IND vs SL: ಭಾರತ ಟೆಸ್ಟ್ ತಂಡದ ಮುಂದಿನ ದೊಡ್ಡ ಗುರಿ ಯಾವುದೆಂದು ತಿಳಿಸಿದ ಶುಭಮನ್ ಗಿಲ್!
ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಣ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 15 ರಂದು ಆರಂಭವಾಗಲಿದೆ. ಮೊದಲನೇ ಟೆಸ್ಟ್ ಗಾಲೆ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಈ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ಶುಭಮನ್ ಗಿಲ್ ಹಲವು ಸಂಗತಿಗಳನ್ನು ವಿವರಿಸಿದ್ದಾರೆ.
ಭಾರತ ತಂಡದ ಮುಂದಿನ ಗುರಿಯನ್ನು ತಿಳಿಸಿದ ಶುಭಮನ್ ಗಿಲ್. -
ಗಾಲೆ: ಭಾರತ ಮತ್ತು ಶ್ರೀಲಂಕಾ (IND vs SL) ನಡುವಿನ ಮೊದಲ ಟೆಸ್ಟ್ ಪಂದ್ಯ ಆಗಸ್ಟ್ 15ರಂದು ಗಾಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭವಾಗಲಿದ್ದು, ಈ ಪಂದ್ಯ ಹಲವು ಮಹತ್ವದ ಮೈಲುಗಲ್ಲುಗಳಿಗೆ ಸಾಕ್ಷಿಯಾಗಲಿದೆ. ಇದು ಭಾರತದ 600ನೇ ಟೆಸ್ಟ್ ಪಂದ್ಯವಾಗಲಿದೆ. ಇದೇ ವೇಳೆ ಗಾಲೆ ಅಂತಾರಾಷ್ಟ್ರೀಯ ಕ್ರೀಡಾಂಗಣ ತನ್ನ 50ನೇ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಅಲ್ಲದೆ, ಭಾರತ ತಂಡದ ನಾಯಕ ಶುಭ್‌ಮನ್ ಗಿಲ್‌ಗೆ (Shubman Gill) ಇದು ನಾಯಕನಾಗಿ 10ನೇ ಟೆಸ್ಟ್ ಪಂದ್ಯವಾಗಲಿದೆ. ಈ ಮೈಲುಗಲ್ಲುಗಳ ನಡುವೆ ಭಾರತ ತಂಡದ ನಾಯಕ ನಾಯಕ ಗಿಲ್ ಅವರ ಗಮನ ಮಾತ್ರ ಮತ್ತೊಂದು ಪ್ರಮುಖ ಗುರಿಯತ್ತ ನೆಟ್ಟಿದೆ. ಅದೇನೆಂದರೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ಗೆ ಅರ್ಹತೆ ಪಡೆಯುವುದು.
ಮೊದಲನೇ ಟೆಸ್ಟ್ ನಿಮಿತ್ತ ಆಗಸ್ಟ್ 14ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶುಭಮನ್ ಗಿಲ್, “ಮುಂದಿನ ವರ್ಷ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯುವುದು ನಮ್ಮ ಪ್ರಮುಖ ಗುರಿಯಾಗಿದೆ. ಅರ್ಹತೆ ಪಡೆಯುವ ಅವಕಾಶ ಉಳಿಸಿಕೊಳ್ಳಲು ನಾವು ಸುಮಾರು ಆರು ಅಥವಾ ಏಳು ಪಂದ್ಯಗಳನ್ನು ಗೆಲ್ಲಬೇಕಿದೆ. ಆ ದೃಷ್ಟಿಯಿಂದ ಈ ಸರಣಿ ನಮಗೆ ಬಹಳ ಮಹತ್ವದ್ದಾಗಿದೆ,” ಎಂದು ತಿಳಿಸಿದ್ದಾರೆ.
ಶುಭಮನ್ ಗಿಲ್ ಅಲ್ಲವೇ ಅಲ್ಲ; ಸರ್ಫರಾಝ್ ಖಾನ್ ಉಪಖಂಡದ ರಾಜ ಎಂದ ಆರ್ ಅಶ್ವಿನ್! ಏಕೆ ಗೊತ್ತೆ?
ಅಂತಾರಾಷ್ಟ್ರೀಯ ಕ್ರಿಕೆಟ್‌ನ ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ತಂಡಗಳಿಗೆ ಒಂದು ಸರಣಿಯಿಂದ ಮತ್ತೊಂದು ಸರಣಿಗೆ ಹೊಂದಿಕೊಳ್ಳಲು ಹೆಚ್ಚಿನ ಸಮಯ ಸಿಗುವುದಿಲ್ಲ. ಆದರೆ ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡ ಮುಂಚಿತವಾಗಿ ಆಗಮಿಸಿ, ಅಭ್ಯಾಸ ಪಂದ್ಯವನ್ನೂ ಆಡಿರುವುದು ಸಿದ್ಧತೆಗೆ ಹೆಚ್ಚಿನ ನೆರವು ನೀಡಿದೆ ಎಂದು ನಾಯಕ ಶುಭ್‌ಮನ್ ಗಿಲ್ ಹೇಳಿದ್ದಾರೆ.
