ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

SA vs UAE: ಯುಎಇ ಎದುರು ಸುಲಭ ಗೆಲುವು ದಾಖಲಿಸಿದ ದಕ್ಷಿಣ ಆಫ್ರಿಕಾ ತಂಡ!

ಕಾರ್ಬಿನ್‌ ಬಾಷ್‌ ಅವರ ಮಾರಕ ಬೌಲಿಂಗ್‌ ದಾಳಿಯ ಸಹಾಯದಿಂದ ದಕ್ಷಿಣ ಆಫ್ರಿಕಾ ತಂಡ, ಯುಎಇ ವಿರುದ್ಧ 6 ವಿಕೆಟ್‌ಗಳ ಸುಲಭ ಜಯ ದಾಖಲಿಸಿತು. ಆ ಮೂಲಕ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಲೀಗ್‌ ಹಂತವನ್ನು ಯಶಸ್ವಿಯಾಗಿ ಮುಗಿಸಿತು. ಈಗಾಗಲೇ ಸೂಪರ್‌-8ಕ್ಕೆ ಹರಿಣ ಪಡೆ ಪ್ರವೇಶ ಮಾಡಿದ್ದು, ಈ ಪಂದ್ಯದ ಮೂಲಕ ದಕ್ಷಿಣ ಆಫ್ರಿಕಾ ತಂಡ ಸೂಪರ್‌-8ಕ್ಕೆ ಅಭ್ಯಾಸ ನಡೆಸಿದೆ.

T20 World Cup: ಯುಎಇ ಎದುರು ದಕ್ಷಿಣ ಆಫ್ರಿಕಕ್ಕೆ ಸುಲಭ ಜಯ!

ಯುಎಇ ವಿರುದ್ಧ ದಕ್ಷಿಣ ಆಫ್ರಿಕಾ ತಂಡಕ್ಕೆ ಜಯ. -

Profile
Ramesh Kote Feb 18, 2026 3:58 PM

ನವದೆಹಲಿ: ಈಗಾಗಲೇ 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯ ಸೂಪರ್‌-8ಕ್ಕೆ ಅರ್ಹತೆ ಪಡೆದಿರುವ ದಕ್ಷಿಣ ಆಫ್ರಿಕಾ (South Africa) ತಂಡ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿಯೂ ಯುಎಇ (UAE) ವಿರುದ್ಧ ಆರು ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿದೆ. ಇಲ್ಲಿನ ಅರುಣ್‌ ಜೆಟ್ಲಿ ಕ್ರೀಡಾಂಗಣದಲ್ಲಿ ಬುಧವಾರ ನಡೆದಿದ್ದ ಕಾರ್ಬಿನ್‌ ಬಾಷ್‌ ಅವರ ಮಾರಕ ಬೌಲಿಂಗ್‌ ದಾಳಿಗೆ ನಲುಗಿದ ಯುಎಇ 20 ಓವರ್‌ಗಳನ್ನು ಮುಗಿಸಿದರೂ ಕೇವಲ 122 ರನ್‌ಗಳನ್ನು ಕಲೆ ಹಾಕಿತು. ಬಳಿಕ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡ, ಕೇವಲ 13.2 ಓವರ್‌ಗಳಿಗೆ 4 ವಿಕೆಟ್‌ ನಷ್ಟಕ್ಕೆ 123 ರನ್‌ಗಳನ್ನು ಗಳಿಸಿ ಗೆದ್ದು ಬೀಗಿತು. ಸಿ ಗುಂಪಿನಲ್ಲಿ ಹರಿಣ ಪಡೆ ಆಡಿದ ನಾಲ್ಕೂ ಪಂದ್ಯಗಳನ್ನು ಗೆದ್ದು ಲೀಗ್‌ ಹಂತವನ್ನು ಮುಗಿಸಿತು.

ಯುಎಇ ನೀಡಿದ್ದ 123 ರನ್‌ಗಳ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಏಡೆನ್‌ ಮಾರ್ಕ್ರಮ್‌ ಹಾಗೂ ಕ್ವಿಂಟನ್‌ ಡಿ ಕಾಕ್‌ ಮೊದಲನೇ ವಿಕೆಟ್‌ಗೆ 32 ರನ್‌ ಗಳಿಸಿತು. ಕೇವಲ 11 ಎಸೆತಗಳಲ್ಲಿ 28 ರನ್‌ ಸಿಡಿಸಿದ ಏಡೆನ್‌ ಮಾರ್ಕ್ರಮ್‌ ಸ್ಪೋಟಕ ಆರಂಭವನ್ನು ಪಡೆದಿದ್ದರು. ಆದರೆ, ಅವರು ಹೈದರ್‌ ಅಲಿ ಅವರ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು. ಕ್ವಿಂಟನ್‌ ಡಿ ಕಾಕ್‌ ಕೇವಲ 14 ರನ್‌ ಗಳಿಸಿ ಔಟ್‌ ಆದರು.

