IND vs SA: ಬೃಹತ್ ಮೊತ್ತದ ಮೇಲಾಟದಲ್ಲಿ ಹೋರಾಡಿ ಸೋತ ಹರಿಣ ಪಡೆ
ಭಾರತ ಪರ ಚೈನಾಮನ್ ಖ್ಯಾತಿಯ ಸ್ಪಿನ್ನರ್ ಕುಲ್‌ದೀಪ್ ಯಾದವ್ 68 ರನ್‌ಗೆ 4 ವಿಕೆಟ್ ಕಿತ್ತರೆ ವೇಗಿಗಳಾದ ಹರ್ಷೀತ್ ರಾಣಾ 3, ಅರ್ಶ್‌ದೀಪ್ ಸಿಂಗ್ 2 ಮತ್ತು ಕನ್ನಡಿಗ ಪ್ರಸಿದ್ಧ್ ಕೃಷ್ಣ 1 ವಿಕೆಟ್ ಕಿತ್ತರು. ಆಲ್‌ರೌಂಡರ್‌ಗಳಾ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ವಿಕೆಟ್ ಲೆಸ್ ಎನಿಸಿಕೊಂಡರು.
Virat Kohli and Harshit Rana -
ರಾಂಚಿ, ನ.30: ಆರಂಭದಲ್ಲಿ ವಿರಾಟ್ ಕೊಹ್ಲಿ(135) ಶತಕದ ಆರ್ಭಟ, ಆ ಬಳಿಕ ಕುಲ್‌ದೀಪ್ ಯಾದವ್(68ಕ್ಕೆ4) ಅವರ ಸ್ಪಿನ್ ಬೆಲೆಗೆ ಬಿದ್ದ ದಕ್ಷಿಣ ಆಫ್ರಿಕಾ(IND vs SA) ತಂಡ ಮೊದಲ ಏಕದಿನ ಪಂದ್ಯದಲ್ಲಿ 17 ರನ್‌ಗಳ ಸೋಲು ಕಂಡಿತು. ಬೃಹತ್ ಮೊತ್ತದ ಮೇಲಾಟದಲ್ಲಿ ರೋಮಾಂಚನಕಾರಿ ಗೆಲುವು ಸಾಧಿಸಿದ ಭಾರತ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ.
ಇಲ್ಲಿನ ಜೆಎಸ್‌ಸಿಎ ಅಂತಾರಾಷ್ಟ್ರೀಯ ಮೈದಾನದಲ್ಲಿ ಭಾನುವಾರ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ, ಭಾರತವನ್ನು ಮೊದಲು ಬ್ಯಾಟಿಂಗ್‌ಗಿಳಿಸಿತು. ವಿರಾಟ್ ಕೊಹ್ಲಿಯ ಆಕರ್ಷಕ ಶತಕ ಹಾಗೂ ರೋಹಿತ್ ಶರ್ಮ ಮತ್ತು ಹಂಗಾಮಿ ನಾಯಕ ಕೆ.ಎಲ್ ರಾಹುಲ್ ಬಾರಿಸಿದ ಅರ್ಧಶತಕ ನೆರವಿಂದ ಭಾರತ 8 ವಿಕೆಟ್‌ಗೆ 349 ರನ್ ಪೇರಿಸಿತು. ಇದು ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಎರಡನೇ ಗರಿಷ್ಠ ಮೊತ್ತ. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಆರಂಭಿಕ ಆಘಾತದ ಹೊರತಾಗಿಯೂ ಅಂತಿಮ ಹಂತದಲ್ಲಿ ತೋರಿದ ಶಕ್ತಿ ಮೀರಿದ ಪ್ರದರ್ಶನ ಫಲವಾಗಿ 49.2 ಓವರ್‌ಗಳಲ್ಲಿ 332 ರನ್ ಬಾರಿಸಿ ಸಣ್ಣ ಅಂತರದ ಸೋಲು ಕಂಡಿತು.
