ʻನಿಮ್ಮ ನೆಚ್ಚಿನ ಆಟಗಾರರಿಗೆ ಚಾನ್ಸ್ ಕೊಟ್ಟಿದ್ದೀರಿʼ: ಗೌತಮ್ ಗಂಭೀರ್ ವಿರುದ್ಧ ಎಸ್ ಬದ್ರಿನಾಥ್ ಕಿಡಿ!
ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿಯ ಭಾರತ ತಂಡದಲ್ಲಿ ವಾಷಿಂಗ್ಟನ್ ಸುಂದರ್ ಹಾಗೂ ನಿತೀಶ್‌ಕುಮಾರ್ ರೆಡ್ಡಿ ಅವರಿಗೆ ಅವಕಾಶ ನೀಡಿದ ಕಾರಣ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ವಿರುದ್ಧ ಮಾಜಿ ಕ್ರಿಕೆಟಿಗ ಸುಬ್ರಮಣ್ಯಮ್ ಬದ್ರಿನಾಥ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತ ಟಿ20 ತಂಡದ ಆಯ್ಕೆಯನ್ನು ಪ್ರಶ್ನಿಸಿದ ಎಸ್ ಬದ್ರಿನಾಥ್. -
ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ಮುಂಬರುವ 3 ಪಂದ್ಯಗಳ ಟಿ20ಐ ಸರಣಿಯ (IND vs AFG) ಭಾರತ ತಂಡದಲ್ಲಿ ವಾಷಿಂಗ್ಟನ್ ಸುಂದರ್ ಹಾಗೂ ನಿತೀಶ್‌ಕುಮಾರ್ ರೆಡ್ಡಿ ಅವರಿಗೆ ಸ್ಥಾನ ನೀಡಿದ್ದಕ್ಕೆ ಮಾಜಿ ಕ್ರಿಕೆಟಿಗ ಸುಬ್ರಮಣ್ಯಮ್ ಬದ್ರಿನಾಥ್ (S Badrinath) ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ನೆಚ್ಚಿನ ಆಟಗಾರರಿಗೆ ತಂಡದಲ್ಲಿ ಹೆಡ್ ಕೋಚ್ ಗೌತಮ್ ಗಂಭೀರ್ (Gautam Gambhir) ಸ್ಥಾನವನ್ನು ನೀಡಿದ್ದಾರೆಂದು ತಮಿಳುನಾಡು ಮಾಜಿ ಆಟಗಾರ ಪರೋಕ್ಷವಾಗಿ ಆರೋಪ ಮಾಡಿದ್ದಾರೆ.
ಇತ್ತೀಚೆಗೆ ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿಗೆ 15 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿತ್ತು. ಅದರಲ್ಲಿ ಜಿಂಬಾಬ್ವೆ ವಿರುದ್ದದ ಸರಣಿಯಲ್ಲಿ ಆಡಿದ್ದ 7 ಮಂದಿ ಆಟಗಾರರನ್ನು ಕೈಬಿಡಲಾಗಿತ್ತು. ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಮತ್ತು ವರುಣ್ ಚಕ್ರವರ್ತಿಯನ್ನು ರಾಷ್ಟ್ರೀಯ ತಂಡಕ್ಕೆ ಕರೆಸಿಕೊಳ್ಳಲಾಗಿದೆ. ಆದರೆ, ವಾಷಿಂಗ್ಟನ್‌ಗೆ ತಂಡದಲ್ಲಿ ಮೀಸಲು ಸ್ಥಾನ ಹಾಗೂ ನಿತೀಶ್ ರೆಡ್ಡಿ ಅವರ ಆಲ್‌ರೌಂಡರ್ ಸಾಮರ್ಥ್ಯವನ್ನು ಬದ್ರಿನಾಥ್ ಪ್ರಶ್ನೆ ಮಾಡಿದ್ದಾರೆ.
ನಕಲಿ ಜನನ ಪ್ರಮಾಣ ಪತ್ರ: ಭಾರತ ಅಂಡರ್-19 ತಂಡದ ರೋಹಿತ್ ಯಾದವ್‌ಗೆ 2 ವರ್ಷ ನಿಷೇಧ!
"ಮೊದಲನೇಯದಾಗಿ ಕೋಚ್‌ನ ನೆಚ್ಚಿನ ಆಟಗಾರರು ತಂಡಕ್ಕೆ ಮರಳಿದ್ದಾರೆ. ಭಾರತೀಯ ಕ್ರಿಕೆಟ್‌ನಲ್ಲಿ ವಾಷಿಂಗ್ಟನ್ ಸುಂದರ್‌ಗೆ ಸಾಕಷ್ಟು ಬೆಂಬಲ ಸಿಗುತ್ತಿದೆ. ಇದನ್ನು ಅವರು ಸಮರ್ಥವಾಗಿ ಬಳಸಿಕೊಳ್ಳಬೇಕಾದ ಅಗತ್ಯವಿದೆ," ಎಂದು ಎಸ್ ಬದ್ರಿನಾಥ್ ತಮ್ಮ ಅಧಿಕೃಯ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೊದಲ್ಲಿ ತಿಳಿಸಿದ್ದಾರೆ. ಇದರ ಜೊತೆಗೆ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಬ್ಯಾಟಿಂಗ್ ಬದಲು ಬೌಲಿಂಗ್ ಸಾಮರ್ಥ್ಯದಿಂದಾಗಿ ತಂಡದಲ್ಲಿ ಸ್ಥಾನವನ್ನು ನೀಡಲಾಗುತ್ತಿದೆ ಎಂದಿದ್ದಾರೆ.
"ನಿತೀಶ್‌ಕುಮಾರ್ ರೆಡ್ಡಿ ಅವರಿಗೆ ಹೆಚ್ಚಿನ ರೇಟ್ ನೀಡಲು ನನಗೆ ಇಷ್ಟವಿಲ್ಲ. ಏಕೆಂದರೆ ಅವರ ಬೌಲಿಂಗ್‌ನಿಂದಾಗಿ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಅವರಿನ್ನೂ ಬ್ಯಾಟ್ಸ್‌ಮನ್ ಹಾಗೂ ನಾನು ಅವರನ್ನು ಬೌಲಿಂಗ್ ಅನ್ನು ರೇಟ್ ಮಾಡಲು ಬಯಸುವುದಿಲ್ಲ," ಎಂದು ಅವರು ಹೇಳಿದ್ದಾರೆ.
ತಮ್ಮ ದೊಡ್ಡ ದಾಖಲೆ ಮುರಿದ ಸ್ಮೃತಿ ಮಂಧಾನಾಗೆ ಮಿಥಾಲಿ ರಾಜ್ ವಿಶೇಷ ಸಂದೇಶ!
ಅಫ್ಘಾನಿಸ್ತಾನ ಆತಿಥ್ಯದಲ್ಲಿ ಈ ಟಿ20ಐ ಸರಣಿ ನವದೆಹಲಿಯ ಅರುಣ್ ಜೆಟ್ಲಿ ಕ್ರೀಡಾಂಗಣನದಲ್ಲಿ ನಡೆಯಲಿದೆ. ಸೆಪ್ಟಂಬರ್ 13 ರಂದು ಈ ಸರಣಿ ಆರಂಭವಾಗಲಿದೆ. ಈ ಸರಣಿಗೆ ಭಾರತ ತಂಡದಲ್ಲಿ ಹಲವು ಬದಲಾವಣೆಗಳನ್ನು ತರಲಾಗಿದ್ದು, ಇದೇ ತಂಡ ಈ ತಿಂಗಳ ಅಂತ್ಯದಲ್ಲಿ ಜಪಾನ್‌ನಲ್ಲಿ ನಡೆಯುವ ಏಷ್ಯನ್ ಗೇಮ್ಸ್‌ನಲ್ಲಿ ಕಣಕ್ಕೆ ಇಳಿಯಲಿದೆ.
ಎಡ ಮೊಣಕಾಲಿನ ಗಾಯದಿಂದ ಕಳೆದ ಶ್ರೀಲಂಕಾ ಪ್ರವಾಸವನ್ನು ಕಳೆದುಕೊಂಡಿದ್ದ ಹಿರಿಯ ವೇಗಿ ಜಸ್‌ಪ್ರೀತ್ ಬುಮ್ರಾ ಕೂಡ ತವರು ಟಿ20ಐ ಸರಣಿಯ ತಂಡದಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಹರ್ಷಿತ್ ರಾಣಾ ಕೂಡ ಸೇರ್ಪಡೆಯಾಗಿದ್ದಾರೆ. ಬುಮ್ರಾ, ನಿತೀಶ್ ರೆಡ್ಡಿ ಹಾಗೂ ರಾಣಾ ಅವರ ಆಯ್ಕೆಯು ಫಿಟ್‌ನೆಸ್ ಟೆಸ್ಟ್ ಅನ್ನು ಅವಲಂಬಿಸಿದೆ.
ಅಫ್ಘಾನಿಸ್ತಾನ ಟಿ20 ಪಂದ್ಯಕ್ಕೂ ಮುನ್ನ ಅಭ್ಯಾಸ ಪಂದ್ಯ ಆಡಲಿರುವ ಬುಮ್ರಾ
ಜಸ್‌ಪ್ರೀತ್ ಬುಮ್ರಾಗೆ ಬದ್ರಿನಾಥ್ ಸಂತಸ
ಎಡಗಾಲಿನ ಮೊಣಕಾಲಿನ ಗಾಯದಿಂದಾಗಿ ಶ್ರೀಲಂಕಾ ಪ್ರವಾಸದಿಂದ ಹೊರಗುಳಿದಿದ್ದ ವೇಗದ ಬೌಲರ್ ಬುಮ್ರಾ, ಅದಕ್ಕೂ ಮುನ್ನ ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕೊನೆಯ ಬಾರಿ ಆಡಿದ್ದರು. ಆದರೆ, ದೀರ್ಘಕಾಲ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವಿದ್ದ ಬಳಿಕ ಮತ್ತೆ ಮೈದಾನಕ್ಕಿಳಿಯುವ ಬಯಕೆಯನ್ನು ಬುಮ್ರಾ ಸ್ವತಃ ವ್ಯಕ್ತಪಡಿಸಿದ್ದರಿಂದ ಅವರನ್ನು ತಂಡಕ್ಕೆ ಆಯ್ಕೆ ಮಾಡಿರಬಹುದು ಎಂದು ಬದ್ರಿನಾಥ್ ಅಭಿಪ್ರಾಯಪಟ್ಟಿದ್ದಾರೆ.
“ಈ ಮೂರು ಪಂದ್ಯಗಳಲ್ಲಿ ಆಡಬೇಕು ಎಂದು ಬುಮ್ರಾ, ತಂಡದ ಆಡಳಿತ ಮಂಡಳಿಗೆ ಹೇಳಿರಬಹುದು. ಹಾಗಿದ್ದರೆ ಅವರನ್ನು ಆಯ್ಕೆ ಮಾಡಲೇಬೇಕಾಗುತ್ತದೆ. ಆದರೆ ನಮಗೆ ಇದರ ಬಗ್ಗೆ ಖಚಿತವಾಗಿ ತಿಳಿದಿಲ್ಲ,” ಎಂದ ಅವರು, “ದೀರ್ಘಕಾಲದಿಂದ ಕ್ರಿಕೆಟ್ ಆಡದ ಕಾರಣ ಮತ್ತೆ ಆಡಲು ಬಯಸುತ್ತೇನೆ ಎಂದು ಬುಮ್ರಾ, ಗಂಭೀರ್ ಅಥವಾ ಆಯ್ಕೆ ಸಮಿತಿಯೊಂದಿಗೆ ಮಾತನಾಡಿರಬಹುದು. ಹೀಗಾಗಿ, ಈ ಆಯ್ಕೆ ಬುಮ್ರಾ ಅವರದ್ದೇ ಆಗಿರಬಹುದು,” ಎಂದು ಅವರು ತಿಳಿಸಿದ್ದಾರೆ.