ʻನಾವು 180 ರನ್ ಕಲೆ ಹಾಕಿದ್ರೆ ಕಥೆ ಬೇರೆ ಇರುತ್ತಿತ್ತುʼ: ಫೈನಲ್ ಸೋಲಿಗೆ ಕಾರಣ ತಿಳಿಸಿದ ಶುಭಮನ್ ಗಿಲ್!
Shubman Gill Statement: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯದಲ್ಲಿ 5 ವಿಕೆಟ್‌ಗಳ ಸೋಲು ಅನುಭವಿಸುವ ಮೂಲಕ ಗುಜರಾತ್ ಟೈಟನ್ಸ್ ಎರಡನೇ ಟ್ರೋಫಿ ಗೆಲ್ಲುವ ಅವಕಾಶವನ್ನು ಕೈ ಚೆಲ್ಲಿಕೊಂಡಿತು. ಪಂದ್ಯದ ಬಳಿಕ ಜಿಟಿ ನಾಯಕ ಶುಭಮನ್ ಗಿಲ್, ತಮ್ಮ ತಂಡದ ಸೋಲಿಗೆ ಬಲವಾದ ಕಾರಣ ಏನೆಂದು ಬಹಿರಂಗಪಡಿಸಿದ್ದಾರೆ.
ಗುಜರಾತ್ ಟೈಟನ್ಸ್ ಸೋಲಿಗೆ ಕಾರಣ ತಿಳಿಸಿದ ಶುಭಮನ್ ಗಿಲ್. -
ಅಹಮದಬಾದ್: ಕಠಿಣ ಹೋರಾಟ ನೀಡಿದ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿರುದ್ಧ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ 5 ವಿಕೆಟ್‌ಗಳಿಂದ ಸೋಲು ಅನುಭವಿಸಿತು. ಆ ಮೂಲಕ 2022ರ ಬಳಿಕ ಎರಡನೇ ಟ್ರೋಫಿ ಗೆಲ್ಲುವ ಜಿಟಿ ತಂಡದ ಕನಸು ಭಗ್ನವಾಯಿತು. ಸೋಲಿನ ಬಳಿಕ ಗುಜರಾತ್ ತಂಡದ ನಾಯಕ ಶುಭಮನ್ ಗಿಲ್ (Shubman Gill) ಹಲವು ಅಂಶಗಳನ್ನು ಹಂಚಿಕೊಂಡಿದ್ದಾರೆ. ಈ ಪಂದ್ಯದಲ್ಲಿ ನಾವು 180 ರಿಂದ 190 ರನ್‌ಗಳನ್ನು ಕಲೆ ಹಾಕಿದ್ದರೆ, ಪಂದ್ಯದ ಫಲಿತಾಂಶ ವಿಭಿನ್ನವಾಗಿರುತ್ತಿತ್ತು ಎಂದು ಹೇಳಿದ್ದಾರೆ.
ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನವನ್ನು ತೋರುವ ಮೂಲಕ ಗುಜರಾತ್ ಟೈಟನ್ಸ್ ತಂಡ ಐದು ವರ್ಷಗಳ ಬಳಿಕ ಎರಡನೇ ಬಾರಿ ಫೈನಲ್‌ಗೆ ಪ್ರವೇಶ ಮಾಡಿತ್ತು. ಆದರೆ, ಫೈನಲ್ ಪಂದ್ಯದಲ್ಲಿ ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳಾದ ಶುಭಮನ್ ಗಿಲ್, ಸಾಯಿ ಸುದರ್ಶನ್ ಹಾಗೂ ಜೋಸ್ ಬಟ್ಲರ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಕಾರಣ ಜಿಟಿ, ಆರ್‌ಸಿಬಿಗೆ ಕೇವಲ 156 ರನ್‌ಗಳ ಸಾಧಾರಣ ಗುರಿಯನ್ನು ನೀಡಿತ್ತು. ವಿರಾಟ್ ಕೊಹ್ಲಿ ಅಜೇಯ 75 ರನ್ ಗಳಿಸಿ ಆರ್‌ಸಿಬಿ ತಂಡವನ್ನು ಇನ್ನೂ ಎರಡು ಓವರ್‌ಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿಸಿದರು.
ಫೈನಲ್ ಪಂದ್ಯದ ಸೋಲಿನ ಬೇಸರದಲ್ಲಿದ್ದರೂ ಆರ್‌ಸಿಬಿಗೆ ಅಭಿನಂದನೆ ಸಲ್ಲಿಸಿ ಫ್ಯಾನ್ಸ್ ಹೃದಯ ಗೆದ್ದ ಶುಭಮನ್ ಗಿಲ್!
