SMAT: ಮುಂಬೈ ವಿರುದ್ಧ 3 ವಿಕೆಟ್ ಕಿತ್ತು ಬಿಸಿಸಿಐಗೆ ಸಂದೇಶ ರವಾನಿಸಿದ ಮೊಹಮ್ಮದ್ ಸಿರಾಜ್!
ಬಿಸಿಸಿಐ ಆಯ್ಕೆ ಸಮಿತಿ ಇತ್ತೀಚಿನ ದಿನಗಳಲ್ಲಿ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಟಿ20ಐ ಕ್ರಿಕೆಟ್‌ನಿಂದ ದೂರ ಇಡುತ್ತಿದೆ. ಆದರೆ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಸೂಪರ್ ಲೀಗ್ ಪಂದ್ಯದಲ್ಲಿ ಅವರು ಮುಂಬೈ ವಿರುದ್ಧ ಮಾರಕ ಬೌಲಿಂಗ್ ದಾಳಿ ನಡೆಸಿ ಮೂರು ವಿಕೆಟ್ ಕಿತ್ತಿದ್ದಾರೆ. ಆ ಮೂಲಕ ಸೆಲೆಕ್ಟರ್ಸ್‌ಗೆ ಸಂದೇಶ ರವಾನಿಸಿದ್ದಾರೆ.
ಮುಂಬೈ ವಿರುದ್ಧ 3 ವಿಕೆಟ್ ಕಿತ್ತ ಮೊಹಮ್ಮದ್ ಸಿರಾಜ್. -
ಮುಂಬೈ: ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಸೈಯದ್ ಮುಷ್ತಾಕ್ ಅಲಿ ಟ್ರೋಫಿ (Syed Mushtaq Ali Trophy) ಟೂರ್ನಿಯ ಸೂಪರ್ ಲೀಗ್ ಪಂದ್ಯದಲ್ಲಿ ಮುಂಬೈ ವಿರುದ್ಧ ಅದ್ಭುತ ಪ್ರದರ್ಶನ ನೀಡಿ 3 ವಿಕೆಟ್ ಪಡೆದಿದ್ದಾರೆ. ಆ ಮೂಲಕ ರಾಷ್ಟ್ರೀಯ ಟಿ20 ತಂಡದಿಂದ ಕಡೆಗಣಿಸಿದ್ದ ಬಿಸಿಸಿಐ ಆಯ್ಕೆ ಸಮಿತಿಗೆ ಬಲವಾದ ಸಂದೇಶ ರವಾನಿಸಿದ್ದಾರೆ. ಪ್ರಸ್ತುತ ಟೂರ್ನಿಯಲ್ಲಿ ಹೈದರಾಬಾದ್ ತಂಡದ ಪರ ಆಡುತ್ತಿರುವ ಸಿರಾಜ್ ಅವರನ್ನು ಆಯ್ಕೆ ಸಮಿತಿ ಇತ್ತೀಚಿನ ದಿನಗಳಲ್ಲಿ ಭಾರತ ಟಿ20ಐ ಹಾಗೂ ಏಕದಿನ ತಂಡದಿಂದ ಕಡೆಗಣಿಸುತ್ತಿದೆ. ಆದರೆ, ಅವರು ಸೀಮಿತ ಓವರ್‌ಗಳ ಸ್ವರೂಪದಲ್ಲಿಯೂ ಪರಿಣಾಮಕಾರಿಯಾಗಿ ಇರುವ ಬಗ್ಗೆ ಸಾಬೀತುಪಡಿಸಿದ್ದಾರೆ.
ಸೂಪರ್‌ಲೀಗ್ ಹಂತದ ಪಂದ್ಯದಲ್ಲಿ ಹೈದರಾಬಾದ್ ಹಾಗೂ ಮುಂಬೈ ತಂಡ ಸೆಣೆಸಾಟ ನಡೆಸಿದವು. ಸಿರಾಜ್ ಅವರ ಮಾರಕ ಬೌಲಿಂಗ್ ದಾಳಿಯ ಪರಿಣಾಮದಿಂದಾಗಿ ಮುಂಬೈ ತಂಡ ಕೇವಲ 131 ರನ್‌ಗಳನ್ನಷ್ಟೇ ಕಲೆಹಾಕಲು ಶಕ್ತವಾಯಿತು. ಸಿರಾಜ್ ಅವರು ಎಸೆದ 17ನೇ ಓವರ್‌ನಲ್ಲಿ ಸೂರ್ಯಾಂಶ್ ಶೆಡ್ಜ್ ಹಾಗೂ ತಂಡದ ನಾಯಕ ಶಾರ್ದುಲ್ ಠಾಕೂರ್ ಅವರ ವಿಕೆಟ್ ಪಡೆದು ಡೆತ್ ಓವರ್‌ನಲ್ಲಿ ಕಡಿವಾಣ ಹಾಕಿದರು. ಬಳಿಕ ತನುಷ್ ಕೋಟ್ಯಾನ್ ಅವರ ವಿಕೆಟ್ ಕಬಳಿಸಿದರು. ಇದರಿಂದಾಗಿ ಪಂದ್ಯದಲ್ಲಿ ಮುಂಬೈ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ವಿಫಲವಾಯಿತು.
