IND vs ENG: ಇಂಗ್ಲೆಂಡ್ 4-0 ಅಂತರದಲ್ಲಿ ಗೆಲ್ಲಬಹುದಾ? ಎಂದ ಮೈಕಲ್ ವಾನ್‌ಗೆ ಜಾಫರ್ ತಿರುಗೇಟು!
ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ, ಭಾರತವನ್ನು 5 ವಿಕೆಟ್‌ಗಳಿಂದ ಸೋಲಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಗೆಲುವಿನ ನಂತರ, ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್, ಭಾರತದ ಮಾಜಿ ಆಟಗಾರ ವಾಸೀಮ್ ಜಾಫರ್ ಅವರನ್ನು ಟ್ರೋಲ್ ಮಾಡಲು ಪ್ರಯತ್ನಿಸಿದರು. ಆದರೆ ಅವರಿಗೆ ಜಾಫರ್ ತಕ್ಕ ಉತ್ತರ ನೀಡಿದ್ದಾರೆ.

ಟ್ವಿಟರ್‌ನಲ್ಲಿ ಮೈಕಲ್ ವಾನ್-ವಾಸೀಮ್ ಜಾಫರ್ ನುಡವೆ ಹಾಸ್ಯಮಯ ಸಂಭಾಷಣೆ.

ನವದೆಹಲಿ: ಲೀಡ್ಸ್‌ನಲ್ಲಿ ನಡೆದಿದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿ (IND vs ENG) ಇಂಗ್ಲೆಂಡ್ ತಂಡ, ಭಾರತವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ನಾಲ್ಕನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ 371 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿತು. ಇಂಗ್ಲೆಂಡ್ ಗೆಲುವಿನ ನಂತರ, ಮಾಜಿ ನಾಯಕ ಮೈಕಲ್ ವಾನ್ (Michael Vaughan) ಮತ್ತು ಭಾರತದ ಮಾಜಿ ಆರಂಭಿಕ ಆಟಗಾರ ವಾಸೀಮ್ ಜಾಫರ್ ( Wasim Jaffer) ನಡುವೆ ಸಾಮಾಜಿಕ ಮಾಧ್ಯಮದಲ್ಲಿ ತಮಾಷೆಯ ಸಂಭಾಷಣೆ ನಡೆಯಿತು. ಇಂಗ್ಲೆಂಡ್ ಗೆಲುವಿನ ಬಗ್ಗೆ ವಾನ್, ಜಾಫರ್ ಅವರನ್ನು ಅಭಿನಂದಿಸಿದರು, ಅದಕ್ಕೆ ಜಾಫರ್ ಕೂಡ ತಮಾಷೆಯ ಉತ್ತರ ನೀಡಿದ್ದಾರೆ. ಈ ಗೆಲುವಿನೊಂದಿಗೆ ಇಂಗ್ಲೆಂಡ್ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಮಂಗಳವಾರ ಅಂತ್ಯವಾಗಿದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 5 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು. ಈ ಪಂದ್ಯದಲ್ಲಿ ಭಾರತ ತಂಡದಿಂದ 5 ಶತಕಗಳು ಮೂಡಿಬಂದಿದ್ದವು. ಆದರೂ ಇಂಗ್ಲೆಂಡ್ ತಂಡವನ್ನು ಮಣಿಸಲು ಸಾಧ್ಯವಿಲ್ಲ. ಇಂಗ್ಲೆಂಡ್ ತಂಡದ ನಾಲ್ಕನೇ ಇನಿಂಗ್ಸ್‌ನಲ್ಲಿ ಬೆನ್ ಡಕೆಟ್ 149 ರನ್‌ಗಳನ್ನು ಕಲೆ ಹಾಕಿದ್ದರು ಹಾಗೂ ಝ್ಯಾಕ್ ಕ್ರಾವ್ಲಿ ಅವರ ಜೊತೆ 188 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಆ ಮೂಲಕ ಇಂಗ್ಲೆಂಡ್ ಗೆಲುವಿಗೆ ನೆರವು ನೀಡಿದ್ದರು.
