ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರ 2027ರ ಒಡಿಐ ವಿಶ್ವಕಪ್ ಭವಿಷ್ಯ ನುಡಿದ ಆರ್ ಅಶ್ವಿನ್!
ಮುಂಬರುವ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಆಡುವ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಟೆಸ್ಟ್ ಹಾಗೂ ಟಿ20ಐ ಕ್ರಿಕೆಟ್‌ಗೆ ಈಗಾಗಲೇ ನಿವೃತ್ತಿ ಪಡೆದಿರುವ ಈ ಇಬ್ಬರೂ ಮುಂದಿನ ಏಕದಿನ ವಿಶ್ವಕಪ್ ಆಡುವ ಯೋಜನೆಯೊಂದಿಗೆ 50 ಓವರ್‌ಗಳ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದಾರೆ. ಈ ಬಗ್ಗೆ ಅಶ್ವಿನ್ ತಮ್ಮ ಪ್ರಾಮಾಣಿಕ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ.
ರೋಹಿತ್,ಕೊಹ್ಲಿಯ ಒಡಿಐ ವಿಶ್ವಕಪ್ ಭವಿಷ್ಯ ನುಡಿದ ಅಶ್ವಿನ್. -
ನವದೆಹಲಿ: ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಸಾಲಿನಲ್ಲಿ ವಿರಾಟ್ ಕೊಹ್ಲಿ(Virat Kohli) ಹಾಗೂ ರೋಹಿತ್ ಶರ್ಮಾ (Rohit Sharma) ಕೂಡ ನಿಲ್ಲುತ್ತಾರೆ. ಈಗಾಗಲೇ ಈ ಜೋಡಿ ಭಾರತಕ್ಕೆ ಟಿ20 ವಿಶ್ವಕಪ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಟ್ಟಿದ್ದಾರೆ. ಆದರೆ, ಅವರು ಈ ಇಬ್ಬರೂ ಭಾರತಕ್ಕೆ ಏಕದಿನ ವಿಶ್ವಕಪ್ ಗೆದ್ದುಕೊಡುವುದು ಬಾಕಿ ಇದೆ. ಹಾಗಾಗಿ ಈ ಇಬ್ಬರೂ ಟಿ20ಐ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ಈಗಾಗಲೇ ನಿವೃತ್ತಿ ಘೋಷಿಸಿದ್ದರೂ ಮುಂದಿನ ವರ್ಷ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಸಲುವಾಗಿ 50 ಓವರ್‌ಗಳ ಸ್ವರೂಪದಲ್ಲಿ ಇನ್ನೂ ಸಕ್ರಿಯರಾಗಿದ್ದಾರೆ. ಅಂದ ಹಾಗೆ 2027ರ ವಿಶ್ವಕಪ್ ಟೂರ್ನಿಯಲ್ಲಿ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲವಾದರೂ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ (R Ashwin) ತಮ್ಮ ಪ್ರಾಮಾಣಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇಎಸ್‌ಪಿಎನ್ ಕ್ರಿಕ್‌ಇನ್ಪೋ ಜೊತೆ ಮಾತನಾಡಿದ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್, 2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಸಾಮರ್ಥ್ಯ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳಿಗೆ ಇದೆ ಎಂದು ಹೇಳಿದ್ದಾರೆ. ಇದು ಟೀಮ್ ಮ್ಯಾನೇಜ್‌ಮೆಂಟ್ ಅನ್ನು ಅವಲಂಬಿಸುತ್ತದೆ ಎಂದಿದ್ದಾರೆ.
"ನನ್ನ ಅನುಭವದ ಆಧಾರದ ಮೇಲೆ ಹೇಳುವುದಾದರೆ, ಇಂತಹ ವಿಷಯಗಳು ಹೇಗೆ ನಡೆಯುತ್ತವೆ ಎಂಬುದು ಸಾಕಷ್ಟು ಸ್ಪಷ್ಟವಾಗಿದೆ. ಈ ಇಬ್ಬರೂ ಆಟಗಾರರು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್ ಟೂರ್ನಿಯಲ್ಲಿ ಇರಬೇಕೆಂದು ಟೀಮ್ ಮ್ಯಾನೇಜ್‌ಮೆಂಟ್ ಬಯಸಿದರೆ ಹಾಗೂ ಅದಕ್ಕೆ ಅಗತ್ಯ ಬೆಂಬಲ ಮತ್ತು ಆಸಕ್ತಿ ಇದ್ದರೆ, ಅವರನ್ನು ತಂಡದಲ್ಲೇ ಉಳಿಸಿಕೊಂಡು ಅವರ ಅನುಭವವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ಸಂಪೂರ್ಣ ಸಾಧ್ಯ,” ಎಂದು ಆರ್ ಅಶ್ವಿನ್ ಇಎಸ್‌ಪಿಎನ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
IND vs AFG: ಒಡಿಐ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಸ್ಥಾನವನ್ನು ತುಂಬಬಲ್ಲ ಮೂವರು ಆಟಗಾರರು!
"ಆದರೆ, ಪರಿಸ್ಥಿತಿ ವಿರುದ್ಧ ದಿಕ್ಕಿನಲ್ಲಿ ಸಾಗುವ ಸಾಧ್ಯತೆ ಇದೆ ಎಂಬ ಭಾವನೆ ಇದ್ದರೆ, ಆಟಗಾರರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ನನ್ನನ್ನು ಕ್ಷಮಿಸಿ, ನಾನು ಯಾವುದೇ ತಜ್ಞನಲ್ಲ ಅಥವಾ ವೈದ್ಯಕೀಯ ವಿಜ್ಞಾನಿಯೂ ಅಲ್ಲ. ಆದ್ದರಿಂದ ಇದನ್ನು ಸಂಪೂರ್ಣ ಅಧಿಕಾರಪೂರ್ವಕವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಸೂಕ್ತ ಪುನಶ್ಚೇತನ ಕಾರ್ಯಕ್ರಮ ರೂಪಿಸಲ್ಪಟ್ಟಿದ್ದರೆ, ಆಟಗಾರರು ಸಾಧಿಸಲು ಬಯಸುವ ಗುರಿಗಳ ಸುತ್ತ ಸರಿಯಾದ ಯೋಜನೆ ಸಿದ್ಧಪಡಿಸಿದ್ದರೆ ಹಾಗೂ ತಂಡದ ಆಡಳಿತ ಮತ್ತು ಸಹಾಯಕ ಸಿಬ್ಬಂದಿಯಿಂದ ಸಕಾರಾತ್ಮಕ ಬೆಂಬಲ ದೊರೆತರೆ, ಆಟಗಾರರು ಖಂಡಿತವಾಗಿಯೂ ಯಶಸ್ವಿಯಾಗಿ ಮರಳಲು ಸಾಧ್ಯವಾಗುತ್ತದೆ,” ಎಂದು ಸ್ಪಿನ್ ದಿಗ್ಗಜ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಫ್ಘಾನಿಸ್ತಾನ ಏಕದಿನ ಸರಣಿಯಲ್ಲಿ ಸ್ಥಾನ ಪಡೆದಿದ್ದ ಕೊಹ್ಲಿ, ರೋಹಿತ್
ಜೂನ್ 13 ರಂದು ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇಬ್ಬರೂ ಸ್ಥಾನ ಪಡೆದಿದ್ದರು. ಆದರೆ, ಐಪಿಎಲ್ ಟೂರ್ನಿಯ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು, ಹಾಗಾಗಿ ಅವರು ಈ ಸರಣಿಯಿಂದ ಹೊರ ನಡೆದಿದ್ದಾರೆ. ಅವರ ಸ್ಥಾನಕ್ಕೆ ಋತುರಾಜ್ ಗಾಯಕ್ವಾಡ್‌ಗೆ ಸ್ಥಾನವನ್ನು ನೀಡಲಾಗಿದೆ. ಆದರೆ, ರೋಹಿತ್ ಶರ್ಮಾ ಗಾಯದಿಂದ ಗುಣಮುಖರಾಗಿ ಫಿಟ್‌ನೆಸ್ ಟೆಸ್ಟ್ ಪಾಸ್ ಮಾಡಿ ಆಫ್ಘನ್ ಸರಣಿಯಲ್ಲಿ ಆಡಲಿದ್ದಾರೆ.
ಭಾರತ ವಿರುದ್ಧದ ಏಕದಿನ ಸರಣಿಗೆ ಘಾತಕ ವೇಗಿಯನ್ನು ತಂಡಕ್ಕೆ ಕರೆತಂದ ಆಫ್ಘಾನ್
ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಅರ್ಷದೀಪ್ ಸಿಂಗ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್‌ದೀಪ್ ಯಾದವ್, ಪ್ರಸಿಧ್ ಕೃಷ್ಣ, ಪ್ರಿನ್ಸ್ ಯಾದವ್, ಗುರ್ನೂರ್ ಬ್ರಾರ್ ಮತ್ತು ಹರ್ಷ್ ದುಬೆ