IND vs ENG: ಮೂರನೇ ಏಕದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಮೂರು ಬದಲಾವಣೆ ಅಗತ್ಯ!
ಎರಡು ಪಂದ್ಯಗಳ ಅಂತ್ಯಕ್ಕೆ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಏಕದಿನ ಸರಣಿಯಲ್ಲಿ 1-1 ಅಂತರದಲ್ಲಿ ಸಮಬಲ ಕಾಯ್ದುಕೊಂಡಿವೆ. ಇದೀಗ ಜುಲೈ 19 ರಂದು ಲಂಡನ್‌ನ ಲಾರ್ಡ್ಸ್‌ನಲ್ಲಿ ನಡೆಯುವ ಮೂರನೇ ಹಾಗೂ ಸರಣಿಯ ಪಂದ್ಯದಲ್ಲಿ ಗೆಲ್ಲಲು ಎರಡೂ ತಂಡಗಳು ಎದುರು ನೋಡುತ್ತಿವೆ.
ಮೂರನೇ ಪಂದ್ಯಕ್ಕೆ ಭಾರತ ತಂಡದಲ್ಲಿ 3 ಬದಲಾವಣೆ ಅಗತ್ಯ. -
ನವದೆಹಲಿ: ಕಾರ್ಡಿಫ್‌ನ ಸೋಫಿಯಾ ಗಾರ್ಡನ್ಸ್‌ನಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ (IND vs ENG) ಭಾರತದ ವಿರುದ್ಧ 4 ವಿಕೆಟ್‌ಗಳಿಂದ ಗೆದ್ದಿದ್ದ ಇಂಗ್ಲೆಂಡ್, ಮೂರು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲ ಮಾಡಿಕೊಂಡಿದೆ. ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ, ಒಂದು ಹಂತದಲ್ಲಿ 4 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ನಂತರ ಭಾರೀ ಕುಸಿತ ಅನುಭವಿಸಿ 233 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್, ಜೋ ರೂಟ್ ಅವರ ಅಜೇಯ 99 ರನ್‌ಗಳ ನೆರವಿನಿಂದ ನಾಲ್ಕು ವಿಕೆಟ್‌ಗಳ ಅಂತರದಲ್ಲಿ ಗೆಲುವು ಸಾಧಿಸಿತು.
ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯ ತಂಡಕ್ಕೆ ದುಬಾರಿಯಾಯಿತು. ಕೊನೆಯ ಆರು ವಿಕೆಟ್‌ಗಳು ಕೇವಲ 55 ರನ್‌ಗಳ ಅಂತರದಲ್ಲಿ ಉರುಳಿದವು. 6ರಿಂದ 9ನೇ ಕ್ರಮಾಂಕದವರೆಗೆ ಬಂದ ಎಲ್ಲಾ ಬ್ಯಾಟರ್‌ಗಳು ಒಂದಂಕಿ ಮೊತ್ತಕ್ಕೆ ಔಟಾಗಿ ತಂಡದ ಮೊತ್ತವನ್ನು ಹೆಚ್ಚಿಸಲು ವಿಫಲರಾದರು. ಜುಲೈ 19ರಂದು ಲಾರ್ಡ್ಸ್‌ನಲ್ಲಿ ಸರಣಿಯ ನಿರ್ಣಾಯಕ ಮೂರನೇ ಏಕದಿನ ಪಂದ್ಯ ನಡೆಯಲಿದ್ದು, ಸರಣಿ ಗೆಲ್ಲಲು ಭಾರತ ತಂಡ ತನ್ನ ಪ್ಲೇಯಿಂಗ್ XIನಲ್ಲಿ 3 ಬದಲಾವಣೆ ಮಾಡಬೇಕಾದ ಅಗತ್ಯವಿದೆ.
ಆರ್‌ಸಿಬಿಯನ್ನು ತೊರೆದು ಇಂಗ್ಲೆಂಡ್ ಹೆಡ್ ಕೋಚ್ ಹುದ್ದೆಗೆ ಸೇರಲ್ಲ ಎಂದ ಆಂಡಿ ಫ್ಲವರ್!
ಮೂರನೇ ಏಕದಿನ ಪಂದ್ಯಕ್ಕೆ ಭಾರತ ತಂಡದಲ್ಲಿ 3 ಬದಲಾವಣೆ ಅಗತ್ಯ
1.ಇಶಾನ್ ಕಿಶನ್ ಬದಲು ಕೆಎಲ್ ರಾಹುಲ್
ಎರಡನೇ ಪಂದ್ಯದಲ್ಲಿ ಅನಾರೋಗ್ಯದ ಕಾರಣ ವಿಶ್ರಾಂತಿ ಪಡೆದಿದ್ದ ಕೆಎಲ್ ರಾಹುಲ್ ಅವರು ಮೂರನೇ ಪಂದ್ಯದಲ್ಲಿ ಕಣಕ್ಕೆ ಇಳಿಯಬೇಕು. ಇಶಾನ್ ಕಳೆದ ಪಂದ್ಯದಲ್ಲಿ ಸಿಕ್ಕಿದ್ದ ಅವಕಾಶವನ್ನು ಕೈ ಚೆಲ್ಲಿಕೊಂಡಿದ್ದರು. ಅವರು 8 ಎಸೆತಗಳಲ್ಲಿ ಒಂದು ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಹಾಗಾಗಿ ಲಾರ್ಡ್ಸ್ ಪಂದ್ಯದಲ್ಲಿ ಕನ್ನಡಿಗ ರಾಹುಲ್ ಆಡುವುದು ಬಹುತೇಕ ಖಚಿತ.
