ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

U19 Asia Cup: ಭಾರತದ ಆಲ್ರೌಂಡ್‌ ಆಟಕ್ಕೆ ಶರಣಾದ ಪಾಕಿಸ್ತಾನ

Under-19 Asia Cup 2025: ಸಣ್ಣ ಮೊತ್ತವನ್ನು ಸುಲಭವಾಗಿ ಬೆನ್ನಟ್ಟಬಹುದು ಎಂಬ ಅತಿ ವಿಶ್ವಾಸದೊಂದಿಗೆ ಬ್ಯಾಟಿಂಗ್‌ಗೆ ಇಳಿದ ಪಾಕಿಗಳಿಗೆ ದೀಪೇಶ್ ದೇವೇಂದ್ರನ್ ಮತ್ತು ಕನಿಷ್ಕ್ ಚೌಹಾಣ್ ಆರಂಭದಲ್ಲೇ ಆಘಾತವಿಕ್ಕಿದರು. ಜಿದ್ದಿಗೆ ಬಿದ್ದವರಂತೆ ಬೌಲಿಂಗ್‌ ದಾಳಿ ನಡೆಸಿ ಪಾಕಿಗಳ ಸದ್ದಡಗಿಸಿದರು. 30 ರನ್‌ಗೆ 4 ವಿಕೆಟ್‌ ಪತನಗೊಂಡಿತು.

ಬದ್ಧವೈರಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

U19 Asia Cup India vs Pakistan -

Abhilash BC
Abhilash BC Dec 14, 2025 6:48 PM

ದುಬೈ, ಡಿ.14: 19 ವರ್ಷದೊಳಗಿನವರ ಏಷ್ಯಾ ಕಪ್(U19 Asia Cup) ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ(India vs Pakistan) ಸತತ 2ನೇ ಗೆಲುವಿನೊಂದಿಗೆ 'ಎ' ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಭಾನುವಾರ ಬದ್ಧವೈರಿ ಪಾಕಿಸ್ತಾನ ವಿರುದ್ಧ ಭಾರತ 90 ರನ್‌ಗಳ ಸುಲಭ ಗೆಲುವು ದಾಖಲಿಸಿತು.

ಮಳೆಯಿಂದ ಅಡಚಣೆಯಾಗಿ 49 ಓವರ್‌ಗೆ ಸೀಮಿತಗೊಂಡಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ 46.1 ಓವರಲ್ಲಿ 240 ರನ್‌ಗೆ ಆಲೌಟ್‌ ಆಯಿತು. ಪಾಕಿಸ್ತಾನ 41.2 ಓವರಲ್ಲಿ 150 ರನ್‌ ಗಳಿಸಿ ಸರ್ವಪತನಗೊಂಡು ಸೋಲು ಕಂಡಿತು.

ಪಹಲ್ಗಾಂ ಉಗ್ರ ದಾಳಿ ಖಂಡಿಸಿ ಹಿರಿಯ ಪುರುಷರ ಏಷ್ಯಾಕಪ್‌ನಲ್ಲಿ ಪಾಕಿಸ್ತಾನಿ ಕ್ರಿಕೆಟಿಗರಿಗೆ ಹ್ಯಾಂಡ್‌ ಶೇಕ್‌ ನೀಡುವುದರಿಂದ ಭಾರತ ತಂಡ ದೂರ ಉಳಿದಿತ್ತು. ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲೂ ಅದು ಮುಂದುವರಿದಿತ್ತು. ಅಂಡರ್‌-19 ಏಷ್ಯಾ ಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಮುಂದುವರಿಯಿತು. ಭಾರತದ ಆಟಗಾರರು ಪಾಕಿಗಳ ಜತೆ ಹ್ಯಾಂಡ್‌ ಶೇಕ್‌ ಮಾಡಲಿಲ್ಲ.

