ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಲು ಗೌತಮ್ ಗಂಭೀರ್ ಕಾರಣ?
ಭಾರತೀಯ ಕ್ರಿಕೆಟ್ ತಂಡಕ್ಕೆ ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ನೇಮಕವಾದಾಗಿನಿಂದ ಟೀಮ್ ಇಂಡಿಯಾ ಹಲವು ಆಯಾಮಗಳಲ್ಲಿ ಬದಲಾವಣೆ ಕಂಡಿದೆ. ತಂಡದಲ್ಲಿ ಒಂದು ರೀತಿಯ ನಿರಂತರ ಗೊಂದಲಮಯ ವಾತಾವರಣ ಸುತ್ತುವರಿದಿದೆ. ಅವರ ಕೆಲವು ಆಯ್ಕೆಗಳು ಮತ್ತು ನಿರ್ಧಾರಗಳು ತಂಡದ ಮೇಲೆ ನೇರ ಪರಿಣಾಮ ಬೀರಿವೆ. ಈ ಕುರಿತು ಪತ್ರಿಕೋದ್ಯಮ ವಿದ್ಯಾರ್ಥಿ ಕೆ ಎನ್ ರಂಗು ಚಿತ್ರದುರ್ಗ ತಮ್ಮ ಅಂಕಣದಲ್ಲಿ ವಿವರಿಸಿದ್ದಾರೆ.
ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಲು ಗಂಭೀರ್ ಕಾರಣ? -
ಅಂಕಣ: ಕೆ. ಎನ್. ರಂಗು, ಚಿತ್ರದುರ್ಗ
"ಹಳೆ ಬೇರು ಹೊಸ ಚಿಗುರು ಕೂಡಿದರೆ ಮರ ಸೊಬಗು" ಎನ್ನುವ ಸಾಲು ಕೇವಲ ಸಸ್ಯ ಜಾತಿಗೆ ಮಾತ್ರ ಸೀಮಿತವಾಲ್ಲ. ಬದಲಾಗಿ ಸೃಷ್ಠಿಯ ಬಹುತೇಕ ವಿಷಯಗಳಲ್ಲಿ ಈ ತತ್ವ ಪಾಲನೆಯಾಗುತ್ತದೆ. ಅದರಂತೆ ಭಾರತೀಯ ಕ್ರಿಕೆಟ್‌ನಲ್ಲೂ ಕೂಡ ಟೀಮ್ ಇಂಡಿಯಾದ ಅನೇಕ ಬೇರುಗಳು ಕ್ರಿಕೆಟ್ ಅಂಗಳದಲ್ಲಿ ಚಿಗುರಿದ ಎಲೆಗಳನ್ನು ಲಾಲನೆ, ಪಾಲನೆ ಮತ್ತು ಪೋಷಣೆ ಮಾಡಿಕೊಂಡು ಇಲ್ಲಿಯ ತನಕ ಬಂದಿವೆ. ಪ್ರತಿಯೊಂದು ಕಾಲಘಟ್ಟದಲ್ಲೂ ಭಾರತ ತಂಡ ಹಲವು ಆಯಾಮಗಳಲ್ಲಿ ಬದಲಾವಣೆ ಕಂಡಿದೆ. ಇಲ್ಲಿಯವರೆಗಿನ ತನ್ನ ಇತಿಹಾಸದಲ್ಲಿ ಭಾರತ ತಂಡ ಹಲವು ಕೋಚ್‌ಗಳನ್ನು ಕಂಡಿದೆ. ಪ್ರತಿಯೊಬ್ಬರೂ ತಮ್ಮದೇ ಆದ ಶೈಲಿಯಲ್ಲಿ ತಂಡಕ್ಕೆ ಮಾರ್ಗದರ್ಶನವನ್ನು ನೀಡಿದ್ದಾರೆ. ಈ ವಿಷಯದಲ್ಲಿ ಥಟ್ಟನೆ ನೆನಪಾಗುವುದು ರಾಹುಲ್ ದ್ರಾವಿಡ್ ಮತ್ತು ರವಿಶಾಸ್ತ್ರಿಯವರ ತಂತ್ರಗಾರಿಕೆಯ ಹೊಣೆ ಮತ್ತು ಅವರ ನೇತೃತ್ವದಲ್ಲಿ ಭಾರತ ತಂಡ ಕಂಡ ಶ್ರೇಯಸ್ಸು.
