ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs ENG: ತಮಾಷೆ ಮಾಡುತ್ತಿದ್ದೀರಾ? ಸಂಜು ಸ್ಯಾಮ್ಸನ್‌ಗೆ ಕೊಕ್‌ ನೀಡಿದ್ದಂತೆ ಸಂಜಯ್‌ ಮಾಂಜ್ರೇಕರ್‌ ಕಿಡಿ!

ಇಂಗ್ಲೆಂಡ್‌ ವಿರುದ್ಧ ಎರಡನೇ ಟಿ20ಐ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ಅವರನ್ನು ಕೈಬಿಟ್ಟಿದ್ದರಿಂದ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್‌ ನಿರೂಪಕ ಸಂಜಯ್‌ ಮಾಂಜ್ರೇಕರ್‌ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಸಂಜು ಬದಲು ವೈಭವ್‌ ಸೂರ್ಯವಂಶಿ ಎರಡನೇ ಪಂದ್ಯದಲ್ಲಿ ಆಡಿದ್ದರು. ಈ ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು.

ಸಂಜು ಸ್ಯಾಮ್ಸನ್‌ ಪರ ಬ್ಯಾಟ್‌ ಬೀಸಿದ ಸಂಜಯ್‌ ಮಾಂಜ್ರೇಕರ್‌!

ಸಂಜು ಸ್ಯಾಮ್ಸನ್‌ ಪರ ಬ್ಯಾಟ್‌ ಬೀಸಿದ ಸಂಜಯ್‌ ಮಾಂಜ್ರೇಕರ್. -

Profile
Ramesh Kote Jul 6, 2026 3:57 PM

ನವದೆಹಲಿ: ಇಂಗ್ಲೆಂಡ್‌ ವಿರುದ್ಧ ಎರಡನೇ ಟಿ20ಐ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ಗೆ (Sansju Samson) ಅವಕಾಶ ನೀಡದ ಭಾರತ ತಂಡದ ಟೀಮ್‌ ಮ್ಯಾನೇಜ್‌ಮೆಂಟ್‌ ವಿರುದ್ಧ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್‌ ನಿರೂಪಕ ಸಂಜಯ್‌ ಮಾಂಜ್ರೇಕರ್‌ (Sanjay Manjrekar) ಅವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಐರ್ಲೆಂಡ್‌ ವಿರುದ್ಧ ಎರಡು ಪಂದ್ಯಗಳು ಹಾಗೂ ಇಂಗ್ಲೆಂಡ್‌ ವಿರುದ್ಧ ಮೊದಲನೇ ಟಿ20ಐ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ಸತತ ವೈಫಲ್ಯ ಅನುಭವಿಸಿದ್ದರು ಹಾಗೂ ವೈಭವ್‌ಗೆ ಅಂತಾರಾಷ್ಟೀಯ ಕ್ರಿಕೆಟ್‌ಗೆ ಪದಾರ್ಪಣೆ ಎಲ್ಲಾ ಕಡೆಯಿಂದ ಒತ್ತಡ ಎದುರಾಗುತ್ತಿತ್ತು. ಈ ಕಾರಣದಿಂದ ಗೌತಮ್‌ ಗಂಭೀರ್‌ ಮಾರ್ಗದರ್ಶನದ ಟೀಮ್‌ ಮ್ಯಾನೇಜ್‌ಮೆಂಟ್‌ 2026ರ ಐಪಿಎಲ್‌ ಆರೆಂಜ್‌ ಕ್ಯಾಪ್‌ ವಿನ್ನರ್‌ಗೆ ಡೆಬ್ಯೂ ಟಿಕೆಟ್‌ ನೀಡಲಾಗಿತ್ತು.

ಅಂದ ಹಾಗೆ ಸಂಜು ಸ್ಯಾಮ್ಸನ್‌ ಕೂಡ 2026ರ ಐಪಿಎಲ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಯೋಗ್ಯ ಪ್ರದರ್ಶನವನ್ನು ತೋರಿದ್ದರು. ಇದಕ್ಕಿಂತ ಅವರು 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಎರಡನೇ ಅವಧಿಯಲ್ಲಿ ಭರ್ಜರಿ ಆಟವನ್ನು ಪ್ರದರ್ಶಿಸಿದ್ದರು. ಆ ಮೂಲಕ ಭಾರತ ತಂಡದ ಮೂರನೇ ಟಿ20 ವಿಶ್ವಕಪ್‌ ಗೆಲುವಿಗೆ ನೆರವು ನೀಡುವ ಮೂಲಕ ಸಂಜು ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

IND vs ENG: ಎರಡನೇ ಟಿ20ಐ ಪಂದ್ಯದಿಂದ ಸಂಜು ಸ್ಯಾಮ್ಸನ್‌ರನ್ನು ಕೈ ಬಿಡಲು ಕಾರಣವೇನು?

