ಭಾರತದ ಈಡನ್ ಟೆಸ್ಟ್ ಪವಾಡಕ್ಕೆ 25ರ ಸಂಭ್ರಮ
On This Day: ಕೋಲ್ಕತಾ ಪಂದ್ಯಕ್ಕೂ ಮುನ್ನ ನಡೆದ ಮುಂಬೈ ಟೆಸ್ಟ್ನಲ್ಲಿ ಭಾರತ ಹೀನಾಯವಾಗಿ ಸೋತು ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿತ್ತು. ಈಡನ್ ಗೆಲುವಿನಿಂದ ಸರಣಿ ಸಮಬಲ ಸಾಧಿಸಿದ ಭಾರತ ನಂತರ ಚೆನ್ನೈನಲ್ಲಿ ನಡೆದ ಕೊನೇ ಟೆಸ್ಟ್ನಲ್ಲೂ ಗೆದ್ದು ಸರಣಿ ವಶಪಡಿಸಿಕೊಂಡಿತ್ತು.
Laxman-Dravid -
ಕೋಲ್ಕತಾ, ಮಾ.14: ಮಾರ್ಚ್ 14, 2001 ಭಾರತೀಯ ಮಾತ್ರವಲ್ಲದೆ ವಿಶ್ವದ ಎಲ್ಲ ಕ್ರಿಕೆಟ್ ಪ್ರಿಯರು ಮರೆಯಲಾಗದ ದಿನ. ಈಡನ್ ಗಾರ್ಡನ್ಸ್‌ನಲ್ಲಿ ಭಾರತವು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಸ್ಮರಣೀಯ ಸಾಧನೆ ಮಾಡಿದ ದಿನ. ಈಡನ್ ಟೆಸ್ಟ್ ಪವಾಡ ಗೆಲುವಿಗೆ 25ರ ಸಂಭ್ರಮ. ಪಂದ್ಯದ 3ನೇ ದಿನ ಫಾಲೋಆನ್ಗೆ ಸಿಲುಕಿದ್ದ ಆತಿಥೇಯ ಭಾರತ ತಂಡ, ವಿವಿಎಸ್ ಲಕ್ಷ್ಮಣ್ (vvs laxman)-ರಾಹುಲ್ ದ್ರಾವಿಡ್ (rahul dravid) ಅದ್ಭುತ ಜತೆಯಾಟದಿಂದ ಭಾರತ ಪವಾಡಸದೃಶ ರೀತಿಯಲ್ಲಿ ಗೆದ್ದು, ಆಸ್ಟ್ರೇಲಿಯಾ ತಂಡದ ಸೊಕ್ಕು ಮುರಿದಿತ್ತು.
2001ರ ಮಾರ್ಚ್ 11ರಂದು ಈಡನ್ ಗಾರ್ಡನ್ಸ್‌ನಲ್ಲಿ ಆರಂಭಗೊಂಡ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡಿತು. ಮೊದಲ ದಿನ 8 ವಿಕೆಟ್ಗೆ 291 ರನ್ ಗಳಿಸಿತು. 2ನೇ ದಿನ 445 ರನ್ಗಳಿಗೆ ಆಲೌಟ್ ಅಯಿತು. ಪ್ರತಿಯಾಗಿ ಭಾರತ ದಿನದಂತ್ಯಕ್ಕೆ 128 ರನ್ಗಳಿಗೆ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 3ನೇ ದಿನವಾದ ಮಾರ್ಚ್ 13ಕ್ಕೆ ಭಾರತ 171 ರನ್ಗಳಿಗೆ ಆಲೌಟ್ ಆಗಿ, 274 ರನ್ ಹಿನ್ನಡೆಯೊಂದಿಗೆ ಫಾಲೋಆನ್ಗೆ ಸಿಲುಕಿತು. 2ನೇ ಸರದಿಯಲ್ಲಿ ಪ್ರತಿರೋಧ ತೋರಿದ ನಡುವೆಯೂ ಭಾರತ ದಿನದಂತ್ಯಕ್ಕೆ 4 ವಿಕೆಟ್ಗೆ 254 ರನ್ ಗಳಿಸಿ ಇನ್ನೂ 20 ರನ್ ಹಿನ್ನಡೆಯಲ್ಲಿತ್ತು.