ಇನ್ನೂ ಮುಂದುವರಿದು ನೋಡುವುದಾದರೆ, ತಂಡದ ಸ್ಥಿರತೆ ಮತ್ತು ಆತ್ಮ ವಿಶ್ವಾಸದ ಬಲಿಷ್ಠ ಭಾರತ ತಂಡವನ್ನು ಕಟ್ಟಲು ಈ ಇಬ್ಬರ ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಗೌತಮ್ ಗಂಭೀರ್ ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ನೇಮಕವಾದ ಬಳಿಕ ತಂಡದ ವಾತಾವರಣ ಸಂಪೂರ್ಣವಾಗಿ ಬದಲಾಗಿದೆ. ರಾಹುಲ್ ದ್ರಾವಿಡ್ ಅವಧಿಯಲ್ಲಿ ಯುವ ಪ್ರತಿಭೆಗಳ ಸಂಯೋಜನೆ ಅತ್ಯಂತ ಪರಿಣಾಮಕಾರಿಯಾಗಿ ನಡೆಯುತ್ತಿತ್ತು. ಶ್ರೇಯಸ್ ಅಯ್ಯರ್, ಹರ್ಷಲ್ ಪಟೇಲ್, ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಅರ್ಷದೀಪ್ ಸಿಂಗ್ ಹಾಗೂ ಸೇರಿದಂತೆ ಹಲವರು ಭಾರತೀಯ ತಂಡಕ್ಕೆ ಬಂದಿದ್ದಾರೆ.
ರವಿ ಶಾಸ್ತ್ರಿ ಮತ್ತು ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಅವಕಾಶ ಪಡೆದವರೆಲ್ಲರೂ ತಂಡದಲ್ಲಿ ಸ್ಥಿರತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ. ಈ ರೀತಿಯಾದಂತಹ ಬೆಳವಣಿಗೆಗಳು ಗಂಭೀರ್ ನಾಯಕತ್ವದಲ್ಲಿ ಕಾಣಸಿಗುತ್ತಿಲ್ಲ. ಯುವ ಆಟಗಾರರು ನಿರಂತರ ಬದಲಾವಣೆಗಳಿಂದ ಗೊಂದಲದ ಗೂಡಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಇದು ಭವಿಷ್ಯದ ಭಾರತ ತಂಡಕ್ಕೆ ಆಘಾತಕಾರಿಯಾಗಬಹುದು. ಹಾಗಾಗಿ ಗಂಭೀರ್ ಮಾರ್ಗದರ್ಶನದ ಈ ಗೊಂದಲದ ಆಯ್ಕೆಗಳು ಯುವ ಆಟಗಾರರ ಪ್ರತಿಭೆಯನ್ನು ಚಿವುಟುವಂತಿವೆ.
AUS vs IND: ಆಸ್ಟ್ರೇಲಿಯಾಗೆ ಆಘಾತ, ಕೊನೆಯ ಎರಡು ಟಿ20ಐ ಪಂದ್ಯಗಳಿಂದ ಟ್ರಾವಿಸ್ ಹೆಡ್ ಔಟ್!
