ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻಆಪರೇಷನ್ ಡ್ರೀಮ್ ಥಿಯೇಟರ್ 666ʼ ಚಿತ್ರಕ್ಕೆ ಏಜೆಂಟ್ ಕಾವೇರಿಯಾಗಿ ಎಂಟ್ರಿ ಕೊಟ್ಟ ಖ್ಯಾತ ನಟಿ ಅದಿತಿ ಬಾಲನ್

'ಆಪರೇಷನ್ ಡ್ರೀಮ್ ಥಿಯೇಟರ್ 666' ಚಿತ್ರದ ಮೂಲಕ ತಮಿಳಿನ ಪ್ರತಿಭಾನ್ವಿತ ನಟಿ ಅದಿತಿ ಬಾಲನ್ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ. ಹೇಮಂತ್ ರಾವ್ ನಿರ್ದೇಶನದ ಈ ಸ್ಪೈ ಥ್ರಿಲ್ಲರ್‌ನಲ್ಲಿ ಅದಿತಿ 'ಏಜೆಂಟ್ ಕಾವೇರಿ' ಎಂಬ ಪ್ರಬಲ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶಿವರಾಜ್‌ಕುಮಾರ್ ಮತ್ತು ಡಾಲಿ ಧನಂಜಯ್ ಅಭಿನಯದ ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಅದಿತಿ ಬಾಲನ್ ಸೇರ್ಪಡೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

'ಏಜೆಂಟ್ ಕಾವೇರಿ'ಯಾಗಿ ಕರುನಾಡಿಗೆ ಎಂಟ್ರಿ ಕೊಟ್ಟ ತಮಿಳು ನಟಿ ಅದಿತಿ ಬಾಲನ್

-

Avinash GR
Avinash GR Mar 12, 2026 12:02 PM

ʻಕರುನಾಡ ಚಕ್ರವರ್ತಿʼ ಡಾ. ಶಿವರಾಜ್‌ಕುಮಾರ್‌ ಮತ್ತು ʻಡಾಲಿʼ ಧನಂಜಯ್‌ ಅವರು ಮೂರನೇ ಬಾರಿಗೆ ಒಟ್ಟಿಗೆ ನಟಿಸುತ್ತಿರುವ ʻಆಪರೇಷನ್ ಡ್ರೀಮ್ ಥಿಯೇಟರ್ 666ʼ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಈ ಚಿತ್ರಕ್ಕೆ ನಾಯಕಿಯಾಗಿ ಪ್ರಿಯಾಂಕಾ ಮೋಹನ್‌ ಸೆಲೆಕ್ಟ್‌ ಆಗಿರುವುದು ಗೊತ್ತೇ ಇದೆ. ಇದೀಗ ಈ ಚಿತ್ರಕ್ಕೆ ಮತ್ತೋರ್ವ ಪ್ರತಿಭಾನ್ವಿತ ನಟಿ ಎಂಟ್ರಿ ಕೊಟ್ಟಿದ್ದಾರೆ. ಅವರೇ ತಮಿಳಿನ ಅದಿತಿ ಬಾಲನ್.‌

ರಾಜ್ಯ ಪ್ರಶಸ್ತಿ ಪುರಸ್ಕೃತೆ ಅದಿತಿ

ಹೌದು, ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಿರ್ದೇಶಕ ಹೇಮಂತ್ ರಾವ್ ನಿರ್ದೇಶಿಸುತ್ತಿರುವ 'ಆಪರೇಷನ್ ಡ್ರೀಮ್ ಥಿಯೇಟರ್ 666' ಚಿತ್ರದ 'ಸ್ಪೈ' (ಗೂಢಚಾರಿ) ಪ್ರಪಂಚಕ್ಕೆ ಈಗ ಪ್ರತಿಭಾವಂತ ನಟಿ ಅದಿತಿ ಬಾಲನ್ ಸೇರ್ಪಡೆಯಾಗಿದ್ದಾರೆ. ತಮಿಳಿನ 'ಅರುವಿ' ಚಿತ್ರದ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದ ಅದಿತಿ ಬಾಲನ್‌, ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಸದ್ಯ ಅವರು 'ಆಪರೇಷನ್ ಡ್ರೀಮ್ ಥಿಯೇಟರ್ 666' ಚಿತ್ರದಲ್ಲಿ 'ಏಜೆಂಟ್ ಕಾವೇರಿ' ಎಂಬ ಪ್ರಬಲ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ʻಕರುನಾಡ ಚಕ್ರವರ್ತಿʼ ಶಿವರಾಜ್‌ಕುಮಾರ್‌ ವೃತ್ತಿ ಬದುಕಿಗೆ 40 ವರ್ಷ; ಸಿಎಂ ಸಿದ್ದರಾಮಯ್ಯ - ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌ ಏನ್‌ ಹೇಳಿದ್ರು ನೋಡಿ!

