IND vs PAK: ನನ್ನ ಬೌಲಿಂಗ್‌ನಲ್ಲಿ ಸಿಕ್ಸರ್ ಬಾರಿಸಿ ಎಂದು ವಿರಾಟ್ ಕೊಹ್ಲಿಯನ್ನು ರೇಗಿಸಿದ್ದೆ: ಅಬ್ರಾರ್ ಅಹ್ಮದ್!
Abrar Ahmed on Virat Kohli: ಭಾರತ ಹಾಗೂ ಪಾಕಿಸ್ತಾನ ನಡುವಣ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ವಿರಾಟ್ ಕೊಹ್ಲಿಯನ್ನು ರೇಗಿಸಿದ ಘಟನೆಯನ್ನು ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಬಹಿರಂಗಪಡಿಸಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ ಯಾವುದೇ ಸನ್ನಿವೇಶದಲ್ಲಿ ತಾಳ್ಮೆಯನ್ನು ಕಳೆದುಕೊಂಡಿಲ್ಲ ಹಾಗೂ ಅವರು ದಿಗ್ಗಜ ಬ್ಯಾಟ್ಸ್‌ಮನ್ ಎಂದು ಗುಣಗಾನ ಮಾಡಿದ್ದಾರೆ.

ವಿರಾಟ್ ಕೊಹ್ಲಿಯನ್ನು ಶ್ಲಾಘಿಸಿದ ಅಬ್ರಾರ್ ಅಹ್ಮದ್.

ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ನಡುವಣ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಆಧುನಿಕ ದಿಗ್ಗಜ ವಿರಾಟ್ ಕೊಹ್ಲಿಯನ್ನು ಕಿಚಾಯಿಸಿದ ಘಟನೆಯನ್ನು ಇತ್ತೀಚೆಗೆ ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಬಹಿರಂಗಪಡಿಸಿದ್ದಾರೆ. ವಿರಾಟ್ ಕೊಹ್ಲಿ ಬ್ಯಾಟ್ ಮಾಡುತ್ತಿರುವಾಗ ನನ್ನ ಬೌಲಿಂಗ್‌ನಲ್ಲಿ ಸಿಕ್ಸರ್ ಬಾರಿಸಿ ನೋಡೋಣ ಎಂದು ಕೀಟಲೆ ಮಾಡಿದ್ದೆ ಎಂದು ಸ್ಪಿನ್ನರ್ ತಿಳಿಸಿದ್ದಾರೆ. ಫೆಬ್ರವರಿ 23ರಂದು ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ನಿರ್ಣಾಯಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ವಿರಾಟ್ ಕೊಹ್ಲಿ 111 ಎಸೆತಗಳಲ್ಲಿ ಅಜೇಯ 100 ರನ್‌ಗಳನ್ನು ಗಳಿಸಿದ್ದರು, ಆ ಮೂಲಕ ಭಾರತ ತಂಡದ 6 ವಿಕೆಟ್ ಗೆಲುವಿಗೆ ನೆರವು ನೀಡಿದ್ದರು.