ರವಿಶಾಸ್ತ್ರಿಯವರ ಅವಧಿಯಲ್ಲಿ ತಂಡದ ಫಿಟ್‌ನೆಸ್, ಶಿಸ್ತು, ಆಕ್ರಮಣಶೀಲತೆಯ ಆಟ ಮತ್ತು ಸೃಜನಾತ್ಮಕ ತಂತ್ರಗಾರಿಕೆ ಥಟ್ಟನೆ ನೆನಪಿಗೆ ಬರುತ್ತವೆ. ಇವರ ಅವಧಿಯಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನೆಲದಲ್ಲಿ ಟೀಮ್ ಇಂಡಿಯಾ ದಾಖಲೆಯ ಪ್ರದರ್ಶನವನ್ನು ತೋರಿತ್ತು. ಇದರಲ್ಲಿ ಮುಖ್ಯವಾಗಿ ಭಾರತ ತಂಡ ಎರಡು ಬಾರಿ, ಆಸ್ಟ್ರೇಲಿಯಾದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಗೆದ್ದಿತ್ತು. ಆದರೆ ಗಂಭೀರ್ ಯುಗದಲ್ಲಿ ಈ ರೀತಿಯ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿದೆ. ತಂಡದ ಆಯ್ಕೆ, ಎದುರಾಳಿ ತಂಡದ ವಿರುದ್ದ ಹೆಣೆದ ತಂತ್ರಗಾರಿಕೆ, ಬ್ಯಾಟಿಂಗ್ ಕ್ರಮಾಂಕದಲ್ಲಿ ಅಸ್ಪಷ್ಟತೆ, ಬೌಲರ್‌ಗಳಿಗೆ ಅವಕಾಶ ನೀಡುವಲ್ಲಿ ಅವರು ಇಟ್ಟುಕೊಂಡಿರುವ ಮಾನದಂಡಗಳು ಈ ಎಲ್ಲಾ ಅಂಶಗಳ ಕಾರಣದಿಂದಾಗಿ ಅವರ ಮಾರ್ಗದರ್ಶನದಲ್ಲಿ ಯುವ ಪ್ರತಿಭೆಗಳು ಸೊರಗುವಂತಾಗಿದೆ.
ಹಿಂದಿನ ಕೋಚ್‌ಗಳು ಆಟಗಾರರ ಮೇಲೆ ಒತ್ತಡವೇರುತ್ತಿರಲಿಲ್ಲ. ಬದಲಾಗಿ ಅವಕಾಶಗಳನ್ನು ಕೊಟ್ಟು ಅಗತ್ಯವಿದ್ದಾಗ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು. ಪ್ರತೀ ಆಟಗಾರನ ಪ್ರದರ್ಶನದ ಆಧಾರದ ಮೇಲೆ ಆಟಗಾರರನ್ನು ತಿದ್ದಿ, ತೀಡಿ ಅವಕಾಶ ನೀಡಿ ತಂಡದ ಆಟಗಾರರ ಮೇಲೆ ನಿರಂತರ ನಿಗಾ ವಹಿಸುತ್ತಿದ್ದರು. ಆದರೆ ಗಂಭೀರ್ ಅವರ ಶೈಲಿ ಐಪಿಎಲ್ ಮಾದರಿಯ ಚುಟುಕು ಕ್ರಿಕೆಟ್‌ಗೆ ಮಾತ್ರ ತಂಡವನ್ನು ಸಿದ್ದಪಡಿಸುತ್ತಿರುವ ರೀತಿಯಲ್ಲಿ ಗೋಚರಿಸುತ್ತಿದೆ. ಇದರಿಂದಾಗಿ ದೀರ್ಘಕಾಲಿಕವಾದ ಯೋಜನೆಗಳು, ಶ್ರದ್ದೆ, ಕಠಿಣ ಆಯ್ಕೆಗಳು ಆಟಗಾರರಲ್ಲಿ ಕಾಣುತ್ತಿಲ್ಲ.