ಎರಡನೇ ಟಿ20ಐ ಪಂದ್ಯಕ್ಕೆ ತಂಡದ ಆಯ್ಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಟೀಮ್‌ ಮ್ಯಾನೇಜ್‌ಮೆಂಟ್‌ನ ಆಯ್ಕೆಯ ತಂತ್ರವನ್ನು ಪ್ರಶ್ನಿಸಿದ ಅವರು, ಸ್ಫೋಟಕ ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ಏಕಾಏಕಿ ತಂಡದಿಂದ ಹೊರಗಿಡಲು ಗಾಯವೇ ಕಾರಣವಾಗಿರಬಹುದು ಎಂದು ಆರಂಭದಲ್ಲಿ ಭಾವಿಸಿದ್ದಾರೆ.

"ವೈಭವ್ ಸೂರ್ಯವಂಶಿ ಭಾರತ ತಂಡದ ಜೆರ್ಸಿಯಲ್ಲಿ ಆಡುತ್ತಿರುವುದನ್ನು ನೋಡಲು ಸಂತೋಷವಾಗಿದೆ. ಆದರೆ ಸಂಜು ಸ್ಯಾಮ್ಸನ್‌ಗೆ ಏನಾಯಿತು? ಅವರನ್ನು ತಂಡದಿಂದ ಕೈಬಿಟ್ಟಿದ್ದೀರಾ? ಇದು ತಮಾಷೆಯೇ? ಇಲ್ಲ, ಬಹುಶಃ ಅವರಿಗೆ ಗಾಯವಾಗಿರಬಹುದು. ಅದು ಗಾಯವೇ ಆಗಿರಲಿ ಎಂದು ಆಶಿಸುತ್ತೇನೆ. ಇಲ್ಲದಿದ್ದರೆ ಇದು ಅತ್ಯಂತ ವಿಚಿತ್ರ ಆಯ್ಕೆಯಾಗುತ್ತದೆ. ವೈಭವ್‌ಗೆ ಅವಕಾಶ ನೀಡಬೇಕೆಂದಿದ್ದರೆ, ಅವರನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಬಹುದಿತ್ತು," ಎಂದು ಮಾಂಜ್ರೇಕರ್ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದಾರೆ.

ಮೂರನೇ ಟಿ20ಐಗೆ ಭಾರತದ ಪ್ಲೇಯಿಂಗ್‌ XIನಲ್ಲಿ ಸ್ಥಾನ ಕಳೆದುಕೊಳ್ಳಬಲ್ಲ 3 ಸ್ಟಾರ್‌ಗಳು!

ಈ ವರ್ಷದ ಆರಂಭದಲ್ಲಿ ನಡೆದಿದ್ದ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ ಅದ್ಭುತ ಪ್ರದರ್ಶನ ನೀಡಿದ್ದ ಹಿನ್ನೆಲೆಯಲ್ಲಿ, ಅವರಿಗೆ ಇನ್ನಷ್ಟು ಅವಕಾಶ ನೀಡಬೇಕಾಗಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಉತ್ತಮ ಫಾರ್ಮ್‌ನಲ್ಲಿದ್ದ ಆಟಗಾರನನ್ನು ಕೈಬಿಡುವ ಬದಲು, ವೈಭವ್ ಸೂರ್ಯವಂಶಿಗೆ ಆರಂಭಿಕ ಬ್ಯಾಟರ್ ಆಗಿ ಅವಕಾಶ ನೀಡಿ, ಸ್ಯಾಮ್ಸನ್ ಅವರನ್ನು ಮೂರನೇ ಕ್ರಮಾಂಕಕ್ಕೆ ಕಳುಹಿಸುವ ಮೂಲಕ ಮಧ್ಯಮ ಕ್ರಮಾಂಕದ ಅನುಭವವನ್ನು ಉಳಿಸಿಕೊಳ್ಳಬಹುದಿತ್ತು ಎಂಬುದು ಹಲವರ ಅಭಿಪ್ರಾಯವಾಗಿದೆ.

ಎರಡನೇ ಪಂದ್ಯದಲ್ಲಿ ಭಾರತ ಅಂತಿಮವಾಗಿ ನಾಲ್ಕು ವಿಕೆಟ್‌ಗಳಿಂದ ಸೋಲು ಅನುಭವಿಸಿದ ಬಳಿಕ, ತಂಡದ ಆಯ್ಕೆ ಹಾಗೂ ತಂತ್ರಗಾರಿಕೆ ಕುರಿತ ಪ್ರಶ್ನೆಗಳು ಮತ್ತು ಟೀಕೆಗಳು ಇನ್ನಷ್ಟು ತೀವ್ರಗೊಂಡವು. ಇದೀಗ ಜುಲೈ 7 ರಂದು ಟ್ರೆಂಟ್‌ ಬ್ರಿಡ್ಜ್‌ನಲ್ಲಿ ನಡೆಯುವ ಮೂರನೇ ಟಿ20ಐ ಪಂದ್ಯದಲ್ಲಿ ಗೆದ್ದು ಕಮ್‌ಬ್ಯಾಕ್‌ ಮಾಡಲು ಟೀಮ್‌ ಇಂಡಿಯಾ ಎದುರು ನೋಡುತ್ತಿದೆ. ಈ ಪಂದ್ಯದಲ್ಲಿ ಸಂಜುಗೆ ಸ್ಥಾನ ನೀಡುವ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ.