ʻಸಿಎಸ್‌ಕೆ ತಂಡದಲ್ಲಿದ್ದಾಗ ಈ ವೇಗಿ ನನಗೆ ಬೌಲ್ ಮಾಡಲು ನಿರಾಕರಿಸಿದ್ದರುʼ: ಚೇತೇಶ್ವರ್ ಪೂಜಾರ!
ಭಾರತ ಟೆಸ್ಟ್ ತಂಡದ ಮಾಜಿ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಅವರು ಆಸಕ್ತಿದಾಯಕ ಸಂಗತಿಯೊಂದನ್ನು ನೆನಪಿಸಿಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದಾಗ, ತಮಗೆ ಬೌಲ್ ಮಾಡಲು ನಿರಾಕರಿಸಿದ್ದ ವೇಗದ ಬೌಲರ್ ಅನ್ನು ಪೂಜಾರ ರಿವೀಲ್ ಮಾಡಿದ್ದಾರೆ. ಆಸ್ಟ್ರೇಲಿಯಾದ ವೇಗಿ ಯಾರೆಂದು ಇಲ್ಲಿ ವಿವರಿಸಲಾಗಿದೆ.
ಜಾಶ್ ಹೇಝಲ್‌ವುಡ್ ಬಗ್ಗೆ ಆಸಕ್ತದಾಯಕ ಸಂಗತಿ ರಿವೀಲ್ ಮಾಡಿದ ಪೂಜಾರ. -
ನವದೆಹಲಿ: ಭಾರತ ಟೆಸ್ಟ್ ತಂಡದ ಮಾಜಿ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ (Cheteshwar Pujara) ಅವರು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯ ವೇಳೆ ಸಂಭವಿಸಿದ್ದ ಅಚ್ಚರಿಯ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದಾಗ ತಮಗೆ ಬೌಲ್ ಮಾಡಲು ನಿರಾಕರಿಸಿದ್ದ ವೇಗದ ಬೌಲರ್ ಅನ್ನು ಪೂಜಾರ ರಿವೀಲ್ ಮಾಡಿದ್ದಾರೆ. ಆಸ್ಟ್ರೇಲಿಯಾ ತಂಡದ ವೇಗಿ ಹಾಗೂ ಪ್ರಸ್ತುತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಜಾಶ್ ಹೇಝಲ್‌ವುಡ್ (Josh Hazlewood), ಸಿಎಸ್‌ಕೆ ತಂಡದಲ್ಲಿದ್ದಾಗ ತನಗೆ ನೆಟ್ಸ್‌ನಲ್ಲಿ ಬೌಲ್ ಮಾಡಲು ನಿರಾಕರಿಸಿದ್ದರು ಎಂದು ಬಲಗೈ ಬ್ಯಾಟ್ಸ್‌ಮನ್ ಹೇಳಿಕೊಂಡಿದ್ದಾರೆ.
ಚೇತೇಶ್ವರ್ ಪೂಜಾರ ಅವರು ಭಾರತ ಟೆಸ್ಟ್ ತಂಡದಲ್ಲಿ ದೀರ್ಘಾವಧಿ ಆಡಿದ್ದಾರೆ. ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಬಳಿಕ ಭಾರತ ಟೆಸ್ಟ್ ತಂಡದಲ್ಲಿ ಪೂಜಾರ ವಿಶೇಷ ಬ್ಯಾಟ್ಸ್‌ಮನ್ ಆಗಿದ್ದರು. ವಿಶೇಷವಾಗಿ 2018-19 ಹಾಗೂ 2020-21ರ ಸಾಲಿನಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಭಾರತ ತಂಡ, ಸತತ ಎರಡು ಬಾರಿ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆಲುವಿನಲ್ಲಿ ಚೇತೇಶ್ವರ್ ಪೂಜಾರ ಮಹತ್ವದ ಪಾತ್ರವನ್ನು ವಹಿಸಿದ್ದರು. ಈ ಎರಡೂ ಸರಣಿಗಳಲ್ಲಿ ವೇಗದ ಬೌಲಿಂಗ್ ಕಂಡೀಷನ್ಸ್‌ನಲ್ಲಿ ಪೂಜಾರ ಅವರು ಆಸೀಸ್ ವೇಗದ ಬೌಲಿಂಗ್ ದಾಳಿಯ ಎದುರು ಕಲ್ಲು ಬಂಡೆಯಂತೆ ಕ್ರೀಸ್‌ನಲ್ಲಿ ನಿಂತಿದ್ದರು.