ಯಾವುದೇ ಪಂದ್ಯದಲ್ಲಿ ಬ್ಯಾಟಿಂಗ್ ಕ್ರಮ, ಫೀಲ್ಡ್ ಸೆಟ್, ಬೌಲಿಂಗ್ ಆಯ್ಕೆಗಳು ತುಂಬಾ ಸ್ಪಷ್ಟವಾಗಿರಬೇಕಾಗುತ್ತದೆ. ಈ ನಿರ್ಧಾರಗಳನ್ನು ಮೈದಾನದಲ್ಲಿ ತಂಡದ ನಾಯಕನೇ ಅನುಷ್ಠಾನಗೊಳಿಸಿದರೂ, ಮುಖ್ಯ ಕೋಚ್ ಅವರ ಪಾತ್ರವನ್ನು ಕೂಡ ಕಡೆಗಣಿಸುವಂತಿಲ್ಲ. ತಂಡದಲ್ಲಿದ್ದ ಈ ಮನೋಭಾವ ಮತ್ತು ಸಂಯೋಜನೆ ಭಾರತಕ್ಕೆ ನಿರಂತರ ಜಯ ತಂದುಕೊಟ್ಟಿತು. ಉದಾಹರಣೆಗೆ ರಾಹುಲ್ ದ್ರಾವಿಡ್ ಅವಧಿಯಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದುಕೊಂಡಿತ್ತು ಹಾಗೂ ಬ್ಯಾಟಿಂಗ್ ಕ್ರಮಾಂಕ ಮತ್ತು ತಂಡದ ಸ್ಥಿರತೆ ಧೃಡವಾಗಿತ್ತು. ವಿದೇಶಗಳಲ್ಲಿ ತಂಡದ ಪ್ರದರ್ಶನ, ತಂಡದ ಒಗ್ಗಟ್ಟು ಗೊಂದಲ ರಹಿತ ಆಯ್ಕೆಗಳು ತಂಡವನ್ನು ವಿಶ್ವ ಕ್ರಿಕೆಟ್ ವೇದಿಕೆಯಲ್ಲಿ ಉತ್ಕ್ರಷ್ಟ ಮಟ್ಟಕ್ಕೆ ಕೊಂಡೊಯ್ದವು. ಈ ರೀತಿಯ ವಿಷಯಗಳ ಮೇಲೆ ಗಂಭೀರ್ ಅವರು ಇನ್ನು ಗಂಭೀರವಾಗಿ ಚಿಂತನೆ ನಡೆಸಿ ನಿರ್ಧಾರಗಳನ್ನು ಕೈಗೊಳ್ಳುವುದು ಅತ್ಯಂತ ಅನಿವಾರ್ಯ.
IND vs AUS- ಅರ್ಷದೀಪ್, ವಾಷಿಂಗ್ಟನ್ ಮಿಂಚು ; ಆಸ್ಟ್ರೇಲಿಯಾಗೆ ತಿರುಗೇಟು ನೀಡಿದ ಭಾರತ!
ಮುಖ್ಯವಾಗಿ ಟೀಮ್ ಇಂಡಿಯಾದ ಹೆಡ್ ಕೋಚ್ ಅವರ ಅವಧಿಯಲ್ಲಿ ವ್ಯಕ್ತಿತ್ವಗಳ ನಡುವೆ ಸಂಘರ್ಷ ಆಗಾಗ್ಗೆ ಬೂದಿ ಮುಚ್ಚಿದ ಕೆಂಡದಂತೆ ಕಾಣಿಸಿಕೊಳ್ಳುತ್ತಿದೆ. ಹಿರಿಯ ಆಟಗಾರರು ತಂಡದಲ್ಲಿ ತಮ್ಮ ಸ್ಥಾನ ಕಳೆದುಕೊಂಡವರಂತೆ ತಮ್ಮ ನಡೆಯನ್ನು ತೋರುತ್ತಿದ್ದಾರೆ. ಮಾಜಿ ಕೋಚ್‌ಗಳು ಆಟಗಾರರ ಮಧ್ಯೆ ಇದ್ದ ವೈಯಕ್ತಿಕ ಅಭಿಪ್ರಾಯವನ್ನು ಗೌರವಿಸುತ್ತಿದ್ದರು. ಆದರೆ ಗಂಭೀರ್ ಅವರು ಈ ವಿಚಾರದಲ್ಲಿ ಪದೇ ಪದೇ ಎಡವುತ್ತಿದ್ದಾರೆ. ಉದಾಹರಣೆಗೆ ಐಪಿಎಲ್‌ನಲ್ಲಿ ಗಂಭಿರ್ ಅವರು ಲಖನೌ ಸೂಪರ್ ಜಯಂಟ್ಸ್ ತಂಡದ ಕೋಚ್ ಆಗಿದ್ದಾಗ ಕೈಲ್ ಮೇಯರ್ಸ್ ಮತ್ತು ವಿರಾಟ್ ಕೊಹ್ಲಿಯವರ ನಡುವಿನ ಮಾತುಕಥೆ ಮಧ್ಯ ಪ್ರವೇಶಿಸಿ ಮೈದಾನದಲ್ಲಿ ದೊಡ್ಡ ಹೈಡ್ರಾಮ ಸೃಷ್ಟಿಯಾಗಲು ಕಾರಣವಾದರು. ಈ ಬೆಳವಣಿಗೆ ಅಫ್ಘಾನಿಸ್ತಾನದ ಆಟಗಾರ ನವೀನ್ ಉಲ್ ಹಕ್ ಮತ್ತು ಕೊಹ್ಲಿಯವರ ನಡುವಿನ ವೈಯಕ್ತಿಕ ಜಗಳಕ್ಕೆ ಪ್ರೇರಣೆ ನೀಡಿದಂತಿತ್ತು. ಹೀಗಾಗಿ ಗಂಭೀರ್ ಅವರ ಈ ನಡೆ ಸರಿಯಲ್ಲ ಅದು ಆಟಗಾರರ ನಡುವಿನ ಒಗ್ಗಟ್ಟನ್ನು ಮುರಿಯುತ್ತದೆ.
