ʻಡಿಯರ್ ಹಸ್ಬೆಂಡ್’ ಸಿನಿಮಾಕ್ಕಾಗಿ ಒಂದಾದ ಸೂರಜ್ ಗೌಡ - ಶರಣ್ಯಾ ಶೆಟ್ಟಿ; ಕಂಪ್ಲೀಟ್ ಆಯ್ತು ಸಾಂಗ್ಸ್ ರೆಕಾರ್ಡಿಂಗ್
ಸೂರಜ್ ಗೌಡ ಹಾಗೂ ಶರಣ್ಯಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘ಡಿಯರ್ ಹಸ್ಬೆಂಡ್’ ಚಿತ್ರದ ಹಾಡುಗಳ ಧ್ವನಿಮುದ್ರಣ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ವೀರ್ ಸಮರ್ಥ್ ಸಂಗೀತದಲ್ಲಿ ಮೂಡಿಬಂದಿರುವ ಮಂಡ್ಯ ಸೊಗಡಿನ ‘ಮಾಲಾಶ್ರೀ ಸಿಕ್ಕಳೋ...’ ಟಪೋರಿ ಗೀತೆಗೆ ಬಾಲಿವುಡ್‌ನ ನಕಾಶ್ ಧ್ವನಿಯಾಗಿದ್ದಾರೆ.
-
ಸೂರಜ್ ಗೌಡ ಮತ್ತು ಶರಣ್ಯಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ‘ಡಿಯರ್ ಹಸ್ಬೆಂಡ್’ ಸಿನಿಮಾದ ಹಾಡುಗಳ ಧ್ವನಿಮುದ್ರಣ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ‘ಜಿ9 ಕಮ್ಯುನಿಕೇಶನ್ ಅ್ಯಂಡ್ ಮೀಡಿಯಾ’ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗುತ್ತಿರುವ, ಗುರುರಾಜ ಕುಲಕರ್ಣಿ (ನಾಡಗೌಡ) ನಿರ್ದೇಶನದ ಈ ಚಿತ್ರದ ಮೊದಲ ಹಂತದ ಶೂಟಿಂಗ್ ಈಗಾಗಲೇ ಸದ್ದಿಲ್ಲದೆ ಮುಕ್ತಾಯಗೊಂಡಿದೆ.
ಬಾಲಿವುಡ್ ಗಾಯಕನ ಧ್ವನಿಯಲ್ಲಿ ಧಮಾಕಾ ಸಾಂಗ್
ಈ ಚಿತ್ರದ ಕೊನೆಯ ಹಾಗೂ ಪ್ರಮುಖ ಹಾಡಿಗೆ ಬಾಲಿವುಡ್‌ನ ಖ್ಯಾತ ಗಾಯಕ ನಕಾಶ್ ಧ್ವನಿಯಾಗಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಸ್ಟುಡಿಯೋದಲ್ಲಿ ವೀರ್ ಸಮರ್ಥ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ‘ಮಾಲಾಶ್ರೀ ಸಿಕ್ಕಳೋ… ಮೆಲ್ಲನೆ ನಕ್ಕಳೋ…’ ಎಂಬ ಟಪೋರಿ ಶೈಲಿಯ ಹಾಡಿನ ರೆಕಾರ್ಡಿಂಗ್ ಜರುಗಿತು. ಪ್ರಮೋದ್ ಮರವಂತೆ ಸಾಹಿತ್ಯ ಬರೆದಿರುವ ಈ ಹಾಡಿನ ಧ್ವನಿಮುದ್ರಣವು ರಾತ್ರಿಯಿಂದ ಮುಂಜಾನೆಯವರೆಗೂ ನಡೆದಿದ್ದು, ಗಾಯಕ ನಕಾಶ್ ಸಾಹಿತ್ಯದ ಅರ್ಥ ತಿಳಿದುಕೊಂಡು ಅತ್ಯಂತ ಖುಷಿಯಿಂದ ಹಾಡಿದ್ದಾರೆ. ಈ ಹಾಡು ಚಿತ್ರದ ಪ್ರಮುಖ ಆಕರ್ಷಣೆ ಆಗಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಮಹಿಳಾ ಪ್ರಧಾನ ಪಾತ್ರದತ್ತ ಶರಣ್ಯಾ ಚಿತ್ತ
ಮಂಡ್ಯ ಸೊಗಡಿನ ಮಾಸ್ ಸಾಂಗ್
"ಸಂಗೀತ ನಿರ್ದೇಶಕ ವೀರ್ ಸಮರ್ಥ್ ಮತ್ತು ಗೀತಸಾಹಿತಿ ಪ್ರಮೋದ್ ಮರವಂತೆ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ಈ ಹಾಡು ಇಲ್ಲಿಯವರೆಗಿನ ಅವರ ಶೈಲಿಗಿಂತ ಸಂಪೂರ್ಣ ವಿಭಿನ್ನವಾಗಿದೆ. ಮಂಡ್ಯ ಹಿನ್ನೆಲೆಯಲ್ಲಿ ಮೂಡಿಬರಲಿರುವ ಈ ಹಾಡು ಪ್ರೇಕ್ಷಕರನ್ನು ಕೂತಲ್ಲೇ ಕುಣಿಸಲಿದೆ" ಎಂದು ನಿರ್ದೇಶಕ ಗುರುರಾಜ ಕುಲಕರ್ಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ರೆಕಾರ್ಡಿಂಗ್ ವೇಳೆ ನಟ ಪ್ರವೀಣ್ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರ್ಷಾಂತ್ಯಕ್ಕೆ ಸಿನಿಮಾ ಬಿಡುಗಡೆ
ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಶೈಲಿಯ ಈ ಚಿತ್ರದಲ್ಲಿ ಸೂರಜ್ ಗೌಡ, ಶರಣ್ಯಾ ಶೆಟ್ಟಿ ಅವರೊಂದಿಗೆ ಪ್ರವೀಣ್ ಹಾಗೂ ಹಿರಿಯ ನಟ ಕುಮಾರ ಬಂಗಾರಪ್ಪ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ರಘು ನಿಡುವಳ್ಳಿ ಸಂಭಾಷಣೆ, ಸಂಪತ್ ಡಿ.ಆರ್ ನಿರ್ಮಾಣ ವಿನ್ಯಾಸ ಹಾಗೂ ಬಿ.ಎಸ್. ಕೆಂಪರಾಜ್ ಸಂಕಲನ ನಿರ್ವಹಿಸುತ್ತಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ನಟ ಕಿಚ್ಚ ಸುದೀಪ್ ಈ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದರು. ಬೆಂಗಳೂರು, ಮಂಡ್ಯ, ಮೈಸೂರು, ಶ್ರೀರಂಗಪಟ್ಟಣ ಮತ್ತು ಗೋವಾದಲ್ಲಿ ಮುಂದಿನ ಹಂತದ ಚಿತ್ರೀಕರಣದ ಯೋಜನೆ ಹಾಕಿಕೊಂಡಿರುವ ಚಿತ್ರತಂಡ, ಇದೇ ವರ್ಷಾಂತ್ಯಕ್ಕೆ ಸಿನಿಮಾವನ್ನು ತೆರೆಗೆ ತರಲು ಭರದಿಂದ ಕೆಲಸ ಮಾಡುತ್ತಿದೆ.