Vijay Hazare Trophy: ಮೈಕಲ್ ಬೆವನ್‌ರ ವಿಶ್ವ ದಾಖಲೆಯನ್ನು ಮುರಿದ ವಿರಾಟ್ ಕೊಹ್ಲಿ!
ಗುಜರಾತ್ ವಿರುದ್ಧ ವಿಜಯ ಹಝಾರೆ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ 77 ರನ್‌ಗಳ ಇನಿಂಗ್ಸ್ ಆಡುವ ಮೂಲಕ ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ದಂತಕತೆ ಮೈಕಲ್ ಬೆವನ್ ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಆ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸರಾಸರಿ ಹೊಂದಿದ ಬ್ಯಾಟ್ಸ್‌ಮನ್ ಎಂಬ ನೂತನ ಮೈಲುಗಲ್ಲು ತಲುಪಿದ್ದಾರೆ.
ಮೈಕಲೆ ಬೆವನ್ ವಿಶ್ವ ದಾಖಲೆ ಮುರಿದ ಕಿಂಗ್ ಕೊಹ್ಲಿ. -
ಬೆಂಗಳೂರು: ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ (Virat Kohli) ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ (Vijay Hazare Trophy 2025-26) ಟೂರ್ನಿಯ ಗುಜರಾತ್ ವಿರುದ್ಧ 77 ರನ್‌ಗಳ ಅದ್ಭುತ ಇನಿಂಗ್ಸ್ ಆಡಿದರು. ಈ ಇನಿಂಗ್ಸ್‌ನೊಂದಿಗೆ ಅವರು ವಿಶ್ವ ದಾಖಲೆಯನ್ನ ಬರೆದಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾದ ದಂತಕಥೆ ಬ್ಯಾಟ್ಸ್‌ಮನ್ ಮೈಕೆಲ್ ಬೆವನ್ (Michael Beven) ಅವರ ದಾಖಲೆಯೊಂದನ್ನು ಮುರಿದಿದ್ದಾರೆ. ವಿರಾಟ್ ಕೊಹ್ಲಿ ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಸರಾಸರಿ ಹೊಂದಿರುವ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಅವರು ಆಸ್ಟ್ರೇಲಿಯಾದ ಶ್ರೇಷ್ಠ ಮೈಕೆಲ್ ಬೆವನ್ ಅವರ 57.86ರ ಸರಾಸರಿಯ ದಾಖಲೆಯ ಮುರಿದಿದ್ದಾರೆ. ಕೊಹ್ಲಿಯ ಹೊಸ ಸರಾಸರಿ 57.87 ಆಗಿದೆ. ಆ ಮೂಲಕ ಕೊಹ್ಲಿಯನ್ನು ಆಟದ ಇತಿಹಾಸದಲ್ಲಿ ಅತ್ಯಂತ ಪರಿಣಾಮಕಾರಿ ರನ್ ಸ್ಕೋರರ್ ಎಂದು ಇದರಿಂದ ತಿಳಿಯುತ್ತದೆ.
ಏಕದಿನ ವೃತ್ತಿಜೀವನದ ಸ್ಥಿರತೆಯನ್ನು ಗಮನಿಸಿದರೆ ಈ ದಾಖಲೆ ವಿರಾಟ್ ಕೊಹ್ಲಿಗೆ ಒಂದು ಪ್ರಮುಖ ಸಾಧನೆಯಾಗಿದೆ. ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಗುಜರಾತ್ ವಿರುದ್ಧ 61 ಎಸೆತಗಳಲ್ಲಿ 77 ರನ್ ಗಳಿಸುವ ಮೂಲಕ ಕೊಹ್ಲಿ ಈ ಹೊಸ ದಾಖಲೆಯನ್ನು ಬರೆದಿದ್ದಾರೆ. ಈ ಅದ್ಭುತ ಪ್ರದರ್ಶನದೊಂದಿಗೆ ಕೊಹ್ಲಿಯ ಲಿಸ್ಟ್ ಎ ವೃತ್ತಿಜೀವನದ ಸರಾಸರಿ 57.87ಕ್ಕೆ ಏರಿದೆ, ಇದು ಬೆವನ್ ಅವರ 57.86 ದಾಖಲೆಗಿಂತ ಸ್ವಲ್ಪ ಮುಂದಿದೆ.
ಸತತ 2 ಬಾರಿ ಡಕ್‌ಔಟ್ ಆದಾಗ ವಿರಾಟ್ ಕೊಹ್ಲಿಯನ್ನು ಟೀಕಿಸಿದ್ದರು : ಆರ್‌ಸಿಬಿ ಮಾಜಿ ಆಟಗಾರ!
ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತ್ಯಧಿಕ ಸರಾಸರಿ ಹೊಂದಿರುವ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಈಗ ಅಗ್ರಸ್ಥಾನದಲ್ಲಿದ್ದಾರೆ. ಅವರ ನಂತರ ಮೈಕೆಲ್ ಬೆವನ್ (57.86), ಸ್ಯಾಮ್ ಹೈನ್ (57.76), ಚೇತೇಶ್ವರ ಪೂಜಾರ (57.01), ಮತ್ತು ಋತುರಾಜ್ ಗಾಯಕ್ವಾಡ್ (56.68) ಇದ್ದಾರೆ. ಪಾಕಿಸ್ತಾನದ ಬಾಬರ್ ಆಝಮ್ (53.82) ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ (53.46) ಕೂಡ ಈ ಪಟ್ಟಿಯಲ್ಲಿದ್ದಾರೆ.
ಕಳೆದ 6 ಪಂದ್ಯಗಳಿಂದ 584 ರನ್
ವಿರಾಟ್ ಕೊಹ್ಲಿ ತಮ್ಮ ಕೊನೆಯ 6 ಏಕದಿನ ಪಂದ್ಯಗಳಲ್ಲಿ ಸುಮಾರು 150ರ ಸರಾಸರಿಯನ್ನು ಹೊಂದಿದ್ದಾರೆ. ಈ ಅವಧಿಯಲ್ಲಿ ಆಡಿದ 6 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 146.00ರ ಅದ್ಭುತ ಸರಾಸರಿಯಲ್ಲಿ 584 ರನ್‌ಗಳನ್ನು ಗಳಿಸಿದ್ದಾರೆ. ಕಳೆದ ಕೆಲವು ಪಂದ್ಯಗಳಲ್ಲಿ ಅವರು ಗುಜರಾತ್ ವಿರುದ್ಧ 77 (61 ಎಸೆತಗಳು), ಆಂಧ್ರ ವಿರುದ್ಧ 131 (101 ಎಸೆತಗಳು), ದಕ್ಷಿಣ ಆಫ್ರಿಕಾ ವಿರುದ್ಧ 65 (ಅಜೇಯ), ದಕ್ಷಿಣ ಆಫ್ರಿಕಾ ವಿರುದ್ಧ 102, ದಕ್ಷಿಣ ಆಫ್ರಿಕಾ ವಿರುದ್ಧ 135 ಮತ್ತು ಆಸ್ಟ್ರೇಲಿಯಾ ವಿರುದ್ಧ 74 ರನ್‌ಗಳನ್ನು ಗಳಿಸಿದ್ದಾರೆ.
Vijay Hazare Trophy: ಆಂಧ್ರ ಬೌಲರ್‌ಗಳನ್ನು ಬೆಂಡೆತ್ತಿದ್ದ ವಿರಾಟ್ ಕೊಹ್ಲಿ, 131 ರನ್ ಚಚ್ಚಿದ ರನ್ ಮಷೀನ್!
ಸಚಿನ್ ದಾಖಲೆಯನ್ನು ಮುರಿದಿದ್ದ ಕೊಹ್ಲಿ
ಈ ವರ್ಷ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಕೊಹ್ಲಿ ಅವರ ಸ್ಟ್ರೈಕ್ ರೇಟ್ 110 ಕ್ಕಿಂತ ಹೆಚ್ಚಾಗಿದೆ. ಇದು ಇಂದಿನ ವೇಗದ ವೈಟ್-ಬಾಲ್ ಕ್ರಿಕೆಟ್‌ಗೆ ಅವರು ಹೊಂದಿಕೊಳ್ಳಲು ಸಮರ್ಥರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. 2025ರಲ್ಲಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಕೊಹ್ಲಿ ಅವರ ಸರಾಸರಿ 80 ಕ್ಕಿಂತ ಹೆಚ್ಚಿದೆ. ಈ ವರ್ಷ, ಅವರು ಲಿಸ್ಟ್ ಎ ಕ್ರಿಕೆಟ್‌ನಲ್ಲಿ 16,000 ರನ್‌ಗಳನ್ನು ತಲುಪಿದ ಅತ್ಯಂತ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದರು. ಅವರು 61 ಇನಿಂಗ್ಸ್‌ಗಳಿಂದ ತೆಂಡೂಲ್ಕರ್ ಅವರ ದಾಖಲೆಯನ್ನು ಹಿಂದಿಕ್ಕಿದರು.