತ್ರಿಯಿಲ್ಲ. ಐಪಿಎಲ್ 2026 ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಪಂಜಾಬ್ ಕಿಂಗ್ಸ್ 265 ರನ್‌ಗಳ ಗುರಿಯನ್ನು ಯಶ್ವಿಯಾಗಿ ಚೇಸ್ ಮಾಡಿದ್ದು ಇದ್ದಕ್ಕೆ ಲೇಟೆಸ್ಟ್ ಉದಾಹರಣೆ.
GT vs RCB: ಐಪಿಎಲ್‌ನಲ್ಲಿ ನೂತನ ದಾಖಲೆ ಬರೆದ ಭುವನೇಶ್ವರ್ ಕುಮಾರ್; ವಿಶ್ವದ ಮೊದಲ ಬೌಲರ್
ಹೀಗಾಗಿ ಐಪಿಎಲ್ ಬ್ಯಾಟ್ಸ್‌ಮನ್‌ಗಳ ಅಖಾಡ ಆಗಿಬಿಟ್ಟಿದೆ. ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಪ್ರಿಯಾಂಶ್ ಆರ್ಯ, ಕೂಪರ್ ಕಾನೊಲಿ, ಜೇಕಬ್ ಬೆಥೆಲ್ ಅಂತಹ ಭವಿಷ್ಯದ ಸೂಪರ್ ಸ್ಟಾರ್ ಬ್ಯಾಟರ್‌ಗಳನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಹುಟ್ಟುಹಾಕಿದೆ. ಆದರೆ, ಭವಿಷ್ಯದ ಬೌಲರ್‌ಗಳು ಯಾರು? ಅಂತ ಹುಡುಕಿದ್ರೆ ಸಿಗೋರು ಬಹಳಾ ಕಡಿಮೆ.
ಬ್ಯಾಟರ್‌ಗಳ ಆರ್ಭಟದ ಐಪಿಎಲ್‌ನಲ್ಲಿ ಬೌಲರ್ ಭುವಿ ಸದ್ದು
ಕ್ರಿಕೆಟ್ ಪ್ರಿಯರು ನೋಡಲು ಇಷ್ಟ ಪಡೋದು ಫೋರ್ ಮತ್ತು ಸಿಕ್ಸರ್ಸ್. ಹೆಚ್ಚು ಹೆಚ್ಚು ಬೌಂಡರಿಗಳು ಬಂದು ದಾಖಲೆಯ ರನ್ ಕಲೆಹಾಕಿದಷ್ಟೂ ಐಪಿಎಲ್‌ನ ಜನಪ್ರಿಯತೆ ಮುಗಿಲು ಮುಟ್ಟುತ್ತಿದೆ ಎಂಬುದರಲ್ಲಿ ಸಂದೇಹವೇ ಬೇಡ. ಅದಕ್ಕೆ ಪೂರಕವಾಗಿ ಬ್ಯಾಟಿಂಗ್ ಪಿಚ್‌ಗಳೇ ಇಂದು ಕಾಣಲು ಸಿಗುತ್ತಿವೆ. ಈ ಮಧ್ಯೆ ಬ್ಯಾಟಿಂಗ್ ಪಿಚ್‌ನಲ್ಲಿ ನರಕ ಅನುಭವಿಸಿದ ಹಲವು ಬೌಲರ್‌ಗಳು ಮುಂದಿನ ಪೀಳಿಗೆಯವರು ಬೌಲರ್‌ಗಳಾಗಬೇಡಿ ಬ್ಯಾಟರ್‌ಗಳಾಗಿ ಎಂದು ತಮಾಷೆ ಮಾಡಿದ್ದೂ ಇದೆ. ಇದು ಒಂದು ಮಟ್ಟಿಗೆ ನಿಜ ಕೂಡ. ಐಪಿಎಲ್‌ನಲ್ಲಿ ಬೌಲರ್‌ಗಳಿಗೆ ಇದು ಕಷ್ಟ ಕಾಲ. ಹೀಗಿರುವಾಗ, 36ರ ವಯಸ್ಸಿನಲ್ಲೂ ಶ್ರೇಷ್ಠ ಲಯ ಕಂಡುಕೊಂಡು ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಮುಂದಿರುವ ಭುವನೇಶ್ವರ್ ಕುಮಾರ್ ಅವರ ಸಾಧನೆ ಎಷ್ಟು ಹೊಗಳಿದರೂ ಸಾಲದು.