ಟಿ20 ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಟಾಪ್‌-10ಗೆ ಎಂಟ್ರಿಕೊಟ್ಟ ಇಶಾನ್‌ ಕಿಶನ್‌

ಆದರೆ, ಮೂರನೇ ವಿಕೆಟ್‌ಗೆ ಜೊತೆಯಾದ ರಯಾನ್‌ ರಿಕೆಲ್ಟನ್‌ ಹಾಗೂ ಡೆವಾಲ್ಡ್‌ ಬ್ರೆವಿಸ್‌ ಅವರು ಮೂರನೇ ವಿಕೆಟ್‌ಗೆ 49 ರನ್‌ಗಳನ್ನು ಕಲೆ ಹಾಕಿದರು. ಅದ್ಭುತವಾಗಿ ಬ್ಯಾಟ್‌ ಮಾಡಿದ ರಯಾನ್‌ ರಿಕೆಲ್ಟನ್‌ ಅವರು 16 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ ಮೂರು ಬೌಂಡರಿಗಳೊಂದಿಗೆ 30 ರನ್‌ ಚಚ್ಚಿದರು. ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಡೆವಾಲ್ಡ್‌ ಬ್ರೆವಿಸ್‌ ಅವರು, 25 ಎಸೆತಗಳಲ್ಲಿ 36 ರನ್‌ಗಳನ್ನು ಸಿಡಿಸಿದರು. ಈ ಇಬ್ಬರೂ ಪಂದ್ಯವನ್ನು ಮುಗಿಸುವಲ್ಲಿ ವಿಫಲರಾದರು. ಆದರೆ, ಕೊನೆಯಲ್ಲಿ ಟ್ರಿಸ್ಟನ್‌ ಸ್ಟಬ್ಸ್‌ ಹಾಗೂ ಜೇಸನ್‌ ಸ್ಮಿತ್‌ ತಂಡವನ್ನು ಗೆಲುವಿನ ದಡ ಸೇರಿಸಿದರು.



ಯುಎಇ ಬ್ಯಾಟಿಂಗ್‌ ವೈಫಲ್ಯ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಯುಎಇ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಆರ್ಯಂಶ್‌ ಶರ್ಮಾ ಹಾಗೂ ಮುಹಮ್ಮದ್‌ ವಸೀಮ್‌ ಜೋಡಿ 38 ರನ್‌ಗಳ ಜೊತೆಯಾಟವನ್ನು ಆಡಿ ಉತ್ತಮ ಆರಂಭ ನೀಡಿದರು. ಆರ್ಯಂಶ್‌ ಶರ್ಮಾ 13 ರನ್‌ ಹಾಗೂ ವಸೀಮ್‌ 22 ರನ್‌ ಗಳಿಸಿ ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು.

ವರುಣದೇವನ ಕೈಯಲ್ಲಿ ಪಾಕ್‌ ಸೂಪರ್‌-8 ಭವಿಷ್ಯ; ಇಂದು ನಮೀಬಿಯಾ ಎದುರಾಳಿ

ಮಧ್ಯಮ ಕ್ರಮಾಂಕದಲ್ಲಿ ಶೋಯೆಬ್‌ ಖಾನ್‌ ಹಾಗೂ ಸೈಯದ್‌ ಹೈದರ್‌ ತಲಾ 6 ರನ್‌ಗೆ ಔಟ್‌ ಆದರು. ಆದರೆ, ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಅಲಿಶನ್‌ ಶರಫು ಉತ್ತಮವಾಗಿ ಬ್ಯಾಟ್‌ ಮಾಡಿ ಹರಿಣ ಪಡೆಯ ಬೌಲಿಂಗ್‌ ಅನ್ನು ಮೆಟ್ಟಿ ನಿಂತರು. ಅವರು ಆಡಿದ 38 ಎಸೆತಗಳಲ್ಲಿ 45 ರನ್‌ಗಳನ್ನು ಕಲೆ ಹಾಕಿದರು. ಇವರನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಅಂತಿಮವಾಗಿ 20 ಓವರ್‌ಗಳನ್ನು ಮುಗಿಸಿದರೂ ಹರಿಣ ಪಡೆ ದೊಡ್ಡ ಮೊತ್ತವನ್ನು ಪೇರಿಸುವಲ್ಲಿ ವಿಫಲವಾಯಿತು.

ದಕ್ಷಿಣ ಆಫ್ರಿಕಾ ತಂಡದ ಪರ ಕಾರ್ಬಿನ್‌ ಬಾಷ್‌ ಮೂರು ವಿಕೆಟ್‌ಗಳನ್ನು ಕಬಳಿಸಿದರೆ, ಎನ್ರಿಕ್‌ ನೊರ್ಕಿಯಾ ಎರಡು ವಿಕೆಟ್‌ಗಳನ್ನು ಕಬಳಿಸಿದರು.