ದುಬೈ ಪಿಚ್ ಸ್ಪಿನ್ ಸ್ನೇಹಿಯಾಗಿದ್ದ ಕಾರಣ ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್, ಭಾರತ ತಂಡಕ್ಕೆ ಕಠಿಣ ಸವಾಲು ನೀಡಿದ್ದರು. ಇವರು ಬೌಲ್ ಮಾಡಿದ್ದ 10 ಓವರ್‌ಗಳಲ್ಲಿ ಕೇವಲ 28 ರನ್ ನೀಡಿ ಶುಭಮನ್ ಗಿಲ್ ಅವರನ್ನು ಔಟ್ ಮಾಡಿದ್ದರು. ಆ ಮೂಲಕ ಪಾಕ್ ಪರ ಯಶಸ್ವಿ ಸ್ಪಿನ್ನರ್ ಎನಿಸಿಕೊಂಡಿದ್ದರು. ಆದರೆ, ಪಾಕ್ ದೊಡ್ಡ ಮೊತ್ತದ ಗುರಿಯನ್ನು ನೀಡದ ಕಾರಣ ಅವರ ಬೌಲಿಂಗ್ ಪ್ರದರ್ಶನ ತಂಡದ ಗೆಲುವಿಗೆ ನೆರವು ನೀಡಿರಲಿಲ್ಲ. ಅಂದ ಹಾಗೆ ಟೆಲಿಕಾಮ್ ಏಷ್ಯಾ ಸ್ಪೋರ್ಟ್ಸ್ ಜೊತೆ ಮಾತನಾಡಿದ ಅಬ್ರಾರ್ ಅಹ್ಮದ್, ವಿರಾಟ್ ಕೊಹ್ಲಿಗೆ ಬೌಲ್ ಮಾಡುವ ಮೂಲಕ ನನ್ನ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದೇನೆಂದು ಹೇಳಿದ್ದಾರೆ. ನಾನು ಕೊಹ್ಲಿಗೆ ಕೀಚಾಯಿಸಿದರೂ ಅವರ ನನ್ನ ಮೇಲೆ ಕೋಪ ಮಾಡಿಕೊಂಡಿಲ್ಲ ಎಂದು ತಿಳಿಸಿದ್ದಾರೆ.
IND vs PAK: ಕೊಹ್ಲಿ ಶತಕ ವೈಭವ; ಪಾಕ್ ವಿರುದ್ಧ ಭಾರತಕ್ಕೆ 6 ವಿಕೆಟ್ ಜಯ
ನನ್ನ ಎಸೆತದಲ್ಲಿ ಸಿಕ್ಸರ್ ಬಾರಿಸಿ ಎಂದು ಕೊಹ್ಲಿಯನ್ನು ಕಿಚಾಯಿಸಿದ್ದೆ: ಅಬ್ರಾರ್ ಅಹ್ಮದ್
"ದುಬೈನಲ್ಲಿ ವಿರಾಟ್ ಕೊಹ್ಲಿಗೆ ಬೌಲ್ ಮಾಡುವ ಮೂಲಕ ನನ್ನ ಬಾಲ್ಯದ ಕನಸು ನನಸಾಗಿತ್ತು. ಅವರ ವಿರುದ್ಧ ಅದ್ಭುತ ಸವಾಲು ಎದುರಾಗಿತ್ತು ಹಾಗೂ ಅವರನ್ನು ಕೀಟಲೆ ಮಾಡುವ ಸ್ವಾತಂತ್ರವನ್ನು ನಾನು ಪಡೆದುಕೊಂಡಿದ್ದೆ. ನನ್ನ ಬೌಲಿಂಗ್‌ನಲ್ಲಿ ಸಿಕ್ಸರ್ ಬಾರಿಸಿ ಎಂದು ನಾನು ಅವರನ್ನು ಕಿಚಾಯಿಸಿದ್ದೆ ಆದರೆ, ಅವರು ನನ್ನ ಮೇಲೆ ಎಂದಿಗೂ ಕೋಪ ಮಾಡಿಕೊಂಡಿಲ್ಲ. ವಿರಾಟ್ ಕೊಹ್ಲಿ ಅತ್ಯಂತ ಶ್ರೇಷ್ಠ ಬ್ಯಾಟ್ಸ್‌ಮನ್ ಎಂಬುದು ನಮ್ಮೆಲ್ಲರಿಗೂ ಗೊತ್ತಿದೆ. ಇದರ ಜೊತೆಗೆ ಅತ್ಯುತ್ತಮ ಮಾನವೀಯ ಮೌಲ್ಯಗಳನ್ನು ಹೊಂದಿರುವ ವ್ಯಕ್ತಿ," ಎಂದು ಅಬ್ರಾರ್ ಅಹ್ಮದ್ ಗುಣಗಾನ ಮಾಡಿದ್ದಾರೆ.
IND vs PAK: ʻಬಾಬರ್ ಆಝಮ್ ಒಬ್ಬ ಮೋಸಗಾರʼ-ಮಾಜಿ ನಾಯಕನ ವಿರುದ್ಧ ಶೋಯೆಬ್ ಅಖ್ತರ್ ಕಿಡಿ!