ರಾಣಾ ಅವಳಿ ಆಘಾತ
ಬೃಹತ್ ಮೊತ್ತ ಬೆನ್ನಟ್ಟಲಾರಂಭಿಸಿದ ದಕ್ಷಿಣ ಆಫ್ರಿಕಾ ತಂಡಕ್ಕೆ ವೇಗಿ ಹರ್ಷಿತ್ ರಾಣಾ ಆರಂಭಿಕ ಹಂತದಲ್ಲೇ ಅವಳಿ ಆಘಾತವಿಕ್ಕಿದರು. ಅನುಭವಿ ಕ್ವಿಂಟಾನ್ ಡಿ ಕಾಕ್ ಹಾಗೂ ಸ್ಫೋಟಕ ಬ್ಯಾಟರ್ ರಯಾನ್ ರಿಕೆಲ್ಟನ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿ ಪೆವಿಲಿಯನ್‌ಗೆ ಅಟ್ಟಿದರು. ಈ ಆಘಾತದಿಂದ ಹೊರಬರುವ ಮುನ್ನವೇ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ನಾಯಕ ಐಡೆನ್ ಮಾರ್ಕ್ರಮ್(7) ಗೂ ಪೆವಿಲಿಯನ್ ದಾರಿ ತೋರಿದರು.
ಜಾನ್ಸೆನ್-ಮ್ಯಾಥ್ಯೂ ಆಸರೆ
11 ರನ್‌ಗೆ ಮೂರು ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ ತಂಡ, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಅಸಾಮಾನ್ಯ ಬ್ಯಾಟಿಂಗ್ ಪ್ರದರ್ಶನದಿಂದ ಚೇತರಿಕೆ ಕಂಡಿತು. ಮ್ಯಾಥ್ಯೂ ಬ್ರೀಟ್ಜ್ಕೆ ಮತ್ತು ಬೌಲಿಂಗ್ ಆಲ್‌ರೌಂಡರ್ ಮಾರ್ಕೊ ಜಾನ್ಸೆನ್ ಸೇರಿಕೊಂಡು ಕೆಲ ಕಾಲ ಭಾರತೀಯ ಬ್ಯಾಟರ್‌ಗಳನ್ನು ಕಾಡಲಾರಂಭಿಸಿದರು. ಮಾರ್ಕೊ ಜಾನ್ಸೆನ್ ಬ್ಯಾಟಿಂಗ್ ತುಂಬಾನೆ ಆಕ್ರಮಣಕಾರಿಯಾಗಿತ್ತು. ಉಭಯ ಆಟಗಾರರು ಅರ್ಧಶತಕ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಪಾಯಕಾರಿಯಾಗಿ ಮುನ್ನುಗುತ್ತಿದ್ದ ಈ ಬ್ಯಾಟರ್‌ಗಳನ್ನು ಕೊನೆಗೂ ಕುಲ್‌ದೀಪ್ ಪೆವಿಲಿಯನ್‌ಗೆ ಅಟ್ಟುವಲ್ಲಿ ಯಶಸ್ಸು ಕಂಡರು. ಮ್ಯಾಥ್ಯೂ ಬ್ರೀಟ್ಜ್ಕೆ 72 ರನ್ ಬಾರಿಸಿದರೆ, ಮಾರ್ಕೊ ಜಾನ್ಸೆನ್ ಕೇವಲ 39 ಎಸೆತಗಳಿಂದ 70 ರನ್ ಚಚ್ಚಿದರು. ಟೋನಿ ಡಿ ಜೋರ್ಜಿ(39), ಡೆವಾಲ್ಡ್ ಬ್ರೆವಿಸ್(37) ರನ್ ಗಳಿಸಿದರು.
ಇದನ್ನೂ ಓದಿ IND vs SA: 'ವಿಂಟೇಜ್' ವಿರಾಟ್ ಸೆಂಚುರಿ; ಬೃಹತ್ ಮೊತ್ತ ಪೇರಿಸಿದ ಭಾರತ
ಭಾರತ ಪರ ಚೈನಾಮನ್ ಖ್ಯಾತಿಯ ಸ್ಪಿನ್ನರ್ ಕುಲ್‌ದೀಪ್ ಯಾದವ್ 68 ರನ್‌ಗೆ 4 ವಿಕೆಟ್ ಕಿತ್ತರೆ ವೇಗಿಗಳಾದ ಹರ್ಷೀತ್ ರಾಣಾ 3, ಅರ್ಶ್‌ದೀಪ್ ಸಿಂಗ್ 2 ಮತ್ತು ಕನ್ನಡಿಗ ಪ್ರಸಿದ್ಧ್ ಕೃಷ್ಣ 1 ವಿಕೆಟ್ ಕಿತ್ತರು. ಆಲ್‌ರೌಂಡರ್‌ಗಳಾ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ವಿಕೆಟ್ ಲೆಸ್ ಎನಿಸಿಕೊಂಡರು.