4ನೇ ದಿನವಾದ ಮಾರ್ಚ್ 14ರಂದು ವಿವಿಎಸ್ ಲಕ್ಷ್ಮಣ್ ಮತ್ತು ರಾಹುಲ್ ದ್ರಾವಿಡ್ ಅದ್ಭುತ ಜತೆಯಾಟ ನಡೆಸುವ ಮೂಲಕ ಆಸೀಸ್ ಲೆಕ್ಕಾಚಾರವನನು ಬುಡಮೇಲು ಮಾಡಿದರು. ಇಡೀ ದಿನ ಆಸೀಸ್ ಬೌಲರ್ಗಳನ್ನು ಇನ್ನಿಲ್ಲದಂತೆ ಕಾಡಿದರು. ಈ ಜೋಡಿ ದಿನದಂತ್ಯಕ್ಕೆ 4 ವಿಕೆಟ್ಗೆ 589 ರನ್ ಗಳಿಸಿತು. 5ನೇ ಹಾಗೂ ಅಂತಿಮ ದಿನ (ಮಾರ್ಚ್ 15)ದಂದು 7 ವಿಕೆಟ್ಗೆ 657 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇದರಿಂದ ಗೆಲುವಿಗೆ 384 ರನ್ ಗುರಿ ಪಡೆದ ಆಸೀಸ್, ದಿನದ ಕೊನೆಯಲ್ಲಿ 212 ರನ್ಗಳಿಗೆ ಸರ್ವಪತನ ಕಂಡು, 171 ರನ್ಗಳಿಂದ ಹೀನಾಯ ಸೋಲು ಕಂಡಿತು.
ಐಪಿಎಲ್ ಆತಿಥ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಇನ್ನೂ ಸಿಗದ ಅನುಮತಿ
ಅಸಾಮಾನ್ಯ ಬ್ಯಾಟಿಂಗ್ ನಡೆಸಿದ ವಿವಿಎಸ್ ಲಕ್ಷ್ಮಣ್ 452 ಎಸೆತಗಳಲ್ಲಿ 44 ಬೌಂಡರಿ ಸಹಿತ 281 ರನ್ ಬಾರಿಸಿದರೆ, ದ್ರಾವಿಡ್ 353 ಎಸೆತಗಳಲ್ಲಿ 20 ಬೌಂಡರಿ ಸಹಿತ 180 ರನ್ ಗಳಿಸಿದರು. ಇವರಿಬ್ಬರು 5ನೇ ವಿಕೆಟ್ಗೆ 376 ರನ್ ಜತೆಯಾಟವಾಡಿ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದ್ದರು. 4ನೇ ದಿನದಂತ್ಯಕ್ಕೆ ಅಜೇಯ 275 ರನ್ ಗಳಿಸಿದ್ದ ಲಕ್ಷ್ಮಣ್, ತ್ರಿಶತಕ ಸಿಡಿಸಿದ ಮೊದಲ ಭಾರತೀಯರೆನಿಸುವ ಅವಕಾಶವನ್ನೂ ಹೊಂದಿದ್ದರು. ಆದರೆ ಕೊನೇ ದಿನ ತ್ರಿಶತಕದಿಂದ 19 ರನ್ ದೂರವಿದ್ದಾಗ ಮೆಕ್ಗ್ರಾಥ್ ಎಸೆತದಲ್ಲಿ ಔಟಾದರು.
ಕೋಲ್ಕತಾ ಪಂದ್ಯಕ್ಕೂ ಮುನ್ನ ನಡೆದ ಮುಂಬೈ ಟೆಸ್ಟ್ನಲ್ಲಿ ಭಾರತ ಹೀನಾಯವಾಗಿ ಸೋತು ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿತ್ತು. ಈಡನ್ ಗೆಲುವಿನಿಂದ ಸರಣಿ ಸಮಬಲ ಸಾಧಿಸಿದ ಭಾರತ ನಂತರ ಚೆನ್ನೈನಲ್ಲಿ ನಡೆದ ಕೊನೇ ಟೆಸ್ಟ್ನಲ್ಲೂ ಗೆದ್ದು ಸರಣಿ ವಶಪಡಿಸಿಕೊಂಡಿತ್ತು.