IPL 2026: ʻಕ್ರಿಸ್ ಗೇಲ್ ರೆಕಾರ್ಡ್ ಮುರಿದು 200 ರನ್ ಸಿಡಿಸುವುದು ನನ್ನ ಗುರಿʼ-ವೈಭವ್ ಸೂರ್ಯವಂಶಿ ವಾರ್ನಿಂಗ್!
ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ತಂಡಗಳಿಗೆ ಭಯ ಹುಟ್ಟಿಸಿರುವ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ದಿಗ್ಗಜ ಕ್ರಿಸ್ ಗೇಲ್ ಅವರ ದಾಖಲೆಯ ಮೇಲೆ ಕಣ್ಣಿಟ್ಟಿದ್ದಾರೆ. ಅವರು ಐಪಿಎಲ್ ಟೂರ್ನಿಯಲ್ಲಿ 200 ರನ್‌ಗಳ ಸಿಡಿಸಲು ಎದುರು ನೋಡುತ್ತಿದ್ದಾರೆ.
200 ರನ್‌ಗಳ ಗುರಿ ಹೊಂದಿರುವುದಾಗಿ ತಿಳಿಸಿದ ವೈಭವ್ ಸೂರ್ಯವಂಶಿ! -
ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ತಂಡಗಳ ಬೌಲರ್‌ಗಳಿಗೆ ನಡುಕ ಹುಟ್ಟಿಸಿರುವ ರಾಜಸ್ಥಾನ್ ರಾಯಲ್ಸ್ ಆರಂಭಿಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ (Vaibhav Sooryavanshi), ತಮ್ಮ ಮುಂದಿನ ಗುರಿ ಏನೆಂದು ರಿವೀಲ್ ಮಾಡಿದ್ದಾರೆ. ಈಗಾಗಲೇ ಜೂನಿಯರ್ ಕ್ರಿಕೆಟ್ ಹಾಗೂ ಐಪಿಎಲ್ ಟೂರ್ನಿಯಲ್ಲಿ ಬೌಲರ್‌ಗಳನ್ನು ಬೆಂಡೆತ್ತಿರುವ 15ನೇ ವಯಸ್ಸಿನ ಆಟಗಾರ, ತಮ್ಮ ಮುಂದಿನ ಗುರಿ ಏನೆಂಬುದನ್ನು ರಿವೀಲ್ ಮಾಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 200 ರನ್‌ಗಳನ್ನು ಸಿಡಿಸಿ ನೂತನ ಮೈಲುಗಲ್ಲು ತಲುಪಲು ಎದುರು ನೋಡುತ್ತಿದ್ದೇನೆಂದು ಹೇಳಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ದಿಗ್ಗಜ ಕ್ರಿಸ್ ಗೇಲ್ ಅವರು 175 ರನ್‌ಗಳನ್ನು ಸಿಡಿಸಿರುವುದು ಇಲ್ಲಿಯವರೆಗೂ ಟಿ20 ಕ್ರಿಕೆಟ್‌ನಲ್ಲಿ ದಾಖಲಾದ ಅತ್ಯಂತ ಗರಿಷ್ಠ ಮೊತ್ತವಾಗಿದೆ. ಇಲ್ಲಿಯವರೆಗೂ ಈ ದಾಖಲೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಾಗಿಲ್ಲ. 2013ರ ಐಪಿಎಲ್ ಟೂರ್ನಿಯಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ಎದುರಿನ ಪಂದ್ಯದಲ್ಲಿ ಈ ದಾಖಲೆಯನ್ನು ಬರೆದಿದ್ದರು. ಇದೀಗ ವೈಭವ್ ಸೂರ್ಯವಂಶಿ ಅವರು ಕ್ರಿಸ್ ಗೇಲ್ ದಾಖಲೆಯನ್ನು ಮುರಿಯುವ ವಿಶ್ವಾಸವನ್ನು ಹೊರ ಹಾಕಿದ್ದಾರೆ.
MI vs RR: ನಾಲ್ಕನೇ ತಂಡವಾಗಿ ಪ್ಲೇ-ಆಫ್‌ಗೆ ಲಗ್ಗೆಯಿಟ್ಟ ರಾಜಸ್ಥಾನ್; ಪಂಜಾಬ್, ಕೆಕೆಆರ್ ಔಟ್
ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ವೈಭವ್ ಸೂರ್ಯವಂಶಿ,"ನಾನು ಟಿ20 ಕ್ರಿಕೆಟ್‌ನಲ್ಲಿ 200 ರನ್‌ಗಳನ್ನು ಬಾರಿಸಬೇಕು," ಎಂದು ಹೇಳಿದರು. ಇದಕ್ಕೆ ಪ್ರತಿಕಿಯಿಸಿದ ಪೀಟರ್ಸನ್, ʻಕ್ರಿಸ್ ಗೇಲ್ 175 ರನ್‌ಗಳನ್ನು ಬಾರಿಸಿದ್ದಾರೆ,ʼ ಎಂದು ನೆನಪಿಸಿದರು. ಇದರ ಬೆನ್ನಲ್ಲೆ ಮಾತನಾಡಿದ ವೈಭವ್,"ಒಂದು ವೇಳೆ ನಾನು 20 ಓವರ್‌ಗಳವರೆಗೂ ಬ್ಯಾಟ್ ಮಾಡಿದರೆ, 200 ರನ್‌ಗಳ ದಾಖಲೆಯನ್ನು ಖಂಡಿತವಾಗಿಯೂ ಬರೆಯುತ್ತೇನೆ," ಎಂದು ಹೇಳಿದ್ದಾರೆ.