ಸಣ್ಣ ಮೊತ್ತವನ್ನು ಸುಲಭವಾಗಿ ಬೆನ್ನಟ್ಟಬಹುದು ಎಂಬ ಅತಿ ವಿಶ್ವಾಸದೊಂದಿಗೆ ಬ್ಯಾಟಿಂಗ್‌ಗೆ ಇಳಿದ ಪಾಕಿಗಳಿಗೆ ದೀಪೇಶ್ ದೇವೇಂದ್ರನ್ ಮತ್ತು ಕನಿಷ್ಕ್ ಚೌಹಾಣ್ ಆರಂಭದಲ್ಲೇ ಆಘಾತವಿಕ್ಕಿದರು. ಜಿದ್ದಿಗೆ ಬಿದ್ದವರಂತೆ ಬೌಲಿಂಗ್‌ ದಾಳಿ ನಡೆಸಿ ಪಾಕಿಗಳ ಸದ್ದಡಗಿಸಿದರು. 30 ರನ್‌ಗೆ 4 ವಿಕೆಟ್‌ ಪತನಗೊಂಡಿತು.

ಇದನ್ನೂ ಓದಿ ಐಪಿಎಲ್‌ ಹರಾಜಿಗೂ ಮುನ್ನ ಭಾರತೀಯ ಆಲ್‌ರೌಂಡರನ್ನು ಅನುಮಾನಾಸ್ಪದ ಬೌಲಿಂಗ್‌ ಪಟ್ಟಿಗೆ ಸೇರಿಸಿದ ಬಿಸಿಸಿಐ

ಸಂಕಷ್ಟಕ್ಕೆ ಸಿಲಿಕಿದ ಪಾಕ್‌ಗೆ ಆಸರೆಯಾದದ್ದು ಹುಜೈಫಾ ಅಹ್ಸಾನ್ ಮಾತ್ರ. 6ನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ ಅವರು ಕೆಲ ಕಾಲ ಭಾರತೀಯ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ಅರ್ಧಶತಕ ಬಾರಿಸಿದರು. 83 ಎಸೆತ ಎದುರಿಸಿದ ಅವರು, 9 ಬೌಂಡರಿ ಮತ್ತು 2 ಸಿಕ್ಸರ್‌ ನೆರವಿನಿಂದ 70 ರನ್‌ ಬಾರಿಸಿದರು. ಭಾರತ ಪರ ದೀಪೇಶ್ ದೇವೇಂದ್ರನ್ ಮತ್ತು ಕನಿಷ್ಕ್ ಚೌಹಾಣ್ ತಲಾ ಮೂರು ವಿಕೆಟ್‌ ಕಿತ್ತರೆ, ಕಿಶನ್ ಕುಮಾರ್ ಸಿಂಗ್ 2 ವಿಕೆಟ್‌ ಪಡೆದರು.

ಭಾರತಕ್ಕೆ ಆಸರೆಯಾದ ಆರನ್ ಜಾರ್ಜ್

ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ಭಾರತವೂ ಕೂಡ ಆರಂಭಿಕ ಆಘಾತ ಎದುರಿಸಿತು. ಸ್ಫೋಟಕ ಹೊಡೆತಗಳ ಮೂಲಕ ಶತಕ ಬಾರಿಸಿದ್ದ ವೈಭವ್ ಸೂರ್ಯವಂಶಿ ಈ ಪಂದ್ಯದಲ್ಲಿ 5 ರನ್‌ಗೆ ವಿಕೆಟ್‌ ಕಳೆದುಕೊಂಡರು. ನಾಯಕ ಆಯುಷ್ ಮ್ಹಾತ್ರೆ(38) ಕೂಡ ಹೆಚ್ಚು ಹೊತ್ತು ಕ್ರೀಸ್‌ ಆಕ್ರಮಿಸಲು ವಿಫಲರಾದರು. ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ದಿಟ್ಟ ಬ್ಯಾಟಿಂಗ್‌ ನಡೆಸಿದ ಆರನ್ ಜಾರ್ಜ್ 85 ರನ್‌ ಸಿಡಿಸಿ ತಂಡದ ಬೃಹತ್‌ ಮೊತ್ತಕಕ್ಕೆ ಕಾರಣರಾದರು. ಅವರ ಈ ಸೊಗಸಾದ ಬ್ಯಾಟಿಂಗ್‌ನಲ್ಲಿ 12 ಬೌಂಡರಿ ಮತ್ತು ಒಂದು ಸಿಕ್ಸರ್‌ ದಾಖಲಾಯಿತು. ಉಳಿದಂತೆ ಕನಿಷ್ಕ್ ಚೌಹಾಣ್(46) ರನ್‌ ಗಳಿಸಿದರು. ಕೇವಲ 4 ರನ್‌ ಅಂತರದಲ್ಲಿ ಅರ್ಧಶತಕದಿಂದ ವಂಚಿತರಾದರು.