“ಟೆಸ್ಟ್ ಪಂದ್ಯಕ್ಕೂ ಮುನ್ನ ಕನಿಷ್ಠ ಒಂದು ವಾರ ಅಥವಾ 10 ದಿನಗಳ ಸಮಯ ಸಿಕ್ಕರೆ, ಅದು ನಮ್ಮ ಸಿದ್ಧತೆಗೆ ಬಹಳ ಸಹಾಯ ಮಾಡುತ್ತದೆ. ಕಳೆದ ವರ್ಷ ನಮ್ಮ ವೇಳಾಪಟ್ಟಿ ತುಂಬಾ ಬ್ಯುಸಿಯಾಗಿತ್ತು ಮತ್ತು ಅಂತಹ ಪರಿಸ್ಥಿತಿಯಲ್ಲಿ ಸಿದ್ಧತೆ ನಡೆಸುವುದು ಎಂದಿಗೂ ಸುಲಭವಲ್ಲ. ಹೆಚ್ಚಿನ ಆಟಗಾರರಿಗೆ ಅಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಹೀಗಾಗಿ ಈ ಹೆಚ್ಚುವರಿ ಸಿದ್ಧತಾ ಸಮಯ ನಮಗೆ ಬಹಳ ಉಪಯುಕ್ತವಾಗಿದೆ,” ಎಂದು ಗಿಲ್ ತಿಳಿಸಿದ್ದಾರೆ.
🗣️ The main goal is to play the World Test Championship Final#TeamIndia captain Shubman Gill talks about the progress of the team and the importance of the Sri Lanka Test series.#SLvIND | @ShubmanGill pic.twitter.com/qfSTwseB4d
— BCCI (@BCCI) August 14, 2026
ಕನ್ನಡಿಗರಿಗೆ ಬೆಂಬಲ ವ್ಯಕ್ತಪಡಿಸಿದ ಗಿಲ್
ಭಾರತ ತಂಡದ ನಾಯಕ ಶುಭ್‌ಮನ್ ಗಿಲ್, ಯುವ ಬ್ಯಾಟರ್ ದೇವದತ್ ಪಡಿಕ್ಕಲ್ ಅವರನ್ನು ಬೆಂಬಲಿಸಿದ್ದು, ಜೊತೆಗೆ ಮತ್ತೊಬ್ಬ ಕನ್ನಡಿಗ ವೇಗಿ ಪ್ರಸಿಧ್ ಕೃಷ್ಣ ಅವರ ಇತ್ತೀಚಿನ ಬೌಲಿಂಗ್ ಪ್ರದರ್ಶನವನ್ನು ಪ್ರಶಂಸಿಸಿದ್ದಾರೆ.
“ದೇವದತ್ ಇದಕ್ಕೂ ಮುನ್ನ ಭಾರತ ‘ಎ’ ತಂಡದೊಂದಿಗೆ ಇಲ್ಲಿಗೆ ಬಂದಿದ್ದರು ಮತ್ತು ಉತ್ತಮವಾಗಿ ಆಡಿದ್ದರು. ಈ ಮಾದರಿಯ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಎಲ್ಲಾ ಕೌಶಲ ಮತ್ತು ಸಾಮರ್ಥ್ಯ ಅವರಲ್ಲಿದೆ," ಎಂದ ಗಿಲ್, ಪ್ರಸಿಧ್ ಕೃಷ್ಣ ಅವರ ಬೌಲಿಂಗ್ ಕುರಿತು ಮಾತನಾಡಿದರು. “ಇತ್ತೀಚೆಗೆ ನಾನು ನೋಡಿದಂತೆ ಪ್ರಸಿಧ್ ಅತ್ಯುತ್ತಮವಾಗಿ ಬೌಲ್ ಮಾಡುತ್ತಿದ್ದಾರೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
IND vs SL: ಶ್ರೀಲಂಕಾ ವಿರುದ್ಧದ ಮೊದಲನೇ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್ XI ಆರಿಸಿದ ಆರ್ ಅಶ್ವಿನ್!
ಇದೇ ವೇಳೆ, ಮೊದಲ ಟೆಸ್ಟ್ ನಡೆಯಲಿರುವ ಗಾಲೆ ಕ್ರೀಡಾಂಗಣದ ಸೌಂದರ್ಯದ ಬಗ್ಗೆಯೂ ಗಿಲ್ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ ತೆರೆದ ಮೈದಾನಗಳಲ್ಲಿ ಗಾಳಿಯ ವೇಗ ಮತ್ತು ದಿಕ್ಕು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಎಚ್ಚರಿಸಿದರು.
“ತೆರೆದ ಮೈದಾನಗಳಲ್ಲಿ ಗಾಳಿ ಬಹಳ ಮುಖ್ಯವಾಗುತ್ತದೆ. ಬ್ಯಾಟರ್ ಆಗಿ ಸ್ಪಿನ್ನರ್‌ಗಳನ್ನು ಆಕ್ರಮಣಿಸಲು ಬಯಸಿದಾಗ, ಗಾಳಿ ನಮ್ಮ ಪರವಾಗಿದೆಯೇ ಅಥವಾ ವಿರುದ್ಧವಾಗಿದೆಯೇ ಎಂಬುದನ್ನು ನಾವು ಗಮನಿಸಬೇಕು,” ಎಂದು ಗಿಲ್ ಹೇಳಿದ್ದಾರೆ.