ಭಾರತ-ಪಾಕ್ ಆಟಗಾರರು ಶೇಕ್ ಹ್ಯಾಂಡ್ ಮಾಡಬೇಕು, ಇದು ಕ್ರೀಡಾ ಮನೋಭಾವ: ದಿಗ್ವಿಜಯ ಸಿಂಗ್!
ಭಾರತ ಹಾಗೂ ಪಾಕಿಸ್ತಾನ ತಂಡಗಳು ಪ್ರಸ್ತುತ ನಡೆಯುತ್ತಿರುವ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8ರ ಪಂದ್ಯಗಳಲ್ಲಿ ಆಡುತ್ತಿದ್ದಾರೆ. ಎ ಗುಂಪಿನ ಪಂದ್ಯಗಳಲ್ಲಿ ಈ ಎರಡೂ ತಂಡಗಳು ಒಮ್ಮೆ ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ಹ್ಯಾಂಡ್ ಶೇಕ್ ಮಾಡಿರಲಿಲ್ಲ. ಆದರೆ, ಕಾಂಗ್ರೆಸ್ ನಾಯಕ ದಿಗ್ವಜಯ ಸಿಂಗ್, ಇಂಡೋ-ಪಾಕ್ ಆಟಗಾರರು ಹ್ಯಾಂಡ್ ಶೇಕ್ ಮಾಡಬೇಕೆಂದು ಹೇಳಿದ್ದಾರೆ.
ಭಾರತ-ಪಾಕ್ ಆಟಗಾರರು ಹ್ಯಾಂಡ್‌ಶೇಕ್ ಮಾಡಬೇಕೆಂದ ದಿಗ್ವಿಜಯ ಸಿಂಗ್. -
ನವದೆಹಲಿ: ಭಾರತ ಮತ್ತು ಪಾಕಿಸ್ತಾನದ (IND vs PAK) ಆಟಗಾರರು ಕ್ರಿಕೆಟ್ ಪಂದ್ಯಗಳ ಸಮಯದಲ್ಲಿ ಕೈಕುಲುಕಬೇಕು ಮತ್ತು ಕ್ರೀಡಾ ಮನೋಭಾವವನ್ನು ಪ್ರದರ್ಶಿಸಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ (Digvijaya Singh) ಹೇಳಿದ್ದಾರೆ. ಅಂತಹ ಪ್ರವೃತ್ತಿಗಳು ರಾಷ್ಟ್ರೀಯತೆಯನ್ನು ಪ್ರತಿಬಿಂಬಿಸುವುದಿಲ್ಲ ಎಂದಿದ್ದಾರೆ. ಮಹಾರಾಷ್ಟ್ರದ ಪುಣೆಯ ಖಾಸಗಿ ವಿಶ್ವವಿದ್ಯಾಲಯದಲ್ಲಿ ನಡೆದ ಭಾರತೀಯ ಛತ್ರ ಸಂಸ ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಈ ಹೇಳಿಕೆ ನೀಡಿದ್ದಾರೆ. ಹಿಂದೂ ರಾಷ್ಟ್ರ, ಸನಾತನ ಧರ್ಮ, ಆರ್‌ಎಸ್‌ಎಸ್, ರಾಜಕೀಯಕ್ಕೆ ಧರ್ಮವನ್ನು ತರುವುದು ಸೇರಿದಂತೆ ಇತರ ವಿಷಯಗಳ ಬಗ್ಗೆಯೂ ದಿಗ್ವಿಜಯ ಸಿಂಗ್ ಟೀಕೆಗಳನ್ನು ಮಾಡಿದ್ದಾರೆ.
ಇತ್ತೀಚೆಗೆ ದಿನಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ಆಟಗಾರರು ಅಂತಾರಾಷ್ಟ್ರೀಯ ಟೂರ್ನಿಗಳ ಪಂದ್ಯಗಳಲ್ಲಿ ರಾಜಕೀಯ ಕಾರಣಗಳಿಂದಾಗಿ ಹ್ಯಾಂಡ್ ಶೇಕ್ ಮಾಡುತ್ತಿಲ್ಲ. ಅದರಂತೆ ಕಳೆದ ವರ್ಷ ನಡೆದಿದ್ದ ಏಷ್ಯಾ ಕಪ್ ಟೂರ್ನಿ ಹಾಗೂ ಇದೀಗ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗಳಲ್ಲಿಯೂ ಕೂಡ ಇಂಡೋ-ಪಾಕ್ ಆಟಗಾರರು ಹಸ್ತಲಾಘವ ನೀಡುತ್ತಿಲ್ಲ. ಈ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಜಯ್ ಸಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ. "ಭಾರತ ಹಾಗೂ ಪಾಕಿಸ್ತಾನ ಆಟಗಾರರು ಕೈಕುಲುಕಬೇಕು, ಅದು ಕ್ರೀಡಾ ಮನೋಭಾವ," ಎಂದು ಅವರು ಹೇಳಿರುವುದನ್ನು ಎಎನ್‌ಐ ವರದಿ ಮಾಡಿದೆ.