ಸೋಲಿನ ಭಯ ಹುಟ್ಟಿಸಿದ ಕಾರ್ಬಿನ್ ಬಾಷ್
ಅಂತಿಮ ಹಂತದಲ್ಲಿ ತಂಡದ ಗೆಲುವಿಗಾಗಿ ಟೊಂಕ ಕಟ್ಟಿ ನಿಂತ ವೇಗಿ ಕಾರ್ಬಿನ್ ಬಾಷ್ ಅಸಾಮಾನ್ಯ ಬ್ಯಾಟಿಂಗ್ ಮೂಲಕ ಭಾರತೀಯ ಪಾಳಯದಲ್ಲಿ ಸೋಲಿನ ಭಯ ಹುಟ್ಟಿಸಿದರು. ಚೊಚ್ಚಲ ಅರ್ಧಶತಕ ಬಾರಿಸಿ ಮಿಂಚಿದರು. ಪಂದ್ಯದ ರೋಚಕತೆಯನ್ನು ಕೊನೆಯ ಓವರ್ ತನಕ ತಂದರು. ಅಂತಿಮ ಓವರ್‌ನಲ್ಲಿ 6 ಎಸೆತಗಳಲ್ಲಿ 18 ರನ್ ಕಸಿಯುವ ಸವಾಲು ಎದುರಾಯಿತು. ಆದರೆ ಎರಡನೇ ಎಸೆತದಲ್ಲಿ ಕಾರ್ಬಿನ್ ಬಾಷ್ ಕ್ಯಾಚ್ ನೀಡುವ ಮೂಲಕ ಔಟಾದರು. ಅವರ ವಿಕೆಟ್ ಪತನದೊಂದಿಗೆ ತಂಡ ಆಲೌಟ್ ಆಯಿತು. 4 ಸಿಕ್ಸರ್ ಮತ್ತು 5 ಬೌಂಡರಿ ಬಾರಿಸಿದ ಕಾರ್ಬಿನ್ ಬಾಷ್ 67 ರನ್ ಗಳಿಸಿದರು.
ಕೊಹ್ಲಿ ಆಕರ್ಷಕ ಶತಕ
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಭಾರತ ಪರ ರನ್ ಮಷೀನ್ ವಿರಾಟ್ ಕೊಹ್ಲಿ ಸೊಗಸಾದ ಬ್ಯಾಟಿಂಗ್ ಮೂಲಕ ಶತಕ ಬಾರಿಸಿ ಮಿಂಚಿದರು. ಇದೇ ವೇಳೆ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ರಿಕಿ ಪಾಂಟಿಂಗ್ ಅವರ ವಿಶ್ವ ದಾಖಲೆಗಳನ್ನು ಮುರಿದರು. ಪಂದ್ಯದಲ್ಲಿ 7 ಸಿಕ್ಸರ್ ಬಾರಿಸುವ ಮೂಲಕ 3ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ ಅತ್ಯಧಿಕ ಸಿಕ್ಸರ್ ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿದರು. ಕೊಹ್ಲಿ ಈಗ 223 ಸಿಕ್ಸರ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ, ಪಾಂಟಿಂಗ್ (217) ಎರಡನೇ ಸ್ಥಾನದಲ್ಲಿದ್ದಾರೆ. 52ನೇ ಏಕದಿನ ಶತಕದೊಂದಿಗೆ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನ ಒಂದೇ ಸ್ವರೂಪದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಸಚಿನ್ ಅವರ ವಿಶ್ವ ದಾಖಲೆಯನ್ನು ಮುರಿದರು.
