IPL 2026: ಕೆಕೆಆರ್‌ಗೆ ಮತ್ತೊಂದು ಶಾಕ್, ಆಕಾಶ್ ದೀಪ್ ಟೂರ್ನಿಯಿಂದ ಔಟ್?
Akash Deep Injury: ಹರ್ಷಿತ್ ರಾಣಾ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೆ ಮತ್ತೊಬ್ಬ ವೇಗಿಯೂ 19ನೇ ಆವೃತ್ತಿಯಿಂದ ಹೊರ ನಡೆದಿದ್ದಾರೆಂದು ವರದಿಯಾಗಿದೆ. ಆಕಾಶ್ ದೀಪ್ ಸದ್ಯ ಗಾಯದಿಂದ ಗುಣಮುಖರಾಗುತ್ತಿದ್ದು, ಅವರ ಕೊನೆಯ ವರದಿ ಕೈಗೆ ಸೇರುವುದು ಬಾಕಿ ಇದೆ.
2026ರ ಐಪಿಎಲ್‌ನಿಂದ ಆಕಾಶ್ ದೀಪ್ ಔಟ್? -
ನವದೆಹಲಿ: ಕೋಲ್ಕತಾ ನೈಟ್ ರೈಡರ್ಸ್(KKR) ತಂಡದ ವೇಗದ ಬೌಲರ್ ಆಕಾಶ್ ದೀಪ್(Akash Deep) ಕೂಡ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಿಂದ ಹೊರಬಿದ್ದಿದ್ದಾರೆಂದು ಕ್ರಿಕ್‌ಬಝ್ ವರದಿ ಮಾಡಿದೆ. ಆ ಮೂಲಕ ಟೂರ್ನಿಯ ಆರಂಭಕ್ಕೂ ಮುನ್ನ ಕೆಕೆಆರ್‌ಗೆ ಭಾರಿ ಹಿನ್ನಡೆಯಾಗಿದೆ. ಪ್ರಸ್ತುತ ಅವರು ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್ ಆಪ್ ಎಕ್ಸ್‌ಲೆನ್ಸ್‌ನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದಾರೆ. ಮೂಲಗಳ ಪ್ರಕಾರ, ಅಕಾಶ್ ದೀಪ್ ಇನ್ನೂ ಪುನಶ್ಚೇತನದ ಪ್ರಕ್ರಿಯೆಯಲ್ಲಿದ್ದು, ಅವರ ಲಭ್ಯತೆಯ ಅಂತಿಮ ವರದಿ ಇನ್ನೂ ಬಾಕಿಯಿದೆ.
ಅವರ ಅಲಭ್ಯತೆ ಕೆಕೆಆರ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ, ಏಕೆಂದರೆ ಕೋಲ್ಕತಾ ಫ್ರಾಂಚೈಸಿ ಈಗಾಗಲೇ ಬೌಲಿಂಗ್ ವಿಭಾಗದಲ್ಲಿನ ಗಾಯದ ಸಮಸ್ಯೆಗಳೊಂದಿಗೆ ಹೋರಾಡುತ್ತಿದೆ. ತಂಡದ ವ್ಯವಸ್ಥಾಪಕರು ಮತ್ತು ಸಿಒಇ ವೈದ್ಯರು ಅವರ ಪ್ರಗತಿಯನ್ನು ಪರಿಶೀಲಿಸಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ.
ಆಕಾಶ್ ದೀಪ್ ಅವರಿಗೆ ಗಾಯದ ಸಮಸ್ಯೆಗಳು ನಿರಂತರವಾಗಿ ತೊಂದರೆ ನೀಡುತ್ತಿದ್ದು, ಭಾರತ ತಂಡ ಹಾಗೂ ಅವರ ಐಪಿಎಲ್ ಫ್ರಾಂಚೈಸಿಗಳ ಪರ ಹಲವು ಪಂದ್ಯಗಳನ್ನು ತಪ್ಪಿಸಿಕೊಳ್ಳುವಂತೆ ಮಾಡಿವೆ. 2022ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ನಂತರ, ಅವರು ನಾಲ್ಕು ಸೀಸನ್‌ಗಳಲ್ಲಿ ಕೇವಲ 14 ಪಂದ್ಯಗಳನ್ನು ಮಾತ್ರ ಆಡಿದ್ದು, 11.82ರ ಎಕಾನಮಿ ದರದಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದಾರೆ.
IPL 2026: ಆರ್‌ಸಿಬಿ ಪಂದ್ಯಗಳ ಟಿಕೆಟ್ ಖರೀದಿಸುವುದು ಹೇಗೆ? ಮ್ಯಾಚ್ ಟಿಕೆಟ್ ಇದ್ರೆ ಮೆಟ್ರೋ ಉಚಿತ!
