Marcus Stoinis: ಜಿಂಬಾಬ್ವೆ ವಿರುದ್ಧದ ಸೋಲಿನ ಬೆನ್ನಲ್ಲೆ ಆಸ್ಟ್ರೇಲಿಯಾಗೆ ಮತ್ತೊಂದು ಆಘಾತ!
Marcus Stoinis injury: ಆಸ್ಟ್ರೇಲಿಯಾ ಆಲ್‌ರೌಂಡರ್ ಮಾರ್ಕಸ್ ಸ್ಟೋಯ್ನಿಸ್, ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ತಮ್ಮ ಕೈಗೆ ಗಾಯ ಮಾಡಿಕೊಂಡಿದ್ದಾರೆ. ಅವರು ಬೌಲ್ ಮಾಡಿದ ಬಳಿಕ ಬಂದ ಚೆಂಡನ್ನು ತಡೆಯಲು ಕೈ ಹಾಕಿದಾಗ ಇದು ಸಂಭವಿಸಿತು. ಇದರ ಪರಿಣಾಮ ಅವರು ತಮ್ಮ ಮೂರನೇ ಓವರ್ ಅನ್ನು ಮುಗಿಸಲಾರದೆ ವಿರಾಮ ತೆಗೆದುಕೊಂಡರು.
ಮಾರ್ಕಸ್ ಸ್ಟೋಯ್ನಿಸ್‌ಗೆ ಗಾಯ. -
ಕೊಲಂಬೊ: ಜಿಂಬಾಬ್ವೆ ವಿರುದ್ಧ 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ಪಂದ್ಯದಲ್ಲಿ ಆಘಾತಕಾರಿ ಸೋಲು ಅನುಭವಿಸಿದ ಬಳಿಕ ಆಸ್ಟ್ರೇಲಿಯಾ (Australia) ಕ್ರಿಕೆಟ್ ತಂಡಕ್ಕೆ ಇದೀಗ ಮತ್ತೊಂದು ಹಿನ್ನಡೆಯಾಗಿದೆ. ಸ್ಟಾರ್ ಆಲ್‌ರೌಂಡರ್ ಮಾರ್ಕಸ್ ಸ್ಟೋಯ್ನಿಸ್ (Marcus Stoinis) ಅವರು ಗಾಯಕ್ಕೆ ತುತ್ತಾಗಿದ್ದು, ಆಸ್ಟ್ರೇಲಿಯಾ ತಂಡದಲ್ಲಿ ಮತ್ತೊಂದು ಗಾಯದ ಭೀತಿಯನ್ನು ಉಂಟು ಮಾಡಿದ್ದಾರೆ. ಈಗಾಗಲೇ ಗಾಯದ ಕಾರಣ ಹಲವು ಸ್ಟಾರ್ ಆಟಗಾರರನ್ನು ಕಳೆದುಕೊಂಡಿರುವ ಆಸ್ಟ್ರೇಲಿಯಾಗೆ ಸ್ಟಾರ್ ಆಲ್‌ರೌಂಡರ್ ಅನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ. ಮಾರ್ಕಸ್ ಸ್ಟೋಯ್ನಿಸ್ ತಮ್ಮದೇ ಬೌಲಿಂಗ್‌ನಲ್ಲಿ ಚೆಂಡನ್ನು ತಡೆಯುವ ಪ್ರಯತ್ನದಲ್ಲಿ ತಮ್ಮ ಕೈಗೆ ಚೆಂಡನ್ನು ತಗುಲಿಸಿಕೊಂಡಾಗ ಈ ಗಾಯ ಸಂಭವಿಸಿದೆ.
ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಂಬಾಬ್ವೆ ವಿರುದ್ಧ ಆಸ್ಟ್ರೇಲಿಯಾ ತಂಡ 23 ರನ್‌ಗಳ ಆಘಾತಕಾರಿ ಸೋಲು ಅನುಭವಿಸಿದ ಬಳಿಕ, ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಮ್ಯಾಟ್ ರೆನ್‌ಶಾ ಅವರು, ತಮ್ಮ ಸಹ ಆಟಗಾರ ಮಾರ್ಕಸ್ ಸ್ಟೋಯ್ನಿಸ್ ಅವರ ಗಾಯದ ಬಗ್ಗೆ ಮಾಹಿತಿ ನೀಡಿದರು. ಮ್ಯಾಟ್ ರೆನ್‌ಶಾ ಅವರ ಅರ್ಧಶತಕದ ಹೊರತಾಗಿಯೂ ಆಸ್ಟ್ರೇಲಿಯಾ ತಂಡ ಇನ್ನುಳಿದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಸೋಲು ಅನುಭವಿಸಿತು. ಈ ಸೋಲಿನಿಂದ ಆಸ್ಟ್ರೇಲಿಯಾ ತಂಡ, ಬಿ ಗುಂಪಿನ ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೆ ಕುಸಿಯಿತು.