ಗಂಭೀರ್ ಅವರು ಕೂಡ ಒಬ್ಬ ಕ್ರಿಕೆಟಿಗರಾಗಿ ತಂಡದಲ್ಲಿದ್ದ ವೇಳೆ ಮೈದಾನದಲ್ಲಿ ಅವರು ತೋರಿದ ಆಕ್ರೋಶ, ಉತ್ಸಾಹ ಎದುರಾಳಿಗಳ ಎದೆ ನಡುಗಿಸುತ್ತಿತ್ತು. ಆದರೆ ಕೋಚ್ ಆಗಿ ಈ ಸ್ವಭಾವವನ್ನು ಅವರು ತೋರುತ್ತಿರುವುದೇ ಬಹುದೊಡ್ಡ ಸಮಸ್ಯೆಯಾಗಿದೆ. ಒಂದು ತಂಡವನ್ನು ಮುನ್ನಡೆಸುವಾಗ ಏಳು ಬೀಳುಗಳು ಸಹಜ, ನೋವು ನಲಿವುಗಳು ಸಹಜ, ಗೆಲುವು ಸೋಲುಗಳು ಸಾಮಾನ್ಯ, ಹತಾಶೆ, ನಿರಾಶೆ ಸ್ವಾಭಾವಿಕ. ಇದೆಲ್ಲವನ್ನು ನುಂಗಿಕೊಂಡು ತಂಡದ ಸಮನ್ವಯತೆಗಾಗಿ ಚಿಂತಿಸಬೇಕಾಗುತ್ತದೆ. ಆದರೆ ಗೌತಮ್ ಗಂಭೀರ್ ಈ ಎಲ್ಲಾ ಅಂಶಗಳಿಂದ ಪ್ರಭಾವಿತರಾಗಿ ತಂಡದಲ್ಲಿ ನಿರಂತರ ಬದಲಾವಣೆ ತಂದು ಸ್ಥಿರತೆ ಕಾಪಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. "ಆಕ್ರಮಣಶೀಲತೆಯ ಆಟವೇ ಗೆಲುವಿನ ರಹಸ್ಯ" ಎನ್ನುವ ಅವರ ತತ್ವ ಸ್ಪರ್ಧಾ ಮನೋಭಾವದ ವಿರುದ್ಧವಾಗಿದೆ. ಈ ಕಾರಣದಿಂದಾಗಿ ಅವರನ್ನು ಹಲವು ಆಟಗಾರರು ಒಪ್ಪುವುದಿಲ್ಲ.