ತಮ್ಮ ಕ್ರಿಕೆಟ್ ವೃತ್ತಿ ಜೀವನದ ಅತ್ಯಂತ ಕಠಿಣ ಅವಧಿಯನ್ನು ಬಹಿರಂಗಪಡಿಸಿದ ಅಜಿಂಕ್ಯ ರಹಾನೆ!
ಈ ವೇಳೆ ಪೂಜಾರ ಅವರನ್ನು ಔಟ್ ಮಾಡಲು ಆಸೀಸ್ ವೇಗಿಗಳು ಸಾಕಷ್ಟು ಶ್ರಮಿಸಿದ್ದರು. ಆದರೂ ಅವರನ್ನು ಔಟ್ ಮಾಡಲು ಸಾಧ್ಯವಾಗಿರಲಿಲ್ಲ. ಈ ಎರಡೂ ಆವೃತ್ತಿಯಲ್ಲಿ ಆಸ್ಟ್ರೇಲಿಯಾ ತಂಡದ ಬೌಲರ್‌ಗಳಿಗೆ ಪೂಜಾರ ಸಾಕಷ್ಟು ಕಾಟ ನೀಡಿದ್ದರು. ಇದಾದ ಬಳಿಕ ಚೇತೇಶ್ವರ್ ಪೂಜಾರ ಅವರನ್ನು ಐಪಿಎಲ್ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿತ್ತು. ಈ ವೇಳೆ ಸಿಎಸ್‌ಕೆ ತಂಡದಲ್ಲಿ ಪೂಜಾರ ಹಾಗೂ ಜಾಶ್ ಹೇಝಲ್‌ವುಡ್ ಡ್ರೆಸ್ಸಿಂಗ್ ರೂಂ ಅನ್ನು ಹಂಚಿಕೊಂಡಿದ್ದರು.
ನೆಟ್ಸ್‌ನಲ್ಲಿ ಜಾಶ್ ಹೇಝಲ್‌ವುಡ್ ಬೌಲ್ ಮಾಡಲು ನಿರಾಕರಿಸಿದ್ದರು: ಪೂಜಾರ
"2018 ಮತ್ತು 2021ರಲ್ಲಿ ನಡೆದ ಆಸ್ಟ್ರೇಲಿಯಾ ಸರಣಿಗಳ ವೇಳೆ ನಾನು ಜಾಶ್ ಹೇಝಲ್‌ವುಡ್ ಅವರ ಬೌಲಿಂಗ್‌ನಲ್ಲಿ ಸಾಕಷ್ಟು ಬಾರಿ ಆಡಿದ್ದೆ. ನಂತರ ನನಗೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದಲ್ಲಿ ಸ್ಥಾನ ಸಿಕ್ಕಿತು. ನಾನು ಮೊದಲ ಬಾರಿ ನೆಟ್ಸ್‌ನಲ್ಲಿ ಬ್ಯಾಟಿಂಗ್ ನಡೆಸಬೇಕೆಂದು ಹೋದಾಗ ಹೇಝಲ್‌ವುಡ್ ನನಗೆ ಬೌಲ್ ಮಾಡಲು ನಿರಾಕರಿಸಿದರು. ಅವರು, 'ನಾನು ಅವರಿಗೆ ಬೌಲ್ ಮಾಡುವುದಿಲ್ಲ' ಎಂದು ಹೇಳಿದ್ದರು. ಅವರು ನನ್ನ ತಂಡದ ಸಹ ಆಟಗಾರರಾಗಿದ್ದರೂ ಕೂಡ ನನಗೆ ಬೌಲ್ ಮಾಡಲು ಒಪ್ಪಲಿಲ್ಲ," ಎಂದು ಅವರು ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಭಾರತೀಯ ಕ್ರಿಕೆಟ್‌ನಲ್ಲಿ ಅಭಿಮನ್ಯು ಈಶ್ವರನ್‌ಗೆ ಅನ್ಯಾಯವಾಗುತ್ತಿದೆ ಎಂದ ಆಕಾಶ್ ಚೋಪ್ರಾ!