RCB vs CSK: ಐಪಿಎಲ್ ಟೂರ್ನಿಯಲ್ಲಿ 200 ವಿಕೆಟ್‌ಗಳನ್ನು ಪಡೆದ ಭುವನೇಶ್ವರ್ ಕುಮಾರ್!
ಬಹುತೇಕರು ನಿವೃತ್ತಿ ತೆಗೆದುಕೊಳ್ಳುವ ವಯಸ್ಸು
ಫಾಸ್ಟ್ ಬೌಲರ್‌ಗಳಿಗೆ ಗಾಯದ ಸಮ್ಯಸ್ಯೆ ಕಟ್ಟಿಟ್ಟಬುತ್ತಿ. ತಮ್ಮ ಶ್ರೇಷ್ಠ ಲಯದಲ್ಲಿ ಹೆಚ್ಚು ವರ್ಷಗಳು ಉಳಿಯಲು ಸಾಧ್ಯವಾಗುವುದಿಲ್ಲ. ಅಂದಹಾಗೆ ಗಾಯದ ಭೂತ ಭುವನೇಶ್ವರ್ ಕುಮಾರ್ ಅವರನ್ನೂ ಬಿಟ್ಟಿಲ್ಲ. 2011ರಲ್ಲಿ ಐಪಿಎಲ್‌ಗೆ ಕಾಲಿಟ್ಟ ಭುವನೇಶ್ವರ್ ಕುಮಾರ್ ಈಗಲೂ ತಮ್ಮ ಸೇವೆ ಮುಂದುವರಿಸಿರುವುದು ನಿಜಕ್ಕೂ ಶ್ಲಾಘನೀಯ. 2016ರಲ್ಲಿ ಅವರು ಆಗಿನ ಚಾಂಪಿಯನ್ಸ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದರು. ಅದು ಭುವನೇಶ್ವರ್ ಅವರ ಪ್ರೈಂ ಟೈಮ್. ಸತತ ಗಾಯದ ಸಮಸ್ಯೆಗಳ ಕಾರಣ ಮತ್ತೊಮ್ಮೆ ಅಂಥದ್ದೇ ಲಯ ಕಂಡುಕೊಳ್ಳಲು ಅವರಿಂದ ಸಾಧ್ಯವಿಲ್ಲ ಎಂದು ಹಲವು ಕ್ರಿಕೆಟ್ ಪರಿಣತರು ಅನುಮಾನ ಪಟ್ಟಿದ್ದೂ ಇದೆ. ಇವೆಲ್ಲದಕ್ಕೂ ತಮ್ಮ ಶಿಸ್ತಿನ ಬೌಲಿಂಗ್ ಮೂಲಕವೇ ಭುವಿ ಉತ್ತರಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ದ ಕಣಕ್ಕೆ ಇಳಿದು ನೂತನ ಮೈಲುಗಲ್ಲು ಸ್ಥಾಪಿಸಿದ ಭುವನೇಶ್ವರ್ ಕುಮಾರ್!
