ಸಂಘಟಿತ ಪ್ರದರ್ಶನ; 3ನೇ ಟಿ20 ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿದ ಭಾರತ
IND vs SA 3rd T20I: ಹಾರ್ದಿಕ್ ಪಾಂಡ್ಯ ಅವರು ಡೆವಾಲ್ಡ್ ಬ್ರೆವಿಸ್ ಅವರ ವಿಕೆಟ್ ಪಡೆಯುವ ಮೂಲಕ ಟಿ20ಯಲ್ಲಿ 100 ವಿಕೆಟ್ ಮತ್ತು1,500 ಪೂರ್ತಿಗೊಳಿಸಿದ ಮೊದಲ ಭಾರತೀಯ ಹಾಗೂ ವಿಶ್ವದ ನಾಲ್ಕನೇ ಆಟಗಾರ ಎನಿಸಿದರು. ಅರ್ಶ್‌ದೀಪ್ ಸಿಂಗ್ ಮತ್ತು ಜಸ್‌ಪ್ರೀತ್ ಬುಮ್ರಾ ನಂತರ ಪುರುಷರ ಟಿ20ಐಗಳಲ್ಲಿ 100 ವಿಕೆಟ್ ಪಡೆದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೂ ಹಾರ್ದಿಕ್ ಪಾತ್ರರಾದರು.
Harshit Rana and Arshdeep Singh -
ಧರ್ಮಶಾಲಾ, ಡಿ.14: ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಉತ್ಕೃಷ್ಟ ಮಟ್ಟದ ಪ್ರರ್ಶನ ತೋರಿದ ಭಾರತ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ 3ನೇ ಟಿ20 ಪಂದ್ಯದಲ್ಲಿ(IND vs SA 3rd T20I) 7 ವಿಕೆಟ್ ಅಂತರದ ಗೆಲುವು ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಕಾಯ್ದುಕೊಂಡಿದೆ. 4ನೇ ಪಂದ್ಯ ಬುಧವಾರ ಲಕ್ನೋದ ಏಕಾನ ಸ್ಟೇಡಿಯಂನಲ್ಲಿ ನಡೆಯಲಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆದಿದ ದಕ್ಷಿಣ ಆಫ್ರಿಕಾ, ನಾಯಕ ಐಡೆನ್ ಮಾರ್ಕ್ರಮ್ ಅರ್ಧಶತಕದ ನೆರವಿನಿಂದ ಭರ್ತಿ 20 ಓವರ್ ಆಡಿ 117ರನ್‌ಗೆ ಆಲೌಟ್ ಆಯಿತು. ಜವಾಬಿತ್ತ ಭಾರತ, 15.5 ಓವರ್‌ಗಳಲ್ಲಿ 3 ವಿಕೆಟ್‌ಗೆ 120 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.
