IPL 2025: ಪಂಜಾಬ್-ಮುಂಬೈ ಪಂದ್ಯದ ಸ್ಥಳ ಬದಲಾವಣೆ ಸಾಧ್ಯತೆ!
ಇಂದು ಧರ್ಮಶಾಲಾದಲ್ಲಿ ನಿಗದಿಯಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯವು ಯೋಜಿಸಿದಂತೆ ನಡೆಯಲಿದೆ. ಏಕೆಂದರೆ ಉಭಯ ತಂಡಗಳು ಸ್ಥಳೀಯ ವಿಮಾನ ನಿಲ್ದಾಣ ಮುಚ್ಚುವ ಮೊದಲೇ ಧರ್ಮಶಾಲಾ ತಲುಪಿತ್ತು. ಹೀಗಾಗಿ ಇಂದಿನ ಪಂದ್ಯಕ್ಕೆ ಯಾವುದೇ ಅಡ್ಡಿಯಿಲ್ಲ.


ಧರ್ಮಶಾಲಾ: ಆಪರೇಷನ್ ಸಿಂದೂರ(operation Sindoor) ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ ಐಪಿಎಲ್(IPL 2025) ಪಂದ್ಯ ನಿಗದಿಯಂತೆ ಆಯೋಜನೆಯಾಗುವ ಬಗ್ಗೆ ಅನುಮಾನ ಮೂಡಿದೆ. ಕೇಂದ್ರ ಸರ್ಕಾರದಿಂದ ಅನುಮತಿ ಲಭಿಸಿದರಷ್ಟೇ ಬಿಸಿಸಿಐ(BCCI) ಪಂದ್ಯವನ್ನು ನಡೆಸಲಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಮೇ 11ರಂದು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್(Punjab Kings vs Mumbai Indians) ನಡುವಣ ಪಂದ್ಯ ಸ್ಥಳಾಂತರಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಐಪಿಎಲ್ ಪಂದ್ಯಗಳ ವೇಳೆ ದಾಳಿ ನಡೆಸುವುದಾಗಿ ಈಗಾಗಲೇ ಬೆದರಿಕೆಗಳು ಕೂಡ ಬಂದಿರುವ ಕಾರಣ ವ್ಯಾಪಕ ಭದ್ರತೆಯನ್ನು ಕೂಡ ಮಾಡಲಾಗಿದೆ. ಇನ್ನೊಂದೆಡೆ ರ್ಮಶಾಲಾ ವಿಮಾನ ನಿಲ್ದಾಣವನ್ನು ಮುಚ್ಚಿರುವುದರಿಂದ ಎರಡೂ ತಂಡಗಳ ಪ್ರಯಾಣದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಧರ್ಮಶಾಲಾದಿಂದ ಮುಂಬೈನ ವಾಂಖೆಡೆ ಕ್ರೀಡಾಂಗಣಕ್ಕೆ ಪಂದ್ಯದ ಸ್ಥಳವನ್ನು ಬದಲಾಯಿಸುವ ಬಗ್ಗೆ ಚರ್ಚೆಗಳು ನಡೆದಿದೆ ಎನ್ನಲಾಗಿದೆ.
ಇಂದಿನ ಪಂದ್ಯಕ್ಕೆ ಅಡ್ಡಿಯಿಲ್ಲ
ಇಂದು ಧರ್ಮಶಾಲಾದಲ್ಲಿ ನಿಗದಿಯಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯವು ಯೋಜಿಸಿದಂತೆ ನಡೆಯಲಿದೆ. ಏಕೆಂದರೆ ಉಭಯ ತಂಡಗಳು ಸ್ಥಳೀಯ ವಿಮಾನ ನಿಲ್ದಾಣ ಮುಚ್ಚುವ ಮೊದಲೇ ಧರ್ಮಶಾಲಾ ತಲುಪಿತ್ತು. ಹೀಗಾಗಿ ಇಂದಿನ ಪಂದ್ಯಕ್ಕೆ ಯಾವುದೇ ಅಡ್ಡಿಯಿಲ್ಲ. ಯುದ್ಧದ ಕಾರ್ಮೋಡ ಇರುವ ಕಾರಣ ಇನ್ನುಳಿದ ಐಪಿಎಲ್ ಪಂದ್ಯಗಳಿಗೆ 20,000 ಕ್ಕೂ ಹೆಚ್ಚು ಜನರು ಭಾಗವಹಿಸುವುದಕ್ಕೆ ಅವಕಾಶ ಸಿಗುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ.
ಮಂಗಳವಾರ ತಡರಾತ್ರಿ 1.05ರಿಂದ 1.30ರ ನಡುವೆ 25 ನಿಮಿಷಗಳ ಕಾಲ ನಡೆದ ಆಪರೇಷನ್ ಸಿಂದೂರ’ ಹೆಸರಿನ ವೈಮಾನಿಕ ದಾಳಿ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಮೂರೂ ದಳಗಳು ಜಂಟಿಯಾಗಿ ಲಷ್ಕರ್-ಎ-ತೊಯ್ಬಾ, ಜೈಶ್-ಎ-ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಗಳ 9 ನೆಲೆಗಳನ್ನು 24 ಕ್ಷಿಪಣಿ ಬಳಸಿ ಧ್ವಂಸ ಮಾಡಿತ್ತು. ದಾಳಿಯಲ್ಲಿ ಸುಮಾರು 80 ಮಂದಿ ಬಲಿಯಾಗಿದ್ದಾರೆ, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.