ಸಚಿನ್ ತೆಂಡೂಲ್ಕರ್‌ನ ಡಕ್‌ಔಟ್ ಮಾಡಿದ್ದ ಭುವಿ
ಉತ್ತರ ಪ್ತದೇಶದ ಮೀರಟ್‌ನಲ್ಲಿ 1990ರ ಫೆಬ್ರವರಿ 5ರಂದು ಜನಿಸಿದ ಭುವನೇಶ್ವರ್ ಕುಮಾರ್, ಕ್ರಿಕೆಟಿಗನಾಗುವ ಹಿಂದೆ ಅವರ ಅಕ್ಕನ ಪಾತ್ರ ಬಹಳಾ ದೊಡ್ಡದು. ಬಾಲ್ಯದಲ್ಲಿ ತೀರಾ ತೆಳ್ಳಗಿದ್ದ ಭುವಿ, ಗಲ್ಲಿ ಕ್ರಿಕೆಟ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರು. ಕ್ರಿಕೆಟ್‌ನಲ್ಲಿ ಇರುವ ಆತನ ಆಸಕ್ತಿ ಗಮನಿಸಿದ ಅವರ ಅಕ್ಕ ಬಲವಂತದಿಂದಲೇ ಕ್ಲಬ್ ಕ್ರಿಕೆಟ್‌ಗೆ ಸೇರಿಸಿದ್ದರು. ಆಗ ಬಾಲ್ಯದ ಕೋಚ್ ಏನಾಗಲು ಬಯಸುತ್ತೀಯಾ? ಎಂದು ಕೇಳಿದಾಗ ಬೌಲರ್ ಎಂದು ಹೇಳಿದ್ದ ಭುವಿ ನಂತರ ಹಿಂತಿರುಗಿ ನೋಡಿದ್ದೇ ಇಲ್ಲ. ತಮ್ಮ 17ನೇ ವಯಸ್ಸಿಗೆ ಪ್ರಥಮದರ್ಜೆ ಕ್ರಿಕೆಟ್‌ಗೆ ಕಾಲಿಟ್ಟು, 2008-09ರ ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಡಕ್‌ಔಟ್ ಮಾಡಿದ್ದರು. ಫರ್ಸ್ ಕ್ಲಾಸ್ ಕ್ರಿಕೆಟ್‌ನಲ್ಲಿ ಸಚಿನ್‌ನ ಡಕ್‌ಔಟ್ ಮಾಡಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆ ಭುವನೇಶ್ವರ್ ಅವರದ್ದು.
ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್
ಟೀಮ್ ಇಂಡಿಯಾದ ಮಾಜಿ ವೇಗದ ಬೌಲರ್ ಪ್ರವೀಣ್ ಕುಮಾರ್ ಅವರನ್ನು ಆದರ್ಶವನ್ನಾಗಿ ತೆಗೆದುಕೊಂಡು ಅವರಂತೆಯೇ ಸ್ವಿಂಗ್ ಬೌಲರ್ ಆಗುವ ಪ್ರಯತ್ನ ಮಾಡಿದ ಭುವಿ, ಇಂದು ವಿಶ್ವ ಕ್ರಿಕೆಟ್‌ನ ಸ್ವಿಂಗ್ ಕಿಂಗ್ ಎಂದರೆ ತಪ್ಪಾಗಲಾರದು. ತಮ್ಮ ವೃತ್ತಿಬದುಕಿನ ಆರಂಭದಲ್ಲಿ ಭುವಿ ಸ್ವಾಭಾವಿಕ ಇನ್‌ಸ್ವಿಂಗ್ ಎಸೆತಗಳಿಗೆ ಹೆಸರುವಾಸಿ. ಬಳಿಕ ತಮ್ಮ ಬತ್ತಳಿಕೆಗೆ ಔಟ್‌ಸ್ವಿಂಗ್ ಸೇರಿಸಿಕೊಂಡರು. ಚೆಂಡನ್ನು ಎರಡೂ ಕಡೆ ಸ್ವಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ವಿಶ್ವದ ಕೆಲವೇ ಬೌಲರ್‌ಗಳ ಪೈಕಿ ಭುವನೇಶ್ವರ್ ಕುಮಾರ್ ಒಬ್ಬರು.
