ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Duleep Trophy: ಇಶಾನ್‌ ಕಿಶನ್‌ಗೆ ಗಾಯ, ಪೂರ್ವ ವಲಯ ತಂಡಕ್ಕೆ ವೈಭವ್‌ ಸೂರ್ಯವಂಶಿ ನಾಯಕ!

ವೈಭವ್ ಸೂರ್ಯವಂಶಿ ಅವರ ಕ್ರಿಕೆಟ್‌ ಪಯಣಕ್ಕೆ ಮತ್ತೊಂದು ಮಹತ್ವದ ಮೈಲುಗಲ್ಲು ಸೇರ್ಪಡೆಯಾಗಿದೆ. ದುಲೀಪ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಇಶಾನ್ ಕಿಶನ್ ಗಾಯಗೊಂಡ ಹಿನ್ನೆಲೆಯಲ್ಲಿ, 15ರ ವಯಸ್ಸಿನ ವೈಭವ್ ಪೂರ್ವ ವಲಯ ತಂಡದ ಹಂಗಾಮಿ ನಾಯಕರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಪೂರ್ವ ವಲಯ ತಂಡಕ್ಕೆ ವೈಭವ್‌ ಸೂರ್ಯವಂಶಿ ನಾಯಕ!

ಪೂರ್ವ ವಲಯ ತಂಡಕ್ಕೆ ವೈಭವ್‌ ಸೂರ್ಯವಂಶಿ. -

Profile
Ramesh Kote Aug 30, 2026 4:01 PM

ಬೆಂಗಳೂರು: ವೈಭವ್ ಸೂರ್ಯವಂಶಿ (Vaibhav Sooryavanshi) ತಮ್ಮ ಚಿಕ್ಕ ವಯಸ್ಸಿನಲ್ಲೇ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಕ್ರಿಕೆಟ್‌ ಜಗತ್ತಿನಲ್ಲಿ ಸದ್ದು ಮಾಡುತ್ತಿದ್ದಾರೆ. ಇದೀಗ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆಯುವ ಕೇಂದ್ರ ವಲಯ ವಿರುದ್ಧ ದುಲೀಪ್ ಟ್ರೋಫಿ (Duleep Trophy 2026) ಸೆಮಿಫೈನಲ್‌ನಲ್ಲಿ ಪೂರ್ವ ವಲಯ ತಂಡವನ್ನು ಮುನ್ನಡೆಸುವ ಅವಕಾಶ ಪಡೆದಿದ್ದಾರೆ. ಆ ಮೂಲಕ ತಮ್ಮ ವೃತ್ತಿಜೀವನದಲ್ಲಿ ಮತ್ತೊಂದು ಮೈಲುಗಲ್ಲು ತಲುಪಿದ್ದಾರೆ.

ಈ ಹಿಂದೆ ದುಲೀಪ್ ಟ್ರೋಫಿ ಟೂರ್ನಿಗೆ ಸೂರ್ಯವಂಶಿಯನ್ನು ಇಶಾನ್ ಕಿಶನ್ ಅವರ ಉಪನಾಯಕನಾಗಿ ನೇಮಿಸಲಾಗಿತ್ತು. ಆದರೆ, ನಾಯಕ ಇಶಾನ್ ಕಿಶನ್ ಗಾಯಗೊಂಡು ಮೈದಾನದಿಂದ ಹೊರನಡೆದ ಹಿನ್ನೆಲೆಯಲ್ಲಿ ವೈಭವ್ ಸೂರ್ಯವಂಶಿ ಹಂಗಾಮಿ ನಾಯಕನಾಗಿ ತಂಡದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ವಿಕೆಟ್‌ಕೀಪಿಂಗ್ ವೇಳೆ ಇಶಾನ್ ಕಿಶನ್ ಅವರ ಬಲಗೈ ಮಣಿಕಟ್ಟಿಗೆ ಚೆಂಡು ಬಡಿದಿತ್ತು. ಫಿಸಿಯೊಗಳು ಮೈದಾನದಲ್ಲೇ ಅವರಿಗೆ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಪರೀಕ್ಷೆಗಾಗಿ ಅವರು ಮೈದಾನದಿಂದ ಹೊರನಡೆದರು. ನಂತರ ಇಶಾನ್ ಕಿಶನ್ ಮತ್ತೆ ಮೈದಾನಕ್ಕೆ ಮರಳಿ ತಂಡವನ್ನು ಮುನ್ನಡೆಸಿದರಾದರೂ, ಅವರ ಕೈಗೆ ಪಟ್ಟಿ ಕಟ್ಟಲಾಗಿತ್ತು. ಇದರ ನಡುವೆ ಹಿರಿಯರ ತಂಡವನ್ನು ಮುನ್ನಡೆಸುತ್ತಿರುವುದು ವೈಭವ್ ಸೂರ್ಯವಂಶಿಗೆ ಇದೇ ಮೊದಲ ಅನುಭವ. ಪೂರ್ವ ವಲಯ ಆಡುವ ಬಳಗದಲ್ಲಿ ಮೊಹಮ್ಮದ್ ಶಮಿ, ಮುಖೇಶ್ ಕುಮಾರ್ ಮತ್ತು ಅಭಿಮನ್ಯು ಈಶ್ವರನ್ ಸೇರಿದಂತೆ ಹಲವು ಪ್ರಮುಖ ಅಂತಾರಾಷ್ಟ್ರೀಯ ಆಟಗಾರರು ಇದ್ದಾರೆ.

