IND vs ENG: ವಿರಾಟ್ ಕೊಹ್ಲಿಯ 4ನೇ ಕ್ರಮಾಂಕಕ್ಕೆ ಯಾರು ಸೂಕ್ತ? ಚೇತೇಶ್ವರ್ ಫುಜಾರ ಅಭಿಪ್ರಾಯ!
Cheteshwar Pujara on Virat Kohli's No 4 Order: ಮೇ 12 ರಂದು ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದೀಗ ಭಾರತ ಟೆಸ್ಟ್ ತಂಡದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಯಾರು ಆಡಲಿದ್ದಾರೆಂಬ ಬಗ್ಗೆ ಸಾಕಷ್ಟು ಕುತೂಹಲವಿದೆ. ಈ ಬಗ್ಗೆ ಚೇತೇಶ್ವರ್ ಪೂಜಾರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಕೊಹ್ಲಿಯ ನಾಲ್ಕನೇ ಕ್ರಮಾಂಕಕ್ಕೆ ಸೂಕ್ತ ಆಟಗಾರನನ್ನು ಆರಿಸಿದ ಪೂಜಾರ.

ನವದೆಹಲಿ: ರೋಹಿತ್ ಶರ್ಮಾ (Rohit sharma) ಹಾಗೂ ವಿರಾಟ್ ಕೊಹ್ಲಿ(Virat Kohli) ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದೀಗ ಭಾರತ ಟೆಸ್ಟ್ ತಂಡದಲ್ಲಿ ರೋಹಿತ್ ಶರ್ಮಾ ಸ್ಥಾನವನ್ನು ತುಂಬಲು ಹಲವು ಆಯ್ಕೆಗಳು ಇವೆ. ಆದರೆ, ವಿರಾಟ್ ಕೊಹ್ಲಿಯ ನಾಲ್ಕನೇ ಕ್ರಮಾಂಕವನ್ನು ಯಾರು ತುಂಬಲಿದ್ದಾರೆಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ಚೇತೇಶ್ವರ್ ಪೂಜಾರ (Cheteshwar Pujara) ನಾಲ್ಕನೇ ಕ್ರಮಾಂಕದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಜೂನ್ 20 ರಂದು ಭಾರತ ತಂಡ, ಇಂಗ್ಲೆಂಡ್ ವಿರುದ್ದ ಟೆಸ್ಟ್ ಸರಣಿಯನ್ನು ಆರಂಭಿಸಲಿದೆ. ಆ ಮೂಲಕ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಆವೃತ್ತಿಯನ್ನು ಆರಂಭಿಸಲಿದೆ.
ಸಚಿನ್ ತೆಂಡೂಲ್ಕರ್ ಅವರು 2013ರಲ್ಲಿ ಟೆಸ್ಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರು. ಇದಾದ ಬಳಿಕ ಭಾರತ ಟೆಸ್ಟ್ ತಂಡದ ನಾಲ್ಕನೇ ಕ್ರಮಾಂಕವನ್ನು ವಿರಾಟ್ ಕೊಹ್ಲಿ ಅಲಂಕರಿಸಿದ್ದರು. ಅಂದಿನಿಂದ ಇಲ್ಲಿಯವರೆಗೂ ಅವರು ತಮ್ಮ ನಾಲ್ಕನೇ ಕ್ರಮಾಂಕದಲ್ಲಿ ಸಾಕಷ್ಟ ಅದ್ಭುತ ಇನಿಂಗ್ಸ್‌ಗಳನ್ನು ಆಡಿದ್ದಾರೆ ಹಾಗೂ ರನ್ ಹೊಳೆಯನ್ನು ಹರಿಸಿದ್ದಾರೆ. ಇದೀಗ ಮೇ 12 ರಂದು ವಿರಾಟ್ ಕೊಹ್ಲಿ ತಮ್ಮ 14 ವರ್ಷಗಳ ಟೆಸ್ಟ್ ವೃತ್ತಿ ಜೀವನವನ್ನು ಅಂತ್ಯಗೊಳಿಸಿದ್ದರು. ಆ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ನಾಲ್ಕನೇ ಬ್ಯಾಟ್ಸ್‌ಮನ್ ಆಗಿ ದೀರ್ಘಾವಧಿ ಸ್ವರೂಪಕ್ಕೆ ಪೂರ್ಣ ವಿರಾಮವನ್ನು ಇಟ್ಟಿದ್ದರು.
ಕುಚುಕು ಗೆಳೆಯ ವಿರಾಟ್ ಕೊಹ್ಲಿಗೆ ಎ ಬಿ ಡಿವಿಲಿಯರ್ಸ್ ವಿಶೇಷ ಸಂದೇಶ!