ಸೂಪರ್ ಸಂಡೆಯಲ್ಲಿ ಹರಿಣಗಳ ವಿರುದ್ಧ ಭಾರತಕ್ಕೆ ಸೂಪರ್-8 ಸವಾಲು
ಹ್ಯಾಂಡ್‌ಶೇಕ್ ಕೈ ಬಿಡಲು ಕಾರಣವೇನು?
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 2025ರ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರರು ಪ್ರವಾಸಕ್ಕೆ ಬಂದಿದ್ದ 26 ನಾಗರಿಕರನ್ನು ಹತ್ಯೆಗೈದಿದ್ದರು. ಈ ದಾಳಿಗೆ ಪ್ರತಿಯಾಗಿ ಭಾರತವು ‘ಆಪರೇಶನ್ ಸಿಂಧೂರ್’ ಅನ್ನು ಆರಂಭಿಸಿತ್ತು. ಈ ಘಟನೆಯ ಬಳಿಕ ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟಿಗರು ಕ್ರಿಕೆಟ್ ಪಂದ್ಯಗಳಲ್ಲಿ ಪರಸ್ಪರ ಹಸ್ತಲಾಘವ ನೀಡುವ ಪದ್ದತಿಯನ್ನು ಕೈ ಬಿಟ್ಟಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಇದು ಯಾವ ಮನೋಭಾವ? ಪಾಕಿಸ್ತಾನ ಆಟಗಾರರೊಂದಿಗೆ ಕೈಕುಲುಕುವುದನ್ನು ನಿರಾಕರಿಸುವುದು ಯಾವ ರೀತಿಯ ದೇಶಭಕ್ತಿ ಅಥವಾ ರಾಷ್ಟ್ರಭಕ್ತಿ? ಕಾರ್ಗಿಲ್ ಯುದ್ಧ, ಪುಲ್ವಾಮಾ ಅಥವಾ ಪಹಲ್ಗಾಮ್ ಘಟನೆಗಳಿಗೆ ಅವರು ಹೊಣೆಗಾರರೇ? ಇಲ್ಲ, ಅವರು ಕ್ರೀಡಾಪಟುಗಳು,” ಎಂದು ಅವರು ಪ್ರಶ್ನೆ ಮಾಡಿದರು.
ಭಾರತ-ದಕ್ಷಿಣ ಆಫ್ರಿಕಾ ಸೂಪರ್-8 ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ ಹೇಗಿದೆ?
“ನಾವು ಅವರನ್ನು ಗುರುತಿಸಲು ಅಥವಾ ಧನ್ಯವಾದ ಹೇಳಲು ಏಕೆ ನಿರಾಕರಿಸಬೇಕು? ಇದು ರಾಷ್ಟ್ರಭಕ್ತಿ ವಿಷಯವಲ್ಲ, ಇದು ಕ್ರೀಡಾಸ್ಫೂರ್ತಿ ವಿಷಯವಾಗಿದೆ. ಕ್ರೀಡಾಸ್ಫೂರ್ತಿ ಎಂದರೆ ಆಟ ಆಡಿದಾಗ ಕಠಿಣವಾಗಿ ಸ್ಪರ್ಧಿಸಬೇಕು; ಗೆದ್ದರೆ ಸಂಭ್ರಮಿಸಬೇಕು; ಸೋತರೆ ಅದನ್ನು ಗೌರವದಿಂದ ಸ್ವೀಕರಿಸಬೇಕು. ಪ್ರತಿಸ್ಪರ್ಧಿಯನ್ನು ಅವಮಾನಿಸಬಾರದು,” ಎಂದು ಅವರು ಹೇಳಿದರು.
ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರನ್ನು ಉದಾಹರಣೆ ನೀಡಿದ ಸಿಂಗ್, “ನೀರಜ್ ಚೋಪ್ರಾ ಪಾಕಿಸ್ತಾನದ ಅರ್ಷದ್ ನದೀಮ್ ವಿರುದ್ಧ ಸೋತಾಗ ಅವರು ಕೇವಲ ಕೈಕುಲುಕುವುದಷ್ಟೇ ಅಲ್ಲ, ಪರಸ್ಪರ ಅಪ್ಪಿಕೊಂಡರು. ಅದೇ ನಿಜವಾದ ಕ್ರೀಡಾಸ್ಫೂರ್ತಿ. ದುಃಖಕರವಾಗಿ, ಇಂದಿನ ರಾಜಕೀಯದಲ್ಲಿ ಆ ಆತ್ಮೀಯತೆ ಕಾಣೆಯಾಗಿರುವಂತೆ ಕಾಣುತ್ತದೆ,” ಎಂದು ಅಭಿಪ್ರಾಯಪಟ್ಟರು.