ಕೆಎಲ್ ರಾಹುಲ್ ಕೂಡ ಮೊದಲನೇ ಏಕದಿನ ಪಂದ್ಯದಲ್ಲಿ ವಿಫಲರಾಗಿದ್ದರು. ಅವರು ಕೇವಲ ಒಂದು ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇದಕ್ಕೂ ಮುನ್ನ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿಯೂ ಅವರಿಂದ ದೊಡ್ಡ ಇನಿಂಗ್ಸ್ ಬಂದಿರಲಿಲ್ಲ. ಆದರೆ, ಮೂರನೇ ಪಂದ್ಯದಲ್ಲಿ ರಾಹುಲ್ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.
2.ವಾಷಿಂಗ್ಟನ್ ಸುಂದರ್ ಬದಲು ಕುಲ್ದೀಪ್ ಯಾದವ್
ಭಾರತಕ್ಕೆ ಮತ್ತೊಂದು ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದ್ದದ್ದು ಬೌಲಿಂಗ್ ವಿಭಾಗ. ವಾಷಿಂಗ್ಟನ್ ಸುಂದರ್ ಗಾಯಗೊಂಡ ಕಾರಣ ತಂಡದ ಬೌಲಿಂಗ್ ಯೋಜನೆ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಆಫ್‌ಸ್ಪಿನ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರ ತೊಡೆಯ ಭಾಗಕ್ಕೆ ಬ್ಯಾಂಡೇಜ್ ಕಟ್ಟಿರುವುದು ಕಂಡುಬಂದಿತ್ತು. ಗಾಯದ ಕಾರಣ ಅವರು ಭಾರತದ ಬೌಲಿಂಗ್ ಇನಿಂಗ್ಸ್‌ನಲ್ಲಿ ಮೈದಾನಕ್ಕಿಳಿಯಲೇ ಇಲ್ಲ.
ಇದರಿಂದಾಗಿ ನಾಯಕ ಶುಭಮನ್ ಗಿಲ್, ಐದನೇ ಬೌಲರ್ ಆಗಿ ಅರೆಕಾಲಿಕ ಬೌಲರ್ ಶಿವಂ ದುಬೆ ಅವರ ಮೇಲೆಯೇ ಅವಲಂಬಿತರಾಗಬೇಕಾಯಿತು. ಸುಂದರ್ ಅನುಪಸ್ಥಿತಿಯಿಂದ ಭಾರತದ ಬೌಲಿಂಗ್ ಸಂಯೋಜನೆಯ ಮೇಲೆ ಗಮನಾರ್ಹ ಪರಿಣಾಮ ಬೀರಿತು. ಹಾಗಾಗಿ ಮೂರನೇ ಪಂದ್ಯದಲ್ಲಿ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರಿಗೆ ಅವಕಾಶ ನೀಡಬೇಕಾಗುತ್ತದೆ.
ಲಾರ್ಡ್ಸ್‌ನಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸಿ ಕಮ್‌ಬ್ಯಾಕ್ ಮಾಡಲಿದ್ದಾರೆಂದ ಪಾರ್ಥಿವ್ ಪಟೇಲ್!
3.ಗುರ್ನೂರ್ ಬ್ರಾರ್ ಬದಲು ಅರ್ಷದೀಪ್ ಸಿಂಗ್
ಗುರ್ನೂರ್ ಬ್ರಾರ್ ಭಾರತದ ಉದಯೋನ್ಮುಖ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿ ಗಮನ ಸೆಳೆದಿದ್ದು, ಏಕದಿನ ತಂಡದಲ್ಲಿ ನಿರಂತರವಾಗಿ ಅವಕಾಶ ಪಡೆಯುತ್ತಿದ್ದಾರೆ. ಪಂಜಾಬ್ ಮೂಲದ ಈ ವೇಗಿ ಮೊದಲ ಎರಡು ಪಂದ್ಯಗಳಲ್ಲಿ ಒಟ್ಟು ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದರೆ, ಎರಡೂ ಪಂದ್ಯಗಳಲ್ಲಿ ಬ್ರಾರ್ ಓವರ್‌ಗೆ ಆರು ರನ್‌ಗಳಿಗಿಂತ ಹೆಚ್ಚು ಎಕಾನಮಿ ದರದಲ್ಲಿ ಬೌಲಿಂಗ್ ಮಾಡಿದ್ದು, ಅಗತ್ಯಕ್ಕಿಂತ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ, ನಿರ್ಣಾಯಕ ಮೂರನೇ ಏಕದಿನ ಪಂದ್ಯದಲ್ಲಿ ಬ್ರಾರ್ ಬದಲಿಗೆ ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರನ್ನು ಅಂತಿಮ ಹನ್ನೊಂದರಲ್ಲಿ ಸೇರಿಸುವುದು ಸೂಕ್ತ ನಿರ್ಧಾರವಾಗಬಹುದು. ಅರ್ಷದೀಪ್ ಅವರ ಎಡಗೈ ಬೌಲಿಂಗ್ ಕೋನವು ಭಾರತದ ದಾಳಿಗೆ ಹೊಸ ಆಯಾಮ ನೀಡಲಿದೆ.