IND vs ENG: ಓವಲ್ ಟೆಸ್ಟ್‌ನಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್!
Yashasvi jaiswal Breaks tendulkar's Record: ಇಂಗ್ಲೆಂಡ್ ವಿರುದ್ಧ ಓವಲ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಭರ್ಜರಿ ಶತಕವನ್ನು ಬಾರಿಸಿದರು. ಆ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದೊಡ್ಡ ದಾಖಲೆಯೊಂದನ್ನು ಮುರಿದಿದ್ದಾರೆ.

ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್.

ಲಂಡನ್: ಭಾರತ (India) ತಂಡದ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ (Yashasvi jaiswal) ಪ್ರಸ್ತುತ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ (IND vs ENG) ಗಮನಾರ್ಹ ಫಾರ್ಮ್‌ನಲ್ಲಿದ್ದಾರೆ. ಅವರು ಇಲ್ಲಿಯ ತನಕ ಭಾರತ ತಂಡದ ಪರ ಆಡಿರುವುದು ಕೇವಲ 24 ಟೆಸ್ಟ್ ಪಂದ್ಯಗಳು ಮಾತ್ರ, ಇದರ ಹೊರತಾಗಿಯೂ ಅವರು ತಂಡದ ಕೀ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ವೆಸ್ಟ್ ಇಂಡೀಸ್, ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ಭಾರತ ಸೇರಿದಂತೆ ವಿಶ್ವದ ಎಲ್ಲಾ ಕಂಡೀಷನ್ಸ್‌ನಲ್ಲಿ ಶತಕಗಳನ್ನು ಸಿಡಿಸುವ ಮೂಲಕ ವಿಶ್ವದ ಅಗ್ರ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಲೀಡ್ಸ್ ಟೆಸ್ಟ್‌ನಲ್ಲಿ ಶತಕ ಸಿಡಿಸುವ ಮೂಲಕ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಶುಭಾರಂಭ ಕಂಡಿದ್ದ ಇವರು, ನಂತರದ ಪಂದ್ಯಗಳಲ್ಲಿ ಏರಿಳಿತಗಳನ್ನು ಕಂಡಿದ್ದರು. ಐದನೇ ಟೆಸ್ಟ್‌ಗೂ ಮುನ್ನ ಅವರು ಎರಡು ಅರ್ಧಶತಕಗಳನ್ನು ಸಿಡಿಸಿದ್ದರು. ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಇವರ ಫಾರ್ಮ್ ಅನ್ನು ಪ್ರಶ್ನೆ ಮಾಡಲಾಗಿತ್ತು.
ಅದರಂತೆ ಕೆನಿಂಗ್ಟನ್ ಓವಲ್ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿಯೂ ಜೈಸ್ವಾಲ್ ವಿಫಲರಾಗಿದ್ದರು. ಆದರೆ, ದ್ವಿತೀಯ ಇನಿಂಗ್ಸ್‌ನಲ್ಲಿ ಅವರು ಆಕ್ರಮಣಕಾರಿಯಾಗಿ ಬ್ಯಾಟ್ ಬಿಸಿದರು. ಎರಡನೇ ದಿನವೇ ಅವರು 44 ಎಸೆತಗಳಲ್ಲಿಯೇ ಅರ್ಧಶತಕ ಸಿಡಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಅದರಂತೆ ಮೂರನೇ ದಿನ ತಮ್ಮ ಬುದ್ದಿವಂತಿಕೆಯ ಆಟವನ್ನು ಮುಂದುವರಿಸಿ ತಮ್ಮ ವೃತ್ತಿ ಜೀವನದ 6ನೇ ಟೆಸ್ಟ್ ಶತಕವನ್ನು ಪೂರ್ಣಗೊಳಿಸಿದರು. ಇವರು ಮೂರನೇ ದಿನ ಒಟ್ಟು ಆಡಿದ 164 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 14 ಬೌಂಡರಿಗಳೊಂದಿಗೆ 118 ರನ್ ಗಳಿಸಿದರು. ಆ ಮೂಲಕ ಭಾರತ ತಂಡದ ಮುನ್ನಡೆಯನ್ನು 250 ಕ್ಕೆ ಏರಿಸಿದರು. ನಂತರ ಜಾಶ್ ಟಾಂಗ್‌ಗೆ ವಿಕೆಟ್ ಒಪ್ಪಿಸಿದರು.