ಅವರ ಮಾತಿನಲ್ಲಿ ಸಂವಹನಕಿಂತಲೂ ಅದೇಶ ಹೆಚ್ಚು ಎನ್ನುವ ಆಪಾಧನೆಗಳು ಅವರ ಮೇಲೆ ನಿರಂತರವಾಗಿ ಕೇಳಿ ಬರುತ್ತಿವೆ. ಇದರ ಕಾರಣ ನೀಲಿ ಪಡೆಯ ಡ್ರೆಸಿಂಗ್ ರೂಂನಲ್ಲಿ ಮೊದಲಿದ್ದ ಹುರುಪಿಲ್ಲ. ಇಂದಿನ ಕ್ರೀಡೆಯಲ್ಲಿ ಶಾಂತಿ, ತಾಳ್ಮೆಯ ನಿರ್ಧಾರಗಳೇ ಯಶಸ್ಸಿನ ಗುಟ್ಟು. ಆದರೆ ಗಂಭೀರ್ ಅವರ ವೇಗದ ನಿರ್ಧಾರಗಳು, ನಿರ್ದಿಷ್ಠ ಯೋಚನೆಯ ಕೊರತೆ, ಪಂದ್ಯ ಗೆದ್ದಾಗ ಸ್ವಯಂ ಶ್ಲಾಘನೆ, ಸೋತಾಗ ಆಟಗಾರರ ಮೇಲೆ ಟೀಕೆ ಇದರಿಂದ ತಂಡದಲ್ಲಿ ಮನಸ್ತಾಪಗಳು ಹೆಚ್ಚುತ್ತಿವೆ. ಇನ್ನೊಂದು ದೃಷ್ಟಿಯಲ್ಲಿ ನೋಡುವುದಾದರೆ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ, ಗಂಭೀರ್ ಅವರಿಗಿಂತಲೂ ಉತ್ತಮ ಆಟಗಾರರು. ಈ ಕಾರಣದಿಂದಾಗಿ ಗಂಭೀರ್ ಅವರು ಕೊಹ್ಲಿ ಮತ್ತು ರೋಹಿತ್ ಅವರಿಗೆ ಬೇರೆ ಆಟಗಾರರಿಗೆ ನೀಡಿದ ಆದೇಶಗಳನ್ನು ಕೊಡಲು ಸಾಧ್ಯವಿಲ್ಲ.
IND vs AUS: 35 ರನ್ ಗಳಿಸಿ ಗೌತಮ್ ಗಂಭೀರ್ ನಂಬಿಕೆ ಉಳಿಸಿಕೊಂಡ ಹರ್ಷಿತ್ ರಾಣಾ!
ಗಂಭೀರ್ ಅವರ ಮಾತುಗಳನ್ನು ಕೇಳಿ ಸಹಿಸಿಕೊಳ್ಳುವ ತಾಳ್ಮೆ ಈ ಜೋಡಿಯಲ್ಲೂ (ಕೊಹ್ಲಿ, ರೋಹಿತ್) ಇಲ್ಲ. ಇದೇ ಕಾರಣದಿಂದಾಗಿ ಈ ಇಬ್ಬರೂ ಆಟಗಾರರು ಟೆಸ್ಟ್ ಮತ್ತು ಟಿ20ಐ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಈ ಎಲ್ಲಾ ಮನಸ್ತಾಪಗಳು ಇಲ್ಲದಿದ್ದರೆ ಕೊಹ್ಲಿಯವರು ಇನ್ನು ಸ್ವಲ್ಪ ದಿನಗಳ ಕಾಲ ಟೆಸ್ಟ್‌ನಲ್ಲಿ ಮುಂದುವರಿಯುತ್ತಿದ್ದರು. ಗಂಭೀರ್ ಅವರ ಮೇಲೆ ಹಿರಿಯ ಆಟಗಾರರು ತಂಡದಲ್ಲಿದ್ದರೆ ಸಹಿಸಿಕೊಳ್ಳಲಾಗುವುದಿಲ್ಲ ಎನ್ನುವ ಆರೋಪ ಇದೆ. ಅವರ ಇತ್ತೀಚಿನ ವರ್ತನೆಯಲ್ಲಿ ಅದು ನಿಜ ಎನಿಸುತ್ತಿದೆ. ಇನ್ನೊಂದು ಬದಿಯಲ್ಲಿ ಆರ್ ಅಶ್ವಿನ್ ಅವರದ್ದು ಕೂಡ ಇದೇ ಕಥೆ.