ಭಾರತ ಅಂಡರ್‌-19 ತಂಡದಲ್ಲಿ ವೈಭವ್‌ ಸೂರ್ಯವಂಶಿ ಸ್ಥಾನ ಕಳೆದುಕೊಳ್ಳಲು ಕಾರಣವೇನು?

ಸೂರ್ಯವಂಶಿಗೆ ಇನ್ನೂ ಕೇವಲ 15 ವರ್ಷ. ಹೀಗಾಗಿ ಇಷ್ಟು ಚಿಕ್ಕ ವಯಸ್ಸಿನಲ್ಲೇ ಅವರಿಗೆ ಇಂತಹ ಮಹತ್ವದ ಜವಾಬ್ದಾರಿ ನೀಡಿರುವುದು ಸರಿಯೇ ಎಂಬ ಬಗ್ಗೆ ಆಯ್ಕೆಗಾರರ ನಿರ್ಧಾರ ಚರ್ಚೆಗೆ ಕಾರಣವಾಗಿತ್ತು. ಆದರೆ, ಆಯ್ಕೆಗಾರರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

“ನಾವು ಕೇವಲ ವರ್ತಮಾನದ ಬಗ್ಗೆ ಮಾತ್ರ ಯೋಚಿಸುತ್ತಿಲ್ಲ,” ಎಂದು ಪೂರ್ವ ವಲಯ ಆಯ್ಕೆ ಸಮಿತಿಯ ಭಾಗವಾಗಿರುವ ಜಾರ್ಖಂಡ್ ಆಯ್ಕೆಗಾರ ಮನೀಶ್ ವರ್ಧನ್ ಅವರು ಕ್ರಿಕ್‌ಇನ್ಫೋಗೆ ತಿಳಿಸಿದ್ದಾರೆ.

ಇದು ವೈಭವ್ ಸೂರ್ಯವಂಶಿ ಆಡುತ್ತಿರುವ ಎರಡನೇ ದುಲೀಪ್ ಟ್ರೋಫಿ ಪಂದ್ಯವಾಗಿದೆ. 2024ರಲ್ಲಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ ಬಳಿಕ ಅವರು ಇದಕ್ಕೂ ಮೊದಲು ಒಂಬತ್ತು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು.

ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಸೂರ್ಯವಂಶಿ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಲಾಗಿಲ್ಲ. ಒಂಬತ್ತು ಪಂದ್ಯಗಳಲ್ಲಿ 16.53ರ ಸರಾಸರಿಯಲ್ಲಿ 215 ರನ್ ಗಳಿಸಿದ್ದು, ಒಂದು ಅರ್ಧಶತಕ ಮಾತ್ರ ಅವರು ದಾಖಲಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲೂ ಅವರು ಕಷ್ಟಪಟ್ಟಿದ್ದರು. ಆದರೆ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಎರಡು ಅರ್ಧಶತಕಗಳನ್ನು ಸಿಡಿಸಿದ್ದರು.