ಸೂರ್ಯ,ಗಿಲ್ ಮತ್ತೆ ವಿಫಲ
ಸಣ್ಣ ಮೊತ್ತ ಬೆನ್ನಟ್ಟಿದ ಭಾರತಕ್ಕೆ ಆರಂಭಿಕರಾದ ಶುಭಮನ್ ಗಿಲ್ ಮತ್ತು ಅಭಿಷೇಕ್ ಶರ್ಮ ಉತ್ತಮ ಆರಂಭ ಒದಗಿಸಿದರು. ಬಿರುಸಿನ ಬ್ಯಾಟಿಂಗ್ ನಡೆಸಿದ ಈ ಜೋಡಿ ಮೊದಲ ವಿಕೆಟ್‌ಗೆ 60ರನ್ ಗಳಿಸಿದರು. ಗಿಲ್ ಆಟ ನಿಧಾನಗತಿಯಿಂದ ಕೂಡಿತ್ತು. 28 ಎಸೆತಕ್ಕೆ 28 ರನ್ ಗಳಿಸಿದರು. ಅಭಿಷೇಕ್ 18 ಎಸೆತಗಳಲ್ಲಿ ತಲಾ ಮೂರು ಸಿಕ್ಸರ್ ಮತ್ತು ಬೌಂಡರಿ ಸಿಡಿಸಿ 35 ರನ್ ಚಚ್ಚಿದರು. ಈ ಪಂದ್ಯಕ್ಕೆ 90 ನಿಮಿಷಗಳ ಕಾಲ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದರೂ ಸೂರ್ಯಕುಮಾರ್ ಬ್ಯಾಟಿಂಗ್ ಲಯ ಕಂಡುಕೊಳ್ಳುವಲ್ಲಿ ವಿಫಲರಾದರು. 12ರನ್ ಗಳಿಸಿ ವಿಕೆಟ್ ಕೈಚೆಲ್ಲಿದರು. ಎದುರಿಸಿದ್ದು 11 ಎಸೆತ. ಅಂತಿಮವಾಗಿ ತಿಲಕ್ ವರ್ಮ 25*, ಶಿವಂ ದುಬೆ ಅಜೇಯ 10 ರನ್ ಬಾರಿಸಿ ಗೆಲುವಿನ ದಡ ಸೇರಿಸಿದರು.
ಮುಲ್ಲಾನ್‌ಪುರದಲ್ಲಿ ನಡೆದಿದ್ದ ದ್ವಿತೀಯ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳ ಬೆವರಿಳಿಸಿದ ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳ ಆಟ ಈ ಪಂದ್ಯದಲ್ಲಿ ನಡೆಯಲಿಲ್ಲ. 7 ವೈಡ್ ಸೇರಿ 4 ಓವರ್‌ಗಳಲ್ಲಿ 54 ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದ ಅರ್ಶ್‌ದೀಪ್ ಸಿಂಗ್ ಈ ಪಂದ್ಯದಲ್ಲಿ ತಾವೆಸೆದ ಮೊದಲ ಓವರ್‌ನಲ್ಲಿಯೇ ವಿಕೆಟ್ ಬೇಟೆಯಾಡಿದರು. ಒಟ್ಟು 4 ಓವರ್‌ಗಳಲ್ಲಿ ಕೇವಲ 13 ರನ್ ವೆಚ್ಚದಲ್ಲಿ 2 ವಿಕೆಟ್ ಕಿತ್ತರು. ಜಸ್‌ಪ್ರೀತ್ ಬುಮ್ರಾ ಗೈರಿನಲ್ಲಿ ಆಡಲಿಳಿದ ಹರ್ಷಿತ್ ರಾಣಾ ಹಾಗೂ ಅಕ್ಷರ್ ಪಟೇಲ್ ಬದಲು ಸ್ಥಾನ ಪಡೆದ ಕುಲ್‌ದೀಪ್ ಯಾದವ್ ತಲಾ 2 ವಿಕೆಟ್ ಉರುಳಿಸಿದರು. ಸ್ಪಿನ್ನರ್ ವರುಣ್ ಚಕ್ರವರ್ತಿ ಕೂಡ 2 ವಿಕೆಟ್ ಪಡೆದರು.