IPL 2025: ಅಶ್ವಿನ್ ದಾಖಲೆ ಮುರಿದ ಭುವನೇಶ್ವರ್ ಕುಮಾರ್
ಕ್ರಿಸ್ ಗೇಲ್ ಆರ್ಭಟಕ್ಕೂ ಸಿಲುಕದ ಭುವಿ
2013ರ ಐಪಿಎಲ್‌ನಲ್ಲಿ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 'ಯೂನಿವರ್ಸ್ ಬಾಸ್' ಕ್ರಿಸ್ ಗೇಲ್ ತಾಂಡವ ಆಡಿದ್ದರು. ಆರ್‌ಸಿಬಿ ತಂಡ ಸಹಾರಾ ಪುಣೆ ವಾರಿಯರ್ಸ್ ಎದುರು ಆಗಿನ ವಿಶ್ವ ದಾಖಲೆಯ ಮೊತ್ತವಾಗಿ 263/5 ರನ್ ಪೇರಿಸಿತ್ತು. ಇದರಲ್ಲಿ ಕ್ರಿಸ್ ಗೇಲ್ ಒಬ್ಬರೇ ಅಜೇಯ 175 ರನ್‌ಗಳ ಸ್ಪೋಟಕ ಇನಿಂಗ್ಸ್ ಆಡಿದ್ದರು. ಅಂದು ಗೇಲ್ ಅಬ್ಬರಕ್ಕೆ ಸಿಲುಕಿ ಪುಣೆ ಬೌಲರ್‌ಗಳು ಬೆಂಡಾಗಿ ಹೋಗಿದ್ದರು. ಆದರೆ, ಗೇಲ್ ಅಬ್ಬರಕ್ಕೂ ಸಿಲುಕದ ಭುವಿ ತಮ್ಮ 4 ಓವರ್‌ಗಳಲ್ಲಿ ಕೇವಲ 23 ರನ್ ಮಾತ್ರವೇ ಕೊಟ್ಟಿದ್ದರು. ಇದು ಭುವನೇಶ್ವರ್ ಕುಮಾರ್ ಅವರ ಕರಾರುವಾಕ್ ಲೈನ್ ಅಂಡ್ ಲೆನ್ತ್ ಬೌಲಿಂಗ್‌ಗೆ ಹಿಡಿದ ಕೈಗನ್ನಡಿ.
ಆರ್‌ಸಿಬಿಗೆ ಭುವಿಯನ್ನು ಕರೆತಂದಿದ್ದು ಡಿ.ಕೆ
ಐಪಿಎಲ್ 2025ರ ಆಟಗಾರರ ಹರಾಜಿಗೂ ಮೊದಲು ನಡೆದ ಟೀಮ್ ಮೀಟಿಂಗ್ ವಿಡಿಯೋದಲ್ಲಿ ತಂಡಕ್ಕೆ ಭುವನೇಶ್ವರ್ ಕುಮಾರ್ ಬೇಕೇ ಬೇಕು ಎಂದು ಪಟ್ಟು ಹಿಡಿದದ್ದು ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್. ಮುಖ್ಯ ಕೋಚ್ ಆಂಡಿ ಫ್ಲವರ್ ಇದಕ್ಕೆ ಅಡ್ಡಗಾಲಾಕಿದ್ದರು ಕೂಡ. ಹಿರಿಯ ವೇಗಿಗೆ ಗಾಯದ ಸಮಸ್ಯೆ ಕಾಡಬಹುದು ಎಂಬುದು ಆಂಡಿ ಫ್ಲವರ್ ಅವರ ಚಿಂತೆಯಾಗಿತ್ತು. ಆದರೆ, ಭಾರತದಲ್ಲಿ ಜಸ್‌ಪ್ರೀತ್ ಬುಮ್ರಾ ಬಳಿಕ ಬೆಸ್ಟ್ ಟಿ20 ಬೌಲರ್ ಎಂದರೆ ಅದು ಭುವನೇಶ್ವರ್ ಕುಮಾರ್ ಎಂದು ವಾದ ಮಂಡಿಸಿ ಡಿ.ಕೆ ಗೆದ್ದಿದ್ದರು. ಅಂತೆಯೇ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಖನೌ ಸೂಪರ್ ಜಯಂಟ್ಸ್ ಎದುರು ಬಿಡ್ಡಿಂಗ್ ವಾರ್ ಗೆದ್ದು 10 ಕೋಟಿಗೂ ಅಧಿಕ ಬೆಲೆ ನೀಡಿ ಭುವಿ ಸೇವೆಯನ್ನ ಆರ್‌ಸಿಬಿಗೆ ದಕ್ಕಿಸಿಕೊಟ್ಟರು. 2025ರಲ್ಲಿ ಆರ್‌ಸಿಬಿ ಚಾಂಪಿಯನ್ಸ್ ಪಟ್ಟಕ್ಕೇರಲು ಭುವನೇಶ್ವರ್ ಕುಮಾರ್ ಅವರ ಬೌಲಿಂಗ್ ಕೂಡ ಪ್ರಮುಖ ಕಾರಣಗಳಲ್ಲಿ ಒಂದು. 14 ಪಂದ್ಯಗಳಲ್ಲಿ ಭುವಿ 17 ವಿಕೆಟ್‌ಗಳನ್ನು ಪಡೆದು ಮಿಂಚಿದ್ದರು.