IND vs SA: ಗಿಲ್ ಔಟ್, ಸಂಜು ಇನ್? ಮೂರನೇ ಟಿ20ಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ!
132 ರನ್‌ಗಳ ಸಾಧರಣ ಗುರಿ ಬೆನ್ನತ್ತಿದ ಹೈದರಾಬಾದ್ ತಂಡ ಕೇವಲ 11.5 ಓವರ್‌ಗಳಲ್ಲೇ ಗೆಲುವಿನ ನಗೆ ಬೀರಿತು. ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಮೊಹಮ್ಮದ್ ಸಿರಾಜ್ ಅವರನ್ನ ನಿರ್ಲಕ್ಷಿಸುತ್ತಿರುವ ಆಯ್ಕೆ ಸಮಿತಿ
ಮೊಹಮ್ಮದ್ ಸಿರಾಜ್ ಅವರು ಕೊನೆಯ ಬಾರಿ 2024ರ ಟಿ20 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು ಮತ್ತು ಅದೇ ವರ್ಷದ ಜುಲೈನಲ್ಲಿ ಶ್ರೀಲಂಕಾ ವಿರುದ್ಧ ನಡೆದಿದ್ದ ಟಿ20 ಸರಣಿಯಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಆ ಬಳಿಕ ಅರ್ಷದೀಪ್ ಅವರಿಗೆ ಸ್ಥಾನ ನೀಡಿದ ಹಿನ್ನೆಲೆಯಲ್ಲಿ ಆಯ್ಕೆ ಸಮಿತಿ ಮೊಹಮ್ಮದ್ ಸಿರಾಜ್ ಅವರನ್ನು ನಿರಂತರವಾಗಿ ತಂಡದಿಂದ ಹೊರಗಿಡುತ್ತಿದೆ. 31ರ ವರ್ಷದ ವೇಗಿ ಸಿರಾಜ್ ಈವರೆಗೆ ಭಾರತ ತಂಡದ ಪರ 16 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದು, 14 ವಿಕೆಟ್ ಕಬಳಿಸಿದ್ದಾರೆ. ಅವರ ಅಂತಾರಾಷ್ಟ್ರೀಯ ಟಿ20 ವೃತ್ತಿ ಜೀವನದಲ್ಲಿ 4/17 ಅತ್ಯುತ್ತಮ ಸ್ಪೆಲ್ ಆಗಿದೆ.
IND vs SA: ಕ್ವಿಂಟನ್ ಡಿ ಕಾಕ್ ಅಬ್ಬರ, ಭಾರತ ತಂಡಕ್ಕೆ ತಿರುಗೇಟು ನೀಡಿದ ದಕ್ಷಿಣ ಆಫ್ರಿಕಾ!
ಮೊಹಮ್ಮದ್ ಸಿರಾಜ್ ಈ ಬಾರಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಮೊದಲ ಪಂದ್ಯದಲ್ಲಿ ಉತ್ತರ ಪ್ರದೇಶದ ವಿರುದ್ಧ 15 ರನ್ ನೀಡಿ ಒಂದು ವಿಕೆಟ್ ಕಬಳಿಸಿದ್ದರು. ಇತ್ತೀಚಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.
6️⃣ balls, 2️⃣ wickets, sirf 1️⃣ Mohammed Siraj! ⚡
— Gujarat Titans (@gujarat_titans) December 12, 2025
pic.twitter.com/T9elDsnu9B
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ವೇಳಾಪಟ್ಟಿ
1.ಭಾರತ vs ನ್ಯೂಜಿಲೆಂಡ್- ಜನವರಿ 11ರಂದು ವಡೋದರ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ.
2.ಭಾರತ vs ನ್ಯೂಜಿಲೆಂಡ್- ಜನವರಿ 18ರಂದು ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ಎರಡನೇ ಏಕದಿನ ಪಂದ್ಯ ನಡೆಯಲಿದೆ.
3.ಭಾರತ vs ನ್ಯೂಜಿಲೆಂಡ್- ಜನವರಿ 23ರಂದು ರಾಯ್ಪುರದ ಶಾಹಿದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯ ನಡೆಯಲಿದೆ.