ಶ್ರೀಲಂಕಾ ಟೆಸ್ಟ್‌ ಸರಣಿಯಲ್ಲಿ ಇಂಪ್ಯಾಕ್ಟ್‌ ಆಟಗಾರ ಪ್ರಶಸ್ತಿ ಮುಡಿಗೇರಿಸಿಕೊಂಡ ಪ್ರಸಿಧ್‌ ಕೃಷ್ಣ!

ದುರ್ಬಲ ತಂಡಗಳ ವಿರುದ್ಧ ಸೂರ್ಯವಂಶಿ ಸತತವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಬಲಿಷ್ಠ ತಂಡಗಳ ವಿರುದ್ಧ ಕಠಿಣ ಪರಿಸ್ಥಿತಿಗಳಲ್ಲಿ ತಮ್ಮ ಸಾಮರ್ಥ್ಯವನ್ನು ಇನ್ನೂ ಸಾಬೀತುಪಡಿಸುವುದು ಬಾಕಿ ಇದೆ. ಆದರೂ ಅವರಿಗೆ ಕೇವಲ 15 ವರ್ಷ ವಯಸ್ಸಾಗಿರುವುದರಿಂದ ಉನ್ನತ ಮಟ್ಟದ ಕ್ರಿಕೆಟ್‌ಗೆ ಹೊಂದಿಕೊಳ್ಳಲು ಸಮಯ ಬೇಕಿದೆ. ಅನುಭವ ಹೆಚ್ಚಾದಂತೆ ಅವರ ಆಟ ಮತ್ತಷ್ಟು ಸುಧಾರಿಸುವ ನಿರೀಕ್ಷೆಯಿದೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಈಗಾಗಲೇ 700ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ಅತ್ಯುತ್ತಮ ಬೌಲರ್‌ಗಳನ್ನು ಎದುರಿಸುವ ಸಾಮರ್ಥ್ಯ ತಮ್ಮಲ್ಲಿದೆ ಎಂಬುದನ್ನು ಸೂರ್ಯವಂಶಿ ಸಾಬೀತುಪಡಿಸಿದ್ದಾರೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಪೂರ್ಣ ವಿಭಿನ್ನ ಸವಾಲಾಗಿದೆ.

ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿಗೆ ಪ್ರಿನ್ಸ್‌ ಯಾದವ್‌ ಸಂಪೂರ್ಣ ಫಿಟ್‌; ಹಾರ್ದಿಕ್‌, ಬುಮ್ರಾ ಬಗ್ಗೆ ಅಪ್‌ಡೇಟ್‌!

ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಬೇಕಾದರೆ ಸತತವಾಗಿ ಉತ್ತಮ ಪ್ರದರ್ಶನ ನೀಡಬೇಕು ಎಂಬುದು ವೈಭವ್ ಅವರಿಗೂ ಗೊತ್ತಿದೆ. ಆದರೆ ಅವರಿಗೆ ಅಗತ್ಯವಾದ ಅವಕಾಶ ಹಾಗೂ ಅನುಭವ ನೀಡಲು ಭಾರತ ತಂಡದ ಆಡಳಿತ ಮಂಡಳಿ ಸಿದ್ಧವಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಆಟಗಾರನಾಗಿ ಮತ್ತಷ್ಟು ಬೆಳೆಯಲು ಅಗತ್ಯವಾದ ಅನುಭವವನ್ನು ಪಡೆಯಲು ತಂಡ ಅವರನ್ನು ಬೆಂಬಲಿಸುತ್ತಿದೆ. ಇದರ ಜೊತೆಗೆ, ಏಷ್ಯನ್ ಗೇಮ್ಸ್‌ಗಾಗಿ ಪ್ರಕಟಿಸಿರುವ ಭಾರತದ ತಂಡದಲ್ಲೂ ವೈಭವ್ ಸೂರ್ಯವಂಶಿ ಸ್ಥಾನ ಪಡೆದಿದ್ದಾರೆ.