ಪಂದ್ಯದ ಬಳಿಕ ಮಾತನಾಡಿದ ಶುಭಮನ್ ಗಿಲ್, "ಒಂದು ವೇಳೆ ನಾವು 180 ರಿಂದ 190 ರನ್‌ಗಳನ್ನು ಕಲೆ ಹಾಕಿದ್ದರೆ, ಪಂದ್ಯ ಇನ್ನಷ್ಟು ಉತ್ತಮವಾಗಿರುತ್ತಿತ್ತು. ಪಿಚ್ ಎರಡು ಮುಖಗಳನ್ನು ಹೊಂದಿತ್ತು. ಆರಂಭಿಕ 3-4 ಓವರ್‌ಗಳಲ್ಲಿ ಪಿಚ್ ಫಾಸ್ಟ್ ಬೌಲರ್‌ಗಳಿಗೆ ಸ್ವಲ್ಪ ಚಲನೆಯನ್ನು ನೀಡುತ್ತದೆ ಎಂಬುದನ್ನು ನಾವು ಇಲ್ಲಿ ಆಡಿದಾಗ ನೋಡಿದ್ದೇವೆ. ಆರಂಭದಲ್ಲಿ ನಾವು ಎರಡು ವಿಕೆಟ್‌ಗಳನ್ನು ಕಳೆದುಕೊಂಡೆವು, ಇದರಿಂದ ನಮಗೆ ಮಧ್ಯಮ ಕ್ರಮಾಂಕದಲ್ಲಿ ಆವೇಗವನ್ನು ಕಳೆದುಕೊಂಡೆವು. ಹೌದು ನಾವು ಫೈನಲ್ ಪಂದ್ಯವನ್ನು ಆಡುತ್ತಿದ್ದೇನೆ. ಇಲ್ಲಿ 150-160 ರನ್ ಗುರಿ ನೀಡಿದರೂ ಪವರ್‌ಪ್ಲೇನಲ್ಲಿ ಎರಡು ವಿಕೆಟ್ ಪಡೆದರೆ, ನಾವು ಪಂದ್ಯದಲ್ಲಿ ಉಳಿಯುತ್ತೇವೆ ಎಂಬುದು ಗೊತ್ತಿತ್ತು," ಎಂದು ಹೇಳಿದ್ದಾರೆ.
IPL 2026: ಆರ್‌ಸಿಬಿ ಎದುರು ಫೈನಲ್‌ಗೂ ಮೊದಲೇ ಸೋತಿದ್ದ ಗುಜರಾತ್ ಟೈಟನ್ಸ್!
"ನಾವು ನಿರಂತರವಾಗಿ ಚರ್ಚೆ ಮಾಡುತ್ತಾ, ನಮ್ಮನ್ನು ನಾವು ಮತ್ತಷ್ಟು ಉತ್ತೇಜಿಸುತ್ತಾ, ವಿವಿಧ ವಿಭಾಗಗಳಲ್ಲಿ ಸವಾಲುಗಳನ್ನು ಸ್ವೀಕರಿಸುತ್ತಾ, ಆ ಸಣ್ಣ 5 ಶೇಕಡಾ ಅಂಶಗಳಲ್ಲಿಯೂ ಸುಧಾರಣೆ ಸಾಧಿಸಲು ಪ್ರಯತ್ನಿಸುತ್ತಿದ್ದೇವೆ. ಈ ಬಾರಿ ನಾವು ಗುರಿ ತಲುಪಲು ಸಾಧ್ಯವಾಗಲಿಲ್ಲ. ಆದರೆ ಯಾವಾಗಲೂ ಸುಧಾರಿಸಬೇಕಾದ ಕೆಲವು ಅಂಶಗಳು ಇರುತ್ತವೆ. ಟ್ರೋಫಿ ಗೆದ್ದಿದ್ದರೂ ಸಹ, ತಂಡವಾಗಿ ನಾವು ಇನ್ನೂ ಕೆಲಸ ಮಾಡಬೇಕಾದ ಹಲವಾರು ವಿಷಯಗಳಿವೆ ಎಂದು ಭಾವಿಸಿದ್ದೇವೆ," ಎಂದು ಅವರು ತಮ್ಮ ಮಾತು ಮುಗಿಸಿದರು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಗುಜರಾತ್ ಟೈಟನ್ಸ್ ತಂಡ, ವಾಷಿಂಗ್ಟನ್ ಸುಂದರ್ ಅವರ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 155 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ, ವಿರಾಟ್ ಕೊಹ್ಲಿ (75* ರನ್) ಅವರ ಅರ್ಧಶತಕದ ಬಲದಿಂದ 18 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿ ಗೆದ್ದು ಬೀಗಿತ್ತು. ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.