ವಿರಾಟ್ ಕೊಹ್ಲಿ ತನ್ನನ ಬೌಲಿಂಗ್ ಅನ್ನು ಶ್ಲಾಘಿಸಿದ್ದರು
ಅಂಡರ್-19 ತಂಡದಲ್ಲಿ ಆಡುತ್ತಿದ್ದ ದಿನಗಳಿಂದ ವಿರಾಟ್ ಕೊಹ್ಲಿಗೆ ಬೌಲ್ ಮಾಡಬೇಕೆಂಬುದು ನನ್ನ ಗುರಿಯಾಗಿತ್ತು. ಅದರಂತೆ ಈ ಪಂದ್ಯದಲ್ಲಿ ಬೌಲ್ ಮಾಡಲು ಅವಕಾಶ ಸಿಕ್ಕಿತ್ತು. ಪಂದ್ಯದ ನಂತರ ವಿರಾಟ್ ಕೊಹ್ಲಿ ನನ್ನನ್ನು ಗುಣಗಾನ ಮಾಡಿದ್ದರು. ಅಲ್ಲದೆ ಶುಭಮನ್ ಗಿಲ್ ಔಟ್ ಮಾಡಿದ ಬಳಿಕ ಅವರ ಎದುರು ವಿಭಿನ್ನವಾಗಿ ಸಂಭ್ರಮಿಸಿದ ಘಟನೆಯ ಬಗ್ಗೆ ಅಬ್ರಾರ್ ಪ್ರತಿಕ್ರಿಯೆ ನೀಡಿದ್ದಾರೆ.
"ಪಂದ್ಯ ಮುಗಿದ ಬಳಿಕ ʻಬೌಲಿಂಗ್ ಚೆನ್ನಾಗಿತ್ತುʼ ಎಂದು ವಿರಾಟ್ ಕೊಹ್ಲಿ ನನಗೆ ಹೇಳಿದ್ದರು. ಅಂದಿನ ದಿನ ನನ್ನದಾಗಿತ್ತು. ವಿರಾಟ್ ಕೊಹ್ಲಿ ನನಗೆ ಚಿಕ್ಕ ವಯಸ್ಸಿನಿಂದಲೂ ಮಾದರಿಯಾಗಿದ್ದಾರೆ. ಅಂಡರ್-19 ತಂಡದಲ್ಲಿರುವ ವೇಳೆಯೇ ವಿರಾಟ್ ಕೊಹ್ಲಿಗೆ ಒಂದಲ್ಲ ಒಂದು ದಿನ ಬೌಲ್ ಮಾಡುತ್ತೇನೆಂದು ಶಪಥ ಮಾಡಿದ್ದೆ. ಅದನ್ನು ಇದೀಗ ಪೂರ್ಣಗೊಳಿಸಿದ್ದೇನೆ," ಎಂದು ಹೇಳಿದ ಸ್ಪಿನ್ನರ್, ಶುಭಮನ್ ಗಿಲ್‌ಗೆ ಸನ್ನೆಯ ಮೂಲಕ ಸಂಭ್ರಮಿಸಿದ ಘಟನೆಯ ಬಗ್ಗೆ ಮಾತನಾಡಿ,"ಅದು ನನ್ನ ಶೈಲಿ ಹಾಗೂ ಇದರಲ್ಲಿ ತಪ್ಪಿದೆ ಎಂದು ನನಗೆ ಅನಿಸಿಲ್ಲ. ನಾನು ತಪ್ಪು ಮಾಡಿದ್ದೇನೆಂದು ಪಂದ್ಯದ ಅಧಿಕಾರಿಗಳು ಕೂಡ ನನಗೆ ತಿಳಿಸಿಲ್ಲ. ಒಂದು ವೇಳೆ ಇದು ಯಾರಿಗಾದರೂ ನೋವು ಉಂಟು ಮಾಡಿದ್ದರೆ, ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ. ಯಾರುಗಾದರೂ ನೋವು ಮಾಡಬೇಕೆಂಬ ಉದ್ದೇಶ ನನ್ನದಾಗಿರಲಿಲ್ಲ,"ಎಂದು ಅವರು ಸ್ಪಷ್ಟನೆ ಕೊಟ್ಟಿದ್ದಾರೆ.