ಲಿಯೋನೆಲ್ ಮೆಸ್ಸಿಗೆ 2011ರ ವಿಶ್ವಕಪ್ ಜೆರ್ಸಿ ಉಡುಗೊರೆ ನೀಡಿದ ಸಚಿನ್ ತೆಂಡೂಲ್ಕರ್
ಮಾರ್ಕ್ರಮ್ ಏಕಾಂಗಿ ಹೋರಾಟ
ದಕ್ಷಿಣ ಆಫ್ರಿಕಾ ಪರ ಐಡೆನ್ ಮಾರ್ಕ್ರಮ್ ಮತ್ತು ಡೊನೊವನ್ ಫೆರೀರಾ ಹೊರತುಪಡಿಸಿ ಬೇರೆ ಯಾರೂ ನೆರವಾಗಲಿಲ್ಲ.ರೀಜಾ ಹೆಂಡ್ರಿಕ್ಸ್ ಶೂನ್ಯ ಸುತ್ತಿದರೆ, ಡಿ ಕಾಕ್(1), ಸ್ಟಬ್ಸ್(9), ಡೆವಾಲ್ಡ್ ಬ್ರೆವಿಸ್(2), ಕಾರ್ಬಿನ್ ಬಾಷ್(4) ವೈಫಲ್ಯ ಅನುಭವಿಸಿದರು. ಸಹ ಆಟಗಾರರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಟೊಂಕ ಕಟ್ಟಿನಿಂತ ಐಡೆನ್ ಮಾರ್ಕ್ರಮ್ ಅರ್ಧಶತಕ ಬಾರಿಸುವ ಮೂಲಕ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. 46 ಎಸೆತ ಎದುರಿಸಿದ ಮಾರ್ಕ್ರಮ್ 61ರನ್ ಬಾರಿಸಿದರು. ಫೆರೀರಾ 20 ರನ್ ಗಳಿಸಿದರು.
ಭಾರತ ಪರ 2 ಬದಲಾವಣೆ
ಈ ಪಂದ್ಯಕ್ಕೆ ಉಭಯ ತಂಡಗಳು ತನ್ನ ಆಡುವ ಬಳಗದಲ್ಲಿ ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ಜಸ್‌ಪ್ರೀತ್ ಬುಮ್ರಾ ವೈಯಕ್ತಿಕ ಕಾರಣಗಳಿಂದ ಮತ್ತು ಅಕ್ಷರ್ ಪಟೇಲ್ ಅನಾರೋಗ್ಯದ ಕಾರಣ ಪಂದ್ಯದಿಂದ ಹೊರಗುಳಿದರು. ಅವರ ಬದಲು ಕುಲ್‌ದೀಪ್ ಮತ್ತು ಹರ್ಷಿತ್ ರಾಣಾ ಆಡಲಿಳಿದರು. ದಕ್ಷಿಣ ಆಫ್ರಿಕಾ ಮೂರು ಬದಲಾವಣೆ ಮಾಡಿತು. ಡೇವಿಡ್ ಮಿಲ್ಲರ್, ಜಾರ್ಜ್ ಲಿಂಡೆ ಮತ್ತು ಲುಥೋ ಸಿಪಾಮ್ಲಾ ಕೈಬಿಟ್ಟು ಅನ್ರಿಚ್ ನಾರ್ಟ್ಜೆ,ಕಾರ್ಬಿನ್ ಬಾಷ್ ಮತ್ತು ಟ್ರಿಸ್ಟಾನ್ ಸ್ಟಬ್ಸ್‌ಗೆ ಅವಕಾಶ ನೀಡಿತು.
ಪಾಂಡ್ಯ ದಾಖಲೆ
ಹಾರ್ದಿಕ್ ಪಾಂಡ್ಯ ಅವರು ಡೆವಾಲ್ಡ್ ಬ್ರೆವಿಸ್ ಅವರ ವಿಕೆಟ್ ಪಡೆಯುವ ಮೂಲಕ ಟಿ20ಯಲ್ಲಿ 100 ವಿಕೆಟ್ ಮತ್ತು1,500 ಪೂರ್ತಿಗೊಳಿಸಿದ ಮೊದಲ ಭಾರತೀಯ ಹಾಗೂ ವಿಶ್ವದ ನಾಲ್ಕನೇ ಆಟಗಾರ ಎನಿಸಿದರು. ಅರ್ಶ್‌ದೀಪ್ ಸಿಂಗ್ ಮತ್ತು ಜಸ್‌ಪ್ರೀತ್ ಬುಮ್ರಾ ನಂತರ ಪುರುಷರ ಟಿ20ಐಗಳಲ್ಲಿ 100 ವಿಕೆಟ್ ಪಡೆದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೂ ಹಾರ್ದಿಕ್ ಪಾತ್ರರಾದರು.