ಅಂದಹಾಗೆ, ತಮಿಳಿನ ಅರುವಿ ಸಿನಿಮಾದಿಂದ ಮನೆಮಾತಾಗಿದ್ದ ಅದಿತಿ ಬಾಲನ್, ಕ್ಯಾಪ್ಟನ್ ಮಿಲ್ಲರ್, ಪಡವೆಟ್ಟು ಮುಂತಾದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ʻಆಪರೇಷನ್ ಡ್ರೀಮ್ ಥಿಯೇಟರ್ 666ʼ ಚಿತ್ರದಲ್ಲಿ ಏಜೆಂಟ್ ಕಾವೇರಿಯಾಗಿ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ.

ʻಆಪರೇಷನ್ ಡ್ರೀಮ್ ಥಿಯೇಟರ್ 666ʼ ಚಿತ್ರವು ಈಗಾಗಲೇ ತನ್ನ ಪಾತ್ರಗಳ ಮೂಲಕವೇ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ. ಶಿವರಾಜ್‌ಕುಮಾರ್ ಅವರು ʻಏಜೆಂಟ್ ಪ್ರಕಾಶ್ʼ ಆಗಿ ಕಾಣಿಸಿಕೊಳ್ಳುತ್ತಿದ್ದು, ಆ ಲುಕ್ ಅಭಿಮಾನಿಗಳ ಹೃದಯ ಗೆದ್ದಿತ್ತು. ಶಿವಣ್ಣ ಮಾಡುತ್ತಿರುವ ಈ ಪಾತ್ರವು ಆಪರೇಷನ್ ಡೈಮಂಡ್ ರಾಕೆಟ್ ಚಿತ್ರದಲ್ಲಿನ ಡಾ. ರಾಜಕುಮಾರ್ ಅವರ ಪಾತ್ರಕ್ಕೆ ಗೌರವ ಸಲ್ಲಿಸುವುದು ಚಿತ್ರತಂಡದ ಉದ್ದೇಶವಾಗಿತ್ತು. ನಂತರ ಚಿತ್ರ ತಂಡವು ಡಾಲಿ ಧನಂಜಯ್‌ ಅವರನ್ನು ಏಜೆಂಟ್ ಶಂಕರ್ ಆಗಿ ಪರಿಚಯಿಸಿತು. ಇದೀಗ ನಟಿ ಅದಿತಿ ಬಾಲನ್ ಅವರನ್ನು ಏಜೆಂಟ್ ಕಾವೇರಿಯಾಗಿ ಪರಿಚಯಿಸಿರುವುದು ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.

Shiva Rajkumar: ಶಿವಣ್ಣ ಕ್ಯಾನ್ಸರ್‌ ಗೆದ್ದು ಇಂದಿಗೆ ಒಂದು ವರ್ಷ; ಸಿನಿಮಾ ರಿಲೀಸ್‌ಗೂ ಮುನ್ನ ಶಿವರಾಜ್‌ಕುಮಾರ್‌, ಗೀತಾ ಭಾವುಕ ಪೋಸ್ಟ್‌

ಇದೇ ವರ್ಷ ರಿಲೀಸ್

ʻಆಪರೇಷನ್ ಡ್ರೀಮ್ ಥಿಯೇಟರ್ 666ʼ ಚಿತ್ರವು ಈಗಷ್ಟೇ ಚಿತ್ರೀಕರಣದ 5ನೇ ಶೆಡ್ಯೂಲ್‌ ಶೂಟಿಂಗ್ ಮುಗಿಸಿದ್ದು, ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಕಾಲಿಡಲು ಸಜ್ಜಾಗಿದೆ. ಈ ಚಿತ್ರವನ್ನು ವೈಶಾಖ್ ಜೆ ಫಿಲಂಸ್ ಲಾಂಛನದಲ್ಲಿ ಡಾ ವೈಶಾಖ್ ಜೆ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದು, ಅದ್ವೈತ ಗುರುಮೂರ್ತಿ ಛಾಯಾಗ್ರಹರಾಗಿ, ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ವಸ್ತ್ರ ವಿನ್ಯಾಸವನ್ನು ಇಂಚರ ಸುರೇಶ್ ಮಾಡುತ್ತಿದ್ದಾರೆ.

ʻಆಪರೇಷನ್ ಡ್ರೀಮ್ ಥಿಯೇಟರ್ 666 ʼ ಒಂದು ಆಕ್ಷನ್, ಡ್ರಾಮಾ ಮತ್ತು ‌ಥ್ರಿಲ್ಲರ್‌ ಮಾದರಿಯ ಸಿನಿಮಾವಾಗಿದ್ದು, ಇದೇ ವರ್ಷದಲ್ಲಿ ಕನ್ನಡ ಹಾಗೂ ತೆಲುಗಿನಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಬೇಕೆಂಬುದು ಚಿತ್ರತಂಡದ ಗುರಿಯಾಗಿದೆ.