ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs NZ: ರಾಜ್‌ಕೋಟ್‌ನಲ್ಲಿ ಶತಕ ಬಾರಿಸಿ ಕ್ವಿಂಟನ್‌ ಡಿ ಕಾಕ್‌ ದಾಖಲೆ ಮುರಿದ ಕೆಎಲ್ ರಾಹುಲ್!

ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಶತಕ ಬಾರಿಸುವ ಮೂಲಕ ರಾಜ್‌ಕೋಟ್‌ನ ನಿರಂಜನ್ ಶಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅತಿ ಹೆಚ್ಚು ವೈಯಕ್ತಿಕ ಮೊತ್ತ ಕಲೆಹಾಕಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ಹಿಂದೆ ಈ ದಾಖಲೆ ದಕ್ಷಿಣ ಆಫ್ರಿಕಾ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ ಡಿ ಕಾಕ್ ಹೆಸರಿನಲ್ಲಿತ್ತು.

ಶತಕ ಸಿಡಿಸಿ ಡಿ ಕಾಕ್‌ ದಾಖಲೆ ಮುರಿದ ಕನ್ನಡಿಗ ಕೆಎಲ್‌ ರಾಹುಲ್‌!

ರಾಜ್‌ಕೋಟ್‌ನಲ್ಲಿ ವಿಶೇಷ ದಾಖಲೆ ಬರೆದ ಕೆಎಲ್‌ ರಾಹುಲ್. -

Profile
Ramesh Kote Jan 14, 2026 8:06 PM

ನವದೆಹಲಿ: ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ (IND vs NZ) ಎರಡನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಭಾರತ ತಂಡ, 284 ರನ್ ಕಲೆಹಾಕಿದೆ. ಆರಂಭದಲ್ಲೇ ಟೀಮ್ ಇಂಡಿಯಾದ ಪ್ರಮುಖ ಬ್ಯಾಟರ್‌ಗಳಾದ ಶುಭಮನ್ ಗಿಲ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯವರ (Virat Kohli) ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಮೈದಾನಕ್ಕೆ ಬಂದ ಕನ್ನಡಿಗ ಕೆ ಎಲ್ ರಾಹುಲ್(KL Rahul) ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದಾಗಿ ಭಾರತ ತಂಡ ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಯಿತು.

ಇನ್ನು ಕೆ ಎಲ್ ರಾಹುಲ್ ಏಕದಿನ ಕ್ರಿಕೆಟ್‌ನಲ್ಲಿ ಎಂಟನೇ ಶತಕ ಬಾರಿಸುವ ಮೂಲಕ ಮಹತ್ವದ ದಾಖಲೆಯನ್ನು ಮುರಿದಿದ್ದಾರೆ. 92 ಎಸೆತಗಳಲ್ಲಿ 11 ಫೋರ್ ಹಾಗೂ ಒಂದು ಸಿಕ್ಸರ್ ನೊಂದಿಗೆ ಅಜೇಯರಾಗಿ ಬರೋಬ್ಬರಿ 112 ರನ್ ಬಾರಿಸಿದರು. ಈ ಮೂಲಕ ರಾಜ್‌ಕೋಟ್‌ನ ನಿರಂಜನ್ ಶಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ವೈಯಕ್ತಿಕವಾಗಿ ಅತಿ ಹೆಚ್ಚು ರನ್ ಬಾರಿಸಿದ ವಿಶ್ವದ ಏಕೈಕ ಆಟಗಾರ ಎಂದೆನಿಸಿಕೊಂಡಿದ್ದಾರೆ. ಈ ಹಿಂದೆ 2015 ರಲ್ಲಿ ದಕ್ಷಿಣ ಆಫ್ರಿಕಾ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿಕಾಕ್ ಅವರು 108 ರನ್ ಬಾರಿಸಿದ್ದರು. ಇದೀಗ ಅವರ ದಾಖಲೆಯನ್ನು ರಾಹುಲ್ ಮುರಿದಿದ್ದಾರೆ. ನಿರಂಜನ್ ಶಾ ಸ್ಟೇಡಿಯಂನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಶಿಖರ್ ಧವನ್ ಆಸ್ಟ್ರೇಲಿಯಾ ವಿರುದ್ಧ 96 ರನ್ ಬಾರಿಸಿದ್ದರು.

IND vs NZ: ಎಂಟನೇ ಒಡಿಐ ಶತಕ ಸಿಡಿಸಿ ವಿಭಿನ್ನವಾಗಿ ಸಂಭ್ರಮಿಸಿದ ಕನ್ನಡಿಗ ಕೆಎಲ್‌ ರಾಹುಲ್!