ಇದೀಗ ಭಾರತ ಟೆಸ್ಟ್ ತಂಡದಲ್ಲಿ ವಿರಾಟ್ ಕೊಹ್ಲಿಯ ನಾಲ್ಕನೇ ಕ್ರಮಾಂಕದಲ್ಲಿ ಯಾರು ಬ್ಯಾಟ್ ಮಾಡಲಿದ್ದಾರೆಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದರ ನಡುವೆ ವಿರಾಟ್ ಕೊಹ್ಲಿಯ ಜೊತೆ ಒಂದು ದಶಕಕ್ಕೂ ಅಧಿಕ ಅವಧಿ ಟೆಸ್ಟ್ ಕ್ರಿಕೆಟ್ ಆಡಿದ್ದ ಚೇತೇಶ್ವರ್ ಪೂಜಾರ ಅವರು ನಾಲ್ಕನೇ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ನಾಲ್ಕನೇ ಕ್ರಮಾಂಕದ ಬಗ್ಗೆ ಪೂಜಾರ ಹೇಳಿಕೆ
ಇಎಸ್‌ಪಿಎನ್ ಕ್ರಿಕ್‌ಇನ್ಪೋ ಜೊತೆ ಮಾತನಾಡಿದ ಚೇತೇಶವರ್ ಪೂಜಾರ, "ಟೆಸ್ಟ್ ತಂಡದ ನಾಲ್ಕನೇ ಕ್ರಮಾಂಕ ತುಂಬಾ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಈ ಕ್ರಮಾಂಕಕ್ಕೆ ಯಾರು ಸೂಕ್ತರಾಗುತ್ತಾರೆಂದು ಪತ್ತೆ ಮಾಡಲು ಎರಡು ಟೆಸ್ಟ್ ಸರಣಿಗಳನ್ನು ಅವಲೋಕಿಸಬೇಕಾಗಿದೆ. ನಾಲ್ಕನೇ ಕ್ರಮಾಂಕಕ್ಕೆ ಅತ್ಯುತ್ತಮ ಆಟಗಾರನ್ನು ಆಯ್ಕೆ ಮಾಡಬೇಕಾಗುತ್ತದೆ. ಆದರೆ, ಈ ಸಮಯದಲ್ಲಿ ಭಾರತ ತಂಡದ ಟೀಮ್ ಮ್ಯಾನೇಜ್‌ಮೆಂಟ್ ಈ ಕ್ರಮಾಂಕದಲ್ಲಿ ಸೂಕ್ತವಾಗುವ ಆಟಗಾರನನ್ನು ಆಡಿಸಲು ಪ್ರಯತ್ನ ನಡೆಸುತ್ತಿದೆ," ಎಂದು ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ವಿರಾಟ್ ಕೊಹ್ಲಿಗೆ ಸಚಿನ್ ತೆಂಡೊಲ್ಕರ್ ವಿಶೇಷ ಸಂದೇಶ!
ಭಾರತ ಟೆಸ್ಟ್ ತಂಡದ ನಾಲ್ಕನೇ ಕ್ರಮಾಂಕದಲ್ಲಿ ದಿಗ್ಗಜ ಬ್ಯಾಟ್ಸ್‌ಮನ್‌ಗಳು ಆಡಿ ಹೋಗಿದ್ದಾರೆ. ಈ ಹಿಂದೆ ಸಚಿನ್ ತೆಂಡೂಲ್ಕರ್ ನಂತರ ವಿರಾಟ್ ಕೊಹ್ಲಿ ಆಡಿದ್ದಾರೆ. ವಿರಾಟ್ ಕೊಹ್ಲಿ 99 ಬಾರಿ ನಾಲ್ಕನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಡಿದ್ದಾರೆ. ಅಜಿಂಕ್ಯ ರಹಾನೆ 9 ಬಾರಿ ಈ ಕ್ರಮಾಂಕದಲ್ಲಿ ಆಡಿದ್ದಾರೆ.
ನಾಲ್ಕನೇ ಕ್ರಮಾಂಕಕ್ಕೆ ಸಾಕಷ್ಟು ಆಟಗಾರರನ್ನು ಪ್ರಯತ್ನಿಸಲಾಗಿದೆ
2024ರಲ್ಲಿ ಇಂಗ್ಲೆಂಡ್ ವಿರುದ್ದದ ತವರು ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಆಡಿರಲಿಲ್ಲ. ಈ ವೇಳೆ ನಾಲ್ಕನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ರಜತ್ ಪಾಟಿದಾರ್ (ಎರಡು ಟೆಸ್ಟ್) ಹಾಗೂ ದೇವದತ್ ಪಡಿಕ್ಕಲ್ ಅವರನ್ನು ಪ್ರಯತ್ನಿಸಲಾಗಿತ್ತು. ಆದರೆ, ಯಾರೂ ಕೂಡ ಈ ಕ್ರಮಾಂಕದಲ್ಲಿ ಭರವಸೆ ಮೂಡಿಸಿರಲಿಲ್ಲ.
"ಭಾರತ ಟೆಸ್ಟ್ ತಂಡದ ಪ್ಲೇಯಿಂಗ್ XIಗೆ ಸಾಕಷ್ಟು ಆಟಗಾರರು ಬಂದು ಹೋಗಿದ್ದಾರೆ. ಆದರೆ, ಯಾವೊಬ್ಬ ಆಟಗಾರ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳಲಿಲ್ಲ. ನಾಲ್ಕನೇ ಕ್ರಮಾಂಕದ ಆಯ್ಕೆಯ ಪ್ರಕ್ರಿಯೆಯು ಸ್ವಲ್ಪ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಲಿದೆ," ಎಂದು ಚೇತೇಶ್ವರ್ ಪೂಜಾರ ತಿಳಿಸಿದ್ದಾರೆ.