IPL 2025: ಆರ್‌ಸಿಬಿ ವೇಗಿ ಭುವನೇಶ್ವರ್ ಕುಮಾರ್ ಮುರಿಯಬಲ್ಲ 3 ಪ್ರಮುಖ ದಾಖಲೆಗಳು!
'ತಂಡಕ್ಕಾಗಿ ಆಡುವುದಷ್ಟೇ ಗುರಿ' ಎಂದಿರುವ ನಿಸ್ವಾರ್ಥಿ
ಐಪಿಎಲ್ 2026 ಟೂರ್ನಿಯಲ್ಲಿ ಆರ್‌ಸಿಬಿ ಪರ ಈವರೆಗೆ ಆಡಿದ 9 ಪಂದ್ಯಗಳಲ್ಲಿ ಒಟ್ಟು 17 ವಿಕೆಟ್‌ಗಳನ್ನು ಪಡೆದಿರುವ ಭುವನೇಶ್ವರ್ ಕುಮಾರ್, ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಮುಂದಿದ್ದಾರೆ. ಏಪ್ರಿಲ್ 30ರಂದು ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಸೋತರೂ ಭುವಿ 28ಕ್ಕೆ 3 ವಿಕೆಟ್ ಕಿತ್ತು ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಅಗ್ರಸ್ಥಾನಕ್ಕೆ ಜಿಗಿದರು. ಪರ್ಪಲ್ ಕ್ಯಾಪ್ ಸ್ವೀಕರಿಸಿದ ಮಾತನಾಡಿದ ಭುವಿ, "ನನಗೆ ವೈಯಕ್ತಿಕವಾಗಿ ಸಾಧಿಸಬೇಕು ಅನ್ನುವ ಗುರಿಗಳು ಯಾವುದು ಇಲ್ಲ. ನನ್ನ ಗುರಿ ಏನಿದ್ದರೂ ತಂಡದ ಯಶಸ್ಸಿಗಾಗಿ ಶ್ರಮಿಸುವುದಷ್ಟೇ," ಎಂದು ನಿಸ್ವಾರ್ಥ ನುಡಿದಿದ್ದಾರೆ.
ಬ್ಯಾಟರ್‌ಗಳದ್ದೇ ಅಬ್ಬರ ತುಂಬಿರುವ ಸಮಯದಲ್ಲಿ ಸದ್ದಿಲ್ಲದೇ ಫಾಸ್ಟ್ ಬೌಲರ್ ಒಬ್ಬ ಸದ್ದು ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಭುವಿ ಸಾಧನೆಯನ್ನು ಅವರ ಕ್ರಿಕೆಟ್ ಪಯಣವನ್ನು ಎಷ್ಟು ಸಂಭ್ರಮಿಸಿದರೂ ಸಾಲದು. ಏನೇ ಹೇಳಿ ಇಂದು ಬ್ಯಾಟರ್‌ಗಳಿಗೆ ಸಿಗುವಷ್ಟೇ ಅಭಿಮಾನ ಮತ್ತು ಪ್ರೀತಿ ಬೌಲರ್‌ಗಳಿಗೂ ಸಿಗಬೇಕು ಅಲ್ಲವೇ?