ನಿರಂಜನ್ ಶಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರು

ಕೆಎಲ್ ರಾಹುಲ್: 112

ಕ್ವಿಂಟನ್ ಡಿ ಕಾಕ್: 108

ಸ್ಟೀವ್ ಸ್ಮಿತ್: 98

ಶಿಖರ್ ಧವನ್: 96

ಮಿಚೆಲ್ ಮಾರ್ಷ್: 96



ಶತಕವನ್ನು ಮಗಳಿಗೆ ಅರ್ಪಿಸಿದ ರಾಹುಲ್

ತಂಡದ ಪ್ರಮುಖ ಆಟಗಾರರ ವಿಕೆಟ್ ಪತನವಾಗಿ ತಂಡ ಸಂಕಷ್ಟಕ್ಕೆ ಸಿಲುಕಿದ ವೇಳೆ ಭರ್ಜರಿ ಶತಕ ಸಿಡಿಸುವ ಮೂಲಕ ರಾಹುಲ್, ಟೀಮ್ ಇಂಡಿಯಾಗೆ ಆಸರೆಯಾದರು. ಕೊನೆಗೆ ಸಿಕ್ಸರ್ ಬಾರಿಸುವ ಮೂಲಕ ಶತಕ ಪೂರೈಸಿದ ರಾಹುಲ್ ಬಾಯಲ್ಲಿ ಬೆರಳಿಟ್ಟು, ಬ್ಯಾಟ್ ಮೇಲಕ್ಕೆತ್ತಿ ವಿಭಿನ್ನ ಶೈಲಿಯಲ್ಲಿ ಸಂಭ್ರಮಿಸಿದರು. ಈ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧ ಶತಕ ಬಾರಿಸಿದ ವೇಳೆಯೂ ಅವರು ಈ ರೀತಿ ಸಂಭ್ರಮಿಸಿದ್ದರು. ಆಗ ಪಂದ್ಯ ಮುಗಿದ ಬಳಿಕ ಈ ಆಚರಣೆಯ ಹಿಂದಿನ ಉದ್ದೇಶ ತಿಳಿಸಿ 'ಇದನ್ನು ನನ್ನ ಮಗಳಿಗೆ ಅರ್ಪಿಸುತ್ತೇನೆ' ಎಂದು ಹೇಳಿದ್ದರು. ಇದೀಗ ಪುನಃ ಅದೇ ಸನ್ನೆ ಮಾಡಿದ್ದು, ಈ ಶತಕವನ್ನು ಕೂಡ ತಮ್ಮ ಮಗಳಿಗೆ ಅರ್ಪಿಸಿದ್ದಾರೆ ಎನ್ನಬಹುದು.

ಆರಂಭದಲ್ಲೇ ಮುಗ್ಗರಿಸಿದ ನ್ಯೂಜಿಲೆಂಡ್ ತಂಡ

287 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಪ್ರವಾಸಿ ನ್ಯೂಜಿಲೆಂಡ್ ತಂಡ, ತನ್ನ ಆರಂಭಿಕ ಆಟಗಾರರಾದ ಡೆವೋನ್ ಕಾನ್ವೆ ಮತ್ತು ಹೆನ್ರಿ ನಿಕೋಲ್ಸ್‌ ಅವರ ವಿಕೆಟ್ ಕಳೆದುಕೊಂಡು ಆರಂಭದಲ್ಲೇ ಸಂಕಷ್ಟಕ್ಕೀಡಾಯಿತು. ಆ ಬಳಿಕ ಜೊತೆಯಾದ ವಿಲ್ ಯಂಗ್ ಹಾಗೂ ಡ್ಯಾರಿಲ್ ಮಿಚೆಲ್ 50 ರನ್‌ಗಳ ಜೊತೆಯಾಟದ ನೆರವಿಂದಾಗಿ 2 ವಿಕೆಟ್ ನಷ್ಟಕ್ಕೆ 90 ರನ್ ಕಲೆಹಾಕಿದ ಕಾರಣ ಗೆಲುವಿನ ಆಸೆ ಚಿಗುರಿದ್ದು, ಪಂದ್ಯ ಗೆದ್ದು 1-1 ಅಂತರದಲ್ಲಿ ಸರಣಿಯಲ್ಲಿ ಸಮಬಲ ಕಾಯ್ದುಕೊಳ್ಳಲು ಕಿವೀಸ್ ಎದುರು ನೋಡುತ್ತಿದೆ.