AUS vs ZIM: ಜಿಂಬಾಬ್ವೆ ವಿರುದ್ಧದ ಆಸ್ಟ್ರೇಲಿಯಾ ಸೋಲಿಗೆ ಪ್ರಮುಖ ಕಾರಣ ತಿಳಿಸಿದ ಮ್ಯಾಟ್ ರೆನ್‌ಶಾ!
“ಬಹುಶಃ ಮಾರ್ಕಸ್ ಸ್ಟೋಯ್ನಿಸ್ ಮೇಲಿನ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದಿರಬಹುದಿತ್ತು. ಆದರೆ, ಅವರ ಬೆರಳಿಗೆ ಬಲವಾದ ಹೊಡೆತ ಬಿದ್ದಿದ್ದರಿಂದ ಕೆಳ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದರು. ಗಾಯ ಎಷ್ಟು ಗಂಭೀರವೆಂಬುದು ನಮಗೆ ಇನ್ನೂ ತಿಳಿದಿಲ್ಲ. ವೈದ್ಯಕೀಯ ಸಿಬ್ಬಂದಿ ಅದನ್ನು ಪರಿಶೀಲಿಸಿ ಚಿಕಿತ್ಸೆ ನೀಡುತ್ತಾರೆ ಎಂಬ ವಿಶ್ವಾಸ ಇದೆ. ಆದರೆ ಇಂದಿನ ದಿನದ ಪಂದ್ಯದ ಬಗ್ಗೆ ಹೇಳಬೇಕಾದರೆ, ನಾವು ಸಾಕಷ್ಟು ಉತ್ತಮವಾಗಿ ಆಡಲಿಲ್ಲ,” ಎಂದು ಮ್ಯಾಟ್ ರೆನ್‌ಶಾ ತಿಳಿಸಿದ್ದಾರೆ.
ಆಸೀಸ್ ಗರ್ವಭಂಗ; ಜಿಂಬಾಬ್ವೆಗೆ ಭರ್ಜರಿ ಗೆಲುವು
ಆಸ್ಟ್ರೇಲಿಯಾಗೆ ಗಾಯಾಳುಗಳ ಸಮಸ್ಯೆ
ಆಸ್ಟ್ರೇಲಿಯಾದ ವಿಶ್ವಕಪ್ ಟೂರ್ನಿಯ ಅಭಿಯಾನವು ಗಾಯಗಳ ಸಮಸ್ಯೆಯಿಂದ ಅಸ್ತವ್ಯಸ್ತವಾಗಿದೆ. ಪ್ರಮುಖ ಆಟಗಾರರ ಗಾಯಗಳು ತಂಡದ ಸಿದ್ಧತೆಯ ಮೇಲೆ ಪರಿಣಾಮ ಬೀರಿದ್ದು, ಸಮತೋಲನವನ್ನು ಉಲ್ಟಾ ಪಲ್ಟಾ ಮಾಡಿದೆ. ಅನುಭವಿ ವೇಗಿಗಳಾದ ಪ್ಯಾಟ್ ಕಮಿನ್ಸ್ ಮತ್ತು ಜಾಶ್ ಹೇಝಲ್‌ವುಡ್ ಟೂರ್ನಿ ಆರಂಭಕ್ಕೂ ಮುನ್ನವೇ ಹೊರಗುಳಿದಿದ್ದರು. ಕಮಿನ್ಸ್ ದೀರ್ಘಕಾಲದ ಬೆನ್ನು ನೋವಿನಿಂದ ಬಳಲುತ್ತಿದ್ದರೆ, ಹೇಝಲ್‌ವುಡ್ ಹ್ಯಾಮ್‌ಸ್ಟ್ರಿಂಗ್ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಇನ್ನು ನಾಯಕ ಮಿಚೆಲ್ ಮಾರ್ಷ್ ತರಬೇತಿ ವೇಳೆ ಗ್ರೋಯಿನ್ ಇಂಜುರಿಗೆ ತುತ್ತಾಗಿ, ಐರ್ಲೆಂಡ್ ವಿರುದ್ಧದ ತನ್ನ ಮೊದಲನೇ ಪಂದ್ಯವನ್ನು ಆಡಿರಲಿಲ್ಲ. ಈ ಕಾರಣ ಸ್ಟೀವನ್ ಸ್ಮಿತ್ ಅವರನ್ನು ಶ್ರೀಲಂಕಕ್ಕೆ ಕರೆಸಿಕೊಳ್ಳಲಾಗಿದೆ.