IND vs ENG: ʻಇಂಗ್ಲೆಂಡ್ ಪರ ವೀರೇಂದ್ರ ಸೆಹ್ವಾಗ್‌ಗೆ ಬೆನ್ ಡಕೆಟ್ ಉತ್ತರ ನೀಡಿದ್ದಾರೆʼ-ಡೇವಿಡ್ ಲಾಯ್ಡ್!
ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಹಾಗೂ ವಾಸೀಮ್ ಜಾಫರ್ ಇಬ್ಬರು ದೀರ್ಘಾವಧಿಯಿಂದ ಟ್ವಿಟರ್‌ನಲ್ಲಿ ಹಾಸ್ಯಭರಿತ ಸಂಭಾಷಣೆಯನ್ನು ನಡೆಸುತ್ತಾ ಬಂದಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ನಡುವಣ ಪಂದ್ಯವಿದ್ದರೆ, ಇವರಿಬ್ಬರ ನಡುವೆ ಟ್ವೀಟಾಪಟಿ ಇದ್ದೇ ಇರುತ್ತದೆ. ಅದರಂತೆ ಮಂಗಳವಾರ ಮೊದಲನೇ ಟೆಸ್ಟ್ ಪಂದ್ಯಗಳ ಬಳಿಕ ಇವರಿಬ್ಬರೂ ಒಬ್ಬರಿಗೊಬ್ಬರು ಕಾಲೆಳೆದುಕೊಂಡಿದ್ದಾರೆ.
Could be 4-0 now Wasim .. 😜 https://t.co/RXsmxGdZYd
— Michael Vaughan (@MichaelVaughan) June 24, 2025
ಇಂಗ್ಲೆಂಡ್ ತಂಡ ಮೊದಲನೇ ಟೆಸ್ಟ್ ಪಂದ್ಯದ ಗೆಲುವಿನ ಬಳಿಕ ಮೈಕಲ್ ವಾನ್ ತಮ್ಮ ಟ್ವಿಟರ್ ಖಾತೆಯಲ್ಲಿ, "ಶುಭ ಸಂಜೆ ವಾಸೀಮ್ ಜಾಫರ್, ನೀವು ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ. #1-0," ಎಂದು ಟ್ವೀಟ್ ಮಾಡಿದರು.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ವಾಸೀಮ್ ಜಾಫರ್, "ಭಾರತದ ಯುವ ತಂಡ ನಿಮ್ಮನ್ನು ಈ ರೀತಿ ಚಿಂತೆಗೀಡು ಮಾಡಿದ್ದಕ್ಕೆ ಸಂತೋಷವಾಗಿದೆ. ಈ ಗೆಲುವನ್ನು ಆನಂದಿಸಿ ಮೈಕಲ್. ನಾವು ಬಲಿಷ್ಠವಾಗಿ ಮರಳುತ್ತೇವೆ," ಎಂದು ವಾನ್ ಅವರ ಹಾಸ್ಯಮಯ ಫೋಟೋವನ್ನು ಹಂಚಿಕೊಂಡರು.
ನಂತರ ಸುಮ್ಮನಾಗದೆ, ಮೈಕಲ್ ವಾನ್, "ಈಗ 4-0 ಆಗಿರಬಹುದು ವಾಸೀಮ್," ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಜುಲೈ 2 ರಂದು ಎರಡನೇ ಟೆಸ್ಟ್ ಆರಂಭ
ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ 5 ವಿಕೆಟ್‌ಗಳ ಗೆಲುವು ಪಡೆದಿರುವ ಇಂಗ್ಲೆಂಡ್ ತಂಡ, ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದಿದೆ. ಇದೀಗ ಜುಲೈ 2 ರಂದು ಬರ್ಮಿಂಗ್‌ಹ್ಯಾಮ್ ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಆರಂಭವಾಗುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ಕಾದಾಟ ನಡೆಸಲಿವೆ.