ಶಾರೂಖ್ ಖಾನ್ ಭೇಟಿಯಾದ ಕ್ಷಣ ನೆನೆದ ಪೂಜಾರ
ಭಾರತ ಪರ 103 ಟೆಸ್ಟ್ ಪಂದ್ಯಗಳನ್ನು ಆಡಿರುವ ಪೂಜಾರ, ತಮ್ಮ ಆರಂಭಿಕ ಐಪಿಎಲ್ ದಿನಗಳನ್ನು ನೆನಪಿಸಿಕೊಳ್ಳುತ್ತಾ ಮತ್ತೊಂದು ಆಸಕ್ತಿದಾಯಕ ಘಟನೆ ಹಂಚಿಕೊಂಡಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಸಹ ಮಾಲೀಕ ಹಾಗೂ ನಟ-ನಿರ್ಮಾಪಕ ಶಾರುಖ್ ಖಾನ್ ಅವರನ್ನು ಭೇಟಿಯಾದಾಗ ತಮಗೆ "ಫ್ಯಾನ್‌ಬಾಯ್ ಕ್ಷಣ" ಅನುಭವವಾಗಿತ್ತು ಎಂದು ಅವರು ಹೇಳಿದ್ದಾರೆ.
ಆದರೆ, ತಂಡದ ವಾತಾವರಣ ಮತ್ತು ಕ್ರಿಕೆಟ್‌ನಲ್ಲಿ ತಮ್ಮ ಬೆಳವಣಿಗೆಯೇ ಆಟಗಾರನ ಪ್ರಮುಖ ಆದ್ಯತೆಯಾಗಬೇಕು. ಸೆಲೆಬ್ರಿಟಿಗಳ ಉಪಸ್ಥಿತಿಗಿಂತ ತಂಡದ ಸಂಸ್ಕೃತಿ ಹಾಗೂ ಆಟದ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಪೂಜಾರ ಅಭಿಪ್ರಾಯಪಟ್ಟಿದ್ದಾರೆ.
"ನಾನು ಕೆಕೆಆರ್ ತಂಡದೊಂದಿಗೆ ಐಪಿಎಲ್ ಪಯಣ ಆರಂಭಿಸಿದೆ. ಆಗ ಶಾರುಖ್ ಖಾನ್ ತಂಡದ ಮಾಲೀಕರಾಗಿದ್ದರು. ಅವರನ್ನು ಮೊದಲ ಬಾರಿ ಭೇಟಿಯಾದಾಗ ಖಂಡಿತವಾಗಿಯೂ ನನಗೆ ಫ್ಯಾನ್‌ಬಾಯ್ ಕ್ಷಣದ ಅನುಭವವಾಯಿತು. ಆದರೆ ಕ್ರಿಕೆಟ್ ಬಗ್ಗೆ ಯೋಚಿಸುವಾಗ, 'ಶಾರುಖ್ ಖಾನ್ ಮಾಲೀಕರಾಗಿದ್ದಾರೆ, ಹಾಗಾಗಿ ನಾನು ಇಲ್ಲೇ ಇರಬೇಕು' ಎಂದು ಯೋಚಿಸಲು ಸಾಧ್ಯವಿಲ್ಲ. ಫ್ರಾಂಚೈಸಿ ಸೃಷ್ಟಿಸುವ ಉತ್ತಮ ವಾತಾವರಣ, ದಿಗ್ಗಜ ಆಟಗಾರರಿಂದ ಕಲಿಯುವ ಅವಕಾಶ, ಅವರೊಂದಿಗೆ ಆಡುತ್ತಾ ಅನುಭವ ಪಡೆಯುವುದು ಮತ್ತು ನಮ್ಮ ಕ್ರಿಕೆಟ್ ಅನ್ನು ಸುಧಾರಿಸಿಕೊಳ್ಳುವುದು—ಇವೇ ಮುಖ್ಯವಾಗುತ್ತವೆ," ಎಂದು ಚೇತೇಶವರ್ ಪೂಜಾರ ತಿಳಿಸಿದ್ದಾರೆ.