ವೈಭವ್ ಸೂರ್ಯವಂಶಿ ಅವರು ಈಗಾಗಲೇ ಹಲವು ದೊಡ್ಡ-ದೊಡ್ಡ ಇನಿಂಗ್ಸ್‌ಗಳನ್ನು ಆಡಿದ್ದಾರೆ. ಅವರು ಬಿಹಾರ ಪರ ವಿಜಯ ಹಝಾರೆ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ 190 ರನ್‌ಗಳನ್ನು ಬಾರಿಸಿದ್ದರು ಹಾಗೂ ಅಂಡರ್ -19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅವರು 175 ರನ್‌ಗಳನ್ನು ಚಚ್ಚಿದ್ದರು. ಪ್ರಸ್ತುತ ಅವರ ಟಿ20 ಕ್ರಿಕೆಟ್‌ನಲ್ಲಿನ ವೈಯಕ್ತಿಕ ಗರಿಷ್ಠ ಮೊತ್ತ 144 ರನ್‌ಗಳಾಗಿವೆ. ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್‌ಗಳಿಗೆ ನಡುಕ ಹುಟ್ಟಿಸಬಲ್ಲ ಅವರು, 200 ರನ್‌ಗಳ ದಾಖಲೆಯನ್ನು ಮುಂದೊಂದು ದಿನ ಮುರಿದರೂ ಅಚ್ಚರಿ ಇಲ್ಲ.
MI vs RR: ಐಪಿಎಲ್‌ನಲ್ಲಿ ಚೊಚ್ಚಲ ಕ್ಯಾಚ್ ಹಿಡಿದು ಇತಿಹಾಸ ನಿರ್ಮಿಸಿದ ಸೂರ್ಯವಂಶಿ
ಕಳೆದ ವರ್ಷ ಇಂಗ್ಲೆಂಡ್ ಅಂಡರ್-19 ತಂಡದ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಅವರು ಕೇವಲ 52 ಎಸೆತಗಳಲ್ಲಿ ಶತಕ ಸಿಡಿಸಿ, 143 ರನ್‌ಗಳ ಭರ್ಜರಿ ಇನಿಂಗ್ಸ್ ಆಡಿದ್ದರು. ಇದರೊಂದಿಗೆ ಯೂತ್ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತಿ ವೇಗವಾಗಿ ಶತಕ ದಾಖಲಿಸಿದ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದರು. ಇದಕ್ಕೂ ಮುನ್ನ, ಎಸಿಸಿ ಪುರುಷರ ಅಂಡರ್-19 ಏಷ್ಯಾಕಪ್ ಟೂರ್ನಿಯಲ್ಲಿ ಯುಎಇ ವಿರುದ್ಧದ ಪಂದ್ಯದಲ್ಲಿ ಅವರು ಸಿಡಿಲಬ್ಬರದ ಶತಕ ಬಾರಿಸಿ, ಭಾರತೀಯ ಆಟಗಾರರ ಪೈಕಿ ಟಿ20 ಕ್ರಿಕೆಟ್‌ನಲ್ಲಿ ಜಂಟಿ ಮೂರನೇ ಅತಿ ವೇಗದ ಶತಕದ ಸಾಧನೆ ಮಾಡಿದ್ದಾರೆ. ಈ ಮೂಲಕ ರಿಷಭ್ ಪಂತ್ ಹಾಗೂ ಅಭಿಷೇಕ್ ಶರ್ಮಾ ಅವರ ಸಾಲಿಗೆ ಸೇರಿದ್ದಾರೆ.
ಸೂರ್ಯವಂಶಿಯ ನಿರ್ಭೀತಿಯ ಆಟದ ಶೈಲಿ, 2010ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ದ್ವಿಶತಕ ಸಿಡಿಸಿದ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಇಂಗ್ಲೆಂಡ್ ಅಂಡರ್-19 ತಂಡದ ವಿರುದ್ಧ ಶತಕ ದಾಖಲಿಸಿದ ಬಳಿಕ ಮಾತನಾಡಿದ್ದ ಅವರು, “ಮುಂದಿನ ಪಂದ್ಯದಲ್ಲಿ 200 ರನ್ ಗಳಿಸಲು ಪ್ರಯತ್ನಿಸುತ್ತೇನೆ. ಸಂಪೂರ್ಣ 50 ಓವರ್‌ಗಳವರೆಗೆ ಬ್ಯಾಟ್ ಮಾಡಲು ಯತ್ನಿಸುತ್ತೇನೆ. ನಾನು ಹೆಚ್ಚು ರನ್ ಗಳಿಸಿದಷ್ಟು ತಂಡಕ್ಕೂ ಹೆಚ್ಚಿನ ಲಾಭವಾಗುತ್ತದೆ,” ಎಂದು ಹೇಳಿದ್ದರು.