ಎರಡನೇ ವಿಕೆಟ್‌ಗೆ ಜತೆಯಾದ ರೋಹಿತ್ ಮತ್ತು ಕೊಹ್ಲಿ ಜಿದ್ದಿಗೆ ಬಿದ್ದವರಂತೆ ಬ್ಯಾಟಿಂಗ್ ನಡೆಸಿ 2ನೇ ವಿಕೆಟ್‌ಗೆ 136ರನ್‌ಗಳ ಜತೆಯಾಟ ನಡೆಸಿದರು. 2 ರನ್ ಗಳಿಸಿದ್ದ ವೇಳೆ ಜೀವದಾನ ಪಡೆದ ರೋಹಿತ್ ಇದರ ಸಂಪೂರ್ಣ ಲಾಭವೆತ್ತಿ ಅರ್ಧಶತಕ ಸಿಡಿಸಿದರು. ಬಿರುಸಿನ ಬ್ಯಾಟಿಂಗ್ ನಡೆಸಿದ ರೋಹಿತ್ 51 ಎಸೆತಗಳಿಂದ 57 ರನ್ ಬಾರಿಸಿದರು. ಇದು ಅವರ 60ನೇ ಅರ್ಧಶತಕ. 3 ಸಿಕ್ಸರ್ ಬಾರಿಸಿದ ರೋಹಿತ್( 352*) ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡರು. ಪಾಕಿಸ್ತಾನ ಮಾಜಿ ಬ್ಯಾಟರ್ ಶಾಹಿದ್ ಅಫ್ರಿದಿ(351) ದಾಖಲೆ ಪತನಗೊಂಡಿತು.
ಬರೋಬ್ಬರಿ 7 ಸಿಕ್ಸರ್ ಮತ್ತು 11 ಬೌಂಡರಿ ಸಿಡಿಸಿದ ಕೊಹ್ಲಿ 135ರನ್ ಬಾರಿಸಿ ರಿಕಲ್ಟನ್ ಹಿಡಿದ ಡೈವಿಂಗ್ ಕ್ಯಾಚ್‌ಗೆ ವಿಕೆಟ್ ಕಳೆದುಕೊಂಡರು. ಕೊಹ್ಲಿ ಶತಕ ಪೂರ್ತಿಗೊಳಿಸುತ್ತಿದ್ದಂತೆ ಅಭಿಮಾನಿಯೊಬ್ಬ ಭದ್ರತಾ ಸಿಬ್ಬಂದಿಗಳ ಕಣ್ಣು ತಪ್ಪಿಸಿ ಮೈದಾನಕ್ಕೆ ನುಗ್ಗಿ ಕಾಲಿಗೆ ಬಿದ್ದ ಪ್ರಸಂಗವೂ ನಡೆಯಿತು.
ಹಂಗಾಮಿ ನಾಯಕ ಕೆ.ಎಲ್ ರಾಹುಲ್ ಅವರು ವಿರಾಟ್ ಕೊಹ್ಲಿ ವಿಕೆಟ್ ಪತನದ ಬಳಿಕ ಚುರುಕಿನ ಬ್ಯಾಟಿಂಗ್‌ಗೆ ಒಗ್ಗಿಕೊಂಡು ಅರ್ಧಶತಕ ಬಾರಿಸಿದರು. ಅವರಿಗೆ ರವೀಂದ್ರ ಜಡೇಜಾ ಉತ್ತಮ ಸಾಥ್ ನೀಡಿದರು. 56 ಎಸೆತ ಎದುರಿಸಿದ ರಾಹುಲ್ 60(2 ಬೌಂಡರಿ, 3 ಸಿಕ್ಸರ್) ರನ್ ಬಾರಿಸಿದರು. ಅಂತಿಮ ಒಂದು ಓವರ್ ಬಾಕಿ ಇರುವಾಗ ರಿವರ್ಸ್ ಸ್ವೀಫ್ ಯತ್ನದಲ್ಲಿ ಕೀಪರ್ ಡಿ ಕಾಕ್‌ಗೆ ಕ್ಯಾಚ್ ನೀಡಿ ವಿಕೆಟ್ ಕಳೆದುಕೊಂಡರು. ಜಡೇಜಾ 20 ಎಸೆತಗಳಿಂದ 32 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ಪರ ಒಟ್ನೀಲ್ ಬಾರ್ಟ್‌ಮನ್, ನಾಂದ್ರೆ ಬರ್ಗರ್, ಕಾರ್ಬಿನ್ ಬಾಷ್ ಮತ್ತು ಮಾರ್ಕೊ ಜಾನ್ಸೆನ್ ತಲಾ ತಲಾ ಎರಡು ವಿಕೆಟ್ ಕಿತ್ತರು.