ಕಳೆದ ವರ್ಷ ಲಖನೌ ಸೂಪರ್ ಜಯಂಟ್ಸ್ ತಂಡವು 2025ರ ಹರಾಜಿನಲ್ಲಿ ಅವರನ್ನು 8 ಕೋಟಿ ರು. ಗಳಿಗೆ ಖರೀದಿಸಿತ್ತು. ಆದರೆ ಒಂದು ಸೀಸನ್ ಬಳಿಕ, ಆರು ಪಂದ್ಯಗಳಲ್ಲಿ ಕೇವಲ ಮೂರು ವಿಕೆಟ್‌ಗಳನ್ನು ಪಡೆದ ಕಾರಣ ಅವರನ್ನು ಬಿಡುಗಡೆ ಮಾಡಲಾಯಿತು. ನಂತರ ನಡೆದಿದ್ದ ಮಿನಿ ಹರಾಜಿನಲ್ಲಿ ಕೋಲ್ಕತಾ ಫ್ರಾಂಚೈಸಿ ಬಂಗಾಳದ ಈ ವೇಗದ ಬೌಲರ್ ಅವರನ್ನು ಒಂದು ಕೋಟಿ ರು ಮೂಲ ಬೆಲೆಗೆ ಖರೀದಿಸಿತ್ತು.
ಕೋಲ್ಕತಾ ನೈಟ್ ರೈಡರ್ಸ್ ತಂಡದ ವೇಗದ ಬೌಲಿಂಗ್ ವಿಭಾಗವು ಟೂರ್ನಿಗೂ ಮುನ್ನ ದೊಡ್ಡ ಚಿಂತೆಯ ವಿಷಯವಾಗಿ ಹೊರಹೊಮ್ಮಿದೆ. ಹಲವು ಹಿನ್ನಡೆಗಳು ತಂಡದ ಬಲಿಷ್ಠ ವೇಗದ ಬೌಲಿಂಗ್ ದಾಳಿಯನ್ನು ದುರ್ಬಲಗೊಳಿಸಿವೆ.
ಹರಾಜಿನಲ್ಲಿ ಡೆತ್ ಓವರ್ ಸ್ಪೆಷಲಿಸ್ಟ್ ಆಗಿ ಖರೀದಿಸಿದ್ದ ಬಾಂಗ್ಲಾದೇಶದ ಮುಸ್ತಾಫಿಝುರ್ ರೆಹಮಾನ್ ಅವರನ್ನು ಬಿಸಿಸಿಐ ಸೂಚನೆಯ ಮೇರೆಗೆ ಟೂರ್ನಿಯ ಆರಂಭಕ್ಕೂ ಒಂದು ತಿಂಗಳು ಮುನ್ನ ತಂಡದಿಂದ ಬಿಡುಗಡೆ ಮಾಡಬೇಕಾಗಿತ್ತು.
IPL 2026: ಕೋಲ್ಕತಾ ನೈಟ್ ರೈಡರ್ಸ್‌ಗೆ ಆಘಾತ, ಹರ್ಷಿತ್ ರಾಣಾ ಟೂರ್ನಿಯಿಂದ ಔಟ್!
ಇದರ ಜೊತೆಗೆ ಭಾರತ ತಂಡದ ವೇಗದ ಬೌಲರ್ ಹರ್ಷಿತ್ ರಾಣಾ ಗಾಯದ ಕಾರಣದಿಂದ 2026ರ ಐಪಿಎಲ್ ಟೂರ್ನಿಯಲ್ಲಿ ಆಡುವ ಸಾಧ್ಯತೆ ಕಡಿಮೆ ಇದೆ. ಇದರಿಂದ ತಂಡದ ವೇಗದ ಬೌಲಿಂಗ್ ಆಯ್ಕೆಗಳಲ್ಲಿ ಇಳಿಕೆಯಾಗುತ್ತಿದೆ. ಆದರೆ ತಂಡದ ಅತಿ ದೊಡ್ಡ ಚಿಂತೆಯ ವಿಷಯವೆಂದರೆ, 18 ಕೋಟಿ ರು ನೀಡಿ ಖರೀದಿಸಿದ ಶ್ರೀಲಂಕಾದ ವೇಗದ ಬೌಲರ್ ಮಥೀಶ ಪಥಿರಣ ಅವರ ಫಿಟ್ನೆಸ್. ಅವರು ತಂಡದ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸಬೇಕಾಗಿದ್ದ ಪ್ರಮುಖ ಆಟಗಾರರಾಗಿದ್ದಾರೆ.