IND vs ENG: ಆರನೇ ಟೆಸ್ಟ್ ಶತಕ ಬಾರಿಸಿ ಸಂಭ್ರಮಿಸಿದ ಯಶಸ್ವಿ ಜೈಸ್ವಾಲ್!
ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಜೈಸ್ವಾಲ್
ಅಂದ ಹಾಗೆ ಯಶಸ್ವಿ ಜೈಸ್ವಾಲ್ ಅವರು 44 ಎಸೆತಗಳಲ್ಲಿಯೇ ಅರ್ಧಶತಕವನ್ನು ಬಾರಿಸಿದ್ದರು. ಆ ಮೂಲಕ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧ 23ನೇ ವಯಸ್ಸಿಗೂ ಒಳಗೆ ಅತಿ ಹೆಚ್ಚು ಬಾರಿ 50ಕ್ಕೂ ಅಧಿಕ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಆ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಇಂಗ್ಲೆಂಡ್ ಎದುರು ಜೈಸ್ವಾಲ್ ಮೂರು ಶತಕಗಳು ಹಾಗೂ ಆರು ಅರ್ಧಶತಕಗಳನ್ನು ಬಾರಿಸಿದ್ದಾರೆ. ಆ ಮೂಲಕ ಒಟ್ಟು 9 ಬಾರಿ 50ಕ್ಕೂ ಅಧಿಕ ರನ್‌ಗಳನ್ನು ಎಡಗೈ ಬ್ಯಾಟ್ಸ್‌ಮನ್ ಕಲೆ ಹಾಕಿದ್ದಾರೆ. ಸಚಿನ್ ಎಂಟು ಬಾರಿ ಇಂಗ್ಲೆಂಡ್ ವಿರುದ್ಧ 50ಕ್ಕೂ ಅಧಿಕ ರನ್ ಗಳಿಸಿದ್ದಾರೆ.
💯 𝗳𝗼𝗿 𝗬𝗮𝘀𝗵𝗮𝘀𝘃𝗶 𝗝𝗮𝗶𝘀𝘄𝗮𝗹!👏 👏
— BCCI (@BCCI) August 2, 2025
This is his 6th Test ton and 2nd hundred of the series! 🙌 🙌
Updates ▶️ https://t.co/Tc2xpWMCJ6#TeamIndia | #ENGvIND | @ybj_19 pic.twitter.com/PnCd6tsgtH
ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ಬಾರಿ 50ಕ್ಕೂ ಅಧಿಕ ರನ್ ಗಳಿಸಿದ ಭಾರತೀಯರು
ಯಶಸ್ವಿ ಜೈಸ್ವಾಲ್: 9* (19 ಇನಿಂಗ್ಸ್)
ಸಚಿನ್ ತೆಂಡೂಲ್ಕರ್: 8 (14 ಇನಿಂಗ್ಸ್)
ಮೊಹಮ್ಮದ್ ಅಝರುದ್ದೀನ್: 5 (11 ಇನಿಂಗ್ಸ್)
ಕಪಿಲ್ ದೇವ್: 5 (20 ಇನಿಂಗ್ಸ್)
ರಿಷಭ್ ಪಂತ್: 5 (19 ಇನಿಂಗ್ಸ್)
ದಿಲೀಪ್ ಸರ್ದೇಸಾಯಿ: 5 (11 ಇನಿಂಗ್ಸ್)
ರವಿಶಾಸ್ತ್ರಿ: 5 (20 ಇನಿಂಗ್ಸ್)