ತಂಡದಲ್ಲಿ ಮೊದಲಿಂದಲೂ ಒಂದು ಟ್ರೆಂಡ್ ನಡೆದುಕೊಂಡು ಬರುತ್ತಿತ್ತು. ಅದು ಗಂಭೀರ್ ಯುಗದಲ್ಲಿ ಕರಗಿ ಹೋಗುತ್ತಿದೆ. ಒಂದು ಕಾಲದಲ್ಲಿ ಭಾರತ ತಂಡದ ದೊಡ್ಡ ಶಕ್ತಿಯೆಂದರೆ ಒಗ್ಗಟ್ಟು ಮತ್ತು ಬಿಗಿ ಭಾಂಧವ್ಯವಾಗಿತ್ತು. ಆದರೆ ಇದೀಗ ಈ ಬಾಂಧವ್ಯ ಮುರಿಯುತ್ತಿದೆ. ಅನುಭವಿಗಳ ಮಾತಿಗೆ ಪ್ರಾಮುಖ್ಯತೆ ಕೊಡದೇ ಇರುವುದು ಕೂಡ ಒಂದು ರೀತಿಯಾಗಿ ಅವರ ಕೋಚ್ ಕರಿಯರ್‌ಗೆ ಕಪ್ಪು ಚುಕ್ಕೆಯಾಗಿ ಕಾಣುತ್ತಿದೆ. ಕೋಚ್ ಮತ್ತು ಆಟಗಾರರ ನಡುವಿನ ಮಾತುಕತೆ ಅಷ್ಟಾಗಿ ಕಾಣಸಿಗುತ್ತಿಲ್ಲ. ಈ ಹಿಂದೆ ವಿರಾಟ್ ಮತ್ತು ರೋಹಿತ್ ಸೇರಿದಂತೆ ಅನೇಕೆರು ರವಿಶಾಸ್ತ್ರಿಯವರ ಜೊತೆ ಮೈದಾನದಲ್ಲಿ ಮಾತನಾಡುತ್ತಾ ಸಮಯ ಕಳೆಯುತ್ತಿದ್ದರು. ಇಂತಹ ಆರೋಗ್ಯಕರವಾದ ಸಂಸ್ಕೃತಿಗೂ ಇದೀಗ ಬ್ರೇಕ್ ಬಿದ್ದಂತೆ ಕಾಣುತ್ತಿದೆ.
ಇನ್ನೊಂದು ಪ್ರಮುಖ ಅಂಶ ಪತ್ರಿಕಾಗೋಷ್ಠಿಗಳಲ್ಲಿ ಗಂಭೀರ್, ಸೋಲಿನ ಹೊಣೆಗಾರಿಕೆ ಹೊರುವ ಬದಲು ಆಟಗಾರರು ನಿರೀಕ್ಷೆಯ ಪ್ರದರ್ಶನ ತೋರಲಿಲ್ಲ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಾರೆ ಮತ್ತು ತಾವು ಹೇಳಿದ್ದೇ ಅಂತಿಮ ಎನ್ನುವ ದಾಟಿಯಲ್ಲಿ ತಮ್ಮ ನಡೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಅಂಕಿ ಅಂಶಗಳನ್ನು ಗಮನಿಸುವುದಾದರೆ, ಗಂಭೀರ್ ಕಾಲಾವಧಿಯಲ್ಲಿ ತಂಡದ ಗೆಲುವಿನ ಪ್ರಮಾಣ ಕುಸಿದಿದೆ. ತಂಡದಲ್ಲಿನ ಆಟಗಾರರ ಸ್ಥಿರತೆಯ ಕೊರತೆಯಿಂದಾಗಿ ತವರು ಟೆಸ್ಟ್ ಸರಣಿಗಳಲ್ಲಿ ಸೋಲುಗಳು ಕಂಡಿದೆ. ತಂಡದ ನಾಯಕತ್ವದಲ್ಲಿಯೂ ಗೊಂದಲ ಉಂಟಾಗುತ್ತಿದೆ. ಕೋಚ್ ಮತ್ತು ಕ್ಯಾಪ್ಟನ್ ನಡುವೆ ಉತ್ತಮ ಬಾಂಧವ್ಯದ ಕೊರತೆಯೂ ಎದ್ದು ಕಾಣುತ್ತಿದೆ. ಗಂಭೀರ್ ಅವರ ಕೋಪಭರಿತ ಬಾಡಿ ಲಾಂಗ್ವೇಜ್ ಇದಕ್ಕೆ ಮೂಲ ಕಾರಣವೆನ್ನಬಹುದು. ಇದೇ ಮುಂದುವರಿದರೆ ಗಂಭೀರ್ ಯುಗವೂ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಗೊಂದಲಭರಿತ ಆಧ್ಯಾಯವಾಗಿ ಉಳಿಯಬಹುದು.